ಮಂಗಳವಾರ, ಸೆಪ್ಟೆಂಬರ್ 28, 2021
20 °C

ದಿನದ ಸೂಕ್ತಿ: ಧನ್ಯರು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಧನ್ಯಾ ಬಧಿರಾ ಅಂಧಾಸ್ತ ಏವ ಜೀವಂತಿ ಮಾನುಷೇ ಲೋಕೇ ।

ನ ಶೃಣ್ವಂತಿ ಪಿಶುನಜನಂ ಖಲಾನಾಂ ಋದ್ಧಿಂ ನ ಪ್ರೇಕ್ಷಂತೇ ।।

ಇದರ ತಾತ್ಪರ್ಯ ಹೀಗೆ:

’ಯಾರು ಕಿವುಡರೋ ಕುರುಡರೋ, ಅವರೇ ಈ ಮನುಷ್ಯಲೋಕದಲ್ಲಿ ಧನ್ಯರು. ಏಕೆಂದರೆ ಅವರು ಚಾಡಿಗಳನ್ನು ಕೇಳಲಾರರು ಮತ್ತು ದುಷ್ಟರ ಏಳಿಗೆಯನ್ನು ನೋಡಲಾರರು.’

ಸಮಾಜದಲ್ಲಿ ಹಲವು ಸಂಗತಿಗಳು ನಮ್ಮ ಮನಸ್ಸನ್ನು ಉದ್ವೇಗಗೊಳಿಸುತ್ತವೆ. ಆದರೆ ಅಂಥ ಸಂಗತಿಗಳನ್ನು ಸರಿಪಡಿಸಬಲ್ಲಂಥ ಅಥವಾ ನಿಲ್ಲಿಸಬಲ್ಲಂಥ ಅವಕಾಶವಾಗಲೀ ಶಕ್ತಿಯಾಗಲೀ ನಮಗೆ ಇರುವುದಿಲ್ಲ. ಆಗ ನಾವು ಏನು ಮಾಡುವುದು? ಅವುಗಳನ್ನು ನೋಡದಿದ್ದರೆ ಆಗ ನಮಗೆ ಅವು ’ಕಾಣದು’. ಕಾಣದಿದ್ದಮೇಲೆ ಅವು ನಮ್ಮನ್ನು ಕಾಡದು. ಕಾಡದಿದ್ದಮೇಲೆ ಕಳವಳಕ್ಕೆ ಕಾರಣವೇ ಇರದು. 

ಆದರೆ ಮನುಷ್ಯರ ಸಹಜ ಸ್ವಭಾವವೇ ಕುತೂಹಲ. ಅವನ ಕಣ್ಣಿರುವುದೇ ನೋಡುವುದಕ್ಕೆ. ಹೀಗಿರುವಾಗ ಅವನನ್ನು ’ನೀನು ಏನನ್ನೂ ನೋಡಬೇಡ’ ಎಂದು ಹೇಳಲು ಸಾಧ್ಯವಾಗದು. ಅವನು ತನ್ನ ಸುತ್ತಮುತ್ತ ನಡೆಯುವ ಘೋರ ಘಟನೆಗಳನ್ನು ನೋಡಿಯೇ ನೋಡುತ್ತಾನೆ. ಅದರಿಂದ ಕ್ಲೇಶಕ್ಕೆ ಒಳಗಾಗಿ, ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ವಾಸ್ತವ ಹೀಗಿರುವುದರಿಂದ ಸುಭಾಷಿತ ಕಣ್ಣಿಲ್ಲದವರ ಸಹಜ ನೆಮ್ಮದಿಯ ಬಗ್ಗೆ ಮಾತನಾಡುತ್ತಿದೆ. 

ಹುಟ್ಟಿನಿಂದಲೇ ಕಣ್ಣುಗಳನ್ನು ಕಳೆದುಕೊಂಡವನು ಏನನ್ನೂ ನೋಡಲಾರ; ಒಳಿತೂ ಅವನಿಗೆ ಕಾಣದು, ಕೆಡಕೂ ಅವನಿಗೆ ಕಾಣದು. ಹೀಗಾಗಿ ಅವನು ನೆಮ್ಮದಿಯನ್ನು ಕಳೆದುಕೊಳ್ಳಲಾರ ಎಂಬುದು ಸುಭಾಷಿತದ ಗ್ರಹಿಕೆ.

ನಮಗೆ ಯಾವುದನ್ನು ನೋಡುವುದಕ್ಕೆ ಅತ್ಯಂತ ಕಷ್ಟವಾಗುತ್ತದೆ? ಸುಭಾಷಿತ ಹೇಳುತ್ತಿದೆ: ದುಷ್ಟರ ಏಳಿಗೆಯನ್ನು ಕಂಡಾಗ ನಮ್ಮ ಮನಸ್ಸು ಉದ್ವೇಗಗೊಳ್ಳುತ್ತದೆ; ಕಳವಳಗೊಳ್ಳುತ್ತದೆ. ಏಕೆಂದರೆ ದುಷ್ಟನಿಗೆ ಅಧಿಕಾರ–ಐಶ್ವರ್ಯಗಳು ಇಲ್ಲದಿರುವಾಗಲೇ ಅವನು ಲೋಕಕ್ಕೆ ಕೇಡನ್ನು ಉಂಟುಮಾಡುತ್ತಿರುತ್ತಾನೆ. ಇನ್ನು ಅವನಲ್ಲಿ ಆಸ್ತಿ–ಅಂತಸ್ತುಗಳು ಸೇರಿಕೊಂಡರೆ, ಉರಿಯುತ್ತಿರುವ ಬೆಂಕಿಗೆ ಗಾಳಿಯ ಸಾಂಗತ್ಯ ದೊರೆತಂತೆ ಆಗುತ್ತದೆಯಷ್ಟೆ. ಆದರೆ ದುಷ್ಟರ ಏಳಿಗೆಯನ್ನು ತಪ್ಪಿಸಲು ನಮಗೆ ಸಾಧ್ಯವಿಲ್ಲ; ಅದನ್ನು ನೋಡದಿರುವುದಕ್ಕೂ ಸಾಧ್ಯವಿಲ್ಲ. ಹೀಗಿರುವಾಗ ಕಣ್ಣಿಲ್ಲದವನಿಗೆ ನೋಡುವ ಸಾಧ್ಯತೆಯೇ ಇಲ್ಲದಿರುವುದರಿಂದ ಅವನು ಮಾತ್ರವೇ ದುಷ್ಟರ ಏಳಿಗೆಯನ್ನು ನೋಡಲಾರ ಎಂದು ಸುಭಾಷಿತ ಹೇಳುತ್ತಿದೆ.

ಇದರ ಜೊತೆಗೆ ಸುಭಾಷಿತ ಕಿವುಡರ ಸೌಖ್ಯವನ್ನೂ ಪ್ರಶಂಸಿಸುತ್ತಿದೆ; ಅವರನ್ನು ಧನ್ಯರು ಎಂದು ಕರೆದಿದೆ. ಏಕೆಂದರೆ ಕಿವುಡರು ಚಾಡಿಗಳನ್ನು ಕೇಳಲಾರರು.

ಚಾಡಿಕೋರತನ ನಮ್ಮ ನೆಮ್ಮದಿಯನ್ನು ಹಾಳು ಮಾಡುವ ಸಾಮಾಜಿಕ ರೋಗ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು