ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ಈ ಶರೀರವೇ ದೋಣಿ

Last Updated 14 ಡಿಸೆಂಬರ್ 2020, 1:02 IST
ಅಕ್ಷರ ಗಾತ್ರ

ಮಾನುಷ್ಯಂ ನಾವಮಾಸಾದ್ಯ ತರ ದುಃಖಮಹಾನದೀಮ್‌ ।

ಮೂಢ ಕಾಲೋ ನ ನಿದ್ರಾಯಾ ಇಯಂ ನೌರ್ದುರ್ಲಭಾ ಪುನಃ ।।

ಇದರ ತಾತ್ಪರ್ಯ ಹೀಗೆ:

‘ಮನುಷ್ಯಶರೀರ ಎಂಬ ದೋಣಿಯನ್ನು ಪಡೆದು ದುಃಖ ಎಂಬ ದೊಡ್ಡ ನದಿಯನ್ನು ದಾಟು. ಮೂರ್ಖ! ನಿದ್ರೆಗೆ ಇದು ಸಮಯವಲ್ಲ. ಈ ದೋಣಿ ಮತ್ತೆ ಸಿಕ್ಕುವುದಿಲ್ಲ.’

ಸಾಮಾನ್ಯವಾಗಿ ಮನುಷ್ಯನ ಶರೀರವನ್ನು ಒಂದು ಹೊರೆ ಎನ್ನುವಂತೆ ಹಲವರು ಭಾವಿಸಿಕೊಳ್ಳುತ್ತಾರೆ. ಆದರೆ ಮನುಷ್ಯಜನ್ಮವನ್ನು ಸಾರ್ಥಕವಾಗಿ ಉಪಯೋಗಿಸಿಕೊಳ್ಳುವ ಮಾರ್ಗವನ್ನು ಈ ಸುಭಾಷಿತ ಇಲ್ಲಿ ತಿಳಿಸಿಕೊಡುತ್ತಿದೆ.

ಸಂಸಾರ ಎಂದರೆ ನಮ್ಮ ಈ ಜೀವನಚಕ್ರ. ಇದನ್ನು ಸಾಮಾನ್ಯವಾಗಿ ಸಾಗರಕ್ಕೆ ಹೋಲಿಸುವುದುಂಟು. ಸಾಗರವನ್ನು ದಾಟುವ ಬಗೆ ಹೇಗೆ? ಹಡಗಿನ ಮೂಲಕ ದಾಟಬೇಕು, ಅಲ್ಲವೆ? ಸಂಸಾರವೇ ಸಮುದ್ರವಾದರೆ ಆಗ ಅದನ್ನು ದಾಟಿ ಪಾರಾಗುವ ಬಗೆ ಹೇಗೆ? ಸುಭಾಷಿತ ಹೇಳುತ್ತಿದೆ, ನಮ್ಮ ಈ ಶರೀರವೇ ದೋಣಿ, ಹಡಗು; ಇದರ ನೆರವಿನಿಂದಲೇ ನಾವು ಸಂಸಾರಸಾಗರವನ್ನು ದಾಟಿ ಆಚೆಯ ದಡವನ್ನು ಸೇರಬೇಕಾಗಿದೆ.

ಆದರೆ ಸುಭಾಷಿತ ಇಲ್ಲಿ ಇನ್ನೊಂದು ಸಂಗತಿಯನ್ನೂ ಹೇಳಿದೆ. ಸಂಸಾರವನ್ನು ಕೇವಲ ಸಾಗರ ಎಂದಷ್ಟೆ ಹೇಳಿಲ್ಲ; ಅದನ್ನು ದುಃಖಸಾಗರ ಎಂದು ಹೇಳಿದೆ. ದಾಟುವುದು ಎಂದರೆ ಇಲ್ಲಿ ತಪ್ಪಿಸಿಕೊಳ್ಳುವುದು; ನಮ್ಮದಲ್ಲದ ನೆಲೆಯಿಂದ ನಮ್ಮದಾಗಿರುವ ನೆಲೆಗೆ ಹೋಗುವುದು. ಸಂಸಾರಸಾಗರದಲ್ಲಿ ಈಗ ದುಃಖ ಬಂದಿದೆ; ಇದು ಬಂದಿರುವುದು ಕೂಡ ಶರೀರದ ಕಾರಣದಿಂದಾಗಿಯೇ. ಈ ದುಃಖದಿಂದ ಪಾರಾಗಿಸುವ ಸಾಧನ ಯಾವುದು ಎಂದರೆ ಅದು ಕೂಡ ಈ ಶರೀರವೇ. ಆದರೆ ಅದಕ್ಕಾಗಿ ಈ ಶರೀರವನ್ನು ನಾವು ದೋಣಿಯಾಗಿಸಿಕೊಳ್ಳಬೇಕಿದೆ; ಎಂದರೆ ಸಂಸಾರದ ಅದನ್ನು ನೀರಿನಲ್ಲಿ ಮುಳುಗಿಸಬಾರದು, ತೇಲಿಸಬೇಕು. ಹೀಗೆ ನಮ್ಮ ದೇಹವನ್ನು ಸಿದ್ಧಪಡಿಸಿಕೊಂಡರೆ ಸಂಸಾರಸಾಗರವನ್ನು ಸುಲಭವಾಗಿ ದಾಟಬಹುದು.

ದೋಟಿಯನ್ನು ನಾವು ಸಿದ್ಧಪಡಿಸಿಕೊಂಡರಷ್ಟೆ ಸಾಲದು; ಸಮುದ್ರವನ್ನು ದಾಟುವುದಕ್ಕೆ ಸರಿಯಾದ ಸಮಯಕ್ಕಾಗಿ ಕಾಯಬೇಕು. ಆದುದರಿಂದ ನಾವು ಸದಾ ಎಚ್ಚರವಾಗಿರಬೇಕು. ಒಂದು ವೇಳೆ ನಾವು ನಿದ್ರೆಗೆ ಜಾರಿದರೆ ಒಳ್ಳೆಯ ಸಮಯ ನಮ್ಮಿಂದ ಕೈ ತಪ್ಪಿಹೋಗಬಹುದು. ನಾವು ಸಿದ್ಧವಾಗಿರಿಸಿಕೊಂಡಿರುವ ದೋಣಿ ಶಿಥಿಲವಾಗುವ ಸಂಭವವೂ ಇರುತ್ತದೆ.

ಮನುಷ್ಯಜನ್ಮ ನಮಗೆ ದಕ್ಕಿದೆ. ಇಡಿಯ ಸೃಷ್ಟಿಯಲ್ಲಿಯೇ ಶ್ರೇಷ್ಠ ಸೃಷ್ಟಿ ಎಂದರೆ ಅದು ಮನುಷ್ಯನೇ ಹೌದು. ಇಂಥ ವಿಶೇಷ ವರವನ್ನು ನಾವು ಕಳೆದುಕೊಳ್ಳಬಾರದು. ಈ ಶರೀರವನ್ನು ಹೀನಕಾರ್ಯಗಳಲ್ಲಿ ತೊಡಗಿಸಿ, ಸಂಸಾರಸಾಗರದಲ್ಲಿ ಮುಳುಗುವಂತೆ ಮಾಡಬಾರದು. ಅದರ ಸರಿಯಾದ ಉಪಯೋಗದಿಂದ ದುಃಖದ ಕಡಲಿನಿಂದ ಪಾರಾಗುವುದರ ಕಡೆಗೆ ನಮ್ಮ ಶರೀರದೋಣಿಯನ್ನು ಸಿದ್ಧಪಡಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT