ಹಿಂದಿನ ಗುರುವಾರ ಚಂಡೀಗಢದಲ್ಲಿ 18 ರಾಜ್ಯಗಳ ರೈತ ನೇತಾರರ ಚರ್ಚಾಗೋಷ್ಠಿ ನಡೆಯಿತು. ರೈತರಲ್ಲದ ಕೆಲವು ವಿಜ್ಞಾನಿಗಳು, ರಾಜಕಾರಣಿಗಳು ಮತ್ತು ಕೃಷಿನೀತಿ ತಜ್ಞರೂ ಇದ್ದರು. ಈ ಗೋಷ್ಠಿಯಲ್ಲಿ ಪಾಲ್ಗೊಂಡ ಎಲ್ಲ 90 ಧುರೀಣರು ‘ಕುಲಾಂತರಿ ಆಹಾರ ಬೆಳೆಗಳು ನಮಗೆ ಬೇಡ’ ಎಂದು ಒಕ್ಕೊರಲಿನಲ್ಲಿ ಘೋಷಿಸಿದರು.
ಈ ಸಂಚಲನಕ್ಕೆ ಕಾರಣ ಏನೆಂದರೆ, ಕುಲಾಂತರಿ ಬೆಳೆಗಳ ಕುರಿತಂತೆ ಸುಪ್ರೀಂ ಕೋರ್ಟ್ ಈಚೆಗೆ ಕೇಂದ್ರ ಸರ್ಕಾರಕ್ಕೆ ಒಂದು ಮಹತ್ವದ ಆದೇಶವನ್ನು ನೀಡಿದೆ. ಬಿ.ಟಿ. ಹತ್ತಿ, ಬಿ.ಟಿ. ಬದನೆ, ಬಿ.ಟಿ. ಭತ್ತ, ಬಿ.ಟಿ. ಸಾಸಿವೆ ಹೀಗೆ ಬಿಡಿಬಿಡಿ ಫಸಲನ್ನು ರೈತರ ಹೊಲಕ್ಕೆ ಇಳಿಸಲು ಯತ್ನ ನಡೆಯುತ್ತಿದ್ದು, ರೈತ ಪ್ರತಿನಿಧಿಗಳು ಮತ್ತೆ ಮತ್ತೆ ನ್ಯಾಯಾಲಯಕ್ಕೆ ಬರುವಂತಾಗಿದೆ. ‘ಕುಲಾಂತರಿ ಕುರಿತಂತೆ ನೀವೊಂದು ರಾಷ್ಟ್ರೀಯ ನೀತಿಯನ್ನು ಪ್ರಕಟಿಸಿ-ಇನ್ನು ನಾಲ್ಕು ತಿಂಗಳ ಒಳಗೆ’ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ಸರ್ಕಾರಕ್ಕೆ ಹೇಳಿದೆ. ಹಾಗೊಂದು ನೀತಿಯನ್ನು ರೂಪಿಸುವ ಮುನ್ನ ರೈತರು, ಬಳಕೆದಾರರು, ವಿಜ್ಞಾನಿಗಳು, ಕೃಷಿ ಕಂಪನಿಗಳು ಹೀಗೆ ಸಂಬಂಧಪಟ್ಟ ಎಲ್ಲರೊಂದಿಗೆ ಸರ್ಕಾರವೇ ಬಹಿರಂಗ ಸಮಾಲೋಚನೆ ಮಾಡಬೇಕು ಎಂತಲೂ ಆದೇಶಿಸಿದೆ. ಸರ್ಕಾರ ಅದೇನೋ ಮಸಲತ್ತು ಮಾಡಿ ತನಗೆ ಬೇಕೆಂಬಂತೆ ಕುಲಾಂತರಿ ನೀತಿಯನ್ನು ರೂಪಿಸೀತೆಂಬ ಶಂಕೆ ಎದ್ದಿದ್ದರಿಂದ ಚಂಡೀಗಢ ಸಮಾವೇಶ ಏರ್ಪಾಟಾಗಿತ್ತು.
ಬಿ.ಟಿ. (ಕುಲಾಂತರಿ) ಹತ್ತಿಯಂತೂ ಇಡೀ ದೇಶವನ್ನು ಆಕ್ರಮಿಸಿದೆ. ಸ್ಥಳೀಯ ಹತ್ತಿ ತಳಿಗಳೆಲ್ಲ ನಾಮಾವಶೇಷ ಆಗಿವೆ. ಆಹಾರ ಬೆಳೆಗಳಲ್ಲಿ ಕುಲಾಂತರಿ ತಳಿಗಳನ್ನು ‘ತರಲೇಕೂಡದು’ ಎಂದು ನಮ್ಮ ದೇಶದ ರೈತಪರ ಸಂಘಟನೆಗಳು ತಡೆ ಒಡ್ಡುತ್ತಲೇ ಬಂದಿವೆ. ಅತ್ತ ಹೇಗಾದರೂ ಮಾಡಿ ಕುಲಾಂತರಿ ಆಹಾರ ಬೆಳೆಗಳನ್ನು ನುಗ್ಗಿಸಿಯೇ ಸಿದ್ಧ ಎಂಬಂತೆ ವಾಣಿಜ್ಯ ಕಂಪನಿಗಳು ಯತ್ನಿಸುತ್ತಲೇ ಇವೆ. ಹಿಂದೆ ಕುಲಾಂತರಿ ಬದನೆಯನ್ನು ಹೊಲಕ್ಕಿಳಿಸಲು ಮಾನ್ಸಾಂಟೊ ಕಂಪನಿ ಇನ್ನಿಲ್ಲದ ಪ್ರಯತ್ನವನ್ನು ನಡೆಸಿತ್ತು. ಜನಪರ ಧೋರಣೆಯಿದ್ದ ಅಂದಿನ ಪರಿಸರ ಸಚಿವ ಜಯರಾಂ ರಮೇಶ್, 2010ರಲ್ಲಿ ನಮ್ಮ ದೇಶದ ಏಳು ನಗರಗಳಲ್ಲಿ ಜನಸಮಾಲೋಚನೆ ನಡೆಸಿದ್ದರು. ಬೆಂಗಳೂರಿನ ಸಮಾವೇಶದಲ್ಲಿ ಎಚ್.ಡಿ. ದೇವೇಗೌಡ, ಯು.ಆರ್. ಅನಂತಮೂರ್ತಿ ಆದಿಯಾಗಿ ಕುಲಾಂತರಿ ಬೇಡವೆಂದು ವಾದಿಸಿ, ಸಚಿವರಿಗೆ ನಮ್ಮ ನಾಡಿನ ವೈವಿಧ್ಯಮಯ ಬದನೆಗಳನ್ನು ಉಡುಗೊರೆ ನೀಡಿದ್ದರು. ಆ ಏಳೂ ಸಭೆಗಳ ಅಭಿಪ್ರಾಯವನ್ನು ಸೇರಿಸಿ ಕೇಂದ್ರ ಸರ್ಕಾರ ‘ಮುನ್ನೆಚ್ಚರಿಕೆಯ ತತ್ವದ ಮೇಲೆ’ ಕುಲಾಂತರಿ ಆಹಾರ ಬೆಳೆಗಳನ್ನು ಹೊಲಕ್ಕಿಳಿಸುವುದನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಿತು. ಬಿ.ಟಿ. ಆಹಾರಬೆಳೆಗಳ ಮೇಲೆ ಸಂಪೂರ್ಣ ಅಧ್ಯಯನ ನಡೆಯಬೇಕೆಂದು ನಿರ್ಧರಿಸಿತ್ತು.
2005- 15ರ ಅವಧಿಯಲ್ಲಿ ಕುಲಾಂತರಿ (ಬಿ.ಟಿ.) ತಂತ್ರಜ್ಞಾನ ವಿದೇಶಗಳಲ್ಲಿ ಭರ್ಜರಿ ವಿಜೃಂಭಿಸಿದ್ದಂತೂ ಹೌದು. ಹತ್ತಿ, ಮೆಕ್ಕೆಜೋಳ, ಸೋಯಾ, ರೇಪ್ಸೀಡ್, ಕನೋಲಾ... ಹತ್ತಿಯಂತೂ ಅಮೆರಿಕ, ಬ್ರಝಿಲ್, ಅರ್ಜೆಂಟಿನಾ, ಚೀನಾ, ಆಸ್ಟ್ರೇಲಿಯಾಕ್ಕೂ ಹೋಯಿತು. ನಂತರ ಬಿ.ಟಿ. ಬೆಳೆಗಳ ಅನಪೇಕ್ಷಿತ ಮುಖಗಳು ಗೋಚರ ಆಗುತ್ತ ಹೋದ ಹಾಗೆ, ಎಲ್ಲೆಡೆ ಉತ್ಸಾಹ ಇಳಿಯುತ್ತಿದೆ. ಕಳೆದ ವರ್ಷದ ಸಮೀಕ್ಷೆಯ ಪ್ರಕಾರ ಜಗತ್ತಿನ ಒಟ್ಟೂ 468 ಕೋಟಿ ಹೆಕ್ಟೇರ್ ಕೃಷಿಭೂಮಿಯಲ್ಲಿ ಬರೀ 21 ಕೋಟಿ ಹೆಕ್ಟೇರ್‌ನಲ್ಲಿ ಅಂದರೆ (ಶೇ 4ರಷ್ಟು ಭೂಮಿಯಲ್ಲಿ ಮಾತ್ರ) ಕುಲಾಂತರಿ ಫಸಲು ಬೆಳೆಯುತ್ತಿದೆ. ಅದೂ ಬರೀ ಐದು ದೇಶಗಳಲ್ಲಿ ಔದ್ಯಮಿಕ ಕೃಷಿಯಾಗಿ ಅದು ಸೀಮಿತಗೊಂಡಿದೆ.
ಈ ಮಧ್ಯೆ ‘ಮಾನ್ಸಾಂಟೊ’ ತನ್ನನ್ನು ತಾನೇ ‘ಬಾಯರ್’ ಎಂಬ ಬಹುರಾಷ್ಟ್ರೀಯ ಕಂಪನಿಗೆ ಮಾರಿಕೊಂಡಿತು. ಕೃಷಿ ಸಾಮಗ್ರಿಗಳನ್ನು ಒದಗಿಸುತ್ತಿರುವ ಬಾಯರ್ ಕಂಪನಿ ಇತ್ತೀಚೆಗೆ ಭಾರತ ಸರ್ಕಾರದ ಕೃಷಿ ಸಂಶೋಧನಾ ಮಂಡಳಿಯೊಂದಿಗೆ ಕೈಜೋಡಿಸಿದೆ. ಹತ್ತು ವರ್ಷಗಳ ಹಿಂದೆಯೇ ಅದು ತನ್ನ ಬಿ.ಟಿ. ತಂತ್ರಜ್ಞಾನದ ಒಂದು ತುಣುಕನ್ನು ದಿಲ್ಲಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ದೀಪಕ್ ಪೈಂತಾಲ್ ಅವರಿಗೆ ನೀಡಿ, ಕುಲಾಂತರಿ ಸಾಸಿವೆ ತಳಿಯನ್ನು ಸೃಷ್ಟಿಸಲು ನೆರವು ನೀಡಿತು. ಅವರು ಅದನ್ನು ಸೃಷ್ಟಿಸಿ, ರೈತರಿಗೆ ಬಿಡುಗಡೆ ಮಾಡಲು ಸರ್ಕಾರದ ಅನುಮತಿಗೆ ಯತ್ನಿಸುತ್ತಿದ್ದಾರೆ. ಈ ಸಸ್ಯದ ಇಳುವರಿಯೇನೂ ಭಾರೀ ಇಲ್ಲ, ಅದಕ್ಕಿಂತ ಹೆಚ್ಚು ಫಸಲು ನೀಡುವ ಹೈಬ್ರಿಡ್ ಸಾಸಿವೆಯನ್ನು ರೈತರು ಬೆಳೆಯುತ್ತಿದ್ದಾರೆ. ಆದರೆ ಈ ಹೊಸದೊಂದು ಗುಣ ಇದೆ. ಕುಲಾಂತರಿ ಸಾಸಿವೆ ಹೊಲದಲ್ಲಿ ಮೇಲೆ ನೀವೆಷ್ಟೇ ಕಳೆನಾಶಕವನ್ನು ಎರಚಿದರೂ ಸಾಸಿವೆ ಸಸ್ಯ ಮಾತ್ರ ಸಾಯುವುದಿಲ್ಲ. ಸಾಸಿವೆಯ ಬುಡದಲ್ಲಿನ ಕಳೆಗಳೆಲ್ಲ ಸುಟ್ಟುಹೋಗುತ್ತವೆ. ಹಾಗೆ ಸುರಿದ ಕಳೆನಾಶಕದಿಂದ ಚಿಟ್ಟೆ, ದುಂಬಿ, ಜೇನ್ನೊಣ, ಎರೆಹುಳುಗಳ ಮೇಲೆ ಪರಿಣಾಮ ಏನೆಂದು ವಿಜ್ಞಾನಿಗಳೂ ನೋಡಿಲ್ಲ. ಅಂಥ ಸಾಸಿವೆ ಮನುಷ್ಯರ ಆರೋಗ್ಯಕ್ಕೆ ಏನು ಮಾಡೀತೆಂಬುದೂ ಗೊತ್ತಿಲ್ಲ. ಆದರೆ ಕಳೆ ಕೀಳಲು ಬರುತ್ತಿದ್ದ ಹಳ್ಳಿಯ ಹೆಣ್ಣುಮಕ್ಕಳಿಗೆ ಕೆಲಸವಿಲ್ಲದಂತಾಗುತ್ತದೆ. ಹಾಗೆ ಉಳಿಸಿದ ಹಣವೆಲ್ಲ ಹೊಸತಳಿಯ ಬೀಜ ತಯಾರಿಸುವ ಕಂಪನಿಗಳಿಗೆ ಹೋಗುತ್ತದೆ.
ಕುಲಾಂತರಿ ಸಾಸಿವೆಯನ್ನು ಹೊಲಕ್ಕಿಳಿಸಿದರೆ ಕಂಪನಿಗಳಿಗೆ ಭಾರೀ ಲಾಭವೇನೂ ಬರಲಿಕ್ಕಿಲ್ಲ. ಅಸಲೀ ವಿಚಾರ ಏನೆಂದರೆ, ಕುಲಾಂತರಿ ಸಾಸಿವೆಯ ನೆಪದಲ್ಲಿ ಆಹಾರ ಬೆಳೆಗೆ ಅನುಮತಿ ಸಿಕ್ಕರೆ ಬಿ.ಟಿ. ಬದನೆ, ಬಿ.ಟಿ. ಬೆಂಡೆ, ಟೊಮೆಟೊ, ಬಟಾಟೆ, ಮೆಣಸು, ಸೌತೆ, ಅವರೆ, ಭತ್ತ ಎಲ್ಲಕ್ಕೂ ರಹದಾರಿ ಸಿಕ್ಕಂತಾಗುತ್ತದೆ. ನಮ್ಮ ದೇಶದ ತಳಿವೈವಿಧ್ಯ ಕಡಿಮೆ ಆಗುತ್ತದೆ. ವಿಷನಿರೋಧಕ ಕಳೆಗಳು ಹೆಚ್ಚುತ್ತವೆ. ಬೀಜಸ್ವಾತಂತ್ರ್ಯ ರೈತರ ಕೈತಪ್ಪುತ್ತದೆ. ಕಂಪನಿಗಳ ಲಾಭದ ಮೊತ್ತ ಏರುತ್ತದೆ. ಸಾವಯವ ಬಾಸ್ಮತಿ, ಶುಂಠಿ, ಅರಿಸಿನವನ್ನು ವಿದೇಶಗಳಿಗೆ ರಫ್ತು ಮಾಡುವವರ ವಹಿವಾಟು ಕುಸಿಯುತ್ತದೆ. ಇದು ಚಂಡೀಗಢದ ಸಮಾವೇಶದಲ್ಲಿ ವ್ಯಕ್ತವಾದ ಅಭಿಪ್ರಾಯ.
ಬಿ.ಟಿ. ಹತ್ತಿಯ ಸಹವಾಸ ಸಾಕೆಂದು ಕೈಬಿಟ್ಟ ಈಜಿಪ್ಟ್, ಟರ್ಕಿ, ಪೆರು, ಈಗ ಸಹಜ ಹತ್ತಿಯಿಂದಲೇ (ಭಾರತಕ್ಕಿಂತ) ಇಮ್ಮಡಿ ಫಸಲು ತೆಗೆಯುತ್ತಿವೆ. ಪ್ರಮುಖ 13 ರಾಷ್ಟ್ರಗಳು ಕುಲಾಂತರಿ ಬೆಳೆಗಳಿಗೆ ವಿದಾಯ ಹೇಳಿವೆ. ಜಪಾನಿನಲ್ಲಿ ಬಿ.ಟಿ. ಬೆಳೆ ಬೆಳೆಯುವಂತಿಲ್ಲ. ಫಿಲಿಪ್ಪೀನ್ಸ್ ನ್ಯಾಯಾಲಯ ಈಚೆಗಷ್ಟೇ ಬಿ.ಟಿ. ಬದನೆ ಮತ್ತು ಬಿ.ಟಿ. ಭತ್ತಕ್ಕೆ ನಿಷೇಧ ಹಾಕಿದೆ. ನಮ್ಮಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರವೇ ಬಿ.ಟಿ. ಹತ್ತಿಗೆ ಎಲ್ಲೆಲ್ಲೂ ಸೋಲಾಗುತ್ತಿದೆ. ಕೀಟಬಾಧೆ ಹಿಂದಿಗಿಂತ ಹೆಚ್ಚಾಗಿದೆ. ರೈತರು ಸೋಲುತ್ತಿದ್ದಾರೆ.
ವಿಶೇಷ ಏನೆಂದರೆ, ಕುಲಾಂತರಿ ಬೆಳೆಗಳಿಗೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ವಿರೋಧ ವ್ಯಕ್ತಪಡಿಸಿವೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದಲ್ಲಿ ಅವನ್ನು ನಿಷೇಧಿಸಿದ್ದರು. ಆರ್‌ಎಸ್‌ಎಸ್ ಹಿನ್ನೆಲೆಯ ಭಾರತೀಯ ಕಿಸಾನ್ ಸಂಘ ಮೊದಲಿನಿಂದಲೂ ಅದನ್ನು ವಿರೋಧಿಸುತ್ತ ಬಂದಿದೆ. ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳೂ ವಿರೋಧಿಸಿವೆ. ಬಿಹಾರದಿಂದ ಆಯ್ಕೆಯಾದ ಸಿಪಿಎಂ ಸಂಸದ ರಾಜಾರಾಂ ಸಿಂಗ್ ಮೊನ್ನೆ ಚಂಡೀಗಢದ ಘೋಷಣೆಗೆ ದನಿಗೂಡಿಸಿದ್ದಾರೆ. ಅಧ್ಯಾತ್ಮ ಪೀಠದವರೂ ಅದನ್ನೇ ಹೇಳುತ್ತಾರೆ. ‘ಮನುಷ್ಯನ ದೀರ್ಘ ಭವಿಷ್ಯದ ಬಗ್ಗೆ ವಾಣಿಜ್ಯ ಶಕ್ತಿಗಳಿಗೆ ಕಾಳಜಿ ಇಲ್ಲವೇ ಇಲ್ಲ. ಕುಲಾಂತರಿಗಳಿಗೆ ನಮ್ಮಲ್ಲಿ ಪ್ರವೇಶ ಕೊಡಲೇಬಾರದಿತ್ತು’ ಎಂದು ಸದ್ಗುರು ಜಗ್ಗಿ ವಾಸುದೇವ್ ಎಂದೋ ಹೇಳಿದ್ದಾರೆ.
ಕುಲಾಂತರಿ ಬೇಡವೆನ್ನಲು ಇಷ್ಟೊಂದು ಅಂಶ ಇರುವಾಗ ಕೇಂದ್ರ ಸರ್ಕಾರ ಮತ್ತೆ ರಾಷ್ಟ್ರೀಯ ಜನಸಂವಾದವನ್ನು ನಡೆಸುವ ಅಗತ್ಯವಿದೆಯೆ? ಸರ್ಕಾರಿ ನೀತಿ, ನಿಲುವು ಕುಲಾಂತರಿಯ ಪರವಾಗಿ ಹೊಮ್ಮುವ ಸಾಧ್ಯತೆಯಿದೆಯೆ? ಹಾಗೂ ಆಗಬಹುದು. ಏಕೆಂದರೆ ಜನಸಾಮಾನ್ಯರಿಗೆ ತಲುಪಿದ ಮಾಹಿತಿಗಳು ಅಧಿಕಾರ ವರ್ಗಕ್ಕೆ, ಸಚಿವರಿಗೆ, ಸಂಸದರಿಗೆ, ನೀತಿ ನಿರೂಪಕರಿಗೂ ತಲುಪುತ್ತವೆ ಎನ್ನುವಂತಿಲ್ಲ. ಅವರೆಲ್ಲರಿಗೆ ಪಾಠ ಹೇಳುವ ‘ತಜ್ಞರು’ ಬೇರೆಯೇ ಇರುತ್ತಾರೆ. ಅವರ ಪಾಠದ ಮನೆಗಳೂ ಮನವೊಲಿಕೆ ತಂತ್ರಗಳೂ ಬೇರೆಯೇ ಇರುತ್ತವೆ. ಹಿಂದೆ ಬಿ.ಟಿ. ಬದನೆಯ ವಿರುದ್ಧ ಜನಾಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿದ ಅರಣ್ಯ/ಪರಿಸರ ಸಚಿವ ಜಯರಾಂ ರಮೇಶ್ ಅವರ ಖಾತೆಯನ್ನೇ ಬದಲಿಸಿ ಗ್ರಾಮೀಣಾಭಿವೃದ್ಧಿ ಖಾತೆ ನೀಡಲಾಯಿತು. ಹೈಟೆಕ್ ತಂತ್ರಜ್ಞಾನಕ್ಕೆ, ತಂತ್ರಕ್ಕೆ ಅಷ್ಟೊಂದು ಪವರ್ ಇರುತ್ತದೆ. ಪ್ರಜಾಪ್ರಭುತ್ವದ ಈ ಮಗ್ಗುಲುಗಳನ್ನೂ ಜನರಿಗೆ ಮತ್ತೆಮತ್ತೆ ನೆನಪಿಸುತ್ತಿರಬೇಕಿದೆ. ಅದಕ್ಕಾಗಿ ಒಂದು ಸಂವಾದ ಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.