ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ವಿಧಿಯ ಆಟ

Last Updated 13 ಜನವರಿ 2021, 0:39 IST
ಅಕ್ಷರ ಗಾತ್ರ

ಯದ್ಯದಾಲಿಖತಿ ಮನ ಆಶಾವರ್ತಿಕಾಭಿಃ ಹೃದಯಫಲಕೇ ।
ತತ್ತಾದ್ಬಾಲ ಇವ ವಿಧಿರ್ನಿಭೃತಂ ಹಸಿತ್ವಾ ಪ್ರೋಂಛತಿ ।।

ಇದರ ತಾತ್ಪರ್ಯ ಹೀಗೆ:

‘ಮನಸ್ಸು ಆಸೆ ಎಂಬ ಕುಂಚದಿಂದ ಹೃದಯಫಲಕದ ಮೇಲೆ ಏನೇನನ್ನು ಬರೆಯುತ್ತದೆಯೋ, ಅವೆಲ್ಲವನ್ನೂ ವಿಧಿಯು ಮಗುವಿನಂತೆ ನಗುತ್ತಾ ಅಳಸಿಹಾಕುತ್ತಾನೆ.’

ನಾವು ಅಂದುಕೊಂಡದ್ದೆಲ್ಲವೂ ಜೀವನದಲ್ಲಿ ನಡೆಯುವುದಿಲ್ಲ ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ. ಹೀಗೆ ಹೇಳುವಾಗ ಅದು ಬಳಸಿಕೊಂಡಿರುವ ಉದಾಹರಣೆಯೂ ಸೊಗಸಾಗಿದೆ.

ನಾವೆಲ್ಲರೂ ಪೇಟಿಂಗ್ ನೋಡಿದ್ದೇವೆ. ನಮ್ಮಲ್ಲಿ ಕೆಲವರು ಸ್ವತಃ ವರ್ಚಿಣತ್ರವನ್ನು ರಚಿಸಬಲ್ಲವರು ಇದ್ದಾರೆ. ಪೇಟಿಂಗನ್ನು ಹೇಗೆ ರಚಿಸುತ್ತಾರೆ?

ಮೊದಲಿಗೆ ಭಿತ್ತಿಯೊಂದು ಬೇಕಾಗುತ್ತದೆ. ಇದನ್ನೇ ಇಲ್ಲಿ ಸುಭಾಷಿತ ಫಲಕ ಎಂದಿರುವುದು. ಇದೇ ಕ್ಯಾನವಾಸ್‌.

ಕ್ಯಾನ್‌ವಾಸ್‌ ಮಾತ್ರ ಇದ್ದರಷ್ಟೆ ಸಾಲದು; ಅದರ ಮೇಲೆ ಚಿತ್ರವನ್ನು ರಚಿಸಲು ಕುಂಚ, ಎಂದರೆ ಬ್ರಶ್‌ ಕೂಡ ಬೇಕು.

ಕ್ಯಾನ್‌ವಾಸ್‌ ಮತ್ತು ಬ್ರಶ್‌ – ಇವೆರಡು ಇದ್ದಮಾತ್ರಕ್ಕೆ ಚಿತ್ರವೇನೂ ಸಿದ್ಧವಾಗದು. ಜೊತೆಗೆ ಬಣ್ಣಗಳು ಬೇಕು; ಅದಕ್ಕಿಂತಲೂ ಮುಖ್ಯವಾಗಿ ಏನನ್ನು ರಚಿಸಬೇಕೆಂಬ ಸಂಕಲ್ಪ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿರಬೇಕಾಗುತ್ತದೆ. ನಮ್ಮ ಮನಸ್ಸಿನಲ್ಲಿರುವ ಚಿತ್ರವನ್ನು ಅನಂತರ ನಾವು ಕ್ಯಾನ್‌ವಾಸ್‌ನ ಮೇಲೆ ಬಣ್ಣಗಳ ಉಪಯೋಗಿಸಿಕೊಂಡು, ಕುಂಚದಿಂದ ರಚಿಸುತ್ತೇವೆ.

ಸುಭಾಷಿತ ಚಿತ್ರರಚನೆಯ ಈ ಪ್ರಕ್ರಿಯೆಯನ್ನೇ ಉಪಯೋಗಿಸಿಕೊಂಡು ನಮ್ಮ ಜೀವನದ ಕ್ಷಣಿಕತೆಯನ್ನೂ ಆಸೆ–ನಿರಾಸೆಗಳ ಆಟವನ್ನೂ ಹೇಳುತ್ತಿದೆ.

ನಮ್ಮ ಹೃದಯವೇ ಜೀವನಕಲೆಯ ಚಿತ್ರವನ್ನು ಬರೆಯಲು ಒದಗಿರುವ ಕ್ಯಾನ್‌ವಾಸ್. ಮನಸ್ಸು ಎಂಬುದೇ ಚಿತ್ರವನ್ನು ರಚಿಸಲು ಉಪಯೋಗಿಸುವ ಬ್ರಶ್‌. ಆಸೆ, ಎಂದರೆ ಬಯಕೆಗಳೇ ಬಣ್ಣಗಳು.

ಜೀವನದಲ್ಲಿ ಏನೇನೋ ಬಯಕೆಗಳ ಬಣ್ಣಗಳನ್ನು ನಮ್ಮ ಮನಸ್ಸಿನಲ್ಲಿ ಅದ್ದಿಕೊಂಡು, ಅದನ್ನು ಹೃದಯದ ಮೇಲೆ ಚಿತ್ರಿಸುತ್ತಿರುತ್ತೇವೆ, ಕ್ಯಾನ್‌ವಾಸ್‌ ಮೇಲೆ ಚಿತ್ರವನ್ನು ರಚಿಸುವಂತೆ.

ನಾವು ಕ್ಯಾನ್‌ವಾಸ್‌ನ ಮೇಲೆ ತುಂಬ ಆಸೆಯಿಂದ, ಏಕಾಗ್ರವಾಗಿ ವರ್ಣಚಿತ್ರವನ್ನು ರಚಿಸುತ್ತಿರುತ್ತೇವೆ. ಆಗ ಅಲ್ಲಿಗೆ ಮಗುವೊಂದು ಬರುತ್ತದೆ. ಪಾಪ! ಅದಕ್ಕೇನು ಗೊತ್ತು, ನಾವು ಎಷ್ಟು ಹೊತ್ತಿನಿಂದ, ಎಷ್ಟೊಂದು ಎಚ್ಚರಿಕೆಯನ್ನು ವಹಿಸಿ, ನಮ್ಮ ಕೌಶಲವನ್ನೆಲ್ಲ ಸುರಿದು ಆ ಚಿತ್ರರಚನೆಯಲ್ಲಿ ತೊಡಗಿದ್ದೇವೆ ಎಂದು!! ನಗುನಗುತ್ತ ಬಂದು ಅದು ಕ್ಷಣಾರ್ಧದಲ್ಲಿ ಆ ಚಿತ್ರವನ್ನು ಅಳಸಿಹಾಕಿ ಸಂಭ್ರಮಿಸುತ್ತದೆ!!!

ನಮ್ಮ ಜೀವನದಲ್ಲಿಯೂ ಹೀಗೆಯೇ ಆಗುತ್ತಿರುತ್ತದೆ. ನಮ್ಮ ಏನೆಲ್ಲ ಆಸೆಗಳು ಕ್ಷಣಾರ್ಧದಲ್ಲಿ ಅಳಸಿಹೋಗುತ್ತಿರುತ್ತವೆ. ಅವನ್ನು ಅಳಿಸುವ ಮಗು ಯಾವುದು ಎಂದರೆ, ಅದುವೇ ವಿಧಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT