ಬುಧವಾರ, ಸೆಪ್ಟೆಂಬರ್ 29, 2021
20 °C

ದಿನದ ಸೂಕ್ತಿ: ನಮ್ಮ ಸಂಸ್ಕೃತಿ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪ್ರಾತರ್ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀಪ್ರಸಂಗತಃ ।
ರಾತ್ರೌ ಚೌರ್ಯಪ್ರಸಂಗೇನ ಕಾಲೋ ಗಚ್ಛತಿ ಧೀಮತಾಮ್‌ ।।

ಇದರ ತಾತ್ಪರ್ಯ ಹೀಗೆ: ‘ಬುದ್ಧಿವಂತರು ಬೆಳಗಿನ ಹೊತ್ತನ್ನು ಜೂಜಾಡುವುದರಿಂದಲೂ, ಮಧ್ಯಾಹ್ನವನ್ನು ಸ್ತ್ರೀಸಂಬಂಧಿಯಾದ ವ್ಯವಹಾರದಿಂದಲೂ, ರಾತ್ರಿಯಲ್ಲಿ ಕಳ್ಳತನದ ಚರ್ಚೆಗಳಿಂದಲೂ ಅವರ ಕಾಲವನ್ನು ಕಳೆಯುತ್ತಾರೆ.’

ಇದೊಂದು ಚಮತ್ಕಾರದ ಶ್ಲೋಕ, ಮೇಲ್ನೋಟಕ್ಕೆ ಕಾಣುವಂಥ ಅರ್ಥಕ್ಕಿಂತಲೂ ಭಿನ್ನವಾದ ಅರ್ಥವನ್ನು ಹೊಂದಿರುವ ಶ್ಲೋಕ. ಇದರ ವಾಚ್ಯಾರ್ಥವನ್ನಷ್ಟೆ ಸ್ವೀಕರಿಸಬಾರದು. ನಾವು ಮಾಡಬಾರದ ಸಂಗತಿಗಳನ್ನೇ ‘ಮಾಡಿರಿ’ ಎಂದು ಈ ವಾಚ್ಯಾರ್ಥ ಹೇಳುತ್ತಿದೆ. ಜೂಜಾಡುವುದರಿಂದ ನಾವು ನಮ್ಮ ಆಸ್ತಿಯನ್ನೂ ಕೀರ್ತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಹೀಗಾಗಿ ಜೂಜಾಡುವುದು ತಪ್ಪು. ಸ್ತ್ರೀಸಂಬಂಧ ವ್ಯವಹಾರ ಕೂಡ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ. ಹೀಗಾಗಿ ಅಂಥ ವ್ಯವಹಾರಗಳಿಂದಲೂ ದೂರ ಇರಬೇಕು. ಇನ್ನು ಕಳ್ಳತನ. ಕಳ್ಳತನ ನಮ್ಮ ಮಾನಹಾನಿಗೂ ಕಾರಣವಾಗುತ್ತದೆ; ಮಾತ್ರವಲ್ಲ, ಸೆರೆಮನೆಯ ರುಚಿಯನ್ನೂ ನೋಡಬೇಕಾಗುತ್ತದೆ. ಹೀಗಾಗಿ ಕಳ್ಳತನದಲ್ಲಿ ತೊಡಗದಿರುವುದೇ ಬುದ್ಧಿವಂತಿಕೆಯ ಲಕ್ಷಣ. ಆದರೆ ಈ ಸುಭಾಷಿತ ಮಾತ್ರ ಜೂಜನ್ನೂ ಸ್ತ್ರೀವ್ಯವಹಾರವನ್ನೂ ಕಳ್ಳತನವನ್ನೂ ಮಾಡಲು ಉತ್ತೇಜಿಸುತ್ತಿದೆ; ಅದಕ್ಕೆ ತಕ್ಕ ಕಾಲವನ್ನು ಕೂಡ ಸೂಚಿಸುತ್ತಿದೆ. ಹಾಗಾದರೆ ಇದರ ಸ್ವಾರಸ್ಯವೇನು?

ಜೂಜಾಟದ ಮೂಲಕ ಈ ಶ್ಲೋಕ ಸೂಚಿಸುತ್ತಿರುವುದು ಮಹಾಭಾರತವನ್ನು. ಮಹಾಭಾರತದಲ್ಲಿ ತುಂಬ ಮುಖ್ಯವಾದ ಪ್ರಸಂಗವೇ ಕೌರವರು–ಪಾಂಡವರು ಜೂಜಾಡಿದ ಪ್ರಸಂಗ. ಸ್ತ್ರೀಸಂಬಂಧವ್ಯವಹಾರ ಎಂದರೆ ರಾಮಾಯಣದ ಕಥೆಯ ಸೂಚನೆ; ಸೀತೆಯನ್ನು ರಾವಣ ಅಪಹರಿಸಿದದ್ದನ್ನು ಇದು ಹೇಳುತ್ತಿದೆ. ಕಳ್ಳತನದ ಪ್ರಸಂಗ ಎಂದರೆ ಭಾಗವತ; ಶ್ರೀಕೃಷ್ಣನು ಬೆಣ್ಣೆಯನ್ನು ಕದ್ದ ಪ್ರಸಂಗ ಅಲ್ಲಿ ಪ್ರಸಿದ್ಧವಾಗಿದೆಯಷ್ಟೆ. ಆದುದರಿಂದ ನಾವು ಬೆಳಗ್ಗೆ ಮಹಾಭಾರತವನ್ನೂ, ಮಧ್ಯಾಹ್ನ ರಾಮಾಯಣವನ್ನೂ, ರಾತ್ರಿ ಭಾಗವತವನ್ನೂ ಓದಬೇಕು, ಅಧ್ಯಯನ ಮಾಡಬೇಕು; ಅವುಗಳ ಶ್ರವಣ–ಮನನಗಳನನ್ನು ಮಾಡಬೇಕು ಎಂದು ಸುಭಾಷಿತ ಸೂಚಿಸುತ್ತಿದೆ.

ರಾಮಾಯಣ, ಮಹಾಭಾರತ ಮತ್ತು ಭಾಗವತ – ಇವು ನಮ್ಮ ಸಂಸ್ಕೃತಿಯ ಸ್ವರೂಪವನ್ನು ತಿಳಿಸಿಕೊಂಡುವಂಥವು; ನಮ್ಮ ವ್ಯಕ್ತಿತ್ವಮಿರ್ಮಾಣಕ್ಕೂ ಕಾರಣವಾಗುವಂಥವು; ಪುರುಷಾರ್ಥಗಳನ್ನು ತಿಳಿಸಿಕೊಡುವಂಥವು. ಇವುಗಳ ನಿರಂತರ ಅನುಸಂಧಾನವೇ ನಮ್ಮ ನಿತ್ಯದ ಚಟುವಟಿಕೆ ಆಗಬೇಕು ಎಂಬುದು ಸುಭಾಷಿತದ ನಿಲವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು