ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಲಾಗದ ‘ಹಿಂದೂ ರಾಷ್ಟ್ರ’ ಪರಿಕಲ್ಪನೆ

Last Updated 16 ಜೂನ್ 2018, 9:14 IST
ಅಕ್ಷರ ಗಾತ್ರ

ದೇವರೇ ತನ್ನ ಆಡಳಿತಗಾರ ಎಂದು ನಂಬಿದ, ಧರ್ಮಾಧಾರಿತ ದೇಶ, ಎಲ್ಲರನ್ನೂ ಒಳಗೊಳ್ಳುತ್ತ ಬೆಳೆಯುವುದಿಲ್ಲ.

ಅಪರಾಧಿಗಳಿಗೆ ಷರಿಯಾ ಕಾನೂನಿನ ಅಡಿ ಶಿಕ್ಷೆ ವಿಧಿಸುವುದು ಇಸ್ಲಾಮಿಕ್ ರಾಷ್ಟ್ರಗಳ ಧರ್ಮಾಧಾರಿತ ಆಡಳಿತದ ಒಂದು ಮುಖ. ಜಗತ್ತಿನಲ್ಲಿ ಜೈಲುಗಳೇ ಇಲ್ಲದಿದ್ದ ಕಾಲದಲ್ಲಿ ತಪ್ಪೆಸಗಿದವರಿಗೆ ಕ್ರೂರವಾಗಿ ಶಿಕ್ಷೆ ನೀಡುವುದು ಮಾಮೂಲಾಗಿತ್ತು. ಅಪರಾಧಿಗಳಿಗೆ ಹೊಡೆಯುವುದು, ಅವರ ಕೈ–ಕಾಲು ಕತ್ತರಿಸುವುದು, ಕಲ್ಲಿನಿಂದ ಹಲ್ಲೆ ಮಾಡುವುದು, ಅವರ ತಲೆ ಕತ್ತರಿಸುವುದು ಇಂದಿನ ಕಾಲಕ್ಕೆ ಕ್ರೌರ್ಯ ಎಂದೆನಿಸಿಕೊಳ್ಳಬಹುದು. ಆದರೆ, ಕ್ರಿಸ್ತ ಶಕ ಏಳನೆಯ ಶತಮಾನದ ಜಗತ್ತಿನಲ್ಲಿ ಇವು ಸಾಮಾನ್ಯವಾಗಿದ್ದವು.'

ಧರ್ಮಾಧಾರಿತ ಜಗತ್ತಿನ ಇನ್ನೊಂದು ಮುಖ ಎಂದರೆ ಒಂದಿಷ್ಟು ಜನರನ್ನು ದೂರ ತಳ್ಳುವುದು. ಕ್ರೈಸ್ತ ಧರ್ಮಕ್ಕೆ ಸೇರಿದವರು ಪಾಕಿಸ್ತಾನದ ಪ್ರಧಾನಿಯಾಗಲು ಸಾಧ್ಯವಿಲ್ಲ. ಸಿಖ್‌ ಧರ್ಮೀಯರು ಅಲ್ಲಿನ ಅಧ್ಯಕ್ಷರಾಗುವುದು ಅಸಾಧ್ಯ. ಅಲ್ಲಿನ ಸಂವಿಧಾನವೇ ಹಾಗಿದೆ. ಇಲ್ಲಿ ಧರ್ಮಾಧಾರಿತ ಪ್ರಭುತ್ವವು ಒಂದು ನಿರ್ದಿಷ್ಟ ಧರ್ಮದ ಜೊತೆ ಗುರುತಿಸಿಕೊಂಡು, ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿಗಿಂತ ಬೇರೆಯದೇ ರೀತಿಯಲ್ಲಿ ಕಾಣುತ್ತದೆ. ಬಹುಸಂಖ್ಯಾತರು ಮಾತ್ರ ಒಳ್ಳೆಯ ಪ್ರಜೆಗಳು ಎಂಬಂತೆ ಈ ಪ್ರಭುತ್ವಗಳು ಕಾಣುತ್ತವೆ.

ಲಿಯಾಕತ್ ಅಲಿ ಖಾನ್ ಅವರು ಪಾಕಿಸ್ತಾನಕ್ಕೆ ಸಂವಿಧಾನ ರಚಿಸಲು ಆರಂಭಿಸಿದಾಗ ಪರಿಸ್ಥಿತಿ ಹೀಗಿರಲಿಲ್ಲ. ಅಲ್ಪಸಂಖ್ಯಾತರನ್ನು ಹೊರಗಿಡುವ ಪ್ರಕ್ರಿಯೆ ಶುರುವಾಗಿದ್ದು ಅಯೂಬ್ ಖಾನ್ ಮತ್ತು ಬೆನಜೀರ್ ಅಲಿ ಭುಟ್ಟೊ ಅವರಿಂದ. ಅಷ್ಟೇ ಅಲ್ಲ, ಮುಸ್ಲಿಮೇತರರನ್ನು ಅನ್ಯರಂತೆ ಕಾಣದ ರಾಷ್ಟ್ರ ಇರಾನ್‌ನಿಂದ ಸೌದಿ ಅರೇಬಿಯಾವರೆಗೆ ಯಾವುದೂ ಇಲ್ಲ.

ಹಿಮಾಲಯದ ತಪ್ಪಲಿನ ನೇಪಾಳವನ್ನು ಹೊಸ ಕರಡು ಸಂವಿಧಾನದಲ್ಲಿ  ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ಎಂಬ ಪ್ರಸ್ತಾವನೆಯನ್ನು ಆ ದೇಶದ ಸಂವಿಧಾನ ನಿರ್ಮಾತೃಗಳು ಕೆಲವು ದಿನಗಳ ಹಿಂದೆ ತಿರಸ್ಕರಿಸಿದ್ದಾರೆ. ದೇಶದಲ್ಲಿ ರಾಜಪ್ರಭುತ್ವ ಪುನಃ ಸ್ಥಾಪನೆಯಾಗಬೇಕು, ನೇಪಾಳವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂಬ ಬೇಡಿಕೆ ಹೊಂದಿರುವವರು ಕಠ್ಮಂಡುವಿನಲ್ಲಿ ಪ್ರತಿಭಟನೆ ನಡೆಸಿದರು, ಪೊಲೀಸರ ಜೊತೆ ಸಂಘರ್ಷಕ್ಕಿಳಿದರು.

ತಮ್ಮನ್ನು ಆಳಿದ ರಾಜರು ಮಹಾವಿಷ್ಣುವಿನ ಅವತಾರ ಎಂದು ನೇಪಾಳದ ಹಲವರು ನಂಬುತ್ತಾರೆ. ದೇಶದಲ್ಲಿ ರಾಜಪ್ರಭುತ್ವ ಮತ್ತೆ ಜಾರಿಗೆ ಬರಬೇಕು ಎಂದು ಒತ್ತಾಯಿಸುತ್ತಾರೆ. ಸಾಂವಿಧಾನಿಕವಾಗಿ ನೇಪಾಳ ಇಂದು ಜಾತ್ಯತೀತ ರಾಷ್ಟ್ರ. ಆದರೆ, ಶತಮಾನಗಳ ಕಾಲ, ರಾಜಪ್ರಭುತ್ವ ಕೊನೆಗೊಳ್ಳುವವರೆಗೆ ನೇಪಾಳ ಹಿಂದೂ ರಾಷ್ಟ್ರವಾಗಿತ್ತು. ಭಾರತವನ್ನೂ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂಬ ಬೇಡಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (ಆರ್‌ಎಸ್‌ಎಸ್‌) ಮತ್ತು ಬಿಜೆಪಿಯ ಹಲವರಿಂದ ಬರುತ್ತಲೇ ಇದೆ. ಹಿಂದೂ ರಾಷ್ಟ್ರದ ರೂಪುರೇಷೆಗಳನ್ನು ಪರಿಶೀಲಿಸಿ, ಇದು ಕೆಲವರನ್ನು ಅನ್ಯರನ್ನಾಗಿಸುವ ವಿಚಾರವೇ ಎಂಬುದನ್ನು ನೋಡೋಣ.

ಈ ವಿಷಯದ ಬಗ್ಗೆ ನಾನು ಕಳೆದ ವರ್ಷ ಒಂದು ಬರಹ ಬರೆದಿದ್ದೆ. ‘2008ರವರೆಗೆ ನೇಪಾಳ, ಜಗತ್ತಿನ ಏಕೈಕ ಹಿಂದೂ ರಾಷ್ಟ್ರವಾಗಿತ್ತು. 2008ರಲ್ಲಿ ಪ್ರಜಾತಂತ್ರದ ಸ್ಥಾಪನೆಯೊಂದಿಗೆ ಅಲ್ಲಿ ಚೇತ್ರಿ (ಕ್ಷತ್ರಿಯ) ವಂಶದ ಆಡಳಿತ ಕೊನೆಗೊಂಡಿತು. ನೇಪಾಳ ಹಿಂದೂ ರಾಷ್ಟ್ರ ಆಗಿದ್ದಿದ್ದು ಏಕೆ? ಏಕೆಂದರೆ, ಹಿಂದೂ ಕಾನೂನು ಮನುಸ್ಮೃತಿಯಲ್ಲಿ ಹೇಳಿರುವಂತೆ ಕಾರ್ಯಾಂಗದ ಅಧಿಕಾರಗಳು ಕ್ಷತ್ರಿಯ ರಾಜನಲ್ಲಿ ಕೇಂದ್ರೀಕೃತವಾಗಿದ್ದವು. ಆದರೆ, ನೇಪಾಳ ಅಷ್ಟರಮಟ್ಟಿಗೆ ಮಾತ್ರ ಹಿಂದೂ ರಾಷ್ಟ್ರ ಆಗಿತ್ತು. ಹಿಂದೂ ಗ್ರಂಥ, ಶಾಸ್ತ್ರಗಳಲ್ಲಿರುವ ಬೇರೆ ಯಾವುದೇ ಅಂಶವನ್ನು ಅನ್ವಯಿಸಲು ಆಗಲಿಲ್ಲ. ಹಾಗೆ ಅನ್ವಯಿಸುವುದು, ಮಾನವ ಹಕ್ಕುಗಳಿಗೆ ಸಂಬಂಧಿಸಿದ ಜಾಗತಿಕ ಒಪ್ಪಂದಕ್ಕೆ ವಿರುದ್ಧವಾಗಿರುತ್ತಿತ್ತು.’

ನಾನು ಹೀಗೆ ಬರೆದಿದ್ದರ ಅರ್ಥ ಏನು? ಹಿಂದೂ ರಾಷ್ಟ್ರದಲ್ಲಿ ಜಾತಿಯನ್ನು ತರಲಾಗುತ್ತದೆ ಎಂಬುದು ನನ್ನ ಮಾತಿನ ಅರ್ಥ. ಹಿಂದೂ ಎಂಬುದು ಇಲ್ಲಿ ಎರಡು ಆಯಾಮಗಳಿಂದ ಬರುತ್ತದೆ. ಭಾರತದಲ್ಲಿ ನಾವು ಒತ್ತು ನೀಡಿ ರುವುದು ಬಾಹ್ಯ ಆಯಾಮದ ಮೇಲೆ. ಏಕೆಂ ದರೆ, ಇದು ಆರ್‌ಎಸ್‌ಎಸ್‌ನ ದೃಷ್ಟಿಕೋನ. ಮುಸ್ಲಿಮರು ಮತ್ತು ಕ್ರೈಸ್ತರನ್ನು ‘ಅನ್ಯ’ರನ್ನಾಗಿ ಸಲು ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರ ಪರಿ ಕಲ್ಪನೆ ಬೆಳೆದು ನಿಂತಿದೆ. ನೇಪಾಳದ ಪರಿಕಲ್ಪನೆ ಆಂತರಿಕ ಆಯಾಮಕ್ಕೆ ಸಂಬಂಧಿಸಿದ್ದು. ಅಲ್ಲಿ ಕ್ಷತ್ರಿಯ ರಾಜನ ಮೇಲೆ ಕೇಂದ್ರೀಕೃತಗೊಂಡಿತ್ತು. ಹಾಗಾಗಿ, ನೇಪಾಳ ಹಿಂದೂ ರಾಷ್ಟ್ರವಾಗಿತ್ತು. ಆದರೆ ನೇಪಾಳ ಪರಿಪೂರ್ಣ ಹಿಂದೂ ಆಗಿರಲಿಲ್ಲ. ರಾಜ ಮಾತ್ರವಲ್ಲದೆ, ಇತರ ಜಾತಿಗಳ ಸ್ಥಿತಿ ಏನಿರಬೇಕು ಎಂಬುದನ್ನೂ ಮನುಸ್ಮೃತಿ ಹೇಳಿದೆ.

ಕ್ಷತ್ರಿಯ ಆಳಬೇಕು, ಬ್ರಾಹ್ಮಣರು ಬೋಧಿಸಬೇಕು, ವೈಶ್ಯರು ವ್ಯಾಪಾರ–ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅದರಲ್ಲಿ ಹೇಳಲಾಗಿದೆ. ಶೂದ್ರರು ಇತರ ಮೂರು ವರ್ಗಗಳ ಸೇವಾಕಾರ್ಯದಲ್ಲಿ ತೊಡಗಬೇಕು, ಅಸ್ಪೃಶ್ಯರು ಸಮಾಜದ ಅಂಚಿನಲ್ಲಿರ ಬೇಕು. ಒಂದು ಜಾತಿಗೆ ಮೀಸಲಾದ ಕ್ಷೇತ್ರಕ್ಕೆ ಇನ್ನೊಂದು ಜಾತಿಯ ಜನ ಪ್ರವೇಶಿಸುವಂತಿಲ್ಲ, ಇದು ನಮ್ಮ ಗ್ರಂಥಗಳ ಅನುಸಾರ ಆದರ್ಶ ಹಿಂದೂ ರಾಷ್ಟ್ರ. ಹಿಂದೂಗಳಲ್ಲೇ ಕೆಲವರಿಗೆ ಅಧಿಕಾರ, ಶಿಕ್ಷಣ ಮತ್ತು ಹಣಕಾಸಿನ ಕ್ಷೇತ್ರಗಳಿಗೆ ಪ್ರವೇಶ ನಿರಾಕರಿಸುವ ಮೂಲಕ ಇಲ್ಲಿ ಅವರನ್ನು ‘ಅನ್ಯ’ರನ್ನಾಗಿಸುವ ಕೆಲಸ ನಡೆಯುತ್ತದೆ.

ಮುಸ್ಲಿಮರಲ್ಲದವರನ್ನು ‘ಅನ್ಯ’ರಂತೆ ಕಾಣುತ್ತವೆ ಇಸ್ಲಾಮಿಕ್ ರಾಷ್ಟ್ರಗಳು. ಹಿಂದೂ ರಾಷ್ಟ್ರವು ಹಿಂದೂಗಳಲ್ಲದವರನ್ನು ಮೊದಲು ‘ಅನ್ಯ’ರನ್ನಾಗಿಸಿ, ನಂತರ ಹಿಂದೂಗಳನ್ನೂ ‘ಅನ್ಯ’ರನ್ನಾಗಿಸುತ್ತದೆ. ನಮ್ಮ ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಗುರುತಿಸಲು ಬಹುತೇಕ ಭಾರತೀಯರಿಗೆ ಆಗದಿದ್ದರೂ, ಮೇಲೆ ಹೇಳಿದ ಕಾರಣಕ್ಕಾಗಿ ಹಿಂದೂ ರಾಷ್ಟ್ರದ ಪರಿಕಲ್ಪನೆ ನಮ್ಮಲ್ಲಿ ಬೇರೂರಲಿಲ್ಲ.

ಇದೇ ಕಾರಣಕ್ಕೇ, ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವ ಆರ್‌ಎಸ್‌ಎಸ್‌ ಹಿಂದೂ ರಾಷ್ಟ್ರ ಎಂದರೆ ಏನು ಎಂಬುದನ್ನು ಇದುವರೆಗೆ ವಿವರಿಸಿಲ್ಲ. ವಿವರಿಸಲು ಆರ್‌ಎಸ್‌ಎಸ್‌ನಿಂದ ಸಾಧ್ಯವೂ ಇಲ್ಲ. ಏಕೆಂದರೆ, ಆ ಪರಿಕಲ್ಪನೆಯನ್ನು ಮುಸ್ಲಿಮರು, ಕ್ರೈಸ್ತರು ಮಾತ್ರವಲ್ಲದೆ ಬಹುಪಾಲು ಹಿಂದೂಗಳೂ ಒಪ್ಪಲಾರರು.

ನೇಪಾಳದಲ್ಲಿ ರಾಜನ ಆಡಳಿತ ಮತ್ತೆ ಬರಬೇಕು ಎಂದು ಅಲ್ಲಿನ ಬಲಪಂಥೀಯ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಮುಂದಿಟ್ಟಿದ್ದ ಆಗ್ರಹವನ್ನು ಸಂವಿಧಾನ ರಚನಾ ಸಮಿತಿಯ 601 ಸದಸ್ಯರಲ್ಲಿ 21 ಜನ ಮಾತ್ರ ಒಪ್ಪಿದ್ದಾರೆ. ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಭಾರತದಲ್ಲಿ ಜನರಿಗೆ ಸ್ಪಷ್ಟವಾಗಿ ವಿವರಿಸಿದರೆ ಅದಕ್ಕೆ ಬೆಂಬಲ ಸಿಗುವುದು ಅಸಾಧ್ಯದ ಮಾತು.

ಹಿಂದೂ ರಾಷ್ಟ್ರದ ಪರಿಕಲ್ಪನೆ ವಿರೋಧಿಸಿ ಅತ್ಯುತ್ತಮ ವಾದವನ್ನು ಮುಂದಿಟ್ಟವರು ದಲಿತ ಕಾರ್ಯಕರ್ತ, ಬರಹಗಾರ ಚಂದ್ರಭಾನ್ ಪ್ರಸಾದ್. ಅವರು ಹೇಳಿದ್ದು: ‘ಹಿಂದೂ ರಾಷ್ಟ್ರದ ಸುವರ್ಣ ಯುಗದಲ್ಲಿ ಬ್ರಾಹ್ಮಣರು ಕಲಿಕಾ ಪ್ರಕ್ರಿಯೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಈಗ ಭಾರತದ ಶಿಕ್ಷಣದ ಸ್ಥಿತಿಯನ್ನು ಒಮ್ಮೆ ಗಮನಿಸಿ. ಭಾರತ ಮಾತೆಯನ್ನು ರಕ್ಷಿಸುವ ಹೊಣೆ ಕ್ಷತ್ರಿಯರ ಮೇಲಿತ್ತು. ಭಾರತ ಶತಮಾನಗಳ ಕಾಲ ಬೇರೆಯವರ ವಸಾಹತು ಆಗಿತ್ತು. ಆರ್ಥಿಕ ವ್ಯವಹಾರಗಳ ಉಸ್ತುವಾರಿ ವೈಶ್ಯರ ಮೇಲಿತ್ತು. ನಮ್ಮದು ಈಗ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದು. ಭಾರತಕ್ಕೆ ಹಿಂದೂ ರಾಷ್ಟ್ರದಿಂದ ಯಾವ ಒಳಿತೂ ಆಗಲಿಲ್ಲ.’

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT