ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ವಿದ್ಯೆಯ ಗುರಿ

Last Updated 11 ಸೆಪ್ಟೆಂಬರ್ 2020, 3:06 IST
ಅಕ್ಷರ ಗಾತ್ರ

ಯಚ್ಛ್ರುತಂ ನ ವಿರಾಗಾಯ ನ ಧರ್ಮಾಯ ನ ಶಾಂತಯೇ ।
ಸುಬದ್ಧಮಪಿ ಶಬ್ದೇನ ಕಾಕವಾಶಿತಮೇವ ತತ್‌ ।।

ಇದರ ತಾತ್ಪರ್ಯ ಹೀಗೆ:‘ವೈರಾಗ್ಯ, ಧರ್ಮ ಮತ್ತು ಮನಃಶಾಂತಿ – ಇವುಗಳಲ್ಲಿ ಒಂದು ಫಲವನ್ನಾದರೂ ನೀಡದ ಯಾವ ವಿದ್ಯೆಯುಂಟೋ, ಅದು ಎಷ್ಟೇ ಶಬ್ದಜಾಲದಿಂದ ರಚಿತವಾಗಿದ್ದರೂ ಅದು ಕಾಗೆಯ ಕೂಗೇ ಸರಿ.’

ನಾವು ಕಲಿಯುವ ವಿದ್ಯೆಗೆ ಫಲ ಎನ್ನುವುದು ಇರಬೇಕು. ಅದು ನಮ್ಮ ಜೀವನಕ್ಕೆ ಪೋಷಕವಾಗಿರಬೇಕು. ಸುಭಾಷಿತ ಇಲ್ಲಿ ಹೇಳುತ್ತಿರುವುದು ಇದನ್ನೇ. ಎಂದರೆ ನಮ್ಮ ಶಿಕ್ಷಣಪದ್ಧತಿಗೆ ಗುರಿ ಎನ್ನುವುದು ಇರಬೇಕು.

ಧರ್ಮವನ್ನು ತಿಳಿಸಿಕೊಡುವಂಥ ವಿದ್ಯೆಯನ್ನು ನಾವು ಕಲಿಯಬೇಕು. ಧರ್ಮ ಎಂದರೆ ನಮ್ಮ ಜೀವನಕ್ಕೆ ಬೇಕಾದ ವಿವೇಕ. ನಾವು ಮನೆಯಲ್ಲಿ ಹೇಗಿರಬೇಕು? ರಸ್ತೆಯಲ್ಲಿ ಹೇಗೆ ಇರಬೇಕು? ಕಚೇರಿಯಲ್ಲಿ ಹೇಗೆ ನಡೆದುಕೊಳ್ಳಬೇಕು? ಶಾಲಾ–ಕಾಲೇಜುಗಳಲ್ಲಿ ನಮ್ಮ ರೀತಿ–ನೀತಿ ಹೇಗಿರಬೇಕು? ತಂದೆ ಅಥವಾ ತಾಯಿಯಾಗಿ ಹೇಗೆ ನಡೆದುಕೊಳ್ಳಬೇಕು? ಮಗ ಅಥವಾ ಮಗಳಾಗಿ ಹೇಗೆ ವರ್ತಿಸಬೇಕು? ಮಂತ್ರಿಯಾದಾಗ ಏನು ಮಾಡಬೇಕು? ವೈದ್ಯನಾಗಿ ನನ್ನ ಕರ್ತವ್ಯವೇನು? ಸರ್ಕಾರಿ ಅಧಿಕಾರಿಯಾಗಿ ನಾನು ಹೇಗೆ ಪ್ರಾಮಾಣಿಕವಾಗಿರಬೇಕು? ತಂದೆತಾಯಿಗಳನ್ನು ಮಕ್ಕಳು ಹೇಗೆ ನಡೆಸಿಕೊಳ್ಳಬೇಕು? ರಾಜನ ಕರ್ತವ್ಯಗಳೇನು? – ಇಂಥ ಸಾವಿರಾರು ಪ್ರಶ್ನೆಗಳಿಗೆ ಉತ್ತರವನ್ನು ವಿಧಿ–ನಿಷೇಧಗಳ ಮೂಲಕ ಕೊಡುವುದೇ ಧರ್ಮದ ಉದ್ದೇಶ.

ವೈರಾಗ್ಯ ಎಂದರೆ ಜೀವನದ ಚಟುವಟಿಕೆಗಳಿಂದ ವಿಮುಖರಾಗುವುದು. ಧರ್ಮವು ಜೀವನದಲ್ಲಿ ಕ್ರಿಯಾಶೀಲತೆಯನ್ನು ಕಲಿಸಿದರೆ, ವೈರಾಗ್ಯವು ವಿಶ್ರಾಂತಿಗೆ ನಮ್ಮನ್ನು ಸಿದ್ಧಗೊಳಿಸುತ್ತದೆ. ನಾವು ಕಲಿಯುವ ವಿದ್ಯೆ ನಮಗೆ ಪ್ರವೃತ್ತಿ ಮತ್ತು ನಿವೃತ್ತಿ – ಈ ಎರಡು ದಾರಿಗಳ ಬಗ್ಗೆಯೂ ತಿಳಿವಳಿಕೆಯನ್ನು ಕೊಡಬೇಕು.

ಎಷ್ಟು ವಿದ್ಯೆಯನ್ನು ಕಲಿತರೂ, ಎಷ್ಟು ಆಸ್ತಿ–ಅಂತಸ್ತು–ಅಧಿಕಾರಗಳನ್ನು ಸಂಪಾದಿಸಿದರೂ ಮನಃಶಾಂತಿ ಇಲ್ಲದಿದ್ದರೆ ಯಾವುದಕ್ಕೂ ಅರ್ಥವೇ ಉಳಿಯದು. ಹೀಗಾಗಿ ವಿದ್ಯೆ ನಮಗೆ ಮನಃಶಾಂತಿಯನ್ನು ಕೊಡಬೇಕು.

ಇಂದು ನಾವೆಲ್ಲರೂ ’ಶಿಕ್ಷಣ ಶಿಕ್ಷಣ‘ ಎಂದು ಭಜನೆ ಮಾಡುತ್ತಿದ್ದೇವೆ. ಆದರೆ ನಾವು ಪಡೆಯುತ್ತಿರುವ ಶಿಕ್ಷಣ ನಿಜವಾಗಿಯೂ ನಮ್ಮ ಜೀವನಕ್ಕೆ ಪೋಷಕವಾಗಿದೆಯೇ ಎಂದು ನಾವು ಎಂದಾದರೂ ಆಲೋಚಿಸಿದ್ದೇವೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT