ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನೋವನ್ನು ಕೊಡಬೇಡಿ!

Last Updated 18 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ನಾರುಂತುದಃಸ್ಯಾದಾರ್ತೋsಪಿ ನ ಪರದ್ರೋಹಕರ್ಮಧೀಃ |
ಯಯಾಸ್ಯೋದ್ವಿಜತೇ ವಾಚಾ ನಾಲೋಕ್ಯಾಂತಾಮುದೀರಯೇತ್‌ ||

ಇದರ ತಾತ್ಪರ್ಯ ಹೀಗೆ
‘ನೋವಿನಿಂದ ಕೂಡಿದ್ದರೂ ಇತರರಿಗೆ ನೋವನ್ನು ಉಂಟುಮಾಡುವ ಮಾತನ್ನಾಡಬಾರದು. ಇತರರಿಗೆ ದ್ರೋಹವಾಗುವ ಕೆಲಸವನ್ನೂ ಮಾಡಬಾರದು; ಅಂಥ ಕೆಲಸವನ್ನು ಮಾಡಬೇಕೆಂಬ ಬುದ್ಧಿಯೂ ಇರಬಾರದು. ಇತರರಿಗೆ ಬೇಸರವಾಗುವ ಲೋಕರೂಢಿಯಲ್ಲಿಲ್ಲದ ಅಥವಾ ಉಚಿತವಲ್ಲದ ಮಾತನ್ನು ಆಡಬಾರದು.

ನಾವೆಲ್ಲರೂ ಮನುಷ್ಯರೇ; ನಮಗೆಲ್ಲರಿಗೂ ನೋವು, ದುಃಖ, ಸಂಕಟಗಳು ಎದುರಾಗುವುದು ಸಹಜ. ನಾವು ನೋವು–ಸಂಕಟಗಳಲ್ಲಿ ಇರುವಾಗ ನಾವು ಹೇಗೆ ನಡೆದುಕೊಳ್ಳಬೇಕು? ಸುಭಾಷಿತ ಅದನ್ನು ಇಲ್ಲಿ ಹೇಳುತ್ತಿದೆ.

ನಾವೇ ನೋವಿನಲ್ಲಿದ್ದೇವೆ; ಅಂಥ ಸಂದರ್ಭದಲ್ಲಿ ನಾವು ಇತರರೊಂದಿಗೆ ಆ ನೋವನ್ನು ಮರೆತು ಸೌಹಾರ್ದವಾಗಿ ನಡೆದುಕೊಳ್ಳಬೇಕು ಎನ್ನುತ್ತಿದೆ ಸುಭಾಷಿತ. ಇಂಥ ನಡವಳಿಕೆ ಸುಲಭವಲ್ಲ. ನಮ್ಮ ಮನಸ್ಸು–ಬುದ್ಧಿಗಳನ್ನು ಇದಕ್ಕಾಗಿ ಚೆನ್ನಾಗಿ ಒಗ್ಗಿಸಿಕೊಳ್ಳಬೇಕು; ಆಗಷ್ಟೇ ಇದು ಸಾಧ್ಯವಾದೀತು. ನಮ್ಮಲ್ಲಿಗೆ ಬಂದವರೊಂದಿಗೆ ಒಳ್ಳೆಯ ಮಾತುಗಳನ್ನೇ ಆಡಬೇಕು. ಜೊತೆಗೆ ಲೋಕವ್ಯವಹಾರಕ್ಕೆ ಅನುಗುಣವಾಗಿರದ ಮಾತುಗಳನ್ನೂ ಆಡಬಾರದು. ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಕೊವಿಡ್‌ ಹರಡಿದೆ ಎಂದಮಾತ್ರಕ್ಕೆ, ಅವನು ಉಳಿಯವುದು ಕಷ್ಟ ಎಂದು ಅವನಿಗೂ ಅವನ ಮನೆಯವರಿಗೂ ಭಯ ಹುಟ್ಟಿಸುವಂಥ ಮಾತುಗಳನ್ನೂ ಆಡಬಾರದು. ಜನರಿಗೂ ಸಮಾಜಕ್ಕೂ ಕೆಟ್ಟದ್ದನ್ನು ಕೋರುವುದು ಲೋಕರೂಢಿಗೂ ಲೋಕನೀತಿಗೂ ವಿರುದ್ಧವಾದುದು.

ಇತರರಿಗೆ ತೊಂದರೆ ಆಗುವಂಥ ಕೆಲಸವನ್ನು ಮಾಡುವುದಷ್ಟೆ ಅಲ್ಲ, ಅಂಥ ಕೆಲಸವನ್ನು ಮಾಡಬೇಕೆಂಬ ಬುದ್ಧಿ ಕೂಡ ನಮ್ಮದಾಗಬಾರದು ಎನ್ನುತ್ತಿದೆ ಸುಭಾಷಿತ. ಕೆಲವೊಮ್ಮೆ ಕೆಲಸಕ್ಕಿಂತಲೂ ಆ ಕೆಲಸ ಮಾಡಬೇಕೆಂಬ ಬುದ್ಧಿ ಹೆಚ್ಚು ಅಪಾಯಕಾರಿ. ಹಲವರು ನಮ್ಮ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ; ಆ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು. ಅವರಿಗೆ ದ್ರೋಹವಾಗುವಂಥ ಕೆಲಸಗಳನ್ನು ನಾವು ಮಾಡಬಾರದು.

ನಮ್ಮ ಜೀವನ ನಡೆಯುವುದೇ ನಂಬಿಕೆಗಳ ಆಧಾರದ ಮೇಲೆ. ವೈದ್ಯರು ಹೇಳುವ ಔಷಧವನ್ನು ನಾವು ಧೈರ್ಯವಾಗಿ ತೆಗೆದುಕೊಳ್ಳುತ್ತೇವೆ. ಹೊಟೇಲಿನಲ್ಲಿ ಧೈರ್ಯವಾಗಿ, ಸಂತೋಷವಾಗಿ ಊಟ ಮಾಡುತ್ತೇವೆ. ಚಿತ್ರಮಂದಿರಕ್ಕೆ ಹೋಗಿ ಧೈರ್ಯವಾಗಿ ಕುಟುಂಬದ ಜೊತೆ ಸಿನಿಮಾವನ್ನು ನೋಡುತ್ತೇವೆ. ಹೊರಗಿನಿಂದ ನಮ್ಮ ಮನೆಗೆ ಬರುವ ಹಾಲು–ಹಣ್ಣು–ತರಕಾರಿ ಮುಂತಾದವುಗಳನ್ನು ಧೈರ್ಯವಾಗಿ ಬಳಸುತ್ತೇವೆ. ಮಕ್ಕಳನ್ನು ಧೈರ್ಯವಾಗಿ ಶಾಲೆಗೆ ಕಳುಹಿಸುತ್ತೇವೆ. ಹೀಗೆ ನಮ್ಮ ಪ್ರತಿಯೊಂದ ಚಟುವಟಿಕೆಯೂ ನಂಬಿಕೆಯ ಅಡಿಪಾಯದ ಮೇಲೆ ನಿಂತಿದೆ. ಆದರೆ ಆಧುನಿಕ ಸಮಾಜವು ಭ್ರಷ್ಟಾಚಾರ, ಭಯೋತ್ಪಾದನೆಗಳ ಕಾರಣಗಳಿಂದ ಜನರ ನಡುವೆ ಪರಸ್ಪರ ನಂಬಿಕೆಯನ್ನೇ ಕಳೆದುಕೊಳ್ಳುವ ಹಂತವನ್ನು ಮುಟ್ಟಿರುವುದು ಸುಳ್ಳಲ್ಲ. ನಂಬಿಕೆಯನ್ನು ಕಳೆದುಕೊಂಡ ಸಮಾಜವೂ ಕುಟುಂಬವೂ ನರಕಕ್ಕೆ ಸಮ.

ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ನಿಗ್ರಹಕ್ಕೆ ಇಂದು ಸಮಾಜವು ವಿವೇಕದಿಂದ ಒಂದಾಗಿ ಕ್ರಿಯಾಶೀಲವಾಗಬೇಕಿದೆ. ಇಲ್ಲವಾದಲ್ಲಿ ನಾವು ಧೈರ್ಯವಾಗಿ ಮನೆಯಿಂದ ರಸ್ತೆಗೇ ಇಳಿಯದಂಥ ದಿನಗಳು ಎದುರಾಗುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT