ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ತೃಪ್ತಿ ಬೇಕು-ಬೇಡ

Last Updated 1 ಫೆಬ್ರುವರಿ 2021, 1:35 IST
ಅಕ್ಷರ ಗಾತ್ರ

ಸಂತೋಷಸ್ತ್ರಿಷು ಕರ್ತವ್ಯೋ ಕಲತ್ರೇ ಭೋಜನೇ ಧನೇ ।

ತ್ರಿಷು ಚೈವ ನ ಕರ್ತವ್ಯೋsಧ್ಯಯನೇ ಜಪದಾನಯೋಃ ।।

ಇದರ ತಾತ್ಪರ್ಯ ಹೀಗೆ:

‘ಹೆಂಡತಿ, ಭೋಜನ ಮತ್ತು ಹಣ – ಈ ಮೂರು ವಿಷಯಗಳಲ್ಲಿ ಮನುಷ್ಯನಿಗೆ ತೃಪ್ತಿ ಇರಬೇಕು. ಆದರೆ ಜ್ಞಾನಾರ್ಜನೆ, ಜಪ ಮತ್ತು ದಾನ – ಈ ಮೂರರಲ್ಲಿ ಇಷ್ಟು ಸಾಕು ಎಂಬ ತೃಪ್ತಿ ಇರಬಾರದು.’

ನಮಗೆ ಜೀವನದಲ್ಲಿ ಕೆಲವೊಂದು ವಿಷಯಗಳಲ್ಲಿ ತೃಪ್ತಿ ಇರಬೇಕು, ಕೆಲವೊಂದರಲ್ಲಿ ತೃಪ್ತಿ ಇರಬಾರದು. ಹೀಗೆ ಯಾವುದರಲ್ಲಿ ತೃಪ್ತಿ ಇರಬೇಕು, ಯಾವುದರಲ್ಲಿ ಇರಬಾರದು – ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಮೊದಲನೆಯದಾಗಿ ಹೆಂಡತಿಯಲ್ಲಿ ತೃಪ್ತಿ ಇರಬೇಕು ಎನ್ನುತ್ತಿದೆ. ಇದರ ತಾತ್ಪರ್ಯ: ದಾಂಪತ್ಯದಲ್ಲಿ ನಂಬಿಕೆ ಇರಬೇಕು ಎಂದೂ ಆಗುವುದು, ಲಂಪಟತನ ಸಲ್ಲದು ಎಂದೂ ಆಗುವುದು. ವೈವಾಹಿಕ ಜೀವನವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂಬುದು ಇದರ ಧ್ವನಿ.

ನಾಲಗೆಯ ರುಚಿಗೆ ಸೋತುಹೋಗಿ ಯದ್ವಾ ತದ್ವಾ ಆಹಾರವನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳಬಾರದು ಎನ್ನುವುದನ್ನು ಸುಭಾಷಿತವು ಭೋಜನದಲ್ಲಿ ತೃಪ್ತಿ ಇರಬೇಕು ಎಂಬ ಮಾತಿನ ಮೂಲಕ ಹೇಳುತ್ತಿದೆ.

ಹಣವನ್ನು ಎಷ್ಟು ಸಂಪಾದಿಸಿದರೂ ತೃಪ್ತಿಯೇ ಇರುವುದಿಲ್ಲ. ಹೀಗೆ ಜೀವನಪೂರ್ತಿ ನಾವು ಧನವನ್ನು ಸಂಪಾದಿಸುವುದರಲ್ಲಿಯೇ ಮುಳುಗಿದರೆ ಇನ್ನು ಜೀವನವನ್ನು ಸಂತೋಷದಿಂದ ಅನುಭವಿಸುವುದಾದರೂ ಯಾವಾಗ? ಹೀಗಾಗಿ ದುಡ್ಡಿನ ವಿಷಯದಲ್ಲಿ ತೃಪ್ತಿ ಇರಬೇಕು.

ಇನ್ನು ಮೂರು ವಿಷಯಗಳಲ್ಲಿ ಇನ್ನು ಸಾಕು ಎಂಬ ತೃಪ್ತಿ ಇರಬಾರದು ಎಂದಿದೆ ಸುಭಾಷಿತ.

ಜ್ಞಾನ ಎನ್ನುವುದು ಸಾಗರದಂತೆ, ಆಕಾಶದಂತೆ; ಅದನ್ನು ಎಷ್ಟು ಸಂಪಾದಿಸಿದರೂ ಸಾಲದು. ಹೀಗಾಗಿ ವಿದ್ಯೆಯನ್ನು ಕಲಿಯುವುದು ಇನ್ನು ಸಾಕು ಎಂಬ ಭಾವನೆ ನಮಗೆ ಬರಬಾರದು; ಜೀವನದುದ್ದಕ್ಕೂ ಜ್ಞಾನಾರ್ಜನೆಯನ್ನು ಮಾಡುತ್ತಲೇ ಇರಬೇಕು.

ಜಪವನ್ನು ಎಷ್ಟೆಷ್ಟು ಮಾಡಿದರೆ ಅಷ್ಟಷ್ಟು ಪುಣ್ಯ ಎನ್ನುತ್ತವೆ ಶಾಸ್ತ್ರಗಳು; ಮಾತ್ರವಲ್ಲ, ಜಪದಿಂದ ಏಕಾಗ್ರತೆಯೂ ಹೆಚ್ಚುತ್ತದೆ. ಹೀಗಾಗಿ ಇಷ್ಟು ಸಾಕು ಎಂಬ ತೃಪ್ತಿ ಜಪದ ವಿಷಯದಲ್ಲಿರಬಾರದು.

ದಾನದ ವಿಷಯದಲ್ಲೂ ತೃಪ್ತಿ ಎಂಬುದು ಇರಬಾರದು. ಸಂಪಾದಿಸಬೇಕು, ಸಂಪಾದಿಸಿರುವುದನ್ನು ದಾನ ಮಾಡಬೇಕು. ಇದು ನಮ್ಮ ಜೀವನವಿಧಾನ ಆಗಬೇಕು ಎಂಬುದು ಸುಭಾಷಿತದ ಇಂಗಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT