ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕೀರ್ತಿವಂತರಾಗಿ

Last Updated 24 ಸೆಪ್ಟೆಂಬರ್ 2020, 1:25 IST
ಅಕ್ಷರ ಗಾತ್ರ

ದಾನೇ ತಪಸಿ ಸತ್ಯೇ ವಾ ಯಸ್ಯ ನೋಚ್ಚರಿತಂ ಯಶಃ ।

ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರ ಏವ ಸಃ ।।

ಇದರ ತಾತ್ಪರ್ಯ ಹೀಗೆ:

‘ದಾನ, ತಪಸ್ಸು, ಸತ್ಯ, ವಿದ್ಯೆ, ಧನಾರ್ಜನೆ – ಇವುಗಳಲ್ಲಿ ಯಾವುದರಲ್ಲಿ ಒಂದರಲ್ಲಾದರೂಯಾವನು ಹೆಸರನ್ನು ಸಂಪಾದಿಸಿಲ್ಲವೋ ಅಂಥವನು ತಾಯಿಯ ಮಲವೇ ಸರಿ.‘

ಹೆತ್ತವರಿಗೆ ನಮ್ಮಿಂದ ಯಾವಾಗ ಸಂತೋಷವಾಗುತ್ತದೆ? ಸುಭಾಷಿತ ಅಂಥ ಸಂದರ್ಭಗಳನ್ನು ಇಲ್ಲಿ ಪಟ್ಟಿ ಹೇಳಿದೆ. ನಾವು ಕೀರ್ತಿವಂತರಾದಾಗ ಅವರು ಸಂತೋಷ ಪಡುತ್ತಾರೆ. ಕೀರ್ತಿವಂತರಾದ ಮಕ್ಕಳನ್ನು ನೋಡಿ ತಾಯಿ ಹೆಚ್ಚು ಸಂತೋಷಪಡುತ್ತಾಳೆ ಎನ್ನುವುದನ್ನೂ ಅದು ಹೇಳುತ್ತಿದೆ.

ಯಾವ ಮಾರ್ಗದಿಂದ ಕೀರ್ತಿಯನ್ನು ಸಂಪಾದಿಸಬೇಕು ಎನ್ನುವುದನ್ನೂ ಸುಭಾಷಿತ ಹೇಳಿದೆ.

ದಾನ, ತಪಸ್ಸು, ಸತ್ಯ, ವಿದ್ಯೆ, ಧನಾರ್ಜನೆ – ಇವುಗಳ ಮೂಲಕ ಕೀರ್ತಿಯನ್ನು ಸಂಪಾದಿಸಬೇಕು. ಇವೆಲ್ಲವೂ ಸಾಧನೆಗಳೇ ಹೌದು. ಎಲ್ಲವೂ ಕಷ್ಟಕರವಾದ ಸಾಧನೆಗಳೇ.

ನಾವು ಎಷ್ಟೆಲ್ಲ ರೀತಿಯಲ್ಲಿ ಹೆಸರನ್ನು ಸಂಪಾದಿಸಬಹುದು ಎನ್ನುವುದಕ್ಕೂ ಸುಭಾಷಿತ ಮಾರ್ಗದರ್ಶಕವಾಗಿದೆ.

ದಾನವನ್ನು ನಮ್ಮ ಸಂಸ್ಕೃತಿಯಲ್ಲಿ ತುಂಬ ಗೌರವದಿಂದ ಕಾಣಲಾಗಿದೆ. ಸಮಾಜವನ್ನು ನಮ್ಮ ಮನೆಯ ಒಂದು ಭಾಗವಾಗಿಯೇ ಸ್ವೀಕರಿಸುವಂಥ ಭಾವವೈಶಾಲ್ಯವೇ ದಾನಬುದ್ಧಿಯಲ್ಲಿ ಕಾಣುವುದು. ಹೀಗೆ ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸಹಜವಾಗಿಯೇ ಅದು ಸ್ಮರಿಸಿಕೊಳ್ಳುತ್ತದೆ.

ನಮ್ಮ ಆತ್ಮಸಂಸ್ಕಾರದ ಸಾಧನೆಯ ರೂಪವೇ ತಪಸ್ಸು. ಇದರಲ್ಲೂ ಹಲವು ವಿಧದ ತಪಸ್ಸುಗಳಿವೆ. ಇದು ನಮ್ಮ ಭಾವ–ಬುದ್ಧಿ–ಶರೀರಗಳನ್ನು ಎಂಥ ಪರಿಸ್ಥಿತಿಗೂ ಸಿದ್ಧಗೊಳಿಸುತ್ತದೆ. ತಪಸ್ವಿಗಳನ್ನು ಲೋಕ ಖಂಡಿತವಾಗಿಯೂ ಕೊಂಡಾಡುತ್ತದೆ.

ಸತ್ಯಸಂಧನನ್ನು ಜಗತ್ತು ಹೊಗಳುವುದು ಸಹಜ. ಸತ್ಯವನ್ನು ಹೇಳುವ ವ್ರತವನ್ನು ಹಿಡಿಯವುದೂ ಅದನ್ನು ಅನುಷ್ಠಾನಕ್ಕೆ ತರುವುದೂ ಸುಲಭವಲ್ಲ. ಸತ್ಯವನ್ನು ಹೇಳುವುದು ಕೂಡ ತಪಸ್ಸಿನ ಒಂದು ರೀತಿಯೇ.

ನಾವು ವಿದ್ಯಾವಂತರಾದಾಗಲೂ ಹೆತ್ತವರು ಸಂಭ್ರಮಿಸುತ್ತಾರೆ. ವಿದ್ಯೆ ನಮಗೆ ಗಟ್ಟಿಯಾದ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಇಂಥ ವ್ಯಕ್ತಿತ್ವವನ್ನು ಸಮಾಜ ಗುರುತಿಸಿ ಗೌರವಿಸುತ್ತದೆ.

ಧನಾರ್ಜನೆಯನ್ನು ಸುಭಾಷಿತ ಸಾಧನೆ ಎಂದು ಗುರುತಿಸಿದೆ. ಹೌದು, ಸರಿಯಾದ ಮಾರ್ಗದಲ್ಲಿ ಧನವಂತರಾಗುವುದು ಕೂಡ ಸಾಧನೆಯೇ ಆಗುತ್ತದೆ. ನಮ್ಮಲ್ಲಿ ಹಣ ಸೇರಿದ ಮಾತ್ರಕ್ಕೆ ಕೀರ್ತಿ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ; ಹಣವನ್ನು ನಾವು ನ್ಯಾಯಮಾರ್ಗದಲ್ಲಿಯೇ ಸಂಪಾದಿಸಬೇಕು. ಆಗ ಸಮಾಜ ನಮ್ಮನ್ನು ಗೌರವದಿಂದ ಕಾಣುತ್ತದೆ.

ನಾಲ್ಕು ಜನರು ನಮ್ಮ ಸಾಧನೆಯನ್ನು ಗುರುತಿಸಿ, ಹೊಗಳುವಂಥ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಕಷ್ಟಸಾಧ್ಯವಾದುದು. ಇಂಥ ಸಾಧನೆಯನ್ನು ಮಾಡಿದಾಗಲೇ ಕೀರ್ತಿ ನಮ್ಮ ಕೈಹಿಡಿಯುವುದು. ಕೀರ್ತಿವಂತರಾಗುವ ಸಂಕಲ್ಪವನ್ನು ಇಂದೇ ಮಾಡೋಣ. ತಾಯಿಯ ಋಣವನ್ನು ತೀರಿಸುವ ಸಂಕಲ್ಪವನ್ನೂ ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT