ಜಗತ್ತಿನ ಅತಿದೊಡ್ಡ ವಿಧ್ವಂಸಕ ಕೃತ್ಯದ 25ನೇ ವರ್ಷ ಇಂದು ಆರಂಭವಾಗುತ್ತಿದೆ. 2001ರ ಇದೇ ಸೆಪ್ಟೆಂಬರ್ 11ರಂದು ಪ್ರಯಾಣಿಕರಿದ್ದ ನಾಲ್ಕು ವಿಮಾನಗಳನ್ನು ಆಲ್ಖೈದಾ ಉಗ್ರರು ಅಪಹರಿಸಿ ಅವನ್ನೇ ಕ್ಷಿಪಣಿಗಳಂತೆ ಪ್ರಯೋಗಿಸಿದರು. ಎರಡು ವಿಮಾನಗಳನ್ನು ನ್ಯೂಯಾರ್ಕ್ ನಗರದ ವಿಶ್ವ ವಾಣಿಜ್ಯ ಕೇಂದ್ರದ 110 ಅಂತಸ್ತುಗಳ ಜೋಡಿ ಕಟ್ಟಡಕ್ಕೆ ಡಿಕ್ಕಿ ಹೊಡೆಸಲಾಯಿತು. ಮೂರನೆಯದನ್ನು ವಾಷಿಂಗ್ಟನ್ನಲ್ಲಿರುವ ಪೆಂಟಾಗನ್ ಹೆಸರಿನ ಸರ್ಕಾರಿ ಗೂಢಚಾರ ಕಚೇರಿಗೆ ನುಗ್ಗಿಸಿದರೆ, ನಾಲ್ಕನೆಯದು ಪ್ರಾಯಶಃ ಶ್ವೇತಭವನದ ಕಡೆ ಧಾವಿಸುತ್ತಿತ್ತು. ಆದರೆ, ಆ ವೇಳೆಗೆ ಇತರ ಮೂರು ವಿಮಾನಗಳ ದುರ್ದೆಸೆಯ ಸುದ್ದಿ ಗೊತ್ತಾಗಿದ್ದರಿಂದ ಪ್ರಯಾಣಿಕರ ಪ್ರತಿರೋಧದಿಂದ ಅದು ಪೆನ್ಸಿಲ್ವೇನಿಯಾದಲ್ಲಿ ನೆಲಕ್ಕೆ ಅಪ್ಪಳಿಸಿತು.

ಅದುವರೆಗೆ ಜಗತ್ತಿನ ಅತಿ ಎತ್ತರದ ಕಟ್ಟಡಗಳೆಂದೇ ಹೆಸರಾಗಿದ್ದ ಆ ಜೋಡಿ ಕಟ್ಟಡದ ಕುಸಿತದಿಂದಾಗಿ ಅದೇ ಸಂಕೀರ್ಣದಲ್ಲಿದ್ದ ಇತರ ಐದು ಕಟ್ಟಡಗಳೂ ಧ್ವಂಸವಾದವು. ಒಟ್ಟು 92 ದೇಶಗಳ 2,977 ಜನರು ನಿಧನರಾದರು. ಪರಿಹಾರ ಕಾರ್ಯಗಳಲ್ಲಿ ಭಾಗಿಯಾಗಿದ್ದ ಅಗ್ನಿಶಾಮಕ ದಳದ 343, ಪೊಲೀಸರ 72 ಸಿಬ್ಬಂದಿ ಕೂಡ ಅಸುನೀಗಿದರು. ಅಮೆರಿಕ ಹೂಂಕರಿಸಿತು. ಭಯೋತ್ಪಾತದ ಹುಟ್ಟಡಗಿಸಲೆಂದು ಅಫ್ಗಾನಿಸ್ತಾನ ಮತ್ತು ಇರಾಕ್ ಮೇಲೆ ದಾಳಿ ನಡೆಸಿ ಸರ್ಕಾರಿ ಭಯೋತ್ಪಾತದ ವಿರಾಟ್ ಸ್ವರೂಪವನ್ನೇ ತೋರಿತು. ಈ ಪ್ರತಿದಾಳಿಯಿಂದಾಗಿ ಒಟ್ಟೂ 45 ಲಕ್ಷ ಜನ ಹತರಾದರೆಂದು ಅಂದಾಜು ಮಾಡಲಾಗಿದೆ.

(‘ನೈನ್ ಇಲೆವನ್’ ಹೆಸರಿನ ಈ ದಿನಾಂಕವನ್ನು ನಾವು 11/9 ಎಂದು ಬರೆದರೆ, ಅಮೆರಿಕದಲ್ಲಿ ಅದನ್ನೇ 9/11 ಎಂದು ಬರೆಯುತ್ತಾರೆ. ಜಗತ್ತಿನೆಲ್ಲೆಡೆ ತೂಕ ಅಳತೆಗೆ ಮೆಟ್ರಿಕ್ ವಿಧಾನ ಜಾರಿಗೆ ಬಂದರೆ ಅಮೆರಿಕ ಇನ್ನೂ ಇಂಚು, ಮೈಲು, ಔನ್ಸು, ಪೌಂಡು, ಫ್ಯಾರನ್ಹೀಟ್ಗಳಲ್ಲೇ ಇದೆ.)

ಭಯೋತ್ಪಾತದ ಹುಟ್ಟಡಗಿತೆ ಎಂಬ ಪ್ರಶ್ನೆ ಹೇಗೂ ಇರಲಿ. ಈ ದಾಳಿ ನಂತರ ವಿಜ್ಞಾನ–ತಂತ್ರಜ್ಞಾನದ ಮುನ್ನೆಗೆತಕ್ಕೆ ಬಂಡವಾಳ ಭರಪೂರ ಹರಿದುಬಂತು. ವಿಮಾನಯಾನದ ಭದ್ರತಾ ವ್ಯವಸ್ಥೆಗಳಲ್ಲಿ ಭಾರೀ ಸುಧಾರಣೆಗಳಾದವು. ಪೈಲಟ್ ಕೂರುವ ಕಾಕ್ಪಿಟ್ಗಳು ಅಭೇದ್ಯವಾದವು. ಸೂಟ್ಕೇಸ್ಗಳಲ್ಲಿನ ಕೆಮಿಕಲ್ ಪತ್ತೆಗೆ ಮತ್ತು ಅವಶೇಷಗಳ ಅಡಿ ಸಿಲುಕಿದ ಜೀವಿಗಳ ಪತ್ತೆಗೆ ರೊಬಾಟಿಕ್ ಮೂಗು ಬಂತು. ಧ್ವಂಸ ತಡೆಯ ತುರ್ತು ನೆರವಿಗೆಂದು ಡ್ರೋನ್ ತಂತ್ರಜ್ಞಾನಕ್ಕೆ ರೆಕ್ಕೆಪುಕ್ಕ ಬಂತು. ಗಗನಚುಂಬಿಗಳಲ್ಲಿ ನಿರ್ಮಾಣ ವ್ಯವಸ್ಥೆಗಳು ಬಲಗೊಂಡವು. ಬೆಂಕಿ ನಿರೋಧಕ ಸಾಮಗ್ರಿಗಳ ಉತ್ಪಾದನೆಯಲ್ಲಿ ಹೊಸ ಹೊಸ ಸಂಶೋಧನೆಗಳಾದವು. ಶವಗಳ ಗುರುತು ಪತ್ತೆಗೆಂದು ವಿಧಿವಿಜ್ಞಾನದಲ್ಲಿ ಭಾರೀ ಸುಧಾರಣೆಗಳಾಗಿ ಡಿಎನ್ಎ ತಂತ್ರಜ್ಞಾನ ಬಳಕೆಗೆ ಬಂತು. ದುರಂತದಲ್ಲಿ ಸಿಲುಕಿದವರ ನೆರವಿಗೆ ಧಾವಿಸುವ ಯೋಧರಿಗೆ ಹೊಸ ಪರಿಕರಗಳು ಬಂದವು. ಸಂತ್ರಸ್ತರ ಮಾನಸಿಕ ಆಘಾತ (ಟ್ರಾಮಾ) ಉಪಶಮನಕ್ಕೆ ಹೊಸ ಔಷಧಗಳು, ಶುಶ್ರೂಷಾ ವಿಧಾನಗಳು ಜಾರಿಗೆ ಬಂದವು.

ಅಂತೂ ಈ ಜೋಡಿ ಕಟ್ಟಡದ ಕುಸಿತದಿಂದ ತಂತ್ರಜ್ಞಾನ ಪುಟನೆಗೆಯಿತು. ಅದರ ಲಾಭ ಎಲ್ಲ ದೇಶಗಳಿಗೂ ಸಿಗುವಂತಾಯಿತು. ಭಾರತಕ್ಕೆ ಏನು ಬಂತು? ಕುಸಿದ ಆ ಕಟ್ಟಡಗಳ ಲೋಹದ 950 ಟನ್ ಅವಶೇಷಗಳು ಬಂದವು! ತುಸು ಭಾಗ ಚೀನಾಕ್ಕೂ ಬಂತು. ಅಮೆರಿಕದ ಯಾರೂ ಅದನ್ನು ಬಳಸಲು ಸಿದ್ಧವಿರಲಿಲ್ಲ. ಏಕೆಂದರೆ, 70ರ ದಶಕದ ಕಟ್ಟಡಗಳ ನಿರ್ಮಾಣದಲ್ಲಿ ಬಳಸಲಾಗಿದ್ದ ಸಾಮಗ್ರಿಗಳಲ್ಲಿ ಸೀಸ, ಕಲ್ನಾರು, ಕ್ಯಾಡ್ಮಿಯಂ, ಆರ್ಸೆನಿಕ್ ಮುಂತಾದ ನಂಜುಕಾರಕ ದ್ರವ್ಯಗಳಿದ್ದವು. ವಿಕಿರಣ ಸೂಸುವ ಸಲಕರಣೆಗಳಿದ್ದವು. ಡಿಕ್ಕಿಯಿಂದಾಗಿ ವಿಮಾನಗಳಲ್ಲಿದ್ದ ತಲಾ 90 ಸಾವಿರ ಲೀಟರ್ ಇಂಧನ ದ್ರವಪಾತ ಭುಗಿಲೆದ್ದು ಲಕ್ಷಾಂತರ ಎಲೆಕ್ಟ್ರಾನಿಕ್ ಮತ್ತು ಲೋಹದ ವಸ್ತು, ಪ್ಲಾಸ್ಟಿಕ್ ಬಿಡಿಭಾಗಗಳೆಲ್ಲ ಕರಗಿ ಕಲಸಿದ್ದವು. ಅಮೆರಿಕದ ಯಾವ ರಾಜ್ಯದಲ್ಲೂ ಅಂಥ ವಿಷಪೂರಿತ, ವಿಕಿರಣಪೂರಿತ ತ್ಯಾಜ್ಯಗಳ ವಿಲೇವಾರಿಗೆ ಅವಕಾಶ ಇರಲಿಲ್ಲ.

ಗುಜರಿ ವಸ್ತುಗಳಮಟ್ಟಿಗೆ ನಮ್ಮ ದೇಶ ‘ಜಾಗತಿಕ ಸುರಿಹೊಂಡ’ ಎನ್ನಿಸಿದೆ. ದೇಶ–ವಿದೇಶಗಳಿಂದ ನಾನಾ ಬಗೆಯ ತ್ಯಾಜ್ಯಗಳನ್ನು ತರಿಸಿಕೊಂಡು ಸಂಸ್ಕರಿಸಿ ವಿಲೇವಾರಿ ಮಾಡುವ ವ್ಯಾಪಕ ವ್ಯವಸ್ಥೆ ನಮ್ಮಲ್ಲಿದೆ. ಗುಜರಿ ಮರುಬಳಕೆಯ ಬಹುಕೋಟ್ಯಧೀಶ ಉದ್ಯಮಿಗಳಿದ್ದಾರೆ. ಅಫ್ಗಾನಿಸ್ತಾನ, ಟರ್ಕಿ, ಇರಾಕ್ ಮತ್ತು ನಮ್ಮದೇ ಗಡಿಭಾಗಗಳಲ್ಲಿ ಶೆಲ್ ದಾಳಿ ನಡೆದಾಗ ಸಿಡಿದ ಅಥವಾ ಸಿಡಿಯದೇ ಇದ್ದ ಲೋಹಗಳೂ ಕದ್ದುಮುಚ್ಚಿ ನಮ್ಮ ಕುಲುಮೆಗಳಿಗೇ ಬರುತ್ತಿವೆ. ಶ್ರೀಮಂತ ದೇಶಗಳ ಪ್ಲಾಸ್ಟಿಕ್ ತ್ಯಾಜ್ಯಗಳು ಹಡಗನ್ನೇರಿ ಇಲ್ಲಿಗೆ ಬರುತ್ತವೆ. ಅದಕ್ಕೆ ನಿಷೇಧ ಹಾಕಲಾಗಿದೆಯಾದರೂ, ಕಳೆದ ವರ್ಷ 1,984 ಹಡಗು ಭರ್ತಿ ಪ್ಲಾಸ್ಟಿಕ್ ಬಂದಿದೆ. ಹಳೇ ಹಡಗುಗಳಂತೂ ಬರುತ್ತಲೇ ಇವೆ. ರಿಪೇರಿ ಸಾಧ್ಯವೇ ಇಲ್ಲ ಎಂಬಂಥ ಹಡಗುಗಳು ಸಪ್ತ ಸಾಗರಗಳಲ್ಲಿ ಎಲ್ಲೇ ನಿಂತಿದ್ದರೂ, ಅವುಗಳ ಅಂತಿಮ ಸಂಸ್ಕಾರ ಗುಜರಾತಿನ ಅಲಂಗ್ ಬಂದರಿನಲ್ಲೇ ಆಗುತ್ತದೆ (ಅಂಥ ಹಳೇ ಹಡಗುಗಳಲ್ಲಿ ನಂಜುಕಾರಕ ಸಾಮಗ್ರಿಗಳು, ಕೊಳೆತೈಲಗಳೂ ಇರುವುದರಿಂದ ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ಅವನ್ನು ಸಮುದ್ರದಲ್ಲೇ ಮುಳುಗಿಸುವಂತಿಲ್ಲ). ಅಲಂಗ್ ಬಂದರನ್ನು ‘ಮುದಿ ಹಡಗುಗಳ ಜಾಗತಿಕ ಕಸಾಯಿಖಾನೆ’ ಎಂದೇ ಕರೆಯಲಾಗುತ್ತದೆ.

ಗುಜರಿ ವಸ್ತುಗಳನ್ನು ವಿಂಗಡಿಸಿ, ಮಾಲಿನ್ಯ ಹಬ್ಬಿಸದೆ, ಕಾರ್ಮಿಕರ ಆರೋಗ್ಯ ಕೆಡದಂತೆ ಸಂಸ್ಕರಿಸಿ, ಮರುಬಳಕೆಗೆ ತರುವುದು ಸಾರ್ಥಕ ಕೆಲಸವೇನೊ ಹೌದು. ಇಡೀ ಮನುಕುಲದ ಮುಂಬರುವ ಸಂಕಟಗಳಿಗೆ ಇದೇ ಪರಿಹಾರ ಮಾರ್ಗವೂ ಹೌದು. ಏಕೆಂದರೆ, ‘ಬಳಸು, ಬಿಸಾಕು’ ಎಂಬ ತತ್ವದ ಮೇಲೆಯೇ ಇಂದಿನ ಜಾಗತಿಕ ಅರ್ಥವ್ಯವಸ್ಥೆ ನಿಂತಿದೆ. ನೀರು, ಮಣ್ಣು, ಖನಿಜ, ಗಾಳಿ, ಜೀವದ್ರವ್ಯಗಳ ಸೀಮಿತ ಸಂಪನ್ಮೂಲವನ್ನು ಅವಲಂಬಿಸಿಯೇ ಮನುಷ್ಯರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲರ ಆಶೋತ್ತರಗಳೂ ಹೆಚ್ಚುತ್ತಿವೆ. ಆಯುಸ್ಸೂ ಹೆಚ್ಚುತ್ತಿದೆ. ಎಲ್ಲರನ್ನೂ ಭೋಗದಾಹಿಗಳನ್ನಾಗಿ ಮಾಡುವ, ಪ್ರಜೆಗಳ ಸುಖ–ಸೌಕರ್ಯಗಳನ್ನು ಸದಾ ಹೆಚ್ಚಿಸುತ್ತ ಹೋಗುವುದೇ ಎಲ್ಲ ದೇಶಗಳ, ಎಲ್ಲ ಉದ್ಯಮಿಗಳ, ಎಲ್ಲ ರಾಜಕೀಯ ಪಕ್ಷಗಳ ಗುರಿಯೂ ಆಗಿದೆ (‘ಪೃಥ್ವಿಯ ಸೀಮಿತ ಸಂಪನ್ಮೂಲಗಳಿಂದ ನಿರಂತರ ಅಭಿವೃದ್ಧಿ ಸಾಧ್ಯವಿದೆ ಎಂದು ಯಾರಾದರೂ ವಾದಿಸಿದರೆ ಆತನಿಗೆ ಬುದ್ಧಿಭ್ರಮಣೆ ಆಗಿರಬೇಕು ಅಥವಾ ಆತ ಅರ್ಥಶಾಸ್ತ್ರ ಪಾರಂಗತನಾಗಿರಬೇಕು’ ಎಂದು ಖ್ಯಾತ ಅರ್ಥಶಾಸ್ತಜ್ಞ ಕೆನ್ನೆತ್ ಬೌಲ್ಡಿಂಗ್ 1973ರಲ್ಲಿ ಹೇಳಿದ್ದ). ಈ ಬಗೆಯ ನಿರಂತರ ಅಭಿವೃದ್ಧಿಯ ಸತತ ಪೈಪೋಟಿ ಕೊನೆಗೆ ಎಲ್ಲರನ್ನೂ ಪ್ರಪಾತಕ್ಕೇ ತಳ್ಳಲಿದೆ ಎಂಬುದು ಗೊತ್ತಿದ್ದರೂ ಅದಕ್ಕೆ ತಡೆ ಒಡ್ಡುವ ಉಪಾಯ ಎಲ್ಲಿ?

ಉಪಾಯ ಹುಡುಕುವ ಯತ್ನಗಳಂತೂ ನಿರಂತರ ನಡೆಯುತ್ತಿವೆ. ಎಪ್ಪತ್ತರ ದಶಕದಲ್ಲಿ ಇದಕ್ಕೆಂದೇ ಸೃಷ್ಟಿಯಾದ ‘ಕ್ಲಬ್ ಆಫ್ ರೋಮ್’ ಸಂಸ್ಥೆ ಅಭಿವೃದ್ಧಿಯ ಬದಲೀ ರಸ್ತೆಗಳ ನೀಲನಕ್ಷೆಯನ್ನು ಬರೆಯುತ್ತಲೇ ಇದೆ. ‘ನಮ್ಮೆಲ್ಲರದೂ ಒಂದೇ ಭವಿಷ್ಯ’ ಹೆಸರಿನ ವಿಶ್ವಸಂಸ್ಥೆಯ ‘ಬ್ರಂಟ್ಲೆಂಡ್ ಆಯೋಗ’ದ ವರದಿ ಕನ್ನಡದಲ್ಲೂ (ಶಿವರಾಮ ಕಾರಂತರ ತರ್ಜುಮೆ) ಲಭ್ಯವಿದೆ. ಮಿತಬಳಕೆಯ, ಸಂಯಮದ ಬದುಕಿನ ಅಗತ್ಯ ಕುರಿತು ಗಾಂಧೀಜಿಯ ಮಾತುಗಳು ಎಲ್ಲ ದೇಶಗಳಲ್ಲೂ ವೇದವಾಕ್ಯ ಎನಿಸಿವೆ. ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ಧಿಯ 17 ಗುರಿ’ಗಳು ನಮ್ಮ ಎಲ್ಲ ಸರ್ಕಾರಿ ಕಚೇರಿಗಳ ಗೋಡೆಗಳನ್ನು ಅಲಂಕರಿಸಿವೆ. ಈಗಿನ ಬಳಸಿ ಬಿಸಾಕುವ ಏಕಮುಖ ಆರ್ಥಿಕತೆಯ ಬದಲು ತ್ಯಾಜ್ಯ ಮರುಬಳಕೆಯ ‘ವರ್ತುಲ ಆರ್ಥಿಕತೆ’ಯನ್ನು ಜಾರಿಗೆ ತರುವ ಬಗ್ಗೆ ದಾವೋಸ್ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರತಿವರ್ಷ ಚರ್ಚೆ ನಡೆಯುತ್ತಿದೆ. ಆದರೂ, ಶತಕೋಟ್ಯಧೀಶರ ಪಾಕೀಟನ್ನು ಇನ್ನಷ್ಟು ದಪ್ಪ ಮಾಡುವಂತೆ ಎಲ್ಲೆಲ್ಲೂ ಹೊಸ ಗಣಿಗಾರಿಕೆ, ಹೊಸ ಅಣೆಕಟ್ಟು, ಹೊಸ ಪಂಪ್ಡ್ ಸ್ಟೋರೇಜ್, ಹೊಸ ಉಕ್ಕು ಸ್ಥಾವರ, ಹೊಸ ರಿಫೈನರಿ, ಹೊಸ ಪ್ಲಾಸ್ಟಿಕ್ ಕಾರ್ಖಾನೆ... ಎಷ್ಟು ವರ್ಷ ನಡೆದೀತು ಹೀಗೆ?

ತ್ಯಾಜ್ಯ ಮರುಬಳಕೆಯ ಪ್ರಶ್ನೆ ಬಂದಾಗ ಹಳೇ ಕಟ್ಟಡಗಳ ಅವಶೇಷಗಳ ಮರುಬಳಕೆಯತ್ತ ಯಾರೂ ಗಮನ ಕೊಡುವುದಿಲ್ಲ. ಲೋಹದ ಸಾಮಗ್ರಿ ಬಿಟ್ಟರೆ ಇನ್ನುಳಿದ ಇಟ್ಟಿಗೆ, ಸಿಮೆಂಟ್ ಬ್ಲಾಕ್, ಗಾಜು–ಪಿಂಗಾಣಿ ತ್ಯಾಜ್ಯಗಳು ಅಕ್ಷರಶಃ ಹಳ್ಳ ಹಿಡಿಯುತ್ತಿವೆ. ನೆದರ್ಲ್ಯಾಂಡ್ಸ್ ದೇಶದ ಈಂಢೋವನ್ ಪಟ್ಟಣದ ಒಂದು ಭಾಗದ ಎಲ್ಲ ಕಟ್ಟಡಗಳನ್ನೂ ಕೆಡವಿ ಅದರ ಎಲ್ಲ ತ್ಯಾಜ್ಯಗಳನ್ನೂ ಬಳಸಿ (ಹಳೇ ಪ್ಲಾಸ್ಟಿಕ್ ಚಿಂದಿಗಳನ್ನು ಉರಿಸಿ ಅದರಿಂದಲೇ ಶಕ್ತಿ ಉತ್ಪಾದಿಸಿ) ಹೊಸ ಬಡಾವಣೆಯನ್ನು ನಿರ್ಮಿಸಲಾಯಿತು. ಅಂಥ ಅಚ್ಚ ಹಸಿರು ತಂತ್ರಜ್ಞಾನವನ್ನು ಮೀರಿಸಿದ ಬೇರೆ ಉದಾಹರಣೆಗಳು ಯಾಕಿಲ್ಲ?

ವಿಪರ್ಯಾಸ ಅಂದರೆ ಇದು: ಮನುಷ್ಯ ನಿರ್ಮಿತ ಏನನ್ನೇ ಕೆಡವಿದರೂ ಅದನ್ನು ‘ವಿಧ್ವಂಸಕ ಕೃತ್ಯ’ ಎನ್ನುತ್ತೇವೆ. ನಾವು ಪ್ರಕೃತಿಯನ್ನು ಧ್ವಂಸ ಮಾಡಿದರೆ ಅದು ‘ಅಭಿವೃದ್ಧಿ’ ಎನಿಸಿಕೊಳ್ಳುತ್ತದೆ. ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡಗಳು ಧ್ವಂಸವಾಗುವ ಮುನ್ನ ಆ ಸಂಕೀರ್ಣವನ್ನು ‘ಜಾಗತೀಕರಣದ, ಆಧುನಿಕ ಆರ್ಥಿಕತೆಯ ಲಾಂಛನ’ ಎಂದು ಬಿಂಬಿಸಲಾಗುತ್ತಿತ್ತು. ಅಂಥ ಆರ್ಥಿಕತೆಯನ್ನು ಕೆಡವಿ ಕಟ್ಟುವುದು ಹೇಗೆ ಎಂಬ ಪ್ರಶ್ನೆ ಈಗ ಮನುಕುಲದ ಮುಂದಿದೆ. ಸುಭದ್ರ ನಾಳೆಗಳನ್ನು ಹುಡುಕುತ್ತ ಬೇರೆ ಗ್ರಹಕ್ಕೆ ಹೋಗಿ ಗಣಿಗಾರಿಕೆ ಮಾಡಬಹುದು; ಅದನ್ನು ವಾಸಯೋಗ್ಯ ಮಾಡಬಹುದು ಎಂಬ ತಾಂತ್ರಿಕತೆಗಳು ಇಲಾನ್ ಮಸ್ಕ್ನಂಥ ಶತಕೋಟ್ಯಧೀಶರ ಬತ್ತಳಿಕೆಯಲ್ಲಿ ರೂಪುಗೊಳ್ಳುತ್ತವೆ; ನಾವಿರುವ ಭೂಮಿಯನ್ನೇ ನಾಳಿನವರಿಗೆ ವಾಸಯೋಗ್ಯ ಮಾಡುವ ತಂತ್ರಜ್ಞಾನವನ್ನು ನಾವೇ ರೂಪಿಸಿಕೊಳ್ಳಬೇಕಿದೆ. ಅದರ ಮೊಳಕೆಗಳು ಭಾರತದಲ್ಲಿ ಬೇಕಾದಷ್ಟಿವೆ. ಅದಕ್ಕೆ ಪ್ರತಿಭೆಯ, ಬಂಡವಾಳದ, ಪ್ರಚಾರದ ನೀರೆರೆದು ಪೋಷಿಸಬೇಕೆಂಬ ವಿಚಾರ ಯಾರಲ್ಲಿ ಎಂದು ಮೊಳೆಯುತ್ತದೊ?

ಸದ್ಯಕ್ಕಂತೂ ಶಾಲಾ ಮಕ್ಕಳು ರಾಕೆಟ್ ತಯಾರಿಸುವುದನ್ನೇ ಕಲಿಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.