ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಯವಿಲ್ಲದ ಅರಿವೇ ದಿಟವಾದ ವಿದ್ಯೆ

Last Updated 19 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಆಸೆಯೇ ದುಃಖಕ್ಕೆ ಮೂಲ. ಈ ಮಾತನ್ನು ಮತ್ತೆ ಮತ್ತೆ ಕೇಳುತ್ತಿರುತ್ತೇವೆ. ಅದರಲ್ಲೂ ಬುದ್ಧನ ಬಗ್ಗೆ ಮಾತನಾಡುವಾಗ ಇದರ ಉಪಯೋಗ ಹೆಚ್ಚು. ಒಟ್ಟಿನಲ್ಲಿ ಅಧ್ಯಾತ್ಮದ ಬಗ್ಗೆ ಚರ್ಚಿಸುವಾಗ ಈ ಮಾತಿನ ಬಳಕೆ ಹೆಚ್ಚು ಎನ್ನಲಾದೀತು.

ಆಸೆ ಎಂದರೇನು?

ನಾವು ಜೀವನದುದ್ದಕ್ಕೂ ಏನೇನನ್ನೋ ಬಯಸುತ್ತಲೇ ಇರುತ್ತೇವೆ. ಒಂದೊಂದು ವಯಸ್ಸಿನಲ್ಲಿ ಒಂದೊಂದು ಬಯಕೆ. ಒಂದೊಂದು ಬಯಕೆ – ಎಂದರೆ, ‘ಒಂದೇ ಬಯಕೆ’ ಎಂದು ಎಣಿಕೆಯಲ್ಲ; ಒಂದೊಂದು ರೀತಿಯ ಬಯಕೆ ಎಂದರ್ಥ. ಸ್ಕೂಲಿಗೆ ಹೋಗುವ ಕಾಲದಲ್ಲಿ ಚಾಕಲೇಟ್‌–ಐಸ್‌ಕ್ರೀಮ್‌ಗಳ ಬಯಕೆ; ಕಾಲೇಜಿಗೆ ಹೋಗುವಾಗ ಬಟ್ಟೆ–ಬೈಕುಗಳ ಬಯಕೆ; ಕೆಲಸಕ್ಕೆ ಸೇರಿದ ಮೇಲೆ ಹಣ–ಅಂತಸ್ತಿನ ಬಯಕೆ – ಹೀಗೆ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯ ಬಯಕೆಗಳು ನಮ್ಮನ್ನು ಕಾಡುತ್ತಿರುತ್ತವೆ. ಆದರೆ ಈ ಎಲ್ಲ ಬಯಕೆಗಳು ಎಲ್ಲ ಸಮಯದಲ್ಲೂ ಒಳ್ಳೆಯದೂ ಆಗಿರುವುದಿಲ್ಲ, ಹಾಗೆಯೇ ಕೆಟ್ಟದ್ದೂ ಆಗಿರುವುದಿಲ್ಲ. ನಮ್ಮ ಜೀವನಕ್ಕೆ ಇಂಥ ಬಯಕೆಗಳು ಆವಶ್ಯಕವೂ ಆಗಿರುತ್ತವೆ. ಬಯಕೆಗಳು ಆವಶ್ಯಕತೆಯ ಗಡಿಯನ್ನು ಮೀರಿ, ಅದೇ ಗೀಳಾದರೆ ಅವು ಆಸೆಗಳು ಎಂದೆನಿಸಿಕೊಳ್ಳುತ್ತವೆ. ಹೀಗೆ ನಮ್ಮ ನೆಮ್ಮದಿಯನ್ನು ಬೇರೊಂದು ವಸ್ತುವಿನಲ್ಲಿ ಅಥವಾ ವ್ಯಕ್ತಿಯಲ್ಲಿ ನೋಡುವಂಥ ಪ್ರಕ್ರಿಯೆಯನ್ನು ‘ವಿಷಯಸುಖ’ ಎಂದೂ ಕರೆಯಬಹುದು. ‘ಸರ್ವಾನರ್ಥಸ್ಯ ಮೂಲಮುಕ್ತಂ ವಿಷಯಾಭಿಧ್ಯಾನಮ್‌ ’ (ಎಲ್ಲ ಅನರ್ಥಗಳಿಗೂ ಮೂಲವಾದದ್ದು ವಿಷಯಗಳನ್ನು ಆಸಕ್ತಿಯಿಂದ ಚಿಂತಿಸುವುದು) ಎಂದಿದ್ದಾರೆ, ‘ಗೀತಾಭಾಷ್ಯ’ದಲ್ಲಿ ಶಂಕರಾಚಾರ್ಯರು. ‘ಆದಾವಿಂದ್ರಿಯಾಣಿ ಸ್ವವಶೇ ಸ್ಥಾಪಯಿತವ್ಯಾನಿ’ (ಮೊದಲು ಇಂದ್ರಿಯಗಳನ್ನು ನಮ್ಮ ಸ್ವಾಧೀನದಲ್ಲಿ ಇರಿಸಿಕೊಳ್ಳಬೇಕು) ಎಂದೂ ಅದೇ ಭಾಷ್ಯದಲ್ಲಿ ಹೇಳುತ್ತಾರೆ.

ಇಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ‘ಎಲ್ಲ ಅನರ್ಥಗಳಿಗೂ ಮೂಲವಾದದ್ದು ವಿಷಯಗಳ ಬಗ್ಗೆ ತೀವ್ರವಾಗಿ ಚಿಂತಿಸುವುದು’. ಇದು ಒಂದು. ಇನ್ನೊಂದು: ‘ನಮ್ಮ ಇಂದ್ರಿಯಗಳನ್ನು ನಮ್ಮ ವಶದಲ್ಲಿಯೇ ಇಟ್ಟುಕೊಳ್ಳಬೇಕು.’

ವಿಷಯಗಳನ್ನು ಹೊಂದುವುದು ಅನರ್ಥಗಳಿಗೆ ಮೂಲ – ಎನ್ನದೆ, ಅವುಗಳ ಬಗ್ಗೆ ಆಸಕ್ತಿಯಿಂದ ಚಿಂತಿಸುವುದು ಅನರ್ಥಗಳಿಗೆ ಮೂಲ ಎಂದಿರುವುದು ವಿಚಾರಾರ್ಹವಾದುದು. ನಮಗೆ ಇದು ಬೇಕು – ಎಂದು ಸಹಜವಾದ ಆವಶ್ಯಕತೆಯಿಂದ ಒಂದು ವಸ್ತುವನ್ನು ಪಡೆಯವುದು ಬೇರೆ; ಆ ವಸ್ತುವನ್ನು ಕುರಿತು ಎಡೆಬಿಡದೆ ಚಿಂತಿಸುವುದು ಬೇರೆ. ಆಹಾರದ ರುಚಿ ನಮಗೆ ಅಡುಗೆ ಮಾಡುವಾಗ ಮತ್ತು ಊಟ ಮಾಡುವಾಗ ನಮ್ಮ ಚಿಂತನೆಗೆ ‘ವಿಷಯ’ವಾಗಬೇಕೇ ಹೊರತು ದಿನದ ಇಪ್ಪತ್ತುನಾಲ್ಕು ಗಂಟೆಗಳೂ ಅದೇ ನಮ್ಮನ್ನು ಆವರಿಸಿಕೊಳ್ಳಬಾರದು. ಹಾಗೇನಾದರೂ ಅದೇ ನಮ್ಮನ್ನು ಸದಾ ಕಾಡಲು ತೊಡಗಿದರೆ ಆಗ ನಮ್ಮ ಇಂದ್ರಿಯಗಳೇ ನಮ್ಮ ಮೇಲೆ ಸವಾರಿ ಮಾಡುತ್ತಿವೆ ಎಂದಾಗುತ್ತದೆಯಷ್ಟೆ. ಆದುದರಿಂದ ನಾವಿಲ್ಲಿ ಗಮನಿಸಬೇಕಾದದ್ದು – ನಮ್ಮ ಜೀವನಕ್ಕೆ ಅನಿವಾರ್ಯವಾಗಿರುವುದನ್ನು ಪಡೆಯಲು, ಅನುಭವಿಸಲು ಅಡ್ಡಿಯಿಲ್ಲ; ಆದರೆ ಅವೇ ನಮ್ಮ ಜೀವನದ ಗುರಿಯಾಗಬಾರದು. ಭರ್ತೃಹರಿಯ ‘ವೈರಾಗ್ಯಶತಕ’ದ ಪದ್ಯವೊಂದು ಇಲ್ಲಿ ಉಲ್ಲೇಖಾರ್ಹ:

ಅಗ್ರೇ ಗೀತಂ ಸರಸಕವಯಃ ಪಾರ್ಶ್ವಯೋರ್ದಾಕ್ಷಿಣಾತ್ಯಾಃ

ಪಶ್ಚಾಲ್ಲೀಲಾವಲಯರಣಿತಂ ಚಾಮರಗ್ರಾಹಿಣೀನಾಮ್‌|

ಯದ್ಯಸ್ತ್ಯೇವಂ ಕುರು ಭವರಸಾಸ್ವಾದನೇ ಲಂಪಟತ್ವಂ

ನೋಚೇಚ್ಛೇತಃ ಪ್ರವಿಶ ಸಹಸಾ ನಿರ್ವಿಕಲ್ಪೇ ಸಮಾಧೌ ||

( ಎಲೈ ಮನಸ್ಸೇ! ಎದುರಿಗೆ ಸಂಗೀತ; ರಸಾಸ್ವಾದದಲ್ಲಿ ಪರಿಣತರಾದ ದಕ್ಷಿಣದೇಶದ ಕವಿಗಳು; ಹಿಂದುಗಡೆ ಚಾಮರಗಳನ್ನು ಹಿಡಿದಿರುವ ಹೆಂಗಸರ ಸುಂದರವಾದ ಬಳೆಗಳ ಸದ್ದು – ಇವೆಲ್ಲವೂ ಇದ್ದರೆ ಸಂಸಾರದಲ್ಲಿ ಆಸಕ್ತನಾಗು. ಇಲ್ಲದಿದ್ದರೆ ನಿರ್ವಿಕಲ್ಪ ಸಮಾಧಿಯಲ್ಲಿ ಪ್ರವೇಶಿಸಿಬಿಡು.)

ತುಂಬು ಜೀವನವನ್ನು ಸವಿಯುವುದನ್ನು ನಮ್ಮಲ್ಲಿ ತುಚ್ಛವೆಂದು ಎಣಿಸಿಲ್ಲ. ಆದರೆ ಆ ರಸಿಕಜೀವನವು ಸಹಜವಾಗಿರಬೇಕು. ಅಡ್ಡದಾರಿಯಲ್ಲಿ ನಡೆದು ಸಂಪಾದಿಸಿದ ವಸ್ತುಗಳಿಂದ ಸುಖವನ್ನು ಬಯಸುವುದು ಅಥವಾ ಸುಖ ಸಿಗುತ್ತದೆ ಎಂದು ಭಾವಿಸುವುದು – ಎರಡನ್ನೂ ಪರಂಪರೆ ತಿರಸ್ಕರಿಸಿದೆ.ಮೇಲಣ ಪದ್ಯದಲ್ಲಿ ಈ ಮನೋಧರ್ಮದ ಸೂಚನೆ ಧ್ವನಿಪೂರ್ಣವಾಗಿದೆ. ಜೀವನದಲ್ಲಿ ಎರಡು ದಾರಿಗಳು; ಒಂದು: ಪ್ರವೃತ್ತಿಮಾರ್ಗ; ಇನ್ನೊಂದು: ನಿವೃತ್ತಿಮಾರ್ಗ. ಪ್ರವೃತ್ತಿಮಾರ್ಗ ಎಂದರೆ ಜೀವನವನ್ನು ಪೂರ್ಣವಾಗಿ ಸವಿಯುವುದು; ಜೀವನದ ಎಲ್ಲ ಸುಖಗಳನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಬಯಸದಿರುವುದೇ ನಿವೃತ್ತಿಮಾರ್ಗ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ಆ ಮಾರ್ಗಕ್ಕೆ ತಕ್ಕ ರೀತಿಯಲ್ಲಿ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಅದೇ ದಿಟವಾದ ಜೀವನಧರ್ಮ. ಇಂಥ ಜೀವನವನ್ನು ರೂಪಿಸಿಕೊಳ್ಳಲು ನಮಗೆ ಗಟ್ಟಿಯಾದ ಬುದ್ಧಿ ಬೇಕು. ಇದನ್ನು ಸುಭಾಷಿತವೊಂದು ಸೊಗಸಾಗಿ ಹೇಳಿದೆ:

ಅತ್ಮಸ್ಕರಕರಗ್ರಾಹ್ಯಮರಾಜಕವಂಶವದಂ|

ಅದಾಯಾದವಿಭಾಗಾರ್ಹಂ ಧನಮಾರ್ಜಯ ಸುಸ್ಥಿರಮ್‌||

ಎಂದರೆ, ‘ಕಳ್ಳರು ಕದಿಯಲಾಗದ, ರಾಜರು ವಶಪಡಿಸಿಕೊಳ್ಳಲಾಗದ, ದಾಯಾದಿಗಳು ಹಂಚಿಕೊಳ್ಳಲಾಗದ ಸುಸ್ಥಿರವಾದ ವಿದ್ಯೆ ಎಂಬ ಐಶ್ವರ್ಯವನ್ನು ಸಂಪಾದಿಸು’.

ನಮಗೆ ಬುದ್ಧಿ ಒದಗಲು ವಿದ್ಯೆ ಬೇಕು. ವಿದ್ಯೆ ಎಂದರೆ ಕೇವಲ ಓದಲು ಬರುವುದೋ ಬರೆಯಲು ಬರುವುದೋ, ಅಷ್ಟೇ ಅಲ್ಲ; ಯಾವುದು ನಮಗೆ ಹಿತ, ಯಾವುದು ಅಹಿತ – ಎಂಬ ತಿಳಿವಳಿಕೆಯೇ ದಿಟವಾದ ವಿದ್ಯೆ. ಅಂಥ ವಿದ್ಯೆಯನ್ನು ಉಪಯೋಗಿಸಿಕೊಳ್ಳುವ ವಿಧಾನವೇ ‘ಬುದ್ಧಿ.’ ನಮ್ಮ ಜೀವನಕ್ಕೆ ಏನು ಬೇಕು, ಏನು ಬೇಡ – ಎಂದು ತಿಳಿವಳಿಕೆಯಿಂದ ಗ್ರಹಿಸಿ, ಅದರಂತೆ ಜೀವನವನ್ನು ರೂಪಿಸಿಕೊಳ್ಳಬೇಕು. ನಮ್ಮ ಬೇಕು–ಬೇಡುಗಳು ಜೀವನದ ಸಾರ್ಥಕ್ಯಕ್ಕೆ ಒದಗಬೇಕು ಎನ್ನುವುದು ಇದರ ತಾತ್ಪರ್ಯ. ವಿದ್ಯೆ ಯಾವುದು ಅಲ್ಲ – ಎನ್ನುವುದನ್ನು ಶಂಕರಾಚಾರ್ಯರು ಸೊಗಸಾಗಿ ಹೇಳಿದ್ದಾರೆ: ‘ಭಯಂ ಹಿ ನಾಮ ಅವಿದ್ಯಾಕಾರ್ಯಮ್‌’ (ಭಯ ಎಂಬುದು ಅವಿದ್ಯೆಯಿಂದ ಹುಟ್ಟತಕ್ಕದ್ದು). ನಾವು ಅತಿಯಾದ ಆಸೆಗೆ ಪಕ್ಕಾಗುವುದಾದರೂ ಏಕೆ? ನಮ್ಮ ಆಸೆಯು ಫಲಿಸದಿದ್ದರೆ ಜೀವನವೇ ವ್ಯರ್ಥ – ಎಂಬ ಭಯ ತಾನೆ? ವಿದ್ಯೆ ನಮ್ಮನ್ನು ಅಂಥ ಭಯದಿಂದ ದೂರಮಾಡುತ್ತದೆ; ಜೀವನದ ಬಗ್ಗೆ ನಿಜವಾದ ಅರಿವನ್ನು ಮೂಡಿಸುತ್ತದೆ.

ಆದುದರಿಂದ ಆಸೆಗಳೇ ದುಃಖಕ್ಕೆ ಮೂಲವಾಗಿದೆ – ಎಂದರೆ ಅದರ ತಾತ್ಪರ್ಯ: ನಮಗೆ ಬೇಡವಾದ ವಸ್ತು/ವಿಷಯಗಳ ಬಗ್ಗೆ ನಾವು ಭಯದಿಂದ ನಡೆದುಕೊಳ್ಳುತ್ತಿದ್ದೇವೆ ಎಂದೇ ಅರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT