ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕ್ಷಣಕ್ಷಣವೂ ಆಯುಸ್ಸಿನ ಕಣ

Last Updated 16 ಡಿಸೆಂಬರ್ 2020, 1:24 IST
ಅಕ್ಷರ ಗಾತ್ರ

ಆಯುಷಃ ಕ್ಷಣ ಏಕೋsಪಿ ನ ತುಲ್ಯಃ ಸ್ವರ್ಣಕೋಟಿಭಿಃ ।

ಸ ವೃಥಾ ನೀಯತೇ ಯೇನ ಪ್ರಮಾದಃ ಸುಮಹಾನಯಮ್ ।।

ಇದರ ತಾತ್ಪರ್ಯ ಹೀಗೆ:

‘ಕೋಟಿ ಹೊನ್ನುಗಳೂ ಆಯುಸ್ಸಿನ ಒಂದು ಕ್ಷಣಕ್ಕೆ ಸಮಾನವಲ್ಲ; ಅದನ್ನೇ ವ್ಯರ್ಥಗೊಳಿಸುವುದೆಂದರೆ ಬಹಳ ದೊಡ್ಡ ನಷ್ಟವೇ ಆಗುತ್ತದೆ.’

ನಾವು ಒಂದೇ ಒಂದು ಪೈಸೆಯನ್ನೂ ಖರ್ಚುಮಾಡದೆಯೇ, ಒಂದು ಒಂದು ಹನಿಯಷ್ಟು ಬೆವರನ್ನೂ ಹರಿಸದೆಯೇ ಪಡೆಯುವ ಅಮೂಲ್ಯ ಸಂಪತ್ತು ಎಂದರೆ ಅದು ಕಾಲವೇ ಹೌದು. ಈ ಕಾಲವನ್ನು ವ್ಯರ್ಥವಾಗಿ ಕಳೆಯಬೇಡಿ ಎಂದು ಸುಭಾಷಿತ ಹೇಳುತ್ತಿದೆ. ಕಾಲವನ್ನು ವ್ಯರ್ಥಮಾಡುವುದು ಎಂದರೆ ನಮ್ಮ ಆಯುಸ್ಸನ್ನೇ ವ್ಯರ್ಥಮಾಡಿದಂತೆ ಎಂದೂ ಅದು ಎಚ್ಚರಿಸುತ್ತಿದೆ.

ಜೀವನದಲ್ಲಿ ನಾವು ಕಳೆದುಹೋದ ವಸ್ತುಗಳನ್ನು ಮತ್ತೆ ತರಬಹುದೇನೋ! ಆದರೆ ಸಮಯವನ್ನು ಮಾತ್ರ ಹೀಗೆ ವಾಪಸ್‌ ತರಲು ಆಗದು. ಒದೊಂದು ಕ್ಷಣವೂ ಸವೆಯುತ್ತಿದೆ ಎಂದರೆ ಅದರ ಜೊತೆಗೆ ನಮ್ಮ ಆಯುಸ್ಸು ಕೂಡ ಸವೆಯತ್ತಿದೆ ಎಂದೇ ಅರ್ಥ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ನಮ್ಮ ಅಪ್ಪಣೆಗೆ ಕಾಯದೆ ನಿರಂತರವಾಗಿ ತನ್ನ ಪಾಡಿಗೆ ತಾನು ನಡೆಯುತ್ತಲೇ ಇರುವ ಸಂಗತಿ ಎಂದರೆ ಕಾಲವೇ ಹೌದು. ನಾವು ಅದನ್ನು ಒಳ್ಳೆಯದಕ್ಕೆ ಬಳಸಲಿ, ಕೆಟ್ಟದ್ದಕ್ಕೆ ಬಳಸಲಿ ಅಥವಾ ಬಳಸದೆಯೇ ಇರಲಿ, ತನ್ನಷ್ಟಕ್ಕೆ ತಾನು ಮುಂದುವರೆಯುತ್ತಲೇ ಇರುತ್ತದೆ ಕಾಲ. ಹೀಗೆ ಕಾಲದ ಮುಂದುವರಿಕೆ ಆದಂತೆಲ್ಲ ನಮ್ಮ ಆಯುಸ್ಸಿನ ಒಂದೊಂದು ಕ್ಷಣವೂ ಜಾರಿಹೋಗುತ್ತಿರುತ್ತದೆ. ನನ್ನ ಹತ್ತಿರ ದುಡ್ಡಿದೆ; ಕಳೆದುಹೋಗಿರುವ ನನ್ನ ಆಯುಸ್ಸಿನ ಭಾಗವನ್ನು ಕೊಂಡುತರುತ್ತೇನೆ – ಎಂದು ಯಾರಾದರೂ ನಿರ್ಧರಿಸಿ ಅದನ್ನು ಅಂಗಡಿಗೆ ಹೋಗಿ ತರಲು ಸಾಧ್ಯವೆ? ಹೀಗಾಗಿ ಆಯುಸ್ಸಿನ ಒಂದೇ ಒಂದು ಕ್ಷಣವನ್ನು ನಾವು ವ್ಯರ್ಥಗೊಳಿಸದೆ ಅದನ್ನು ಸಾರ್ಥಕವಾಗಿ ವಿನಿಯೋಗಿಸಿಕೊಳ್ಳಬೇಕು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಾವು ಯಾವುದೇ ಕೆಲಸವನ್ನು, ಅದು ದೊಡ್ಡದಿರಲಿ ಚಿಕ್ಕದಿರಲಿ, ನಾವು ಅದಕ್ಕಾಗಿ ವಿನಿಯೋಗಿಸುವ ಒಂದೊಂದು ಕ್ಷಣದ ಮೇಲೆಯೇ ಅದರ ಸಾಫಲ್ಯ ಅವಲಂಬಿತವಾಗಿರುತ್ತದೆ. ಯಾವುದೇ ಕೆಲಸವು ಪೂರ್ಣವಾಗುವುದು ಆ ಕೆಲಸಕ್ಕೆ ಎಷ್ಟು ಸಮಯ ಕೊಡಬೇಕೋ ಅಷ್ಟು ಸಮಯವನ್ನು ಅದಕ್ಕೆ ಕೊಟ್ಟಾಗಲೇ, ಒಂದೇ ಒಂದು ಕ್ಷಣ ಕಡಿಮೆಯದರೂ ಅದು ವಿಫಲವಾಗಬಹುದಾಗಿರುತ್ತದೆ. ಆದುದರಿಂದ ನಮ್ಮ ಆಯುಸ್ಸಿನ ಒಂದೊಂದು ಕ್ಷಣವನ್ನೂ ನಮ್ಮ ಜೀವನವನ್ನು ಸಫಲವನ್ನಾಗಿಸಿಕೊಳ್ಳುವುದಕ್ಕೆ ಮೀಸಲಾಗಿಡುವುದೇ ವಿವೇಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT