ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಮನಸ್ಸಾಗಲಿ ಹೂವು ಮತ್ತು ಕಲ್ಲು

Last Updated 4 ಜುಲೈ 2020, 2:01 IST
ಅಕ್ಷರ ಗಾತ್ರ

ಸಂಪತ್ಸು ಮಹತಾಂ ಚಿತ್ತಂ ಭವತ್ಯುತ್ಪಲಕೋಮಲಮ್ ।

ಆಪತ್ಸು ಚ ಮಹಾಶೈಲಶಿಲಾಸಂಘಾತಕರ್ಕಶಮ್‌ ।।

ಇದರ ತಾತ್ಪರ್ಯ ಹೀಗೆ:

‘ಮಹಾತ್ಮರ ಮನಸ್ಸು ಐಶ್ವರ್ಯ ಬಂದಾಗ ಕನ್ನೈದಿಲೆಯಂತೆ ಮೃದುವಾಗಿರುತ್ತದೆ; ಕಷ್ಟಗಳು ಬಂದಾಗ ದೊಡ್ಡ ಬೆಟ್ಟದಮೇಲಿರುವ ಕಲ್ಲುಗಳ ರಾಶಿಯಂತೆ ಕಠಿಣವಾಗಿರುತ್ತದೆ.‘

ಇದಕ್ಕೆ ಪೂರಕವಾಗಿ ಇನ್ನೊಂದು ಪ್ರಸಿದ್ಧ ಪದ್ಯವನ್ನೂ ಇಲ್ಲಿ ನೋಡಬಹುದು:

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ।

ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾತುಮರ್ಹತಿ ।।

’ಲೋಕೋತ್ತರರಾದ, ಎಂದರೆ ತುಂಬ ಎತ್ತರದ ಸ್ಥಿತಿಯಲ್ಲಿರುವವರ, ಶ್ರೇಷ್ಠರ ಮನಸ್ಸು ಕೆಲವು ವೇಳೆ ವಜ್ರಕ್ಕಿಂತಲೂ ಗಡಸು, ಹಲವು ವೇಳೆ ಹೂವಿಗಿಂತಲೂ ಮೃದು. ಅವರ ಮನಸ್ಸನ್ನು ಅರಿಯವುದು ತುಂಬ ಕಷ್ಟವೇ ಸರಿ‘ ಎನ್ನುತ್ತಿದೆ, ಉತ್ತರರಾಮಚರಿತೆಯ ಈ ಪದ್ಯ.

ಜೀವನ ಒಂದೇ ರೀತಿಯಲ್ಲಿ ಸಾಗದು; ಸರಾಗವಾಗಿ ಸಾಗುತ್ತಿರುವ ನಡಿಗೆಯಲ್ಲಿ ಇದ್ದಕ್ಕಿದ್ದಂತೆ ಆಯ ತಪ್ಪಿದಂತಾಗಬಹುದು; ಕುಸಿಯುವಂತಾಗಬಹುದು; ಮುಗ್ಗರಿಸಿದಂತಾಗಬಹುದು. ಹಾಗೆ ಬೀಳುವಾಗ ನಮ್ಮ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ – ಎನ್ನುವುದೇ ನಮ್ಮ ನಿತ್ಯದ ವ್ಯಾಯಾಮದ ದಿಟವಾದ ಪರೀಕ್ಷೆ; ನಮ್ಮ ಶಕ್ತಿ–ಸಮತೋಲನಗಳ ದಿಟವಾದ ಪರೀಕ್ಷೆ.

ನಾವು ನೋಡುನೋಡುತ್ತಿದ್ದಂತೆ ನಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾದವು. ಸಂತೋಷವಾಗಿ, ಧೈರ್ಯವಾಗಿ, ನಾಳೆಯ ಬಗ್ಗೆ ಕನಸುಗಳನ್ನು ಕಟ್ಟಿಕೊಂಡು ಹಿತವಾಗಿ ಸಾಗುತ್ತಿದ್ದ ಜೀವನಯಾನ ಕೊರೊನಾ ದೆಸೆಯಿಂದ ದಿಕ್ಕಾಪಾಲಾಯಿತು; ಈಗ ಪ್ರತಿಕ್ಷಣವೂ ಆತಂಕ, ನಾಳೆ ಏನಾಗುವುದೋ ಎಂಬ ಭಯ; ರಸ್ತೆಯಲ್ಲಿ ಧೈರ್ಯವಾಗಿ ಓಡಾಡಲೂ ಆಗದಂಥ ಪರಿಸ್ಥಿತಿ.

ಇಂಥ ಸಂದರ್ಭದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು? ಸುಭಾಷಿತ ಅದರ ಬಗ್ಗೆ ತಿಳಿಸಿಕೊಡುತ್ತಿದೆ.

ಮಹಾತ್ಮರು ಐಶ್ವರ್ಯ ಬಂದಾಗ, ಎಂದರೆ ಸುಖದಲ್ಲಿದ್ದಾಗ ಹೇಗಿರುತ್ತಾರೆ? ಕನ್ನೈದಿಲೆಯಂತೆ, ಎಂದರೆ ಹೂವಿನಂತೆ ಮೃದುವಾಗಿರುತ್ತಾರೆ. ಅದೇ ಕಷ್ಟ ಬಂದಾಗ ದೊಡ್ಡ ಬೆಟ್ಟದ ಕಲ್ಲುಗಳಂತೆ ಗಟ್ಟಿಯಾಗಿ ಪರಿಸ್ಥಿತಿಯನ್ನು ಎದುರಿಸುತ್ತಾರೆ, ಧೈರ್ಯವಾಗಿ, ಅಚಲವಾಗಿ – ಹೆದರಿ ಓಡಿಹೋಗದೆ.

ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಜೀವನವನ್ನು ಸಮಚಿತ್ತದಿಂದ ಸ್ವೀಕರಿಸುವುದೇ ಮಹಾತ್ಮರ ಲಕ್ಷಣ. ಸುಖವನ್ನು ಹೂವಿಗೂ, ಕಷ್ಟವನ್ನೂ ಕಲ್ಲಿಗೂ ಹೋಲಿಸಿರುವುದೂ ಸ್ವಾರಸ್ಯಕರವಾಗಿದೆ. ಹೂವಿನ ಮೇಲೆ ಕಲ್ಲು ಬಿದ್ದರೆ ಹೂವು ನಲುಗಿಹೋಗುತ್ತದೆ; ಕಲ್ಲಿನ ಮೇಲೆ ಹೂವನ್ನು ಬೆಳೆಯಲಾಗದು. ಈ ವೈರುದ್ಧ್ಯವನ್ನು ಸುಭಾಷಿತ ಕಾಣಿಸಿದೆ. ಎಂದರೆ ಎರಡು ವಿರುದ್ಧವಾಗಿರುವ ಪರಿಸ್ಥಿತಿಗಳನ್ನು ಎದುರಿಸಬಲ್ಲ ಸಾಮರ್ಥ್ಯವಿದ್ದವನೇ ದಿಟವಾದ ಮಹಾತ್ಮ, ಶಕ್ತಿಶಾಲಿ ಎನ್ನುವುದನ್ನು ಅದು ಸೂಚಿಸುತ್ತಿದೆ.

ಶ್ರೀರಾಮ ಹೂವಿನಂತೆ ಕೋಮಲವಾಗಿಯೂ ವಜ್ರದಂತೆ ಕಠಿಣವಾಗಿಯೂ ಇದ್ದ ಮಹಾಪುರುಷ; ಈ ಕಾರಣದಿಂದಲೇ ಅವನು ಲೋಕೋತ್ತರಪುರುಷ ಎಂಬ ಕೀರ್ತಿಯನ್ನು ಸಂಪಾದಿಸಿದ. ಶರಣು ಕೋರಿ ಬಂದ ಶತ್ರುಪಕ್ಷದವರಿಗೂ ಆಶ್ರಯ ಕೊಟ್ಟ; ಗರ್ವ ತೋರಿದ ಸಮುದ್ರವನ್ನೇ ಒಣಗಿಸಿಬಿಡಲೂ ಮುಂದಾದ. ವಿನಯ ಮತ್ತು ಧೈರ್ಯ, ಅಭಯ ಮತ್ತು ಪೌರುಷ – ಇಂಥ ಭಿನ್ನಭಾವಗಳು ಪರಸ್ಪರ ವಿರೋಧವಲ್ಲ, ಅವನ್ನು ಹೇಗೆ, ಎಲ್ಲಿ ಪ್ರಕಟಿಸಬೇಕೆಂಬ ಅರಿವು ಇರಬೇಕಾದ್ದು ಮುಖ್ಯ.

ಪ್ರಜಾವಾಣಿ Podcast

ದಿನದ ಸೂಕ್ತಿಯನ್ನು ಕೇಳಲು ಇಲ್ಲಿ ಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT