ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕೇಳುವ ಮೊದಲು ನೀಡು

Last Updated 12 ಜೂನ್ 2020, 6:45 IST
ಅಕ್ಷರ ಗಾತ್ರ

ಉಪಕರ್ತುಮಪ್ರಕಾಶಂ ಕ್ಷಂತುಂ ನ್ಯೂನೇಷ್ವಯಾಚಿತಂ ದಾತುಮ್‌ ।

ಅಭಿಸಂಧಾತುಂ ಚ ಗುಣೈಃ ಶತೇಷು ಕೇಚಿದ್ವಿಜಾನಂತಿ ।।

ಇದರ ತಾತ್ಪರ್ಯ ಹೀಗೆ:

‘ಯಾರಿಗೂ ತಿಳಿಯದಂತೆ ಉಪಕಾರ ಮಾಡುವುದು; ಕ್ಷಮಾಗುಣ; ಕೇಳುವುದಕ್ಕೆ ಮುಂಚೆಯೇ ಬಡವರಿಗೆ ದಾನ ಮಾಡುವುದು; ಒಳ್ಳೆಯ ಗುಣಗಳನ್ನೇ ಯೋಚಿಸುವುದು – ಈ ಗುಣಗಳು ನೂರಕ್ಕೆ ಒಬ್ಬರಿಗೆ ತಿಳಿದಿದ್ದರೆ ಹೆಚ್ಚು.’

ನಾವಿಂದು ಇರುವುದು ಪ್ರಚಾರದ ಜಗತ್ತಿನಲ್ಲಿ; ಎಲ್ಲವೂ ನಮಗೆ ಪ್ರಚಾರದ ವಸ್ತುಗಳೇ. ಹೆತ್ತವರಿಗೆ ಮಾಡುವ ಸೇವೆ, ಗಂಡ–ಹೆಂಡತಿಯರ ಪ್ರೇಮ, ದೇಶಸೇವೆ, ಬಡವರಿಗೆ ಮಾಡುವ ಸಹಾಯ – ಹೀಗೆ ಪ್ರತಿಯೊಂದು ಕೂಡ ಪ್ರಚಾರಕ್ಕೆ ವಿಷಯಗಳೇ. ಈ ಕಾಲಕ್ಕಾಗಿಯೇ ರಚಿಸಿದಂತಿದೆ ಈ ಸುಭಾಷಿತ.

ಮೊದಲ ಲಾಕ್‌ಡೌನ್‌ ಘೋಷಣೆಯಾದಾಗ ಹಲವರಿಗೆ ಜೀವನ ನಡೆಸುವುದೇ ಕಷ್ಟವಾಯಿತು. ಆಕಸ್ಮಿಕವಾಗಿ ಎರುಗಿದ ಸಂಕಷ್ಟದಿಂದ ಕಂಗಾಲಾದರು; ಅಂದಿನ ಊಟವನ್ನು ಅಂದೇ ಸಂಪಾದಿಸಿಕೊಳ್ಳುವಂಥ ಹಲವರು ಅನ್ನಕ್ಕಾಗಿ ಪರದಾಡುವಂಥ ಪರಿಸ್ಥಿತಿ ಎದುರಾಯಿತು. ಹಲವರು ಇಂಥವರ ಸಹಾಯಕ್ಕೆ ಧಾವಿಸಿದರು. ಕೆಲವರು ಪ್ರಾಮಾಣಿಕವಾಗಿ ಸಹಾಯಮಾಡಿದರೆ, ಇನ್ನು ಕೆಲವರು ಪ್ರಚಾರಕ್ಕಾಗಿಯೇ ’ಸಹಾಯಹಸ್ತ‘ವನ್ನು ಚಾಚಿದರು; ಹಿಡಿ ಅಕ್ಕಿಯನ್ನು ಕೊಟ್ಟು, ಆ ಸುದ್ದಿಯನ್ನು ಊರಿನ ತುಂಬ ಪ್ರಚಾರಮಾಡಿದರು. ಇಂಥವರ ಬಗ್ಗೆ ಸುಭಾಷಿತ ಎಚ್ಚರಿಸುತ್ತಿದೆ.

ಜನರಿಗೆ ಉಪಕಾರ ಮಾಡುವುದು ಒಳ್ಳೆಯದು. ಇತರರಿಗೆ ಉಪಕಾರ ಮಾಡಬೇಕು ಎಂಬ ಬುದ್ಧಿಯೂ ನಮ್ಮಲ್ಲಿ ಹಲವರಿಗೆ ಇರುತ್ತದೆ. ಆದರೆ ಈ ಗುಣದ ಜೊತೆ ಕೆಲವರಲ್ಲಿ ಅವಗುಣವೊಂದು ಸೇರಿಕೊಂಡಿರುತ್ತದೆ; ಅದೇ ಪ್ರಚಾರ, ಪ್ರಚಾರ. ’ನಾವು ಮಾಡಿದ ಸಹಾಯ ನೂರು ಜನಕ್ಕೆ ಗೊತ್ತಾಗಬೇಕು‘ ಎಂಬ ಲೆಕ್ಕಾಚಾರದಲ್ಲಿಯೇ ಇವರ ಸಹಾಯಬುದ್ಧಿ ಕೆಲಸಮಾಡುತ್ತಿರುತ್ತದೆ. ಉಪಕಾರ ಮಾಡುವುದು ದೊಡ್ಡದಲ್ಲ; ಅದು ಯಾರಿಗೂ ಗೊತ್ತಾಗದಂತೆ ಮಾಡುವುದೇ ದೊಡ್ಡದು – ಎನ್ನುವುದು ಸುಭಾಷಿತದ ನಿಲವು. ನಮ್ಮಲ್ಲಿ ಒಂದು ಮಾತಿದೆ: ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು. ರಾಜಕಾರಣಿಗಳು, ರಾಜಕಾರಣಿಗಳಾಗಲು ಹೊರಟವರು, ಇಂಥವರು, ತಾವು ಮಾಡುವ ಸಣ್ಣ ಸಣ್ಣ ಸಹಾಯಕ್ಕೂ ಪ್ರಚಾರವನ್ನು ಬಯಸುತ್ತಲೇ ಇರುತ್ತಾರೆ. ಇವರಿಗೆ ಸಹಾಯ ಎನ್ನುವುದು ಕೂಡ ವ್ಯಾಪಾರದಲ್ಲಿ ಹಾಕಿದ ಬಂಡವಾಳದಂತೆ; ಹತ್ತು ರೂಪಾಯಿಗಳನ್ನು ಹಾಕಿ, ಸಾವಿರ ರೂಪಾಯಿಗಳ ಲಾಭವನ್ನು ಸಂಪಾದಿಸಬೇಕು. ಇದು ಅವರ ಎಣಿಕೆ. ಆದರೆ ದಿಟವಾದ ಸಹಾಯದಲ್ಲಿ ವ್ಯಾಪಾರದ ಲೆಕ್ಕಾಚಾರ ಇರಲಾರದು; ಇರಬಾರದು ಕೂಡ.

ನಮ್ಮ ಜೊತೆಗೆ ಸರಿಯಾಗಿ ನಡೆದುಕೊಳ್ಳುವವರೊಂದಿಗೆ ನಮ್ಮ ಒಡನಾಟವೂ ಚೆನ್ನಾಗಿಯೇ ಇರುತ್ತದೆ. ಆದರೆ ಅವರೇನಾದರೂ ಒಮ್ಮೆ ತಪ್ಪಿ ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದಿದ್ದರೆನಮಗೆ ಕೋಪ ಬರುತ್ತದೆ; ಅವರನ್ನು ಟೀಕಿಸುವುದಕ್ಕೆ ಮುಂದಾಗುತ್ತೇವೆ; ಸ್ನೇಹವನ್ನು ಕಳೆದುಕೊಳ್ಳಲೂ ಸಿದ್ಧವಾಗುತ್ತೇವೆ. ಆದರೆ ದಿಟವಾದ ಸ್ನೇಹದ ಲಕ್ಷಣವೆಂದರೆ ಕ್ಷಮಾಗುಣ. ಇತರರ ತಪ್ಪನ್ನು ಕ್ಷಮಿಸುವುದರಲ್ಲಿ ನಮ್ಮ ಹಿತವೂ ಅಡಗಿದೆಯೆನ್ನಿ!

ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವ ಗುಣ ಇರುವ ಹಲವರಲ್ಲಿ ಇರುವಂಥ ಒಂದು ದೋಷ ಎಂದರೆ: ’ಅವರು ಕೇಳಲಿ; ಆಮೇಲೆ ಕೋಡೋಣವಂತೆ!‘ ಸುಭಾಷಿತ ಇದನ್ನು ದುರ್ಗುಣಗಳ ಪಟ್ಟಿಗೆ ಸೇರಿಸಿದೆ. ನಮಗೆ ಕೊಡುವ ಮನಸ್ಸು ನಿಜವಾಗಿಯೂ ಇದ್ದರೆ, ನಾವು ಯಾರಿಗೆ ದಾನ ಮಾಡಬೇಕೆಂದಿದ್ದೇವೆಯೋ ಅವರು ನಿಜಕ್ಕೂ ಅದಕ್ಕೆ ಅರ್ಹರಾಗಿದ್ದರೆ, ನಮಗೆ ದಾನ ನೀಡುವ ಶಕ್ತಿಯೂ ಇದ್ದರೆ, ಅವರು ಕೇಳುವ ಮೊದಲೇ ದಾನ ಮಾಡುವುದೇ ಸಂಸ್ಕೃತನ ಲಕ್ಷಣ. ಬಡತನ ಎಂಥವರನ್ನೂ ಕುಗ್ಗಿಸಿರುತ್ತದೆ; ಅದರ ಜೊತೆಗೆ ನಾವು ಅವರನ್ನು ದೈನ್ಯಕ್ಕೂ ತುತ್ತಾಗಿಸಬಾರದು. ಶ್ರದ್ಧೆಯಿಂದ ದಾನ ಮಾಡತಕ್ಕದ್ದು ಎನ್ನುತ್ತದೆ, ಉಪನಿಷತ್‌. ಮಾತ್ರವಲ್ಲ, ಕೊಡುವವನು ನಾಚಿಕೆಯಿಂದ ಕೊಡಬೇಕಂತೆ! ಆದರೆ ನಾವು ಕೊಡುವ ಧೋರಣೆ ಹೇಗಿರುತ್ತದೆ ಎಂದರೆ, ನಮ್ಮಿಂದ ದಾನವನ್ನು ಪಡೆದುಕೊಳ್ಳುವವನು ಅಪಮಾನದಿಂದಲೂ ದೈನ್ಯದಿಂದಲೂ ನಾಚಿಕೆಯಿಂದಲೂ ಮೈ–ಮನಸ್ಸುಗಳನ್ನು ಹಿಡಿಗಾತ್ರಕ್ಕೆ ಕುಗ್ಗಿಸಿಕೊಂಡಿರಬೇಕಾಗುತ್ತದೆ. ಇಂಥ ನಿರೀಕ್ಷೆ ಸಲ್ಲದ ಮನೋಧರ್ಮ.

ಮನಸ್ಸಿನ ಗುಣವೇ ಯೋಚನೆ; ಸದಾ ಅದು ಯಾವುದೋ ಒಂದು ಯೋಚನೆಯಲ್ಲಿ ಮುಳುಗಿರುತ್ತದೆ. ಹೀಗೆ ಯೋಚನಾಲಹರಿಯಲ್ಲಿರುವ ಮನಸ್ಸನ್ನು ಒಳ್ಳೆಯದರ ಕಡೆಗೆ ತಿರುಗಿಸುವುದು ಸುಲಭವಲ್ಲ. ನಾವು ಮೇಲೆ ಕಾಣಿಸಿದ ದುರ್ಗುಣಗಳಿಗೆಲ್ಲ ಕಾರಣ ಮನಸ್ಸಿನ ಆಲೋಚನಗಳೇ ಅಲ್ಲವೆ? ಸದ್ಗುಣಗಳ ಅನುಷ್ಠಾನ ಕಷ್ಟ; ಅವುಗಳನ್ನು ರೂಢಿಸಿಕೊಳ್ಳಲು ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಆದರೆ ದುರ್ಗುಣಗಳ ವಿಷಯದಲ್ಲಿ ಹಾಗಲ್ಲ; ಎಚ್ಚರವನ್ನು ತಪ್ಪಿದ ಸ್ಥಿತಿಯೇ ದುರ್ಗಣಗಳ ಹುಟ್ಟಿಗೆ ಕಾರಣವಷ್ಟೆ! ಹೀಗಾಗಿ ಮನಸ್ಸು ಸುಲಭವಾದುದನ್ನೇ ಅಪ್ಪಿಕೊಳ್ಳುತ್ತದೆ. ನಿಯಮಗಳನ್ನು ಪಾಲಿಸಿ ವಾಹನಗಳನ್ನು ನಡೆಸುವುದಕ್ಕೆ ಎಚ್ಚರ ಬೇಕು; ಇತರರ ಬಗ್ಗೆ ಅನುಕಂಪವೂ ಬೇಕು. ಆದರೆ ರಸ್ತೆಯ ನಿಯಮಗಳನ್ನು ಮುರಿಯವುದರಲ್ಲಿ ನಮ್ಮ ಅಹಂಕಾರದ ಜೊತೆ ಮನಸ್ಸಿನ ವಿಕೃತಿಯೂ ಸೇರಿಕೊಂಡಿರುತ್ತದೆ. ಹೀಗಾಗಿ ಸದಾಚಾರದಲ್ಲಿ ಮನಸ್ಸನ್ನು ಸಂಲಗ್ನಗೊಳಿಸುವುದು ತಪಸ್ಸೇ ಹೌದು. ತಪಸ್ಸು ಕಠಿಣವಾಗಿರುತ್ತದೆ, ದಿಟ; ಆದರೆ ಅದರಿಂದ ಸಿಗುವ ಫಲವೂ ಮಹತ್ತಾಗಿರುತ್ತದೆ ಎನ್ನುವುದನ್ನೂ ಮರೆಯಬಾರದೆನ್ನಿ!

ಯಾರಿಗೂ ತಿಳಿಯದಂತೆ ಉಪಕಾರ ಮಾಡುವುದು; ಕ್ಷಮಾಗುಣ; ಕೇಳುವುದಕ್ಕೆ ಮುಂಚೆಯೇ ಬಡವರಿಗೆ ದಾನ ಮಾಡುವುದು; ಒಳ್ಳೆಯ ಗುಣಗಳನ್ನೇ ಯೋಚಿಸುವುದು – ಇವುಗಳ ಸ್ವಾರಸ್ಯವನ್ನು ತಿಳಿದಿರುವವರ ಸಂಖ್ಯೆಯೂ ಕಡಿಮೆಯೇ ಎನ್ನುತ್ತಿದೆ ಸುಭಾಷಿತ. ಎಂದರೆ ತಿಳಿದರುವವರ ಸಂಖ್ಯೆಯೇ ನೂರರಲ್ಲಿ ಒಬ್ಬರು ಎನ್ನುವಂಥ ಸ್ಥಿತಿಯಿರುವಾಗ, ಇನ್ನು ಅದನ್ನು ಆಚರಣೆಯಲ್ಲಿಟ್ಟುಕೊಂಡಿರುವವರ ಸಂಖ್ಯೆ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT