ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಆಸೆಯೇ ಜೀವನ

Last Updated 24 ಫೆಬ್ರುವರಿ 2021, 5:53 IST
ಅಕ್ಷರ ಗಾತ್ರ

ಅಕಾಮಸ್ಯ ಕ್ರಿಯಾ ಕಾಚಿದ್ದೃಶ್ಯತೇ ನೇಹ ಕರ್ಹಿಚಿತ್‌ ।

ಯದ್ಯದ್ಧಿ ಕುರುತೇ ಕಿಂಚಿತ್‌ ತತ್ತತ್‌ ಕಾಮಸ್ಯ ಚೇಷ್ಟಿತಮ್‌ ।।

ಇದರ ತಾತ್ಪರ್ಯ ಹೀಗೆ:

‘ಆಸೆಯಿಲ್ಲದೆ ಯಾವ ಕೆಲಸವೂ ಎಲ್ಲಿಯೂ ಇಲ್ಲ. ಮನುಷ್ಯನು ಮಾಡುವ ಪ್ರತಿಯೊಂದು ಕೆಲಸವೂ ಆಸೆಯಿಂದಲೇ ಆದದ್ದು.’

ಆಸೆಗೂ ನಮ್ಮ ಜೀವನಕ್ಕೂ ಇರುವ ಘನಿಷ್ಠ ಸಂಬಂಧವನ್ನು ಕುರಿತು ಸುಭಾಷಿತ ಮಾತನಾಡುತ್ತಿದೆ.

ಆಸೆ, ನಿರಾಸೆ, ದುರಾಸೆ, ಅತಿಯಾಸೆ – ಹೀಗೆ ಆಸೆಗಳ ಸುತ್ತ ನಮ್ಮ ಜೀವನ ಸುತ್ತುತ್ತಿರುತ್ತದೆಯಷ್ಟೆ. ನಮ್ಮ ಜೀವನದ ಅಸ್ತಿತ್ವವವೇ ಆಸೆಯ ಮೇಲೆ ನಿಂತಿದೆ ಎನ್ನುತ್ತಿದೆ ಸುಭಾಷಿತ.

ಆಸೆ ಎಂದರೆ ಬೇಕು ಎಂಬ ಬಯಕೆ. ಈ ಬಯಕೆ ಎಂಬುದೇ ಇಲ್ಲದಿದ್ದರೆ ನಮ್ಮ ಜೀವನದಲ್ಲಿ ಏನೊಂದೂ ನಡೆಯದು. ಆಗಷ್ಟೆ ಜನಿಸಿದ ಕೂಸು ಕೂಡ ತಾನು ಉಸಿರಾಡಬೇಕು ಎಂದು ಬಯಸಬೇಕು; ಆಗ ಮಾತ್ರವೇ ಅದು ಈ ಭೂಮಿಗೆ ಜೀವಂತವಾಗಿ ಪ್ರವೇಶಿಸಲು ಸಾಧ್ಯ. ಈ ಬಯಕೆ ನಮಗೆ ವಾಚ್ಯವಾಗಿ ಕಾಣದಿರಬಹುದು; ಆದರೆ ದೇಹ ಅದನ್ನು ಧ್ವನಿಪೂರ್ಣವಾಗಿ ವ್ಯಕ್ತಮಾಡಿರುತ್ತದೆ ಎನ್ನುವುದು ಸುಳ್ಳಲ್ಲ. ಈ ಆಸೆಯ ಪರಂಪರೆ ಜೀವನದುದ್ದಕ್ಕೂ ಮುಂದುವರೆಯುತ್ತದೆ. ಆಟ ಆಡಬೇಕು, ಓದಬೇಕು, ಸಂಪಾದಿಸಬೇಕು, ಸಂಸಾರ ನಡೆಸಬೇಕು – ಹೀಗೆ ನಮ್ಮ ಜೀವನದ ಎಲ್ಲ ನಿರ್ಧಾರಗಳ ಹಿಂದೆಯೂ ಈ ಬಯಕೆ, ಎಂದರೆ ಆಸೆಯೇ ಕೆಲಸಮಾಡುತ್ತಿರುತ್ತದೆ.

ಜೀವನವನ್ನು ಕಟ್ಟಿಕೊಡುವ, ಜೀವನವನ್ನು ಉತ್ಸಾಹಗೊಳಿಸುವ, ಜೀವಕ್ಕೆ ಜೀವನವನ್ನು ಒದಗಿಸುವ ಆಸೆಯಿಲ್ಲದೆ ನಾವ್ಯಾರೂ ಬದುಕಲು ಆಗುವುದಿಲ್ಲವಷ್ಟೆ.

ಆದರೆ ಆಸೆಯ ಪಾಶಕ್ಕೆ ವಶರಾದರೆ ಅದರಿಂದ ತೊಂದರೆಗಳೂ ತಪ್ಪಿದ್ದಲ್ಲ; ಆಸೆಯನ್ನು ಹೇಗೆ ನಿಭಾಯಸಬೇಕೆಂದೂ ತಿಳಿದಿರಬೇಕು. ಇದನ್ನೇ ಇನ್ನೊಂದು ಸುಭಾಷಿತ ಹೀಗೆಂದಿದೆ:

ಆಶಾಯಾ ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ ।

ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ।।

‘ಆಸೆಗೆ ಯಾರು ದಾಸರೋ ಅವರು ಸರ್ವಲೋಕಕ್ಕೂ ದಾಸರೇ ಆಗಿರುತ್ತಾರೆ. ಯಾರಿಗೆ ಆಸೆಯೇ ದಾಸಿಯಾಗಿರುತ್ತದೆಯೋ ಅವರಿಗೆ ಲೋಕವೇ ದಾಸವಾಗುತ್ತದೆ‘ ಎನ್ನುತ್ತಿದೆ, ಈ ಶ್ಲೋಕ.

ಇದರ ತಾತ್ಪರ್ಯ ಆಸೆ ನಮ್ಮ ಜೀವನಕ್ಕೆ ಪೂರಕವಾಗಿರಬೇಕೆ ಹೊರತು ಮಾರಕ ಆಗಬಾರದು ಎಂದು. ಹೀಗೆ ನಮ್ಮ ಜೀವನಕ್ಕೆ ಮಾರಕವಾಗುವ ಆಸೆಯನ್ನೇ ದುರಾಸೆ, ಅತಿಯಾಸೆ ಎಂದೆಲ್ಲ ಕರೆದಿರುವುದು.

ಆಸೆಯನ್ನು ಕೆಟ್ಟದ್ದು ಎಂದು ಹಲವು ಸಲ ಅಂದುಕೊಳ್ಳುತ್ತೇವೆ. ಆದರೆ ಆಸೆಯೇ ಕೆಟ್ಟದ್ದು ಅಲ್ಲ; ಅದು ಎಂಥ ಆಸೆ ಎಂಬ ಆಧಾರದ ಮೇಲೆ ಅದರ ಒಳಿತು–ಕೆಡಕುಗಳ ನಿರ್ಧಾರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT