ಶನಿವಾರ, ಸೆಪ್ಟೆಂಬರ್ 18, 2021
28 °C

ದಿನದ ಸೂಕ್ತಿ | ಸಜ್ಜನ ಯಾರು?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವ್ಯಸನೇsನುದ್ವಿಗ್ನಾ ವಿಭವೇsಗರ್ವಿತಾ ಭಯೇ ಧೀರಾಃ ।

ಭವಂತ್ಯಭಿನ್ನಸ್ವಭಾವಾಃ ಸಮೇಷು ವಿಷಮೇಷು ಸತ್ಪುರುಷಾಃ ।।

ಇದರ ತಾತ್ಪರ್ಯ ಹೀಗೆ:

‘ಸಂಕಟದಲ್ಲಿ ಬೇಸರಪಡುವುದಿಲ್ಲ; ಹಣವಿದ್ದರೆ ಗರ್ವಪಡುವುದಿಲ್ಲ; ಭಯದಲ್ಲಿ ಧೈರ್ಯ – ಹೀಗೆ ಕಷ್ಟಸುಖಗಳಲ್ಲಿ ಸಜ್ಜನರು ಒಂದೇ ಸ್ವಭಾವದಿಂದಿರುತ್ತಾರೆ'.

ನಾವು ಗಟ್ಟಿಯಾಗಿದ್ದೇವೆ, ದೃಢವಾಗಿದ್ದೇವೆ, ನಿಶ್ಚಯವಾಗಿದ್ದೇವೆ – ಎಂದು ಯಾವಾಗ ತಿಳಿಯುತ್ತದೆ? ಬಿರುಗಾಳಿ ಬಂದಾಗಲೇ ಅಲ್ಲವೆ? ಅದನ್ನೇ ಸುಭಾಷಿತ ಹೇಳುತ್ತಿರುವುದು.

ಈಗ ಯಾರನ್ನಾದರೂ 'ಏನಯ್ಯಾ! ಹೇಗಿದ್ದೀಯಾ?' ಎಂದು ಕೇಳುತ್ತೇವೆ. ಅವರು 'ಅಯ್ಯೋ! ಈ ದುರಿತಕಾಲದಲ್ಲಿ ಹೇಗಿರುವುದು, ಭಯದಿಂದ ಬದುಕುತ್ತಿದ್ದೇನೆ' ಎನ್ನುವುದು ಸಹಜವಷ್ಟೆ! ಆದರೆ ಸುಭಾಷಿತ ಈ ಧೋರಣೆಯನ್ನು ಒಪ್ಪುವುದಿಲ್ಲ. 'ಅಲ್ಲಯ್ಯಾ! ಸುಖ ಇರುವಾಗ ಸಂತೋಷದಲ್ಲಿರುವುದು ಏನು ವಿಶೇಷ; ಸಂಕಟ ಬಂದಾಗಲೂ ಮನಸ್ಸನ್ನು ಧೈರ್ಯವಾಗಿ, ಸ್ವಾಸ್ಥ್ಯದಿಂದ ಕಾಪಾಡಿಕೊಳ್ಳುವುದೇ ದಿಟವಾದ ವ್ಯಕ್ತಿತ್ವದ ಲಕ್ಷಣ' ಎನ್ನುತ್ತಿದೆ ಅದು.

ಯಾವ ಯಾವ ಸಂದರ್ಭದಲ್ಲಿ ನಾವು ಯಾವ ಯಾವ ರೀತಿಯ ವಿಷಮ ಪರಿಸ್ಥಿತಿಗಳನ್ನು ಎದುರಿಸುತ್ತೇವೆ – ಎನ್ನುವುದನ್ನು ಸುಭಾಷಿತ ಹೇಳುತ್ತಿದೆ.

ಸಂಕಟ ಎದುರಾದಾಗ ಬೇಸರ ಮೂಡುತ್ತದೆ; ಹಣ ಸೇರಿದಾಗ ಗರ್ವ ಹೆಗಲೇರುತ್ತದೆ; ಭಯ ಎನ್ನುವುದೇ ಧೈರ್ಯದ ಅಭಾವ.

ಆದರೆ ಇಂಥ ಪರಿಸ್ಥಿತಿಗಳಲ್ಲಿ ಸಜ್ಜನ, ಎಂದರೆ ಸುಸಂಸ್ಕೃತನು ಹೇಗಿರುತ್ತಾನೆ? ಸುಭಾಷಿತ ಹೇಳುತ್ತಿದೆ:

ಸಂಕಟದಲ್ಲಿ ಅವನು ಬೇಸರ ಪಡುವುದಿಲ್ಲ. ಕಷ್ಟ ಬಂದಾಗ ಮನಸ್ಸು ಕಳವಳಕ್ಕೆ ತುತ್ತಾಗುತ್ತದೆ; ಆಗ ಬೇಸರವೂ ಮೂಡುತ್ತದೆ. ಆದರೆ ಸಜ್ಜನ ಹಾಗೆ ವಿಷಾದಕ್ಕೆ ತುತ್ತಾಗಲಾರ; ವಿಚಾರವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ. 

ಹಣ ಸೇರುತ್ತಿದ್ದಂತೆ ಅಲ್ಪನಲ್ಲಿ ಗರ್ವವೂ ಸಂಗ್ರಹವಾಗುತ್ತಿರುತ್ತದೆ. ಆದರೆ ಸಜ್ಜನನಲ್ಲಿ ಐಶ್ವರ್ಯದ ಜೊತೆಗೆ ಸಂಯಮವೂ ಹೆಚ್ಚಾಗುತ್ತದೆಯೇ ಹೊರತು ಅವನಲ್ಲಿ ಬುದ್ಧಿನಾಶ ಆಗದು.

ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ಭಯ, ಆತಂಕಗಳು ಎದುರಾಗುತ್ತಲೇ ಇರುತ್ತವೆ. ಸದ್ಯದ ಪರಿಸ್ಥಿತಿಯನ್ನೇ ನೋಡಿ – ಕೊರೊನಾ ಹುಟ್ಟಿಸಿರುವ ಆತಂಕವೇನು ಕಡಿಮೆ ಸ್ವರೂಪದ್ದೇ? ಆದರೆ ಸಜ್ಜನ ಎಂಥ ಸಂದರ್ಭದಲ್ಲೂ ಧೃತಿಗೆಡುವುದಿಲ್ಲ; ಸಂದರ್ಭವನ್ನು ವಿವೇಕದಿಂದ ನಿರ್ವಹಿಸುತ್ತಾನೆ.

ಎಂಥ ಸಂದರ್ಭದಲ್ಲೂ ಸಜ್ಜನರು ಸಮಭಾವದಲ್ಲಿ, ಸಮತೋಲನದಲ್ಲಿ, ಸ್ವಸ್ಥಸ್ಥಿತಿಯಲ್ಲಿ ಇರುತ್ತಾರೆ, ಎನ್ನುವುದು ಸುಭಾಷಿತದ ಗಟ್ಟಿಯಾದ ನಂಬಿಕೆ.

ಇಲ್ಲಿ ಶಿವನ ಕಲ್ಪನೆ ಕಣ್ಣಿನ ಮುಂದೆ ಬರುತ್ತದೆ. ಅವನು ಎಲ್ಲರೂ ಹೆದರುವಂಥ ಹಾವನ್ನು ಧರಿಸಿದ್ದಾನೆ; ಆದರೆ ಅವನಿಗೆ ಭಯವಿಲ್ಲ. ಎಲ್ಲರೂ ಇಷ್ಟಪಡುವಂಥ ಚಂದ್ರನನ್ನು ತಲೆಯ ಮೇಲೆ ಧರಿಸಿಕೊಂಡಿದ್ದಾನೆ; ಆದರೆ ಅದರಿಂದ ಅವನಿಗೆ ಗರ್ವವೇನಿಲ್ಲ. ಅವನು ರುಂಡಮಾಲೆಯನ್ನು ಧರಿಸಿದ್ದಾನೆ; ಹಾಗೆಂದು ಅವನಿಗೆ ಮೈಲಿಗೆಯಿಲ್ಲ. ಜಟೆಯಲ್ಲಿ ಗಂಗೆಯಿದ್ದಾಳೆ; ಆದರೆ ಪಾವಿತ್ರ್ಯದ ಭಾರ ಅವನಿಗಿಲ್ಲ. ಮೈಗೆಲ್ಲ ಬೂದಿಯನ್ನು ಲೇಪಿಸಿಕೊಂಡಿದ್ದಾನೆ; ಆದರೆ ಜುಗುಪ್ಸೆಯಿಲ್ಲ. ಪಾರ್ವತಿಯನ್ನು ಶರೀರದಲ್ಲಿಯೇ ಹೊಂದಿದ್ದಾನೆ; ಅದರಿಂದ ಮೈ ಪುಳಕವೇನೂ ಇರದು. ಹಿತವನ್ನೂ ಅಹಿತವನ್ನೂ ಹೀಗೆ ಸಮಾನವಾಗಿ ಕಾಣಬಲ್ಲವನು ಶಿವ.

ಸುಭಾಷಿತ ಹೇಳುತ್ತಿರುವುದು ಇಂಥ ಸ್ಥಿತಿಯನ್ನೇ ಸಜ್ಜನನೂ ಸಾಧಿಸಿರುತ್ತಾನೆ ಎಂದು.

ಈ ಪದ್ಯ ಹಾಲನ ಗಾಥಾಸಪ್ತಶತಿಪದ್ಯದ ಸಂಸ್ಕೃತರೂಪ.

ಪಾಡ್‌ಕಾಸ್ಟ್ ಕೇಳಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು