ಶುಕ್ರವಾರ, ಜನವರಿ 22, 2021
28 °C

ದಿನದ ಸೂಕ್ತಿ: ಹಸು ಮತ್ತು ಹಾವು

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪಾತ್ರಾ‍ಪಾತ್ರವಿವೇಕೋsಸ್ತಿ ಧೇನುಪನ್ನಗಯೋರಿವ ।

ತೃಣಾತ್ಸಂಜಾಯತೇ ಕ್ಷೀರಂ ಕ್ಷೀರಾತ್ಸಂಜಾಯತೇ ವಿಷಮ್‌ ।।

ಇದರ ತಾತ್ಪರ್ಯ ಹೀಗೆ:

’ಹಸು ಮತ್ತು ಹಾವಿನ ಹಾಗೆ ಸತ್ಪಾತ್ರ ಮತ್ತು ಅಪಾತ್ರ ಎಂಬ ಭೇದ ಸ್ಪಷ್ಟ. ಹಸುವಿನ ದೇಹದಲ್ಲಿ ಹುಲ್ಲಿನಿಂದ ಹಾಲು ಉತ್ಪಾದನೆಯಾದರೆ, ಹಾವಿನ ದೇಹದಲ್ಲಿ ಹಾಲಿನಿಂದ ವಿಷ ಉತ್ಪತ್ತಿಯಾಗುತ್ತದೆ.’

ಪ್ರಪಂಚದಲ್ಲಿ ಒಳಿತು ಮತ್ತು ಕೆಡುಕು – ಎಂಬುದು ಇದ್ದೇ ಇದೆ. ಇದು ಹಗಲು ಮತ್ತು ರಾತ್ರಿಯಷ್ಟೆ ಸ್ಪಷ್ಟವಾಗಿ ಎದ್ದುಕಾಣುವ ವಿವರ. ಇದನ್ನೇ ಸುಭಾಷಿತ ಹೇಳುತ್ತಿರುವುದು. ಅದು ಸತ್ಪಾತ್ರ ಮತ್ತು ಅಪಾತ್ರ – ಎಂಬ ಎರಡು ಬೇರೆ ಶಬ್ದಗಳಿಂದ ಇದೇ ವಿಷಯವನ್ನು ಸೂಚಿಸಿದೆಯಷ್ಟೆ.

ಒಳಿತನ್ನೇ ನಂಬಿಕೊಂಡವರು ಒಳ್ಳೆಯವರು, ಸತ್ಪಾತ್ರರು; ಕೆಡುಕನ್ನು ನಂಬಿಕೊಂಡವರು ಕೆಟ್ಟವರು, ಅಪಾತ್ರರು. ಒಬ್ಬ ವ್ಯಕ್ತಿ ಒಳಿತಿನ ಕಡೆಗಾಗಲೀ ಅಥವಾ ಕೆಡುಕಿನ ಕಡೆಗಾಗಲೀ ಏಕೆ ಹೆಜ್ಜೆ ಹಾಕುತ್ತಾರೆ? ಇದಕ್ಕೆ ಕಾರಣ ಹೇಳುವುದು ಸುಲಭವಲ್ಲ. ಆದರೆ ಒಂದನ್ನಂತೂ ಹೇಳಬಹುದು. ಅದು ಏನೆಂದರೆ, ನಮ್ಮ ಸಾಮಾಜಿಕ ಸ್ಥಿತಿ–ಗತಿಗೂ ನಮ್ಮ ಒಳ್ಳೆಯತನಕ್ಕೂ ಕೇಡುತನಕ್ಕೂ ನೇರ ಸಂಬಂಧವಿಲ್ಲ. ಒಳಿತು–ಕೆಡಕುಗಳು ನಮ್ಮ ಅಂತರಂಗದ ಸಂಸ್ಕಾರಕ್ಕೆ ಸೇರಿದ ವಿವರಗಳು. ನಾವು ಬಡತನದಲ್ಲೇ ಇರಬಹುದೋ; ಆದರೆ ಅದರ ಕಾರಣದಿಂದ ನಾವು ಸಂಸ್ಕಾರದಿಂದಲೂ ಗುಣಗಳಿಂದಲೂ ನಾವು ಸಿರಿವಂತರಾಗಿಬಾರದು ಎಂದೇನಿಲ್ಲ; ಹಣ–ಐಶ್ವರ್ಯ ಇದ್ದಮಾತ್ರಕ್ಕೆ ಒಳ್ಳೆಯತನ ನಮ್ಮ ಹತ್ತಿರ ಓಡೋಡಿಬರುವುದಿಲ್ಲ. ಇದನ್ನೇ ಸುಭಾಷಿತ ಒಂದು ಸೊಗಸಾದ ಉದಾಹರಣೆಯ ಮೂಲಕ ಹೇಳುತ್ತಿದೆ:

ಹಸು ತಿನ್ನುವುದು ಹುಲ್ಲನ್ನು, ಆದರೆ ಅದು ಅದರಿಂದ ಹಾಲನ್ನು ಉತ್ಪಾದಿಸುತ್ತದೆ. ಅದೇ ಹಾವು ಹಾಲನ್ನೇ ಕುಡಿಯುತ್ತದೆ; ಆದರೆ ಅದರಿಂದ ಅದರ ದೇಹದಲ್ಲಿ ಉತ್ಪತ್ತಿಯಾಗುವುದು ವಿಷ! ಇದರ ತಾತ್ಪರ್ಯ: ಒಳ್ಳೆಯವರನ್ನಾಗಲೀ ಕೆಟ್ಟವರನ್ನಾಗಲೀ ಅವರ ಮಾತು, ಊಟ, ನೋಟ, ಸ್ಥಿತಿ, ಗತಿಗಳ ಮೂಲಕ ಕಂಡುಹಿಡಿಯವುದು ಸುಲಭವಲ್ಲ. ಹೀಗಾಗಿ ಎಚ್ಚರದಿಂದಿರಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.