ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ದಸರಾ ‘ಸ್ಥಳಾಂತರ’: ಯುವಜನರ ಮಿಶ್ರ ಪ್ರತಿಕ್ರಿಯೆ

Published : 24 ಸೆಪ್ಟೆಂಬರ್ 2024, 15:59 IST
Last Updated : 24 ಸೆಪ್ಟೆಂಬರ್ 2024, 15:59 IST
ಫಾಲೋ ಮಾಡಿ
Comments

ಮೈಸೂರು: ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಿಂದ ನಗರದ ಹೊರವಲಯದಲ್ಲಿರುವ ಉತ್ತನಹಳ್ಳಿ ಬಳಿಯ ಮೈದಾನಕ್ಕೆ ಸ್ಥಳಾಂತರ ಮಾಡುತ್ತಿರುವ ಜಿಲ್ಲಾಡಳಿತದ ನಿರ್ಧಾರಕ್ಕೆ ಪರ–ವಿರೋಧ ವಾದ ವ್ಯಕ್ತವಾಗಿದೆ.

ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಈ ವಿಕೇಂದ್ರೀಕರಣ ಉತ್ತಮ ಉಪಾಯ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಹೆಚ್ಚಿನವರು ಸುರಕ್ಷತೆ ಹಾಗೂ ಮೂಲ ಸೌಕರ್ಯಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಯು ಸಂಗ್ರಹಿಸಿದ ಯುವಜನರ ಅಭಿಪ್ರಾಯಗಳು ಇಂತಿವೆ.

‘ವಿಕೇಂದ್ರೀಕರಣ ಆಗಲಿ’

ಉತ್ತನಹಳ್ಳಿಗೆ ಯುವ ದಸರಾ ವೇದಿಕೆ ಸ್ಥಳಾಂತರ ಒಂದು ರೀತಿಯಲ್ಲಿ ಒಳ್ಳೆಯದೇ. ನಗರದಲ್ಲಿ ದಸರಾ ಸಂದರ್ಭ ವಿಪರೀತ ಟ್ರಾಫಿಕ್ ಇರುತ್ತದೆ. ನಗರದ ಹೊರವಲಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಒಂದೇ ಕಡೆ ಜನಸಂದಣಿ ತಪ್ಪಿಸಬಹುದು. ಹೊಸ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ, ಸೌಲಭ್ಯಗಳನ್ನು ಒದಗಿಸಬೇಕು. ಪುಂಡರ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು.

–ಶ್ರೀಕಂಠ, ಸಂಗೀತ ಸಂಯೋಜಕ

ಹೋಗುವುದು ಹೇಗೆ?

ಉತ್ತನಹಳ್ಳಿ ನಗರದ ಹೊರವಲಯದಲ್ಲಿದೆ. ಅಲ್ಲಿಗೆ ಹೋಗುವುದು ಹೇಗೆ? ಮೊದಲಿನಿಂದಲೂ ಯುವ ದಸರಾ ಬಯಲು ರಂಗಮಂದಿರ ಇಲ್ಲವೇ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿತ್ತು. ಇಲ್ಲಿಯೇ ನಡೆಸಿದರೆ ನಮಗೆ ಅನುಕೂಲವಾಗುತ್ತದೆ.

–ಎಸ್‌.ಕುಸುಮಾ, ವಿದ್ಯಾರ್ಥಿನಿ, ಮಹಾರಾಣಿ ಕಾಲೇಜು

‘ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ’

ಮಹಾರಾಜ ಕಾಲೇಜು ಮೈದಾನ ಹಾಗೂ ಸ್ಕೌಟ್‌ ಮತ್ತು ಗೈಡ್ಸ್‌ ಮೈದಾನ ಅಕ್ಕಪಕ್ಕದಲ್ಲೇ ಇದ್ದು, ಯುವ ದಸರಾ ಹಾಗೂ ಆಹಾರ ಮೇಳಕ್ಕೆ ಬರುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಈ ಸಂದರ್ಭ ಟ್ರಾಫಿಕ್‌ ಕಿರಿಕಿರಿ ಸಾಮಾನ್ಯವಾಗಿದೆ. ಈ ದೃಷ್ಟಿಯಿಂದ ಉತ್ತನಹಳ್ಳಿಗೆ ಸ್ಥಳಾಂತರ ನಿರ್ಧಾರ ಸ್ವಾಗತಾರ್ಹ. ಆದರೆ, ಉತ್ತನಹಳ್ಳಿಗೆ ಹೋಗಲು ಹೆಚ್ಚು ಸಮಯ ಬೇಕಾಗುತ್ತದೆ. ಭದ್ರತೆಯ ಸಮಸ್ಯೆಯೂ ಆಗಬಹುದು. ಜನರ ಭದ್ರತೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.

–ಬಿ.ಆರ್. ರಾಜೇಶ್‌, ಹವ್ಯಾಸಿ ರಂಗಕರ್ಮಿ

‘ವಿಶಾಲವಾದ ವೇದಿಕೆ ಸಿಗಲಿ’

ಜನಸಾಮಾನ್ಯರ ಅನುಕೂಲದ ದೃಷ್ಟಿಯಿಂದ 100 ಎಕರೆ ವಿಸ್ತೀರ್ಣದ ವಿಶಾಲವಾದ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸರಿಯಾದ ನಿರ್ಧಾರ. ಆಸನ ವ್ಯವಸ್ಥೆ, ಪಾರ್ಕಿಂಗ್‌ ಸಮಸ್ಯೆ ಇರುವುದಿಲ್ಲ. ಟ್ರಾಫಿಕ್‌, ಅಪಘಾತ ಇರುವುದಿಲ್ಲ. ಸಮಯ ವ್ಯರ್ಥವಾಗುವುದಿಲ್ಲ. ಬೃಹತ್‌ ವೇದಿಕೆಯು ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲಿದೆ.

–ಚಂದನಾ, ಸ್ಥಳೀಯ ನಿವಾಸಿ

‘ಬದಲಾವಣೆ ಬೇಡ’

ಯುವ ದಸರಾ ಸ್ಥಳ ಬದಲಾವಣೆ ಬೇಡ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದವರು ಅರಮನೆ ದೀಪಾಲಂಕಾರ ನೋಡಿ ನಂತರ ಯುವ ದಸರಾಗೆ ಹೋಗುತ್ತಿದ್ದರು. ಸಂಚಾರ ದಟ್ಟಣೆಯೂ ಹೆಚ್ಚಿರುವ ಸಮಯದಲ್ಲಿ ಅಲ್ಲಿಗೆ ತಲುಪುವುದೇ ಕಷ್ಟವಾಗಲಿದೆ. ತಾಲ್ಲೂಕುಗಳಿಂದ ಬಂದವರು ಇನ್ನೊಂದು ಮೂಲೆಗೆ ಹೋಗಬೇಕು. ಕೇಂದ್ರ ಭಾಗದಲ್ಲಿಯೇ ನಡೆದಿದೆ ಚೆಂದವಿತ್ತು.

–ಉಷಾ, ವಿದ್ಯಾರ್ಥಿನಿ

‘ಇಲ್ಲಿಯೇ ಸೂಕ್ತ’

ನಗರದ ಹಾಸ್ಟೆಲ್‌ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ನಾವೆಲ್ಲ ಅಲ್ಲಿಗೆ ಹೋಗುವುದಾದರೂ ಹೇಗೆ? ಅದೂ ರಾತ್ರಿ ವೇಳೆ. ಸುರಕ್ಷತೆ ಇದೆಯೇ ಎಂಬ ಭಯವೂ ಇದೆ. ರಿಂಗ್‌ ರಸ್ತೆಯಲ್ಲಿ ವಾಹನಗಳ ವೇಗವೂ ಹೆಚ್ಚು. ಇಲ್ಲಿಯೇ ನಡೆಸುವುದು ಸೂಕ್ತ.

–ರೂಪಾ, ವಿದ್ಯಾರ್ಥಿನಿ

‘ಸ್ವಂತ ವಾಹನ ಬೇಕು’

ಹೊರವಲಯದಲ್ಲಿ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಿಲ್ಲವೆಂಬ ಸಂದೇಹವಿದೆ. ಅಲ್ಲದೆ ಸ್ವಂತ ವಾಹನದಲ್ಲಿಯೇ ಅಲ್ಲಿಗೆ ತೆರಳಬೇಕು. ಬಸ್ ವ್ಯವಸ್ಥೆ ಮಾಡಿರುತ್ತಾರೆಯೇ ಎಂಬುದೇ ಗೊತ್ತಿಲ್ಲ. ದಸರೆ ಸಂದರ್ಭ ಪ್ರವಾಸಿಗರಿಗೆ ತಕ್ಕಂತೆ ಹೆಚ್ಚಿನ ಬಸ್‌ ಸೌಲಭ್ಯ ಇರುವುದಿಲ್ಲ. ಇದರಿಂದ ಜನರಿಗೆ ತೊಂದರೆ ಆಗಬಹುದು.

–ಸಿ.ದಿವ್ಯಶ್ರೀ, ವಿದ್ಯಾರ್ಥಿನಿ

‘ಸುರಕ್ಷತೆಯ ಚಿಂತೆ’

ಯುವ ದಸರಾ ಮೈಸೂರು ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಸಾಕಷ್ಟು ಯುವ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಹೊರವಲಯದಲ್ಲಿ ನಡೆಸುವುದರಿಂದ ಸಂಚಾರ ದಟ್ಟಣೆಯೇನೂ ಕಡಿಮೆಯಾಗುವುದು. ಆದರೆ, ಹೆಣ್ಣು ಮಕ್ಕಳಿಗೆ ಸುರಕ್ಷತೆ ಹೇಗೋ ಗೊತ್ತಿಲ್ಲ.

–ಅಂಜಲಿ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT