ಭಾನುವಾರ, ಜೂನ್ 26, 2022
21 °C

ದಿನದ ಸೂಕ್ತಿ: ಯಾರ ಪರೀಕ್ಷೆ ಯಾವಾಗ?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಆಪತ್ಸು ಮಿತ್ರಂ ಜಾನೀಯಾತ್‌ ಯುದ್ಧೇ ಶೂರಂ ಧನೇ ಶುಚಿಮ್‌ ।

ಭಾರ್ಯಾ ಕ್ಷೀಣೇಷು ವಿತ್ತೇಷು ವ್ಯಸನೇಷು ಚ ಬಾಂಧವಾನ್‌ ।।

ಇದರ ತಾತ್ಪರ್ಯ ಹೀಗೆ:

’ಹೊರಗಿನ ಆಪತ್ತುಗಳು ಬಂದಾಗ ಸ್ನೇಹಿತನನ್ನೂ ಯುದ್ಧದಲ್ಲಿ ಶೂರನನ್ನೂ ಹಣದ ವಿಷಯದಲ್ಲಿ ಪರಿಶುದ್ಧನನ್ನೂ ಪರೀಕ್ಷಿಸಬಹುದು. ಅಂತೆಯೇ ಬಡತನ ಬಂದಾಗ ಹೆಂಡತಿಯನ್ನು ಪರೀಕ್ಷಿಸಬಹುದು; ಮನೆಯ ಕಷ್ಟಗಳು ಎದುರಾದಾಗ ನಂಟರನ್ನು ಪರೀಕ್ಷಿಸಿ ತಿಳಿಯಬಹುದು.’

ಪ್ರತಿಯೊಂದು ವಸ್ತುವೂ ಅದು ಚೆನ್ನಾಗಿದೆಯೇ ಇಲ್ಲವೇ ಎಂದು ತಿಳಿಯಲು ಹಲವು ದಾರಿಗಳಿವೆ. ಅವುಗಳಲ್ಲಿ ಪ್ರಮುಖವಾದುದು ಅವು ಯಾವ ಉದ್ದೇಶಕ್ಕಾಗಿ ಸಿದ್ಧವಾಗಿದೆಯೋ ಅದನ್ನು ಪೂರೈಸಲು ಸಮರ್ಥವಾಗಿದೆಯೋ ಇಲ್ಲವೋ ಎನ್ನುವುದರಿಂದ. ಉದಾಹರಣೆಗೆ, ಪೆನ್‌ ಒಂದರ ಪರೀಕ್ಷೆ ಯಾವಾಗ? ನಾವು ಬರೆಯುವ ಸಂದರ್ಭ ಬಂದಾಗ. ಅದು ಚೆನ್ನಾಗಿ ಬರೆಯಬಲ್ಲದು ಎಂದಾದಲ್ಲಿ ಅದನ್ನು ಒಳ್ಳೆಯ ಪೆನ್‌ ಎಂದು ಹೇಳಬಹುದು. ಹೀಗೆಯೇ ಜೀವನದಲ್ಲಿ ಹಲವು ಬಾಂಧವ್ಯಗಳಿಗೂ ಪರೀಕ್ಷೆಯ ಕಾಲ ಎಂಬುದು ಇರುತ್ತದೆ ಎನ್ನುತ್ತಿದೆ ಸುಭಾಷಿತ.

ಸ್ನೇಹಿತರ ಪರೀಕ್ಷೆ ನಡೆಯುವುದು ಆಪತ್ತಿನ ಕಾಲದಲ್ಲಿ ಎಂದಿದೆ ಸುಭಾಷಿತ. ಸ್ನೇಹ ಎಂಬುದು ಕೇವಲ ಸಂತೋಷವಾಗಿ ತಿರುಗುವುದು, ತಿನ್ನುವುದು, ಆಟ ಆಡುವುದು – ಇಂಥವು ಮಾತ್ರವೇ ಅಲ್ಲ; ನಮಗೆ ಆಪತ್ತು ಬಂದಾಗ ನಮ್ಮನ್ನು ಕಾಪಾಡಬಲ್ಲವನೇ ನಿಜವಾದ ಸ್ನೇಹಿತ.

ಶೂರನಾದವನ ಪರೀಕ್ಷೆ ಯುದ್ಧದಲ್ಲಿ ನಡೆಯುತ್ತದೆ. ಅವನ ಶೌರ್ಯ, ಪರಾಕ್ರಮಗಳ ವಿನಿಯೋಗ ನಡೆಯಬೇಕಾದ್ದೇ ಯುದ್ಧದಲ್ಲಿ. ಯುದ್ಧದಲ್ಲಿ ಧೈರ್ಯವಾಗಿ ಹೋರಾಡಬಲ್ಲವನೇ ನಿಜವಾದ ಶೂರ.

ಹಣ ಎಂಥವನ ವ್ಯಕ್ತಿತ್ವವನ್ನೂ ಕೆಡಿಸಬಲ್ಲದು; ಹಣ ಬಂದಾಗಲೂ ಯಾರು ಶುದ್ಧವಾಗಿರುತ್ತಾನೋ ಅವನೇ ಪರಿಶುದ್ಧ. ಹೀಗಾಗಿ ಹಣದ ವಿಷಯದಲ್ಲಿ ಪರಿಶುದ್ಧನ ಪರೀಕ್ಷೆ.

ದಾಂಪತ್ಯ ಎಂಬುದು ಗಂಡು–ಹೆಣ್ಣು ಸುಖದಲ್ಲೂ ಕಷ್ಟದಲ್ಲೂ ಜೊತೆಯಾಗಿ ಇರುವ ಪವಿತ್ರ ಸಂಬಂಧ. ಹಣ ಇದ್ದಾಗ ಮಾತ್ರ ಸಂಸಾರ ಮಾಡುತ್ತೇನೆ – ಎಂಬ ಮಾನಸಿಕತೆ ದಾಂಪತ್ಯವನ್ನು ನಾಶಮಾಡಬಲ್ಲದು. ಸಿರಿತನದಲ್ಲೂ ಬಡತನದಲ್ಲೂ ಪರಸ್ಪರ ಪ್ರೀತಿ–ಕಾಳಜಿಗಳಲ್ಲಿ ಬದುಕುವುದೇ ನಿಜವಾದ ದಾಂಪತ್ಯ. ಹೀಗಾಗಿ ಬಡತನವೇ ಹೆಂಡತಿಯ ಪರೀಕ್ಷೆಯ ಸಮಯ.

ನಮ್ಮ ಮನೆಯಲ್ಲಿ ಸಮಸ್ಯೆಗಳು ಇಲ್ಲದಿರುವಾಗ ಬಂಧುಗಳು ಸಂತೋಷವಾಗಿ ಬಂದುಹೋಗುತ್ತಾರೆ. ಆದರೆ ನಮಗೆ ಕಷ್ಟಗಳು ಬಂದಾಗ ಇತ್ತ ಕಡೆ ಸುಳಿಯರು. ಹೀಗಾಗಿ ಬಂಧುಗಳ ಪರೀಕ್ಷೆ ನಡೆಯವುದು ನಮ್ಮ ಕುಟುಂಬವು ಕಷ್ಟಗಳ ಪರಂಪರೆಗೆ ಸಿಲುಕಿದಾಗಲೇ. ಅಂಥ ಸಂದರ್ಭದಲ್ಲಿ ನಮಗೆ ಸಹಾಯ ಮಾಡಬಲ್ಲವರೇ ನಿಜವಾದ ಬಂಧುಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು