ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸಾಮರ್ಥ್ಯವೇ ಮಾನದಂಡವಾಗಲಿ

Last Updated 9 ಅಕ್ಟೋಬರ್ 2020, 2:06 IST
ಅಕ್ಷರ ಗಾತ್ರ

ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೇಃ ।

ವಿಕ್ರಮಾರ್ಜಿತಸತ್ತ್ವಸ್ಯ ಸ್ವಯಮೇವ ಮೃಗೇಂದ್ರತಾ ।।

ಇದರ ತಾತ್ಪರ್ಯ ಹೀಗೆ:

‘ಕಾಡಿನಲ್ಲಿ ಸಿಂಹಕ್ಕೆ ಯಾರೂ ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ; ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸತ್ತ್ವದಿಂದ ತಾನೇ ತಾನಾಗಿ ಮೃಗರಾಜ ಎಂಬ ಪದವಿ ದಕ್ಕುತ್ತದೆ.’

ಇಂದಿನ ಸನ್ನಿವೇಶಕ್ಕೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ, ಈ ಸುಭಾಷಿತ.

ಇಂದಿನ ರಾಜಕಾರಣದ ಪರಿಸ್ಥಿತಿಯನ್ನೇ ಅವಲೋಕಿಸಬಹುದು. ಮಂತ್ರಿಯ ಮಗನನ್ನು ಮಂತ್ರಿಯನ್ನಾಗಿಸಬೇಕೆಂಬ ಹವಣು ಇಂದಿನ ರಾಜಕಾರಣದ ಮೂಲಧ್ಯೇಯ. ಆ ಮಗನಿಗೆ ಇರುವ ಅರ್ಹತೆಯಾದರೂ ಏನು? ಅವನು ಮಂತ್ರಿಯ ಮಗ, ರಾಜಕಾರಣಿಯ ಮಗ – ಇದಿಷ್ಟೇ ಅವನಿಗಿರುವ ಅರ್ಹತೆ. ರಾಜನೀತಿಯ ಬಗ್ಗೆ ಅರಿವಾಗಲೀ, ಕಾನೂನು–ಸಂವಿಧಾನಗಳ ಅಧ್ಯಯನವಾಗಲೀ, ಸಮಾಜಸೇವೆಯ ತುಡಿತವಾಗಲೀ ಇವರಲ್ಲಿ ಕಾಣದು. ಆದರೂ ಮಂತ್ರಿಯ ಮಗ ಮಂತ್ರಿಯೇ ಆಗುತ್ತಾನೆ. ಕಾರಣ ಸ್ಪಷ್ಟ: ಅವನು ಮಂತ್ರಿಯ ಮಗ ಎಂಬ ಮಾನದಂಡವೇ ಈ ಪದವಿಪ್ರಾಪ್ತಿಗೆ ಕಾರಣ. ಅರ್ಹತೆಯೊಂದೇ, ಸಾಮರ್ಥ್ಯವೊಂದೇ ಮಾನದಂಡವಾದರೆ ಬಹುಪಾಲು ಈ ’ಮಕ್ಕಳು‘ ರಾಜಕೀಯವಾಗಿ ನೆಲೆಗೊಳ್ಳಲಾರರು; ಯಾವ ಪದವಿಯನ್ನೂ ಪಡೆಯಲಾರರು. ಆದರೆ ಅವರು ಮಂತ್ರಿಯ ಮಕ್ಕಳು ಎಂಬ ಏಕೈಕ ಕಾರಣದಿಂದಲೇ ಅಧಿಕಾರವನ್ನು ಅನುಭವಿಸುತ್ತಿರುತ್ತಾರೆ. ಹೀಗಾಗಿ ಎಷ್ಟೋ ಜನರು, ಪ್ರಾಮಾಣಿಕರು, ಅರ್ಹರು, ಸಮರ್ಥರು ಅಧಿಕಾರದಿಂದ ವಂಚಿತರಾಗುತ್ತಲೇ ಇರುತ್ತಾರೆ. ಜೊಳ್ಳುಗಳು, ಭ್ರಷ್ಟರು ಅಧಿಕಾರವನ್ನು ಅನುಭವಿಸುತ್ತಿರುತ್ತಾರೆ. ಇದರ ಫಲವನ್ನು ಸಮಾಜ ಅನುಭವಿಸುತ್ತಿರುತ್ತದೆ.

ಸುಭಾಷಿತ ಸೊಗಸಾದ ಉದಾಹರಣೆಯ ಮೂಲಕ ಸ್ವಸಾಮರ್ಥ್ಯ ಎಂದರೆ ಏನು ಎಂಬುದನ್ನು ನಿರೂಪಿಸಿದೆ.

ಕಾಡಿನಲ್ಲಿ ಹಲವು ಪ್ರಾಣಿಗಳು ಇರುತ್ತವೆ. ಆದರೆ ನಾವು ಸಿಂಹವನ್ನು ಮೃಗರಾಜ ಎಂದು ಕರೆಯುತ್ತೇವೆ. ನಾವಷ್ಟೇ ಅಲ್ಲ, ಕಾಡಿನ ಇತರ ಪ್ರಾಣಿಗಳು ಕೂಡ ಸಿಂಹವನ್ನು ರಾಜನಂತೆಯೇ ಸ್ವೀಕರಿಸಿರುವುದು ಎದ್ದುಕಾಣುತ್ತದೆ. ಸಿಂಹಕ್ಕೆ ಈ ಮೃಗರಾಜ ಎಂಬ ಪದವಿ ಹೇಗೆ ಲಭಿಸಿತು? ಅಪ್ಪಸಿಂಹ ಮೃಗರಾಜ, ಹೀಗಾಗಿ ಮರಿಸಿಂಹವೂ ಮುಂದೆ ಮೃಗರಾಜ ಆಯಿತು ಎನ್ನುವಂತಿಲ್ಲ. ಈ ರೀತಿಯ ಹಿಂಬಾಗಿಲ ಪ್ರವೇಶ ಮನುಷ್ಯರಲ್ಲಿ, ಎಂದರೆ ನಾಡಿನಲ್ಲಿ ಇದೆಯೇ ಹೊರತು ಕಾಡಿನಲ್ಲಿ ಇರುವುದಿಲ್ಲ. ಸಿಂಹಕ್ಕಿರುವ ಸಹಜಬಲದಿಂದಲೇ ಅದು ಮೃಗರಾಜನಾಗಿದೆ.

ಸುಭಾಷಿತದ ತಾತ್ಪರ್ಯ: ನಾವು ನಮ್ಮ ಸಾಮರ್ಥ್ಯದಿಂದಲೇ ಪದವಿ–ಅಧಿಕಾರಗಳನ್ನು ಪಡೆಯಬೇಕೆ ಹೊರತು, ಬೇರೊಬ್ಬರ ಆಶ್ರಯದಿಂದ, ಬೆಂಬಲದಿಂದ ಪಡೆಯಬಾರದು. ಅಧಿಕಾರ–ಪದವಿಗಳಿಗೆ ಅರ್ಹತೆಯೊಂದೇ ಮಾನದಂಡವಾದಾಗ ಮಾತ್ರ ಆ ಪದವಿಗೂ ಮರ್ಯಾದೆ ದಕ್ಕುವುದು, ಮಾತ್ರವಲ್ಲ ಆಗ ಸಮಾಜವೂ ಸದೃಢವಾಗಿರುತ್ತದೆ; ಭ್ರಷ್ಟಾಚಾರಗಳಿಂದ ಮುಕ್ತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT