ಶನಿವಾರ, ಜನವರಿ 16, 2021
24 °C

ದಿನದ ಸೂಕ್ತಿ: ಧರ್ಮ ಮಾರ್ಗದ ಸಂಕಲ್ಪ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿಃ ಕ್ಷಮಾ ।

ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ।।

ಇದರ ತಾತ್ಪರ್ಯ ಹೀಗೆ:

‘ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ, ಲೋಭ ಇಲ್ಲದಿರುವುದು – ಇವು ಎಂಟು ಧರ್ಮದ ಮಾರ್ಗಗಳು ಎಂದು ಹೇಳಲಾಗಿದೆ.’

ಇಂದಿನಿಂದ ನಮ್ಮ ಕ್ಯಾಲೆಂಡರ್‌ ಬದಲಾಗಲಿದೆ; 2020 ಹೋಗಿ 2021 ಬಂದಿದೆ. ಹೊಸ ಕ್ಯಾಲೆಂಡರ್‌ ವರ್ಷ ಆರಂಭವಾಗುತ್ತಿರುವಂತೆಯೇ ನಾವೆಲ್ಲ ಏನೇನೋ ಸಂಕಲ್ಪಗಳನ್ನು ಕೈಗೊಳ್ಳುತ್ತೇವೆ. ಈ ವರ್ಷದಲ್ಲಿ ಹಾಗಿರಬೇಕು, ಹೀಗಿರಬೇಕು; ಅದನ್ನು ಮಾಡಬೇಕು, ಇದನ್ನು ಮಾಡಬೇಕು; ಅದನ್ನು ಬಿಡಬೇಕು, ಇದನ್ನು ಬಿಡಬೇಕು – ಹೀಗೆ ಏನೇನೋ ಸಂಕಲ್ಪಗಳನ್ನು ಮಾಡುವ ಉಮೇದು ಹೊಸ ವರ್ಷದ ಆರಂಭದಲ್ಲಿ ತುಂಬಿ ತುಳುಕುತ್ತಿರುತ್ತದೆ. ಆದರೆ ನಮ್ಮ ನಿಜವಾದ ಸಂಕಲ್ಪ ಹೇಗಿರಬೇಕು, ಹೇಗಿದ್ದರೆ ನಮ್ಮ ಜೀವನ ಸುಂದರವೂ ಸುಖಮಯವೂ ಸಾರ್ಥಕಮಯವೂ ಆಗಿರಬಲ್ಲದು – ಎಂಬುದನ್ನು ನಾವು ಆಲೋಚಿಸಿದ್ದೇವೆಯೆ?

ಹೊಸ ವರ್ಷಕ್ಕೆ ಮಾತ್ರವೇ ಸಲ್ಲುವ ಸಂಕಲ್ಪಗಳನ್ನಷ್ಟೆ ಅಲ್ಲ, ಇಡಿಯ ಜೀವನದುದ್ದಕ್ಕೂ ಬೇಕಾಗುವ, ಬೆಳಕಾಗುವ ಸಂಕಲ್ಪಗಳ ಬಗ್ಗೆ ಈ ಸುಭಾಷಿತ ಹೇಳುತ್ತಿದೆ.

ಧರ್ಮಮಾರ್ಗದಲ್ಲಿ ನಡೆಯಬೇಕೆಂಬುದೇ ನಮ್ಮ ಜೀವನದ ಮಹಾಸಂಕಲ್ಪವಾಗಬೇಕು.

ಧರ್ಮಮಾರ್ಗ ಎಂದರೇನು?

ಸುಭಾಷಿತ ಅದರ ವಿವರಗಳನ್ನು ನೀಡಿದೆ. ಧರ್ಮದ ಎಂಟು ದಿಕ್ಕುಗಳು ಅಥವಾ ದಾರಿಗಳು ಯಾವುವು ಎಂಬುದನ್ನು ಅದು ಹೇಳಿದೆ. ‘ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ, ಲೋಭ ಇಲ್ಲದಿರುವುದು’ – ಇವೇ ಧರ್ಮದ ಎಂಟು ಆಯಾಮಗಳು.

ಯಾಗ ಎಂದರೆ ಕರ್ತವ್ಯಪ್ರಜ್ಞೆ, ಕೃತಜ್ಞತೆ, ವಿತರಣಶೀಲತೆ; ಅಧ್ಯಯನ ಎಂದರೆ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವ ದಾರಿ; ದಾನ ಎಂದರೆ ಸಾಮಾಜಿಕ ಸಮತೋಲನ, ನಮ್ಮಲ್ಲಿರುವ ವಸ್ತುಗಳನ್ನು ಹಂಚಿ ಬದುಕುವ ವಿಧಾನ; ತಪಸ್ಸು ಎಂದರೆ ನಮ್ಮ ಶರೀರ ಮತ್ತು ಮನಸ್ಸುಗಳ ಶುದ್ಧೀಕರಣ ಪ್ರಕ್ರಿಯೆ; ಸತ್ಯ ಎಂಬುದು ನಮ್ಮ ಅಂತರಂಗದ ಶುದ್ಧತೆ ಮತ್ತು ಗಟ್ಟಿತನ; ಧೈರ್ಯ ಎನ್ನುವುದು ನಮ್ಮ ಭಾವ–ಬುದ್ಧಿಗಳ ಸ್ಥಿರತೆ; ಕ್ಷಮಾಗುಣ ಎಂಬುದು ಸೌಹಾರ್ದಕ್ಕೆ ಸಾಧನ, ಇತರರನ್ನೂ ತನ್ನಂತೆ ತಿಳಿಯುವ ಮಾನಸಿಕ ಸ್ಥಿತಿ; ಲೋಭ ಇಲ್ಲದಿರುವುದು ಎಂದರೆ ಇತರರಲ್ಲಿ ನಂಬಿಕೆ, ನಾಳೆಯ ಬಗ್ಗೆ ಭರವಸೆ.

ಧರ್ಮಮಾರ್ಗದ ಈ ಎಲ್ಲ ಗುಣಗಳು ನಮ್ಮೆಲ್ಲರ ಜೀವನವನ್ನು ಸಾರ್ಥಕಗೊಳಿಸುವಂಥವು. ಇವನ್ನು ರೂಢಿಸಿಕೊಳ್ಳುವ, ಅನ್ವಯಿಸಿಕೊಳ್ಳುವ ಸಂಕಲ್ಪವನ್ನು ಮಾಡೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.