ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಹಣವೇ ಏನು ಹೇಳಲಿ ನಿನ್ನ ಮಹಿಮೆ!

Last Updated 11 ಜೂನ್ 2020, 19:30 IST
ಅಕ್ಷರ ಗಾತ್ರ

ಗೃಹಾಂತಾ ದ್ರವ್ಯಸಂಘಾತಾ ದ್ರವ್ಯಾಂತಾ ಚ ತಥಾ ಮತಿಃ ।
ಅರ್ಥಾಶ್ಚಾತ್ಮೋಪಭೋಗಾಂತಾ ಭವಿಷ್ಯಂತಿ ಕಲೌ ಯುಗೇ ।।

ಇದರ ತಾತ್ಪರ್ಯ ಹೀಗೆ:

‘ಹಣವನ್ನು ಸಂಪಾದಿಸುವುದು ಒಳ್ಳೆಯ ಮನೆಯನ್ನು ಕಟ್ಟುವುದಕ್ಕಾಗಿ; ಇರುವ ಬುದ್ಧಿಶಕ್ತಿಯೆಲ್ಲ ಹಣವನ್ನು ಸಂಪಾದಿಸುವುದರಲ್ಲಿಯೇ ಮುಗಿದುಹೋಗುತ್ತದೆ; ಹಣವು ವಿಲಾಸವನ್ನು ಪ್ರದರ್ಶಿಸುವುದಕ್ಕಾಗಿಯೇ ವಿನಿಯೋಗವಾಗುತ್ತದೆ. ಕಲಿಯುಗದಲ್ಲಿ ಹೀಗೇ ನಡೆಯುವುದು.‘

ನಮ್ಮನ್ನೂ, ನಾವಿರುವ ಸಮಾಜವನ್ನೂ ಆಡಿಸುತ್ತಿರುವ ’ಹಣ‘ ಎಂಬ ಮಹಾಶಕ್ತಿಯನ್ನು ಕುರಿತು ಈ ಸುಭಾಷಿತ ಮಾತನಾಡುತ್ತಿದೆ.

ಇಂದು ಶಿಕ್ಷಣ ನಮ್ಮ ಜೀವನದ ಮುಖ್ಯ ಸಂಗತಿಯಾಗಿದೆ. ಶಿಕ್ಷಣ ಎಂದರೇನು – ಎನ್ನುವುದಕ್ಕೂ ನಮ್ಮದೇ ಅರ್ಥವಿದೆ. ’ನೀವು ಪದವೀಧರರು‘ ಎಂದು ಘೋಷಿಸುವ ಪ್ರಮಾಣಪತ್ರವೇ ಶಿಕ್ಷಣದ ಗೊತ್ತು–ಗುರಿ. ಅದನ್ನು ಪಡೆಯಲು ಪೈಪೋಟಿಯೋ ಪೈಪೋಟಿ! ಸರಿ, ಈ ಪ್ರಮಾಣಪತ್ರಗಳನ್ನು ಪಡೆಯುವ ಉದ್ದೇಶವಾದರೂ ಏನು? ಕೆಲಸವನ್ನು ಸಂಪಾದಿಸಬೇಕು. ಅದು, ಒಳ್ಳೆಯದೇ ಅಲ್ಲವೆ? ಕೆಲಸ ಏಕೆ ಬೇಕು? ಹಣವನ್ನು ಸಂಪಾದಿಸಲು. ಸರಿ, ಹಣ ಸಂಪಾದಿಸುವುದೇನು ತಪ್ಪೋ? ಇಲ್ಲವಲ್ಲ! ಆದರೆ ಹಣ ಏಕೆ ಬೇಕು? ಮನೆ ಕಟ್ಟಲು, ಕಾರು ಕೊಳ್ಳಲು, ಪಾರ್ಟಿ ಮಾಡಲು.... ಈ ಪಟ್ಟಿ ಮುಂದುವರೆಯುತ್ತಲೇ ಹೋಗುತ್ತದೆ. ಇದರಲ್ಲಿ ಏನು ತಪ್ಪು? ಇವೆಲ್ಲ ಬದುಕಲು ಬೇಕಲ್ಲವೆ? ನಿಜವೇ, ಬದುಕುವುದಕ್ಕಾಗಿ ಇವನ್ನು ಸಂಪಾದಿಸಿದರೆ ತಪ್ಪಲ್ಲ. ಆದರೆ ನಾವು ಬದುಕುವುದೇ ಇವುಗಳಿಗಾಗಿ, ನಮ್ಮಲ್ಲಿ ಇವು ಇವೆ ಎಂದು ತೋರಿಸುವುದಕ್ಕಾಗಿ ಎಂದಾಗ ಸಮಸ್ಯೆ ಆರಂಭವಾಗುತ್ತದೆ. ಸಮಸ್ಯೆಯ ಮೂಲ ಇರುವುದು ಇಂಥ ಮಾನಸಿಕತೆಯಲ್ಲಿ. ಸುಭಾಷಿತ ಹೇಳುತ್ತಿರುವುದು ಈ ಚಕ್ರಾಕಾರದ ಸುಳಿಯ ಬಗ್ಗೆ.

ಮನುಷ್ಯ ಈ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕೂ ಒಂದು ಕಾರಣ ಇದೆ. ಮನುಷ್ಯನಿಗೆ ಬುದ್ಧಿಶಕ್ತಿ ಇದೆ. ಅದೇ ಅವನ ಸಮಸ್ಯೆಗೂ ಮೂಲವಾಗಿದೆ! ಅವನ ಬದುಕಿನಲ್ಲಿ ಬುದ್ಧಿ ಎನ್ನುವುದು ಶಕ್ತಿ ಎಂದೆವಷ್ಟೆ! ಶಕ್ತಿ ಎಂದರೆ ಅವನ ಪಾಲಿಗೆ ಅದು ಇಂಧನ ಇದ್ದಂತೆ; ಅವನ ಜೀವನದ ಗಾಡಿ ಮುಂದಕ್ಕೆ ಚಲಿಸಲು ಅವನಿಗೆ ಈ ಇಂಧನಶಕ್ತಿ ಬೇಕೇ ಬೇಕು. ಆದರೆ ಅವನು ಈ ಇಂಧನವನ್ನು ಬಳಸಿ ವಾಹನವನ್ನು ತಪ್ಪಾದ ದಿಕ್ಕಿಗೆ ನಡೆಸುತ್ತಿದ್ದಾನೆ ಎನ್ನುತ್ತಿದೆ, ಸುಭಾಷಿತ. ಅವನ ಈ ಇಂಧನವನ್ನು ಒಂದೇ ಕಡೆಗೆ ಸುರಿಯುತ್ತಿದ್ದಾನೆ; ಹಣದ ಸಂಪಾದನೆಯೇ ಆ ಗುರಿ ತಪ್ಪಿದ ಹಾದಿ.

ಮನುಷ್ಯನಿಗೆ ಆಲೋಚಿಸುವ ಶಕ್ತಿ ಇದೆ; ನಾಳೆಯ ಬಗ್ಗೆ ಯೋಚಿಸಬಲ್ಲ; ನಾಳೆಗಳನ್ನು ರೂಪಿಸಿಕೊಳ್ಳಬಲ್ಲ. ಅವನಿಗಿರುವ ಬುದ್ಧಿಶಕ್ತಿಯ ದೆಸೆಯಿಂದಾಗಿ ಅವನು ತನ್ನ ಜೀವನದ ಸಾರ್ಥಕತೆ ಎಲ್ಲಿದೆ ಎನ್ನುವುದನ್ನೂ ಕಂಡುಕೊಳ್ಳಲು ಸಾಧ್ಯ. ಆದರೆ ಅವನು ತನಗಿರುವ ಬುದ್ಧಿಯನ್ನೆಲ್ಲ ಕೇವಲ ಹಣಸಂಪಾದನೆಗಾಗಿ ಮಾತ್ರವೇ ಖರ್ಚು ಮಾಡುತ್ತಿದ್ದಾನೆ. ಹಣ ಇರುವುದು ಖರ್ಚು ಮಾಡುವುದಕ್ಕಾಗಿಯೇ ಅಲ್ಲವೆ? ಆದರೆ ನಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವ್ಯರ್ಥವಾಗಿ ಪೋಲು ಮಾಡಿದರೆ? ಅಥವಾ ಅದನ್ನು ನಮಗೆ ಯಾರಾದರೂ ಮೋಸಮಾಡಿ ಲಪಟಾಯಿಸಿದರೆ?

ಈ ಜೀವನ, ಈ ಪ್ರಾಣ – ಇವು ಸೃಷ್ಟಿ ನಮಗೆ ಒದಗಿಸಿರುವ ಹಣ. ಆದರೆ ನಾವು ಈ ಜೀವನ ಎಂಬ ಹಣವನ್ನು ವ್ಯರ್ಥವಾಗಿ ಖರ್ಚುಮಾಡುತ್ತಿದ್ದೇವೆ. ಒಂದು ರೀತಿಯಲ್ಲಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ; ಯಾವುದಕ್ಕೆ ಕನಿಷ್ಠ ಬೆಲೆಯನ್ನು ನೀಡಬೇಕಿತ್ತು, ಅದನ್ನು ನಾವು ಅವಿವೇಕದಿಂದ ಹೆಚ್ಚಿನ ಬೆಲೆಗೆ ಕೊಟ್ಟು ಕೊಂಡುಕೊಳ್ಳುವ ಮೂಲಕ ನಾವೇ ನಮ್ಮ ಜೀವನಾರ್ಥವನ್ನು ಹ್ರಾಸಗೊಳಿಸಿಕೊಳ್ಳುತ್ತಿದ್ದೇವೆ. ಸುಭಾಷಿತ ಇದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಿದೆ.

ಹಣವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬಹುದು; ನಾಲ್ಕು ಜನರ ಏಳಿಗೆಗಾಗಿ ಬಳಸಿಕೊಳ್ಳಬಹುದು. ಆದರೆ ನಾವು ಹಣವನ್ನೂ ಪ್ರದರ್ಶನದ ವಸ್ತುವನ್ನಾಗಿಸಿದ್ದೇವೆ. ನಾವು ಸಿರಿವಂತರಾಗಿದ್ದರಷ್ಟೆ ನಮಗೆ ತೃಪ್ತಿಯಿಲ್ಲ; ನಾಲ್ಕು ಜನರು ನಮ್ಮ ಸಿರಿಯ ವೈಭವವನ್ನು ನೋಡಿ ಕೊಂಡಾಡಬೇಕು; ಮಾತ್ರವಲ್ಲ, ಅವರು ಅಸೂಯೆ ಪಡಬೇಕು. ಅದನ್ನು ಕಂಡು ನಾವು ಸಂತೋಷಿಸಬೇಕು. ಹೀಗಿರುತ್ತದೆ ನಮ್ಮ ಲೆಕ್ಕಾಚಾರ! ಹಣ ಇರುವುದು ವಿಲಾಸಕ್ಕಾಗಿ, ’ಮಜಾ ಉಡಾಯಿಸಲು‘ ಎಂಬ ಧೋರಣೆಯೂ ಈ ಲೆಕ್ಕಾಚಾರದಲ್ಲಿ ನುಸುಳಿದರೆ ಹೇಳುವುದು ಇನ್ನೇನು? ಸರಿಯಾದ ಉಪಯೋಗಕ್ಕೆ ಒದಗದ ಹಣವು ಕೊಳೆಯಿದ್ದಂತೆ; ಅದರ ಜೊತೆಗೆ ಅಹಂಕಾರ, ದರ್ಪ, ವೈಭವ ಎಂಬ ಮಳೆಯೂ ಜೊತೆಯಾದರೆ ಜೀವನ ಆಗ ರಾಡಿಯಾಗುವುದು ಸಹಜವಷ್ಟೆ!

ಇಂದು ನಮ್ಮ ಎಲ್ಲ ಶಕ್ತಿಯನ್ನೂ ಹಣಸಂಪಾದನೆಗಾಗಿಯೇ ವ್ಯಯಮಾಡುತ್ತಿದ್ದೇವೆ. ಪ್ರಸ್ತುತ ಸಂದರ್ಭವನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದು. ಕೊರೊನಾದ ಸಂಕಷ್ಟದ ಸಮಯದಲ್ಲೂ ನಮ್ಮ ಜೀವನದ ಎಲ್ಲ ಲೆಕ್ಕಾಚಾರಗಳು ಹಣವನ್ನೇ ಕೇಂದ್ರವನ್ನಾಗಿಸಿಕೊಂಡಿರುವುದು ಸುಳ್ಳಲ್ಲ. ಸಡಿಲವಾದ ಲಾಕ್‌ಡೌನ್‌ನ ಹಿಂದಿರುವುದು ಕೂಡ ‘ಹಣ ಇಲ್ಲದೆ ಜೀವನ ಇಲ್ಲ‘ ಎಂಬ ಕಟುಸತ್ಯವೇ ಹೌದು. ಇಷ್ಟಕ್ಕೂ ದುಡ್ಡನ್ನೇ ನಮ್ಮ ಪಂಚಪ್ರಾಣಗಳ ಪಟ್ಟಿಗೆ ಸೇರಿಸಿದವರಾದರೂ ಯಾರು?

ಪ್ರಾಣಕ್ಕೆ ಬದಲು ‘ಹಣವೇ ನಮ್ಮ ಜೀವ’ಎಂಬ ಸೂತ್ರಕ್ಕೆ ಬದ್ಧಕಾಲವೇ ಕಲಿಯುಗವೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT