ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಶ ಹೆಗಡೆ ಲೇಖನ: ವೈದ್ಯವಿಜ್ಞಾನವೇ ಎತ್ತಿತು ಸುತ್ತಿಗೆ!

ಅಮೆರಿಕದ ಅಧ್ಯಕ್ಷರ ವಿರುದ್ಧ ಅಲ್ಲಿನ ವಿಜ್ಞಾನ ಪತ್ರಿಕೆಗಳು ಎರಚಿದ ಖಾರಾಪುಡಿ ಹೇಗಿತ್ತು ಗೊತ್ತೆ?
Last Updated 11 ನವೆಂಬರ್ 2020, 19:36 IST
ಅಕ್ಷರ ಗಾತ್ರ
ADVERTISEMENT
""

ಅಮೆರಿಕದ ಚುನಾವಣೆಯ ಈ ಬಾರಿಯ ವಿಶೇಷ ಏನಿತ್ತೆಂದರೆ ‘ಟ್ರಂಪ್‌ ಗೆಲ್ಲಕೂಡದು’ ಎಂದು ಜಗದ್ವಿಖ್ಯಾತ ಎರಡು ವಿಜ್ಞಾನ ಪತ್ರಿಕೆಗಳು ಸಂಪಾದಕೀಯಗಳನ್ನು ಬರೆದವು. ಹಿಂದೆಂದೂ ಅವು ಯಾವುದೇ ಅಧ್ಯಕ್ಷೀಯ ಅಭ್ಯರ್ಥಿಯ ಪರ ಅಥವಾ ವಿರುದ್ಧವಾಗಿ ಬರೆದಿರಲಿಲ್ಲ. ಈ ಬಾರಿ ಮೌನ ಮುರಿದವು. ಒಂದು ಪತ್ರಿಕೆಯ ಹೆಸರು ‘ನ್ಯೂ ಇಂಗ್ಲಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌’. ಅದು ಜಗತ್ತಿನ ಅತ್ಯಂತ ಪ್ರಸಿದ್ಧ ವೈದ್ಯಕೀಯ ವಾರಪತ್ರಿಕೆ. ಜಗತ್ತಿನ ಬಹಳಷ್ಟು ಹೊಸ ಸಂಶೋಧನೆಗಳು ಅದರ ಮೂಲಕವೇ ವೈದ್ಯಲೋಕಕ್ಕೆ ಮುಂಬೆಳಕಾಗುತ್ತವೆ. ಅಂಥ ಪತ್ರಿಕೆ ತನ್ನ ಎಲ್ಲ 34 ಸಂಪಾದಕರ ಒಮ್ಮತದ ಅಭಿಪ್ರಾಯದೊಂದಿಗೆ ಟ್ರಂಪ್‌ ವಿರುದ್ಧ ಹರಿಹಾಯಿತು. ಪತ್ರಿಕೆಯ 208 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಕೇವಲ ನಾಲ್ಕು ಬಾರಿ ಎಲ್ಲ ಸಂಪಾದಕರೂ ಒಮ್ಮತದಿಂದ ಸಹಿ ಹಾಕಿದ ಸಂಪಾದಕೀಯ ಪ್ರಕಟವಾಗಿತ್ತು; ಚುನಾವಣೆಗಳ ಮಟ್ಟಿಗಂತೂ ಇದೇ ಮೊದಲ ಬಾರಿ. ಟ್ರಂಪ್‌ನಂಥ ‘ಅಪಾಯಕಾರಿಮಟ್ಟದ ಅಸಮರ್ಥ’ (ಡೇಂಜರಸ್ಲೀ ಇನ್‌ಕಾಂಪಿಟೆಂಟ್‌) ನಾಯಕತ್ವಕ್ಕೆ ಮತ್ತೊಮ್ಮೆ ಬೆಂಬಲ ನೀಡುವುದೆಂದರೆ ಇನ್ನೂ ಅದೆಷ್ಟೊ ಸಾವಿರ ಜನರನ್ನು ಮೃತ್ಯುವಿನ ದವಡೆಗೆ ನೂಕಿದಂತೆಯೇ ಸರಿ ಎಂದು ಅದು ಬರೆಯಿತು. ಟ್ರಂಪ್‌ ಆಡಳಿತ ಕೊರೊನಾ ಮಹಾಮಾರಿಯಂಥ ‘ಸಂಕಟವನ್ನು ದುರಂತವನ್ನಾಗಿ ಪರಿವರ್ತಿಸಿತು’ ಎಂದಿತು. ಬೈಡನ್‌ ಅವರಿಗೆ ಮತ ಹಾಕಿರೆಂದು ಈ ಪತ್ರಿಕೆ ಹೇಳಲಿಲ್ಲ; ಅಗತ್ಯವೂ ಇರಲಿಲ್ಲ.

ಅಧ್ಯಕ್ಷರ ಧೋರಣೆಗಳ ವಿರುದ್ಧ ಎಲ್ಲ ಸಂಪಾದಕರಿಗೂ ಒಟ್ಟಾಗಿ ಕೋಪ ಬರಲು ಕಾರಣವೂ ಇತ್ತು. ಕಳೆದ ಆರು ತಿಂಗಳಿಂದ ಕೊರೊನಾ ವೈರಾಣು (ಮತ್ತು ಅದರಿಂದಾಗಿ ಬರುವ ಕೋವಿಡ್‌– 19 ಕಾಯಿಲೆ) ಕುರಿತು ಸಂಶೋಧನ ಲೇಖನಗಳ ಮಹಾಪೂರವೇ ಈ ವಾರಪತ್ರಿಕೆಗೆ ಬರತೊಡಗಿತ್ತು. ಪ್ರತೀ ಲೇಖನವನ್ನು ಆಯಾ ವೈದ್ಯರಂಗದ ಪರಿಣತರಿಗೆ ತೋರಿಸಿ ಒಪ್ಪಿಗೆ ಪಡೆದೇ ಪ್ರಕಟಿಸಬೇಕಾದ ನಿಯಮದಿಂದಾಗಿ ಆಯ್ಕೆಯ ಕೆಲಸ ಮಹಾ ಪ್ರಯಾಸದ್ದೇ ಆಗಿತ್ತು. ಈ ಮಧ್ಯೆ ‘ಏನೂ ಗೊತ್ತಿಲ್ಲದ ಬುರುಡೆಗಾರರು, ಸರ್ಕಾರದ ಪರವಾಗಿ ಹಸೀಸುಳ್ಳುಗಳ ಧಾರೆಯನ್ನೇ ಹರಿಸುವ ವಂದಿಮಾಗಧರು ಕೂಡ ಸಂಶೋಧನೆಯ ಹೆಸರಿನಲ್ಲಿ ತಂದು ಸುರಿಯುತ್ತಿದ್ದ ಜಳ್ಳುಗಳನ್ನು ಪ್ರತ್ಯೇಕಿಸುವುದೇ ಸಂಪಾದಕರುಗಳಿಗೆ ದೊಡ್ಡ ತಲೆನೋವಾಗಿತ್ತು... ನಾವು ರಾಜಕೀಯದಲ್ಲಿ ತಲೆ ಹಾಕುವವರಲ್ಲ; ಆದರೆ ರಾಜಕೀಯವೇ ಹೀಗೆ ನಮ್ಮ ಕ್ಷೇತ್ರಕ್ಕೆ ಬಂದು ಹಾವಳಿ ಎಬ್ಬಿಸುತ್ತಿದ್ದರೆ ಸುಮ್ಮನೆ ಕೂರಲಾದೀತೆ?’ ಎಂದು ಪತ್ರಿಕೆಯ ಪ್ರಧಾನ ಸಂಪಾದಕ ಡಾ. ಎರಿಕ್‌ ರೂಬಿನ್‌ ಕಂಗೆಟ್ಟವರಂತೆ ಕೇಳುತ್ತಾರೆ.

ಟ್ರಂಪ್‌ ಮಹಾಶಯರನ್ನು ಕೆಳಗಿಳಿಸಬೇಕೆಂದು ಕರೆಕೊಟ್ಟ ಇನ್ನೊಂದು ಪತ್ರಿಕೆಯ ಹೆಸರು ‘ಸೈಂಟಿಫಿಕ್‌ ಅಮೆರಿಕನ್‌’. ಇದೂ ಅಪ್ಪಟ ವಿಜ್ಞಾನ ಪತ್ರಿಕೆಯಾದರೂ ಜನಸಾಮಾನ್ಯರಿಗಾಗಿ ಕೆಲವು ಲೇಖನಗಳೂ ಇರುತ್ತವೆ. ‘ಈ ಪತ್ರಿಕೆಯ 175 ವರ್ಷಗಳ ಇತಿಹಾಸದಲ್ಲಿ ನಾವೆಂದೂ ಯಾವುದೇ ಅಧ್ಯಕ್ಷೀಯ ಅಭ್ಯರ್ಥಿಯನ್ನು ಬೆಂಬಲಿಸಿರಲಿಲ್ಲ. ಈಗ ತುಂಬ ಜವಾಬ್ದಾರಿಯಿಂದ ಆ ಕೆಲಸಕ್ಕೆ ಕೈಹಾಕಿದ್ದೇವೆ’ ಎಂದು ಬರೆಯುತ್ತ ಅದು ಜೋ ಬೈಡನ್‌ ಅವರನ್ನೇ ಏಕೆ ಆಯ್ಕೆ ಮಾಡಬೇಕೆಂಬ ಬಗ್ಗೆ ಕಾರಣಗಳನ್ನು ಕೊಟ್ಟಿದೆ. ಟ್ರಂಪ್‌ ತನ್ನ ಹಸೀ ಸುಳ್ಳು, ಅಪ್ರಾಮಾಣಿಕತೆ ಮತ್ತು ಎಡಬಿಡಂಗಿ ಕೃತ್ಯಗಳಿಂದಾಗಿ ಅಮೆರಿಕವನ್ನೂ ಅದರ ಪ್ರಜೆಗಳನ್ನೂ ಇನ್ನಿಲ್ಲದಷ್ಟು ಗಂಭೀರ ಸಂಕಟಕ್ಕೆ ತಳ್ಳಿದ್ದಾರೆ. ಅದು ಸಾಲದೆಂಬಂತೆ, ‘ಇದಕ್ಕೆಲ್ಲ ನಾನ್ಯಾಕೆ ಹೊಣೆಗಾರನಾಗಲಿ?’ ಎನ್ನುತ್ತ ಬೇರೆ ದೇಶಗಳ ಮೇಲೆ ಮತ್ತು ತನ್ನದೇ ದೇಶದ ಮಾಜಿ ಅಧ್ಯಕ್ಷರ ಮೇಲೆ ಗೂಬೆ ಕೂರಿಸಿದ್ದಾರೆ. ಪರಿಸರ ಸಂರಕ್ಷಣೆಯ ವಿಷಯ ಬಂದಾಗಲೂ ಹವಾಮಾನ ಬದಲಾವಣೆಯೇ ಸುಳ್ಳು ಎಂದು ಘೋಷಿಸಿ, ಪ್ಯಾರಿಸ್‌ ಒಪ್ಪಂದವನ್ನು ದೂರ ಸರಿಸಿ, ಪರಿಸರ ಸಂರಕ್ಷಣಾ ಇಲಾಖೆಯ ರೆಕ್ಕೆಪುಕ್ಕಗಳನ್ನು ಕಟ್ಟಿಟ್ಟಿದ್ದಾರೆ.

ಇವೆರಡು ಪತ್ರಿಕೆಗಳಿಗೆ ಹೋಲಿಸಿದರೆ ಬ್ರಿಟನ್ನಿನಿಂದ ಪ್ರಕಟವಾಗುವ ‘ನೇಚರ್‌’ ಹೆಸರಿನ ಇನ್ನೊಂದು ಪ್ರತಿಷ್ಠಿತ ವಿಜ್ಞಾನ ಪತ್ರಿಕೆ, ಟ್ರಂಪ್‌ ವಿರುದ್ಧ ತೀಕ್ಷ್ಣ ಸಂಪಾದಕೀಯವನ್ನು ಬರೆದಿದೆ. ಈ ಪತ್ರಿಕೆಯೂ ರಾಜಕಾರಣದಲ್ಲಿ ತಲೆತೂರಿಸುವುದಿಲ್ಲವಾದರೂ ವಿಜ್ಞಾನದ ಹಿತಾಸಕ್ತಿಗೆ ಧಕ್ಕೆ ಬಂದಾಗ ತೀರ ಅಪರೂಪಕ್ಕೆ ಮೈಕೊಡವಿ ನಿಲ್ಲುತ್ತದೆ. ಹಿಂದೆ 1933ರಲ್ಲಿ ಹಿಟ್ಲರ್‌ ಅವಧಿಯಲ್ಲಿ ಪ್ರತಿಭಾವಂತ ಯಹೂದಿ ವಿಜ್ಞಾನಿಗಳು ದೇಶಾಂತರ ಹೋಗಬೇಕಾಗಿ ಬಂದಾಗ ಈ ಪತ್ರಿಕೆ ಜರ್ಮನಿಯ ಧೋರಣೆಯನ್ನು ಉಗ್ರವಾಗಿ ಟೀಕಿಸಿತ್ತು. 2016ರಲ್ಲಿ ಟ್ರಂಪ್‌ ಮೊದಲ ಬಾರಿ ಅಧ್ಯಕ್ಷರಾಗಿ ಪಟ್ಟಕ್ಕೇರಿದಾಗಲೇ ಅದು ತನ್ನ ಹತಾಶೆಯನ್ನು ವ್ಯಕ್ತಪಡಿಸಿತ್ತು (ಅಂಥ ಹತಾಶೆಗಳ ಜೊತೆಗೆ, ಆಗ ಚಾಲ್ತಿಯಲ್ಲಿದ್ದ ಕೆಲವು ತಮಾಷೆಗಳನ್ನೂ ಜೋಡಿಸಿದ ಬರಹವೊಂದು ನಾಲ್ಕು ವರ್ಷಗಳ ಹಿಂದೆ, 2016ರ ನವೆಂಬರ್‌ 3ರಂದು ಇದೇ ಅಂಕಣದಲ್ಲಿ ‘ಉಡಾಫೆಯ, ಅಸಂಬದ್ಧ ಮಾತುಗಳ ಟ್ರಂಪರದಾಟ’ ಹೆಸರಿನಲ್ಲಿ ಪ್ರಕಟವಾಗಿತ್ತು).

ನೇಚರ್‌ ಸಂಪಾದಕೀಯ ಈ ಬಾರಿ ಸಖತ್‌ ಖಾರದ್ದಿತ್ತು. ‘ಒಬ್ಬ ವ್ಯಕ್ತಿ ಅದೆಷ್ಟೊಂದು ವಿಜ್ಞಾನ ಸಂಸ್ಥೆಗಳನ್ನು, ಮಾಧ್ಯಮ ಸಂಸ್ಥೆಗಳನ್ನು, ನ್ಯಾಯಾಂಗವನ್ನು ಮತ್ತು ಚುನಾವಣಾ ವ್ಯವಸ್ಥೆಯನ್ನು ಕುಲಗೆಡಿಸಬಲ್ಲ ಎಂಬುದು ಅಮೆರಿಕದ ಪ್ರಜಾತಂತ್ರದ ಗಟ್ಟಿ ಬುನಾದಿಯನ್ನೇ ಅಲುಗಾಡಿಸುವಂತಿದೆ; ಅಮೆರಿಕವೇ ಮೊದಲು ಎಂಬ ಘೋಷಣೆಯೊಂದಿಗೆ ಬಂದು, ತಾನೇ ಮೊದಲು ಎಂಬುದನ್ನು ಸಾಬೀತುಗೊಳಿಸಲು ಹೋಗಿ ಅದೆಷ್ಟೊಂದು ಅಂತರರಾಷ್ಟ್ರೀಯ ಸಂಘಟನೆಗಳನ್ನು ಹೀಗಳೆದು ಧಿಕ್ಕರಿಸಿದವ ಈತ’ ಎಂದು ಅದು ಬರೆಯಿತು. ಅಲ್ಲವೆ ಮತ್ತೆ? ವೈರಾಣುಗಳ ವಿರುದ್ಧ ಅತ್ಯಂತ ಪ್ರಬಲ ವೈದ್ಯವ್ಯವಸ್ಥೆಯನ್ನು ಹೂಡಿಟ್ಟುಕೊಂಡ ದೇಶವೇ ಅತಿಹೆಚ್ಚು ಶವಗಳ ದಫನ ಮಾಡಬೇಕಾಯಿತಲ್ಲ?

ಅಧಿಕಾರದಲ್ಲಿದ್ದವರನ್ನು ಟೀಕಿಸುವ ಧೈರ್ಯವನ್ನು ನಮ್ಮ ವಿಜ್ಞಾನ ಪತ್ರಿಕೆಗಳೂ ಅಪರೂಪಕ್ಕೆ ತೋರಿಸುತ್ತಿವೆ. ಪುರಾಣ ಕಾಲದ ವಿಜ್ಞಾನವನ್ನು ಅತಿಯಾಗಿ ಶ್ಲಾಘಿಸಿದ್ದಕ್ಕೆ ನರೇಂದ್ರ ಮೋದಿಯವರನ್ನು ಮತ್ತು ಹಿಂದುತ್ವವಾದಿಗಳನ್ನು, ಬೆಂಗಳೂರಿನಿಂದ ಪ್ರಕಟವಾಗುವ ಪ್ರತಿಷ್ಠಿತ ‘ಕರೆಂಟ್‌ ಸೈನ್ಸ್‌’ ಪತ್ರಿಕೆ ತೀವ್ರವಾಗಿಯೇ ತರಾಟೆಗೆ ತೆಗೆದುಕೊಂಡಿತ್ತು. ಹಾಗೆಂದು ಚುನಾವಣಾ ಕಾಲದ ರಾಜಕೀಯದ ಬಗ್ಗೆ ಎಂದೂ ಇವು ತಲೆ ಹಾಕಲಿಲ್ಲ. ‘ಹಾಕಲೂಬಾರದು’ ಎನ್ನುತ್ತಾರೆ, ಕರೆಂಟ್‌ ಸೈನ್ಸ್‌ ಪತ್ರಿಕೆಗೆ ಆಗಾಗ ಸಂಪಾದಕೀಯ ಬರೆಯುವ ಹೆಸರಾಂತ ಸಸ್ಯವಿಜ್ಞಾನಿ ಮತ್ತು ಕನ್ನಡದ ಜನಪ್ರಿಯ ಸಾಹಿತಿ ಪ್ರೊ. ಕೆ.ಎನ್‌.ಗಣೇಶಯ್ಯ.

ತಲೆ ಹಾಕಬಾರದು ನಿಜ. ಆದರೆ ವಿಜ್ಞಾನವನ್ನು ಪದೇ ಪದೇ ಹೀಗಳೆಯುತ್ತ, ಮಾಸ್ಕ್‌ ಧರಿಸುವುದನ್ನೂ ಧಿಕ್ಕರಿಸುತ್ತ ಟ್ರಂಪ್‌ ಅಮೆರಿಕದ ಪಾಲಿಗಂತೂ ದುರಂತದ ಹರಿಕಾರರಾದರು. ವಿಶ್ವಸಂಸ್ಥೆಯ ಅಧೀನದಲ್ಲಿದ್ದ ಯುನೆಸ್ಕೊ ಮತ್ತು ವಿಶ್ವ ಸ್ವಾಸ್ಥ್ಯ ಸಂಸ್ಥೆಗಳ ವಿರುದ್ಧ ಹರಿಹಾಯುತ್ತ, ಹವಾಗುಣ ವೈಪರೀತ್ಯ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಅವರು ತೋರಿದ ಧಿಮಾಕಿನ ಧೋರಣೆ ಜಗತ್ತಿಗೇ ಅಪಾಯಕಾರಿ ಆಗುವಂತಿತ್ತು. ಹಾಗೆಂದು, ಅವರು ಸೋತಿದ್ದರಿಂದ ದೊಡ್ಡಣ್ಣನ ಧೋರಣೆಗಳಲ್ಲಿ ಮಹಾ ಬದಲಾವಣೆ ಆಗಲಿಕ್ಕಿಲ್ಲವಾದರೂ ಬಿಸಿ ಪ್ರಳಯವನ್ನು ಹಿಮ್ಮೆಟ್ಟಿಸಲು ಬೇಕಾದ ಹೊಸ ತಂತ್ರಜ್ಞಾನಗಳಿಗೆ, ಸಂಶೋಧನೆಗಳಿಗೆ ಆದ್ಯತೆ ನೀಡುವತ್ತ ಎಲ್ಲ ರಾಷ್ಟ್ರಗಳೊಂದಿಗೆ ಸಹಕರಿಸುವುದಾಗಿ ಬೈಡನ್‌ ಹೇಳಿದ್ದಾರೆ. ಅತ್ತ ಚೀನಾ 2060ರ ವೇಳೆಗೆ ಕೊಳಕು ಇಂಧನಗಳ ಯುಗಕ್ಕೆ ಮುಕ್ತಾಯ ಹಾಡುವುದಾಗಿ ಈಗಾಗಲೇ ಘೋಷಿಸಿದೆ. ಇವೆರಡು ಶಕ್ತರಾಷ್ಟ್ರಗಳೊಂದಿಗೆ ಭಾರತವೂ ಕೈಜೋಡಿಸುವುದಾದರೆ ಮುಂದಿನ ಪೀಳಿಗೆಗೆ ಅದೊಂದು ಭರವಸೆಯ ತಂಗಾಳಿಯಾಗುವ ಸಾಧ್ಯತೆಯಿದೆ.

ಹಾಗೆಂದು ಆಶಿಸೋಣ. ಆದರೆ ಟ್ರಂಪ್‌ ಆಡಳಿತದ ಮಾದರಿಯಲ್ಲೇ ನಮ್ಮಲ್ಲೂ ಕೊರೊನಾ ಕಾಲದಲ್ಲಿ ವಿಜ್ಞಾನದ ಹೆಸರಿನಲ್ಲಿ ಸುಳ್ಳುಜೊಳ್ಳುಗಳನ್ನು ಹರಿಬಿಡುವ ಯತ್ನಗಳು ನಡೆದಿವೆ. ನಮ್ಮಲ್ಲೂ ವಿಜ್ಞಾನ ರಂಗದಲ್ಲಿ ರಾಜಕೀಯ ದೃಢವಾಗಿ ತೂರಿಕೊಂಡಿದೆ. ತಜ್ಞರಲ್ಲದವರನ್ನು ಮಹತ್ವದ ಹುದ್ದೆಗಳಿಗೆ ತಂದು ಕೂರಿಸಿದ್ದಾಗಿದೆ. ನಮ್ಮಲ್ಲೂ ಪರಿಸರ ಸಂರಕ್ಷಣ ನಿಯಮಗಳನ್ನು ಸಡಿಲಬಿಟ್ಟು ಉದ್ಯಮಿಗಳಿಗೆ ಹೆದ್ದಾರಿ ತೋರುವ ಯತ್ನಗಳು ನಡೆದಿವೆ. ಅಂತೆಯೇ ಸುರಕ್ಷತೆಯ ದೃಷ್ಟಿಯಿಂದಲೊ ಏನೊ, ವಿಜ್ಞಾನದ ವಕ್ತಾರರು ಮುಖಕ್ಕೆ ಕವಚ ಧರಿಸಿ, ಸಾಮಾಜಿಕ ಅಂತರವನ್ನು ಶಿಸ್ತಾಗಿ ಕಾಯ್ದುಕೊಂಡಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT