ಬುಧವಾರ, ಆಗಸ್ಟ್ 4, 2021
26 °C

ದಿನದ ಸೂಕ್ತಿ | ಹಣವೊಂದೇ ಗುಣವೆ?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಹಣ –ಪ್ರಾತಿನಿಧಿಕ ಚಿತ್ರ

ಪೂಜ್ಯತೇ ಯದಪೂಜ್ಯೋsಪಿ ಯದಪೂಜ್ಯೋsಪಿ ಗಮ್ಯತೇ ।

ವಂದ್ಯತೇ ಯದವಂದ್ಯೋsಪಿ ಸ ಪ್ರಭಾವೋ ಧನಸ್ಯ ಚ ।।

ಇದರ ತಾತ್ಪರ್ಯ ಹೀಗೆ:

’ಪೂಜೆಗೆ ಅನರ್ಹನಾದವನನ್ನು ಪೂಜಿಸುವುದು, ಯಾರಲ್ಲಿಗೆ ಹೋಗಬಾರದೋ ಅವರಲ್ಲಿಗೆ ಹೋಗುವುದು, ಯಾರಿಗೆ ನಮಸ್ಕರಿಸಬಾರದೋ ಅವನಿಗೆ ನಮಸ್ಕರಿಸುವುದು – ಇವೆಲ್ಲ ಚರ್ಯೆಗಳಿಗೆ ಕಾರಣ ಎಂದರೆ ಹಣದ ಪ್ರಭಾವವಷ್ಟೆ!‘

ಇದು ಎಲ್ಲ ಕಾಲಕ್ಕೂ ಸಲ್ಲುವ ಸುಭಾಷಿತವೇ ಹೌದು; ಹಣದ ಪ್ರಭಾವ ಯಾವ ಕಾಲದಲ್ಲಿ ಇರಲಿಲ್ಲ ಹೇಳಿ?

ಹಣಕ್ಕೆ ನಾವು ಎಷ್ಟು ಪ್ರಾಮುಖ್ಯವನ್ನು ಕೊಡುತ್ತೇವೆ ಅಥವಾ ಹಣ ನಮ್ಮನ್ನು ಎಷ್ಟು ದೈನ್ಯಕ್ಕೆ ತಳ್ಳುತ್ತದೆ – ಎನ್ನುವುದನ್ನು ಈ ಸುಭಾಷಿತ ಎತ್ತಿತೋರಿಸುತ್ತಿದೆ.

ಈ ಸುಭಾಷಿತಕ್ಕೆ ಸಂವಾದಿಯಾಗಿ ಇನ್ನೊಂದು ಸುಭಾಷಿತವನ್ನೂ ಇಲ್ಲಿ ನೋಡಬಹುದು:

ಜ್ಞಾನವೃದ್ಧಾ ವಯೋವೃದ್ಧಾಃ ಶೀಲವೃದ್ಧಾಶ್ಚ ಯೇ ನರಾಃ ।

ಸರ್ವೇ ತೇ ಧನವೃದ್ಧಸ್ಯ ದ್ವಾರಿ ತಿಷ್ಠಂತಿ ಕಿಂಕರಾಃ ।।

’ಯಾರೆಲ್ಲ ತಿಳಿವಳಿಕೆಯ ಕಾರಣದಿಂದ ಹಿರಿಯರು ಎನಿಸಿಕೊಂಡಿದ್ದಾರೋ, ವಯಸ್ಸಿನಿಂದ ದೊಡ್ಡವರಾಗಿದ್ದಾರೋ, ತಮ್ಮ ನಡತೆಯಿಂದಲೂ ಹಿರಿಯರೆಂಬ ಗೌರವಕ್ಕೆ ಪಾತ್ರರಾಗಿದ್ದಾರೋ, – ಈ ಎಲ್ಲ ಹಿರಿಯರು ಕೂಡ ಇನ್ನೊಬ್ಬ ಹಿರಿಯರ ಮನೆಬಾಗಿಲಲ್ಲಿ ಕೈಕಟ್ಟಿ ನಿಲ್ಲುತ್ತಾರೆ; ಆ ಹಿರಿಯರೇ ಹಣದಿಂದ ಹಿರಿಯರಾದವರು, ಧನವಂತರು‘ ಹೀಗೆನ್ನುತ್ತಿದೆ, ’ಸುಭಾಷಿತಸುಧಾನಿಧಿ‘ಯ ಈ ಪದ್ಯ.

ನಮಗೆ ಹಿರಿತನವನ್ನು ಒದಗಿಸುವ ವಿವರಗಳು ಪ್ರಧಾನವಾಗಿ ಯಾವುವು? ಇಂಥದೊಂದು ಪಟ್ಟಿ ಇಲ್ಲಿದೆ.

ಜ್ಞಾನವೃದ್ಧರು: ತಮ್ಮ ತಿಳಿವಳಿಕೆಯಿಂದಲೇ ಹಿರಿತನದ ಪಟ್ಟವನ್ನು ದಕ್ಕಿಸಿಕೊಂಡವರು. ವಯಸ್ಸಿನಲ್ಲಿ ನಮಗಿಂತಲೂ ಚಿಕ್ಕವರಿರಬಹುದು; ಆದರೆ ವಿದ್ಯೆಯಲ್ಲಿ ನಮಗಿಂತ ಅವರು ಎತ್ತರದಲ್ಲಿದ್ದರೆ ಅವರು ಹಿರಿಯರೇ ಹೌದು.

ವಯಸ್ಸಿನಿಂದಲೇ ಹಿರಿತನದ ಪ್ರಾಪ್ತಿಯಾಗುವುದು; ಇದು ಅತ್ಯಂತ ಸಾಮಾನ್ಯ ವಿಷಯ, ನಮ್ಮ ಪ್ರಯತ್ನವೇ ಇಲ್ಲದೆ ಸುಲಭವಾಗಿ ದಕ್ಕುವ ಹಿರಿತನದ ಪದವಿ, ಇದೊಂದೇ ಎನಿಸುತ್ತದೆ! ಇರಲಿ, ಇದು ಕೂಡ ಹಿರಿತನವೇ ತಾನೆ? (ನೂರು ವರ್ಷದ ಕತ್ತೆ ಒಂದು ವರ್ಷದ ಕುದುರೆಗೆ ಸಮವೆ – ಎಂಬೆಲ್ಲ ತರ್ಕಗಳು ಇಲ್ಲಿ ಕುತರ್ಕಗಳಾಗುತ್ತವೆ ಎನ್ನುವುದನ್ನು ನೆನಪಿನಲ್ಲಿಡತಕ್ಕದ್ದು. ಆದರೆ ಕತ್ತೆಗಳ ಗುಂಪಿನಲ್ಲಿ ನೂರು ವರ್ಷದ ಕತ್ತೆಯೊಂದು ತೊಂಬತ್ತೊಂಬತ್ತು ವರ್ಷಗಳ ಕತ್ತೆಗಿಂತಲೂ ’ಹಿರಿಯ‘ ಎನಿಸಿಕೊಳ್ಳುವುದು ಸಹಜವಲ್ಲವೆ?)

‘ಸುಭಾಷಿತಸುಧಾನಿಧಿ‘ ಇನ್ನೊಂದು ಮಹತ್ವದ ಹಿರಿತನದ ಬಗ್ಗೆ ಹೇಳುತ್ತಿದೆ: ನಡತೆಯಿಂದ ಹಿರಿತನವನ್ನು ಸಂಪಾದಿಸಿಕೊಳ್ಳುವುದು. ವಿದ್ಯೆಯಿಂದಲಾದರೂ ಹಿರಿತನವನ್ನು ಸಂಪಾದಿಸಬಹುದು; ಆದರೆ ನಮ್ಮ ಗುಣಗಳಿಂದಲೇ ಹಿರಿತನವನ್ನು ಸಂಪಾದಿಸುವುದು ಸುಲಭದ ಸಾಧನೆಯಲ್ಲ. ಈ ಹಿರಿತನವನ್ನು ಸಮಾಜ ಕೊಡಬೇಕು. ಪರೀಕ್ಷೆಯನ್ನು ವರ್ಷದಲ್ಲಿ ಒಂದು ಸಲ ಮಾತ್ರ ಎದುರಿಸಿ ಉತ್ತೀರ್ಣರಾಗುವುದರಿಂದ ಸಮಾಜ ಇಂಥ ಪ್ರಮಾಣಪತ್ರ ನೀಡದು; ಅದು ನಿತ್ಯವೂ ನಡೆಸುವ ಪರೀಕ್ಷೆಗಳಿಂದ ಪ್ರತಿ ಕ್ಷಣವೂ ಉತ್ತೀರ್ಣರಾಗಬೇಕು. ಆಗಷ್ಟೆ ಈ ಪಟ್ಟ.

ಆದರೆ ಇಷ್ಟೆಲ್ಲ ಸಾಧನೆಗಳಿಂದ ದಕ್ಕಿಸಿಕೊಂಡ ಹಿರಿತನ ಒಂದು ಹಿರಿತನದ ಮುಂದೆ 'ಹರಿಹರಿ' ಎಂದು ಹಾರಿಹೋಗುತ್ತದೆ! ಹಣದಿಂದಷ್ಟೆ ಹಿರಿತನ ಪಡೆದುಕೊಂಡವನ ಮುಂದೆ ಈ ಎಲ್ಲ ಹಿರಿಯರು ಕೈ ಕಟ್ಟಿಕೊಂಡು ಸೇವಕರಂತೆ ನಿಲ್ಲುತ್ತಾರಂತೆ!! ಎಂದರೆ ಎಲ್ಲ ಹಿರಿತನಗಳೂ ಅವನ ಹಣದ ರಭಸದಲ್ಲಿ ಗಾಳಿಗೆ ತೂರಿಹೋಗುತ್ತವೆ. ಈ ಚೋದ್ಯವನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.

ಹೀಗೆ ಹಣವಂತನ ಮುಂದೆ ನಾವು ಕೈ ಕಟ್ಟಿ ನಿಲ್ಲುವುದು ಕೂಡ ಸುಲಭದ ಸ್ಥಿತಿಯಲ್ಲ; ನಮ್ಮ ಮನಸ್ಸು ಆ ಸಮಯದಲ್ಲಿ ತುಂಬ ಸಂಕಟವನ್ನು ಅನುಭವಿಸುವುದು ಖಂಡಿತ. ಆ ಸಂಕಟದ ಸಮಯದಲ್ಲಿ ನಾವು ಏನೆಲ್ಲ ರಾಜಿಗಳನ್ನು ಮಾಡಿಕೊಳ್ಳುತ್ತೇವೆ ಎಂಬುದನ್ನು ಸುಭಾಷಿತ ಸೂಕ್ಷ್ಮವಾಗಿ ಹೇಳುತ್ತಿದೆ. ಅವನಲ್ಲಿರುವುದು ಕೇವಲ ದುಡ್ಡು ಮಾತ್ರವೇ; ಆದರೆ ಅವನು ಪೂಜೆಗೆ ಅನರ್ಹ, ಎಂದರೆ ನಮ್ಮ ಗೌರವಕ್ಕೆ ಅನರ್ಹನಾದವನು; ಅವನನ್ನು ನೋಡುವುದಕ್ಕೂ ನಾವು ಹೋಗಬಾರದು; ಅಷ್ಟು ದುಷ್ಟನಾಗಿರುತ್ತಾನೆ. ಅವನಿಗೆ ಗೌರವಿಸುವುದಿರಲಿ, ಅವನು ಕಂಡಾಗ ಶಿಷ್ಟಾಚಾರಕ್ಕೆ ಅವನಿಗೆ ನಮಸ್ಕರಿಸುವುದು ಕೂಡ ಸಲ್ಲದ ಸಂಗತಿ. ಆದರೆ ಅವನಲ್ಲಿರುವ ಹಣವು ನಮ್ಮ ಸ್ವಾಭಿಮಾನ ಮತ್ತು ಸದ್ಗುಣಗಳನ್ನು ಕ್ಷಣದಲ್ಲಿ ಪಾತಾಳಕ್ಕೆ ತಳ್ಳುತ್ತದೆ; ಮಾತ್ರವಲ್ಲ, ಅವನ ಎಲ್ಲ ದುರ್ಗುಣಗಳನ್ನೇ ಸುಗುಣಗಳನ್ನಾಗಿ ಮೆರೆಸುತ್ತದೆ. ನಾವು ದೈನ್ಯದಿಂದ ಅವನ ಮುಂದೆ ತಲೆ ಬಾಗಿಸಿ ನಿಂತಿರುತ್ತೇವೆ!

ಆದರೆ ದುಡ್ಡಿನ ನಡಿಗೆ ಎಲ್ಲಿಯ ತನಕ – ಎಂಬ ಅರಿವನ್ನು ಪಡೆದವರು ಇಂಥ ದಾಸ್ಯಕ್ಕೆ ಪಕ್ಕಾಗುತ್ತಾರೆಯೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.