ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನ ವಿಶೇಷ | ರೋಬಾಟ್‌ಗಳ ಆತ್ಮಹತ್ಯೆ ಪ್ರಸಂಗ

Published 10 ಜುಲೈ 2024, 23:37 IST
Last Updated 10 ಜುಲೈ 2024, 23:37 IST
ಅಕ್ಷರ ಗಾತ್ರ

ಸುನಿತಾ ವಿಲಿಯಮ್ಸ್‌ 35 ದಿನಗಳಿಂದ ಬಾಹ್ಯಾಕಾಶದಲ್ಲಿ ಸುತ್ತುತ್ತಿದ್ದಾರೆ. ಅವರನ್ನು ಕೆಳಕ್ಕೆ ತರಬೇಕಿದ್ದ ನೌಕೆಯಲ್ಲಿ ಇಂಧನ ಸೋರಿಕೆ ಆಗುತ್ತಿದೆ. ಅವರೀಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆಂದು ಮಾಧ್ಯಮಗಳಲ್ಲಿ ಕಳವಳ ವ್ಯಕ್ತವಾಗುತ್ತಿದೆ. ಹಾಗೇನೂ ಇಲ್ಲವೆಂದೂ ‘ಸುನಿ’ ಕ್ಷೇಮವಾಗಿದ್ದಾರೆಂದೂ ಇನ್ನೊಂದೆರಡು ತಿಂಗಳಲ್ಲಿ ಸುರಕ್ಷಿತವಾಗಿ ಭೂಮಿಗೆ ಬರಲಿದ್ದಾರೆಂದೂ ನಾಸಾ ತಿಳಿಸಿದೆ. ಭೂಮಿಯ ಮೇಲಿನ ಈ ಪರಿ ಮಹಾಮಳೆ, ಭೂಕುಸಿತ, ಚಂಡಮಾರುತ, ಶಾಖಗೋಪುರಗಳನ್ನು ನೋಡಿದರೆ ಅವರು ಭೂಮಿಗಿಂತ ಬಾಹ್ಯಾಕಾಶದಲ್ಲೇ ಕ್ಷೇಮವೆಂದು ಅಂದುಕೊಳ್ಳೋಣ.

***

‘ಕ್ಷೇಮ’ ಎಂಬುದು ಮಾಮೂಲು ಅರ್ಥದಲ್ಲಿ ಶರೀರಕ್ಕೆ ಸಂಬಂಧಿಸಿದ್ದು ತಾನೆ? ನಿರಂತರ ಏಕಾಂತವಾಸ. ಕೆಲಸದಲ್ಲಿ ಏಕತಾನತೆಯಿಂದ ಮನಸ್ಸು ಜಿಡ್ಡುಗಟ್ಟಿ, ಜುಗುಪ್ಸೆ ಬಂದಿದ್ದರೆ ಏನು ಮಾಡುವುದು? ದಕ್ಷಿಣ ಕೊರಿಯಾದ ಒಂದು ರೋಬಾಟ್‌ ಇದೇ ಕಾರಣಕ್ಕೆ ‘ಆತ್ಮಹತ್ಯೆ ಮಾಡಿಕೊಂಡಿತು’ ಎಂಬ ಉತ್ಪ್ರೇಕ್ಷಿತ ಸುದ್ದಿ ಈಚೆಗೆ ವೈರಲ್‌ ಆಗಿತ್ತು. ಅದು ಆಯತಪ್ಪಿ ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು ಚೂರುಚೂರಾದ ಚಿತ್ರವೂ ಪ್ರಕಟ
ವಾಗಿತ್ತು. ‘ಆತ್ಮಹತ್ಯೆ’ ಎಂಬ ಪದ ಸೇರಿಸಿದ್ದರಿಂದ ನಾನಾ ಬಗೆಯ ತಮಾಷೆಯ, ಊಹಾಪೋಹದ ಟೀಕೆ ಟಿಪ್ಪಣಿಗಳೂ ಸೇರಿಕೊಂಡವು. ಅದು ಸಂಧಿವಾತದಿಂದ ಬಳಲುತ್ತಿತ್ತೇ? ಅದಕ್ಕೆ ದೃಷ್ಟಿಮಾಂದ್ಯ ಉಂಟಾಗಿತ್ತೇ? ತಲೆಸುತ್ತಿ ಬಿತ್ತೇ? ಸಣ್ಣ ಸುದ್ದಿಗೂ ಹೀಗೆ ತಲೆ, ಬಾಲ ಸೇರಿಕೊಂಡು ವಿರಾಟ್‌ ವಿಕಾರ ರೂಪ ತಾಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತವೆ.

ಸುನಿತಾ ವಿಲಿಯಮ್ಸ್‌ ವಿಷಯದಲ್ಲಿ ಆಗಿದ್ದು ಇಷ್ಟೆ: ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಯಲ್ಲಿ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಇದೆ. (ಅದನ್ನು ಚಿಕ್ಕದಾಗಿ ಅಂ.ಬಾ.ನಿ. ಎಂದು ಹೇಳುವುದು ಸರಿಯಾಗಲಾರದು ಅನ್ನಿ). ಅಲ್ಲಿ ಪಾಳಿಯ ಪ್ರಕಾರ ವಿವಿಧ ದೇಶಗಳ ಗಗನಯಾನಿಗಳು ಹೋಗಿ ಕೆಲಕಾಲ ವಾಸವಾಗಿದ್ದು ಒಂದಿಷ್ಟು ಸಂಶೋಧನೆ ಮಾಡಿ ಹಿಂದಿರುಗುತ್ತಾರೆ. ಅಲ್ಲಿಗೆ ಹೋಗಿ ಬರಲೆಂದು ಹಿಂದಿದ್ದ ಸ್ಪೇಸ್‌ ಶಟ್ಲ್‌ಗಳನ್ನು ಕೈಬಿಟ್ಟ ನಂತರ ಅಮೆರಿಕಕ್ಕೆ ತನ್ನದೇ ಆದ ನೌಕೆ ಇರಲಿಲ್ಲ; ರಷ್ಯಾದ ಸೊಯೂಝ್‌ ಸರಣಿಯ ನೌಕೆಗಳನ್ನು ಅವಲಂಬಿಸಬೇಕಿತ್ತು. ಸ್ವದೇಶೀ ವಾಹನ ಬೇಕಿದ್ದರಿಂದ ಖಾಸಗಿ ಸ್ಪೇಸ್‌ ಎಕ್ಸ್‌ ಕಂಪನಿಯ ‘ಕ್ರೂ ಡ್ರಾಗನ್‌’ ಮತ್ತು ಬೋಯಿಂಗ್‌ ಕಂಪನಿಯ ‘ಸ್ಟಾರ್‌ಲೈನರ್‌’ ನೌಕೆಗಳು ಸಜ್ಜಾಗಿ ಬಂದವು. ಪರೀಕ್ಷಾರ್ಥವಾಗಿ ಸ್ಟಾರ್‌ಲೈನರ್‌ ನೌಕೆ ಸ್ವಯಂಚಾಲಿತವಾಗಿ ಒಂದೆರಡು ಬಾರಿ ಮೇಲಕ್ಕೆ ಹೋಗಿ ಬಂದಿತ್ತು. ಮಾನವಸಹಿತ ಸವಾರಿಗೆಂದು ಇದೇ ಮೊದಲ ಬಾರಿಗೆ ಸುನಿತಾ ಮತ್ತು ಬುಚ್‌ ವಿಲ್ಮರ್‌ ಜೋಡಿಯನ್ನು ಕೂರಿಸಿಕೊಂಡು ಹೋಗಿತ್ತು. ಇವರು ಈ ನೌಕೆಯನ್ನು ತಮಗಿಷ್ಟ ಬಂದಂತೆ ನಿಯಂತ್ರಿಸುತ್ತ ಅಂ.ಬಾ. ನಿಲ್ದಾಣಕ್ಕೆ ಕೊಂಡೊಯ್ದಿದ್ದಾರೆ.

ನೌಕೆ ತನ್ನ ಮಾಮೂಲು ಪಾರ್ಕಿಂಗ್‌ ಜಾಗಕ್ಕೆ ಕಚ್ಚಿಕೊಂಡ ನಂತರ ಇಬ್ಬರೂ ಒಳಕ್ಕೆ ಹೋಗಿ, ಅಲ್ಲಿ ಈಗಾಗಲೇ ಇದ್ದ ಐವರನ್ನು ಸೇರಿಕೊಂಡಿದ್ದಾರೆ. ಇತ್ತ ಸ್ಟಾರ್‌ಲೈನರ್‌ ನೌಕೆಯ ಎಂಜಿನ್ನಿನಿಂದ ಹೀಲಿಯಂ ಅನಿಲ ಮೆಲ್ಲಗೆ ಸೋರಿಕೆ ಆಗುತ್ತಿದೆ ಎಂಬುದು ನೆಲದ ಮೇಲಿದ್ದವರಿಗೆ ಗೊತ್ತಾಗಿದೆ.

ವಾಹನ ಪರೀಕ್ಷೆಗೆಂದೇ ಹೋಗಿದ್ದರಿಂದ ಇವರಿಬ್ಬರೂ ಮರುವಾರ ಹಿಂದಿರುಗಿ ಬರಬಹುದಿತ್ತು. ಇಷ್ಟಕ್ಕೂ ಅನಿಲ ಸೋರಿಕೆ ತೀವ್ರವೇನೂ ಇರಲಿಲ್ಲ. ಇದ್ದರೂ ಏನು, ಕೆಳಕ್ಕೆ ಸುತ್ತುತ್ತ ಬರುವಾಗ ಅದರ ಎಂಜಿನ್‌ ಹೇಗಿದ್ದರೂ ಕಳಚಿಕೊಂಡು, ಉರಿದು ಭಸ್ಮವಾಗಿ ಸಮುದ್ರಕ್ಕೆ ಬೀಳಬೇಕು. ಗಗನಯಾನಿಗಳು ಕೂತಿರುವ ಮೂತಿಯ ಭಾಗ ಪುಟ್ಟ ಜೆಟ್‌ ವಿಮಾನದ ಹಾಗೆ ನೆಲಕ್ಕೆ ಸುರಕ್ಷಿತವಾಗಿ ಇಳಿಯಬೇಕು. ಮುಂದಿನ ಪ್ರಯಾಣಕ್ಕೆ ಹೊಸ ಎಂಜಿನ್‌ ಜೋಡಣೆ ಆಗಬೇಕು.

ಆದರೆ ಸೋರಿಕೆ, ಎಲ್ಲಿ, ಹೇಗೆ, ಎಷ್ಟು ಎಂಬುದು ಗೊತ್ತಾಗಬೇಕು ತಾನೆ? ಮುಂದಿನ ಯಾನಕ್ಕೆ ಹೊಸ ಎಂಜಿನ್‌ ತಯಾರಾಗುವಾಗ ಈ ದೋಷಗಳು ಇರಬಾರದು. ಈಗಿನ ಎಂಜಿನ್‌ ಮತ್ತೆ ಇಡಿಯಾಗಿ ಕೆಳಕ್ಕೆ ಬರುವುದಿಲ್ಲವಾದ್ದರಿಂದ ಅಲ್ಲಿದ್ದಾಗಲೇ ಅದರ ಪರೀಕ್ಷೆ ಆಗಬೇಕು. ಸುನಿತಾ ತಾನೇ ಪರೀಕ್ಷೆ ಮಾಡುತ್ತೇನೆ ಎಂದಿದ್ದಾರೆ.

ಸುನಿತಾ ಹಿನ್ನೆಲೆ ಹೀಗಿದೆ: ಅಮೆರಿಕಕ್ಕೆ ಹೋಗಿ ನೆಲೆಸಿದ್ದ ಗುಜರಾತಿನ ದೀಪಕ್‌ ಪಾಂಡ್ಯ ಮತ್ತು ಸ್ಲೊವಾನಿಯಾ ಮೂಲದ ಉರ್ಸುಲಿನ್‌ ದಂಪತಿಯ ಮಗಳಾಗಿ ಅಲ್ಲೇ ಜನಿಸಿದವರು ಸುನಿತಾ (58). ಮುಂದೆ ಎಂಜಿನಿಯರಿಂಗ್‌ ಪದವಿ ಪಡೆದು ನೌಕಾಸೇನೆಯ ಹೆಲಿಕಾಪ್ಟರ್‌ ಪೈಲಟ್‌ ಆಗಿ, ಆ ಬಳಿಕ ಬಾಹ್ಯಾಕಾಶ ಸಂಸ್ಥೆಯನ್ನು ಸೇರಿದ್ದಾರೆ. 2006ರ ನಂತರ ಎರಡು ಬಾರಿ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬಂದಿದ್ದಾರೆ. ನಿಲ್ದಾಣದ ಹೊರಕ್ಕೆ ಶೂನ್ಯದಲ್ಲಿ ಈಜಿ ಹೋಗಿ ಎಂಜಿನ್‌ ಪರೀಕ್ಷೆ, ರಿಪೇರಿ, ಬಿಡಿಭಾಗಗಳ ಜೋಡಣೆ ಮಾಡಿದ್ದಾರೆ.

ಎರಡನೆಯ ಬಾರಿ ಹೋಗಿದ್ದಾಗ, ನೆಲದ ಮೇಲೆ ಬಾಸ್ಟನ್‌ ನಗರದಲ್ಲಿ ನಡೆಯುತ್ತಿದ್ದ ವಿಶ್ವಖ್ಯಾತಿಯ ಮ್ಯಾರಥಾನ್‌ ಓಟದಲ್ಲಿ ತಾವು ನಿಂತಲ್ಲೇ ಓಡುತ್ತ ಭಾಗಿಯಾಗಿ, ಮೂರು ಗಂಟೆಗಳ ಓಟವನ್ನು ಪೂರೈಸಿ ಮೆಡಲ್‌ ಕೂಡ ಗೆದ್ದಿದ್ದಾರೆ. ಅಂ.ಬಾ. ನಿಲ್ದಾಣದಿಂದ ಏಳು ಬಾರಿ ಹೊರಬಿದ್ದು ಒಟ್ಟು ಐವತ್ತು ಗಂಟೆಗಳ ಕಾಲ ಈಜಿದ ಮೊದಲ ಮಹಿಳೆ ಎಂಬ ದಾಖಲೆಯೂ ಇವರದ್ದಾಗಿದೆ.

ಈ ಬಾರಿ ಅಂ.ಬಾ. ನಿಲ್ದಾಣದಲ್ಲಿ ಇದ್ದವರೆಲ್ಲ ಒಂದು ಅವಘಡದಿಂದ ಪಾರಾಗಿದ್ದಾರೆ. ರಷ್ಯಾದ ಹಳೇ ಉಪಗ್ರಹವೊಂದು ಹೋಳಾಗಿ ಕೆಳಗಿನ ಕಕ್ಷೆಗೆ ಜಾರುತ್ತ ಬರತೊಡಗಿತ್ತು. ಅದರ ತುಣುಕುಗಳು ಇವರಿದ್ದ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದ್ದರೆ ನಿಲ್ದಾಣದ ಕೆಲವು ಭಾಗ ಸ್ಫೋಟವಾಗುವ ಸಂಭವ ಇತ್ತು. ಎಲ್ಲ ಏಳೂ ನಿವಾಸಿಗಳು ತುರ್ತಾಗಿ ಸ್ಟಾರ್‌ಲೈನರ್‌ ಒಳಕ್ಕೆ ಸೇರಿಕೊಳ್ಳಬೇಕೆಂದು ನೆಲದಿಂದ ಆದೇಶ ಬಂತು. ನಾಲ್ವರು ಕೂರಬಹುದಾದ ಇಕ್ಕಟ್ಟಿನಲ್ಲಿ ಅದು ಹೇಗೆ ಏಳು ಮಂದಿ ತೂರಿಕೊಂಡರೋ, ಅಂತೂ ಬಚಾವಾದರು.

ಹಾಗಿದ್ದರೆ ಮರಳಿ ಬರುವುದು ಯಾವಾಗ? ಆ ದಿನವನ್ನು ಮಾತ್ರ ‘ನಾಸಾ’ ಸಂಸ್ಥೆ ಇನ್ನೂ ನಿಗದಿ ಮಾಡಿಲ್ಲ. ಸ್ಟಾರ್‌ಲೈನರ್‌ ಇಂಧನ ಸೋರಿಕೆ ಅಂಥ ಗಂಭೀರ ವಿಷಯವೇನಲ್ಲ; ಮೇಲಾಗಿ ಅಂ.ಬಾ. ನಿಲ್ದಾಣದಲ್ಲಿ ದಾಸ್ತಾನೂ ಸಾಕಷ್ಟಿದೆ. ಚಿಂತೆಯೇನೂ ಇಲ್ಲವೆಂದು ಅದರ ವಕ್ತಾರರು ಹೇಳಿದ್ದಾರೆ. ಅಸಲೀ ವಿಷಯ ಏನೆಂದರೆ ಗಗನಯಾತ್ರಿಗಳು ಆ ನಿಲ್ದಾಣದಲ್ಲಿ ಜಾಸ್ತಿ ದಿನ ಇದ್ದಷ್ಟೂ ತಂತ್ರಜ್ಞಾನಕ್ಕೆ, ವೈದ್ಯಕೀಯಕ್ಕೆ ಮತ್ತು ಮನೋವಿಜ್ಞಾನಕ್ಕೆ ಜಾಸ್ತಿ ಲಾಭ ಆಗುತ್ತದೆ. ಬಾಹ್ಯಾಕಾಶಕ್ಕೆ ರವಾನಿಸುವ ಎಲ್ಲ ಯಂತ್ರಗಳ ಆರೋಗ್ಯ ವೀಕ್ಷಣೆಗೆಂದು ಅವುಗಳದ್ದೇ ಪ್ರತಿರೂಪಗಳನ್ನು ನೆಲದ ಮೇಲೆ ವೀಕ್ಷಣೆ ಮಾಡಲಾಗುತ್ತದೆ. ಅದೇ ರೀತಿ, ಬಾಹ್ಯಾಕಾಶದಲ್ಲಿ ವಾಸವಿದ್ದವರ ಆರೋಗ್ಯ ವೀಕ್ಷಣೆಗೆಂದು ‘ಡಿಜಿಟಲ್‌ ಜವಳಿ’ಗಳನ್ನೂ ಇಲ್ಲಿ ಸೃಷ್ಟಿ ಮಾಡಲಾಗುತ್ತಿದೆ. ಕಕ್ಷೆಯಲ್ಲಿದ್ದವರು ದಿನಕ್ಕೆರಡು ಬಾರಿ ಅಲ್ಲಿರುವ ಸಲಕರಣೆಗಳಿಗೆ ಮೈಯೊಡ್ಡಿ ನಿಂತರೆ ಸಾಕು. ಇಡೀ ದೇಹದ ಸ್ಕ್ಯಾನಿಂಗ್‌ ಆಗಿ ಇಲ್ಲಿರುವ ಪ್ರತಿರೂಪದಲ್ಲಿ ಅವೆಲ್ಲ ದಾಖಲಾಗುತ್ತವೆ.

ಅಂಥ ಜ್ಞಾನ ವಿಕಾಸದ ಫಲ ಕ್ರಮೇಣ ಆಧುನಿಕ ಆಸ್ಪತ್ರೆಗಳಿಗೂ ಸಿಗುತ್ತದೆ. ಇಷ್ಟಕ್ಕೂ ಎಲ್ಲ ಬಗೆಯ ಮುಂಚೂಣಿ ತಂತ್ರಜ್ಞಾನಗಳೂ ಬಹುತೇಕ ಮಿಲಿಟರಿಯ ಅಥವಾ ಬಾಹ್ಯಾಕಾಶದ ಪೈಪೋಟಿ ಮತ್ತು ನೂಕುಬಲದಿಂದಾಗಿಯೇ ವಿಕಾಸವಾಗುತ್ತವೆ ತಾನೆ? ರೋಬಾಟ್‌ಗಳೇ ತಜ್ಞವೈದ್ಯರನ್ನೂ ಮೀರಿಸುವಂತೆ ಸರ್ಜರಿ ಮಾಡುವ ಹೈಟೆಕ್‌ ಆಸ್ಪತ್ರೆಗಳಲ್ಲಿ ಇನ್ನೇನು, ರೋಗಿಗಳ ಜವಳಿ ಬಿಂಬಗಳಿಗೇ ಟ್ರೀಟ್ಮೆಂಟ್‌ ಕೊಡುವ ವ್ಯವಸ್ಥೆಯೂ ಬಂದೀತು. ಹಾಗಿದ್ದರೆ ಅಲ್ಲಿನ ರೋಬಾಟ್‌ಗಳು ಮನನೊಂದು ನಿಜಕ್ಕೂ ಆತ್ಮಹತ್ಯೆಗೆ ಮುಂದಾಗುತ್ತವೆಯೇ ಎಂಬ ಸಿಲ್ಲಿ ಪ್ರಶ್ನೆಯನ್ನು ಕೇಳಬೇಡಿ.

ಸುನಿತಾ ಅವರು ಸ್ಟಾರ್‌ಲೈನರ್‌ ದೋಷದ ಪತ್ತೆಗೆಂದು ಬಾಹ್ಯಾಕಾಶದಲ್ಲಿ ಸದ್ಯದಲ್ಲೇ ಮತ್ತೊಮ್ಮೆ ಈಜಬಹುದು. ಇತ್ತ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಫ್ರೆಂಚ್‌ ಈಜುಗಾರರ ತರಬೇತಿಗೆಂದೇ ವಿಶೇಷ ಡಿಜಿಟಲ್‌ ಜವಳಿಗಳ ಸೃಷ್ಟಿಯಾಗಿದೆ. ನೀರೊಳಗಿನ ಅವರ ಚಲನೆಯನ್ನು ಪ್ರತಿ ಸೆಕೆಂಡ್‌ಗೆ 512 (ಮಾಮೂಲು ವಿಡಿಯೊದಲ್ಲಿ 24) ಫ್ರೇಮ್‌ಗಳಲ್ಲಿ ಸೆರೆಹಿಡಿದು ಅಂಗಾಂಗಗಳ ಪ್ರತಿ ಮಿಲಿಮೀಟರನ್ನೂ ನೋಡಿ ಹುರಿಯಾಳುಗಳ ದೇಹವನ್ನು ಹುರಿಗೊಳಿಸಲಾಗುತ್ತಿದೆ. ಫಿಸಿಕ್ಸ್‌, ಫಿಸಿಯಾಲಜಿ ಮತ್ತು ಅನಾಟಮಿಯ ಎಲ್ಲ ಜ್ಞಾನಶಾಖೆಗಳನ್ನೂ ಒಂದಾಗಿಸಿ, ಡಿಜಿಟಲ್‌ ಪ್ರತಿರೂಪಗಳು ಸಿದ್ಧವಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT