ಶನಿವಾರ, ಡಿಸೆಂಬರ್ 4, 2021
20 °C

ದಿನದ ಸೂಕ್ತಿ: ಅತಿಯಾಸೆಯೇ ಕಳ್ಳತನ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಯಾವದ್‌ ಭ್ರಿಯೇತ ಜಠರಂ ತಾವತ್ ಸ್ವತ್ವಂ ಹಿ ದೇಹಿನಾಮ್‌ ।

ಅಧಿಕಂ ಯೋsಭಿಮನ್ಯೇತ ಸ ಸ್ತೇನೋ ದಂಡಮರ್ಹತಿ ।।

ಇದರ ತಾತ್ಪರ್ಯ ಹೀಗೆ:

‘ಹೊಟ್ಟೆ ತುಂಬುವುದಕ್ಕೆ ಎಷ್ಟು ಬೇಕೋ ಅಷ್ಟುಮಾತ್ರ ಮಾನವರ ಸ್ವತ್ತು. ಅದಕ್ಕಿಂತ ಹೆಚ್ಚಾಗಿ ಬೇಕು ಎನ್ನತಕ್ಕವನು ಕಳ್ಳ. ಅವನಿಗೆ ಶಿಕ್ಷೆಯನ್ನು ವಿಧಿಸಬೇಕು.‘

ಈ ಸುಭಾಷಿತ ನಮ್ಮ ಕಾಲಕ್ಕೆ ಎಷ್ಟೊಂದು ಹೊಂದಾಣಿಕೆ ಆಗುತ್ತಿದೆ ಅಲ್ಲವೆ? ನಮ್ಮ ಭ್ರಷ್ಟ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ನೋಡಿ ನೋಡಿ ಸಾಕಾಗಿ, ಕೊನೆಗೆ ’ಎಷ್ಟು ಅಂತ ತಿನ್ನುತ್ತೀರಪ್ಪಾ? ಅಷ್ಟೂ ಜೀರ್ಣ ಆಗುತ್ತದೆಯೆ?‘ ಎಂದೇ ಉದ್ಗರಿಸುತ್ತೇವೆ. ಸುಭಾಷಿತ ಇದನ್ನೇ ಹೇಳುತ್ತಿರುವುದು: ’ನಿಮ್ಮ ಹೊಟ್ಟೆ ಎಷ್ಟು ಹಿಡಿಸುವುದು ಅಷ್ಟು ಮಾತ್ರವನ್ನೇ ತಿನ್ನಿ; ಅಗತ್ಯಕ್ಕಿಂತಲೂ ಹೆಚ್ಚು ತಿಂದರೆ ನೀವು ಕಳ್ಳರೇ ಸರಿ!‘

ನಮ್ಮ ಜೀವಿಕೆಗೆ ಅಗತ್ಯ ಎಷ್ಟು ಇದೆಯೋ ಅಷ್ಟು ಮಾತ್ರವನ್ನೇ ನಾವು ಸಂಗ್ರಹಿಸಿಟ್ಟುಕೊಳ್ಳಬೇಕು ಎನ್ನುವುದು ನಮ್ಮ ಪರಂಪರೆಯ ದೊಡ್ಡ ಮೌಲ್ಯ. ’ಈಶಾವಾಸ್ಯಮಿದಂ ಸರ್ವಂ ಯತ್ ಕಿಂಚ ಜಗತ್ಯಾಂ ಜಗತ್| ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ ಧನಮ್‘ – ಇದು ಈಶಾವಾಸ್ಯೋಪನಿಷತ್ತಿನ ಮೊದಲ ಮಂತ್ರ. ಇದರ ತಾತ್ಪರ್ಯ: ’ಈ ಜಗತ್ತು ಈಶ್ವರನ ಮನೆಯಿದ್ದಂತೆ. ಇದರಲ್ಲಿ ನಿನಗೆ ಆವಶ್ಯಕವಾಗಿರುವಷ್ಟನ್ನು ಅನುಭವಿಸಲು ಅವಕಾಶವಿದೆ. ಆದರೆ ಅದನ್ನು ತ್ಯಾಗದಿಂದಲೇ ರಕ್ಷಿಸಿಕೊಳ್ಳಬೇಕಿದೆ. ದುರಾಸೆ ಪಡಬೇಡ. ಇಷ್ಟಕ್ಕೂ ಈ ಸ್ವತ್ತನ್ನು ಯಾರದ್ದು ಎಂದು ತಿಳಿದುಕೊಂಡಿರುವೆ?‘

ಗಾಂಧೀಜಿ ಅವರಿಗೂ ತುಂಬ ಪ್ರಿಯವಾಗಿದ್ದ ಉಪನಿಷತ್ತು ಎಂದರೆ ಈಶಾವಾಸ್ಯೋಪನಿಷತ್‌. ಸರಳವೂ ಪ್ರಾಮಾಣಿಕವೂ ಆದ ಜೀವನವಿಧಾನವನ್ನು ಇದು ಎತ್ತಿಹಿಡಿಯುವುದರಿಂದಲೇ ಅವರಿಗೆ ಇಷ್ಟವಾಗಿತ್ತು ಎನಿಸುತ್ತದೆ. 

ಆದರೆ ನಮ್ಮ ಇಂದಿನ ಸಮಾಜ ನಮ್ಮ ಸಂಸ್ಕೃತಿಯ ದಿಟವಾದ ಮೌಲ್ಯಗಳಿಗೆ ವಿರುದ್ಧವಾಗಿಯೇ ನಡೆಯತೊಡಗಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಭ್ರಷ್ಟಾಚಾರ, ಅನಾಚಾರಗಳ ಮೂಲಕ ಆಸ್ತಿಸಂಗ್ರಹದಲ್ಲಿ ಮುಳುಗಿದ್ದೇವೆ. ಸಂಗ್ರಹ ಸಂಗ್ರಹ ಸಂಗ್ರಹ; ನೂರು ವರ್ಷ ನೂರು ತಲೆಮಾರುಗಳು ತಿಂದರೂ ಮುಗಿಯದಷ್ಟು ಸಂಗ್ರಹ. ಸುಭಾಷಿತ ಇಂಥವರನ್ನು ‘ಕಳ್ಳರು’ ಎಂದೇ ಘೋಷಿಸಿದೆ. ಇದೇನೂ ಸುಳ್ಳಲ್ಲವೆನ್ನಿ! ನಮ್ಮ ಅಗತ್ಯಕ್ಕಿಂತಲೂ ಹೆಚ್ಚಾದುದನ್ನು ಸಂಗ್ರಹಿಸಿದ್ದೇವೆ ಎಂದರೆ ಅದರ ಆವಶ್ಯಕತೆ ಇರುವವರಿಂದ ನಾವು ಅದನ್ನು ಬಲವಂತವಾಗಿ ಕಿತ್ತುಕೊಂಡಿದ್ದೇವೆ ಎಂದೇ ಅರ್ಥ. ಇದು ಕಳ್ಳತನವಲ್ಲದೆ ಮತ್ತೇನು? ಅಂಥವರನ್ನು ಶಿಕ್ಷಿಸಬೇಕಿದೆ. ಆದರೆ ಯಾರು ಶಿಕ್ಷಿಸುವವರು? ಬೇಲಿಯೇ ಹೊಲವನ್ನು ಮೇಯುತ್ತಿದ್ದರೆ, ರಕ್ಷಿಸುವವರು ಯಾರು?

ಕಳ್ಳತನದಿಂದ ಆಸ್ತಿ–ಅಂತಸ್ತುಗಳ ಸಂಪಾದನೆಯಲ್ಲಿ ತೊಡಗಿರುವವರು ಆವಶ್ಯಕವಾಗಿ ಮನನ ಮಾಡಬೇಕಾದ ಒಂದೆರಡು ವಿಷಯಗಳು ಇವೆ: ‘ನಾವು ಎಷ್ಟು ಸಂಪಾದನೆ ಮಾಡಿದರೂ ಒಮ್ಮೆಗೆ ಎಷ್ಟನ್ನು ತಿನ್ನಲು ನಮಗೆ ಸಾಧ್ಯವಾಗುತ್ತಿದೆ? ಎಕರೆಗಟ್ಟಲೆ ಮನೆ ಇದ್ದರೂ ನಾವು ಎಷ್ಟು ವಿಸ್ತೀರ್ಣದಲ್ಲಿ ಮಲಗುತ್ತಿದ್ದೇವೆ? ದುರಾಸೆಯಿಂದ ಸಂಪಾದಿಸಿರುವ ಹಣ–ಐಶ್ವರ್ಯಗಳಲ್ಲಿ ನಾವು ಎಷ್ಟನ್ನು ನಮ್ಮ ಪ್ರಾಣದ ಜೊತೆಯಲ್ಲಿ ತೆಗೆದುಕೊಂಡುಹೋಗುತ್ತಿದ್ದೇವೆ?‘ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡಾಗ ಆಗ ಸುಭಾಷಿತದ ಸಂದೇಶವೂ ಮನದಟ್ಟಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.