ಮಂಗಳವಾರ, ಸೆಪ್ಟೆಂಬರ್ 28, 2021
24 °C

ದಿನದ ಸೂಕ್ತಿ: ಮನುಷ್ಯ ಜೀವನದ ಕ್ಷಣಿಕತೆ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವ್ಯಾಘ್ರೀವ ತಿಷ್ಠತಿ ಜರಾ ಪರಿತರ್ಜಯಂತೀ
ರೋಗಾಶ್ಚ ಶತ್ರವ ಇವ ಪ್ರಹರಂತಿ ದೇಹಮ್ |
ಆಯುಃ ಪರಿಸ್ರವಂತಿ ಭಿನ್ನಘಟಾದಿವಾಂಭೋ
ಲೋಕಸ್ತಥಾऽಪ್ಯಹಿತಮಾಚರತೀತಿ ಚಿತ್ರಮ್ ।।

ಇದರ ತಾತ್ಪರ್ಯ ಹೀಗೆ:

‘ಹೆಣ್ಣುಹುಲಿಯಂತೆ ಪ್ರಾಣಿಗಳನ್ನು ಬೆದರಿಸುತ್ತ ಮುಪ್ಪು ಎದುರಿನಲ್ಲಿಯೇ ಇರುತ್ತದೆ; ಶತ್ರುಗಳಂತೆ ನಾನಾ ರೋಗಗಳು ಶರೀರವನ್ನು ಪೀಡಿಸುತ್ತಲೇ ಇರುತ್ತವೆ: ಒಡೆದಿರುವ ಗಡಿಗೆಯೊಳಗಿನ ನೀರು ಸೋರಿಹೋಗುವಂತೆ ಆಯುಸ್ಸು ಹರಿದುಹೋಗುತ್ತಲೇ ಇರುತ್ತದೆ. ಆದರೂ ಜನರು ತಮಗೆ ಅಹಿತವಾದ ಕೆಲಸಗಳಲ್ಲೇ ತಲ್ಲೀನರಾಗುತ್ತಿರುವುದು ಸೋಜಿಗವೇ ಸರಿ!’

ನಮ್ಮ ಜೀವನ ಎಷ್ಟು ಕ್ಷಣಿಕ ಎಂಬುದನ್ನು ಸುಭಾಷಿತ ಎಚ್ಚರಿಸುತ್ತಿದೆ.

ಮುಪ್ಪು, ರೋಗ ಮತ್ತು ಆಯುಸ್ಸು – ಇವು ನಮ್ಮ ದೇಹದ ಮಿತಿಯನ್ನು ಸೂಚಿಸುವ ವಿವರಗಳು. ಅವು ಹೇಗೆ ನಮ್ಮ ಜೀವನವನ್ನು ಕಬಳಿಸುತ್ತಿದೆ ಎಂದು ವಿವರಿಸುತ್ತಲೇ ಸುಭಾಷಿತ ಜೀವನದ ಸಾರ್ಥಕತೆಯ ಬಗ್ಗೆಯೂ ಹೇಳುತ್ತಿದೆ. ‘ಹೆಣ್ಣುಹುಲಿಯಂತೆ ಪ್ರಾಣಿಗಳನ್ನು ಬೆದರಿಸುತ್ತ ಮುಪ್ಪು ಎದುರಿನಲ್ಲಿಯೇ ಇರುತ್ತದೆ; ಶತ್ರುಗಳಂತೆ ನಾನಾ ರೋಗಗಳು ಶರೀರವನ್ನು ಪೀಡಿಸುತ್ತಲೇ ಇರುತ್ತವೆ: ಒಡೆದಿರುವ ಗಡಿಗೆಯೊಳಗಿನ ನೀರು ಸೋರಿಹೋಗುವಂತೆ ಆಯುಸ್ಸು ಹರಿದುಹೋಗುತ್ತಲೇ ಇರುತ್ತದೆ’. 

ನಮ್ಮ ಕಣ್ಣಮುಂದಿರುವ ಹುಲಿಯ ಭಯದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ಹೀಗೆಯೇ ಮುಪ್ಪಿನ ಭಯ ಸದಾ ನಮ್ಮನ್ನು ಕಾಡುತ್ತಲೇ ಇರುತ್ತದೆ; ಇದು ಯಾವಾಗ ಮೃತ್ಯುವಿಗೆ ಆಹುತಿಯನ್ನು ಕೊಡುತ್ತದೆಯೋ ಎಂಬ ಆತಂಕ ನಮ್ಮದಾಗಿರುತ್ತದೆ.

ಶತ್ರುಗಳು ನಮ್ಮ ಮೇಲೆ ಯಾವಾಗ ಆಕ್ರಮಣ ಮಾಡುತ್ತಾರೋ ನಮಗೆ ತಿಳಿಯವುದಿಲ್ಲ. ಹೀಗೆಯೇ ರೋಗಗಳು ನಮ್ಮ ವಿರುದ್ಧ ಸಂಚನ್ನು ಮಾಡುತ್ತಲೇ ಇರುತ್ತವೆ.

ಒಡೆದುಹೋಗಿರುವ ಗಡಿಗೆಯಿಂದ ನೀರು ಸತತವಾಗಿ ಹರಿದುಹೋಗುತ್ತಲೇ ಇರುತ್ತದೆ. ಹೀಗೆಯೇ ನಮ್ಮ ಆಯುಸ್ಸು ಕೂಡ ಪ್ರತಿ ಕ್ಷಣವೂ ಕ್ಷಯವಾಗುತ್ತಲೇ ಇರುತ್ತದೆ.

ಇಷ್ಟೆಲ್ಲ ವಿಧದಲ್ಲಿ ನಾವು ಸಾವಿಗೆ ಹತ್ತಿರವಾಗುತ್ತಿದ್ದರೂ ನಮ್ಮ ಮನೋಧರ್ಮದಲ್ಲಿ ಬದಲಾವಣೆ ಆಗದು; ನಾವು ಚಿರಂಜೀವಿಗಳು ಎಂಬಂತೆ ನಡೆದುಕೊಳ್ಳುತ್ತಿರುತ್ತೇವೆ. ಅದನ್ನೇ ಸುಭಾಷಿತ ಎಚ್ಚರಿಸುತ್ತಿರುವುದು. ಎಂದೋ ಒಂದು ದಿನ ನಾಶವಾಗಲೇಬೇಕಾದ ಶರೀರದ ಪೋಷಣೆಗೆ ನಾವು ಎಷ್ಡೆಲ್ಲ ಅನಾಚಾರಗಳನ್ನು ಮಾಡುತ್ತಲೇ ಇರುತ್ತೇವೆ, ಅಲ್ಲವೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.