ಮಂಗಳವಾರ, ಏಪ್ರಿಲ್ 20, 2021
32 °C

ದಿನದ ಸೂಕ್ತಿ: ಧರ್ಮದ ಹೆಜ್ಜೆಗಳು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಯಜ್ಞಾಧ್ಯಯನದಾನಾನಿ ತಪಃ ಸತ್ಯಂ ಧೃತಿಃ ಕ್ಷಮಾ ।

ಅಲೋಭ ಇತಿ ಮಾರ್ಗೋಯಂ ಧರ್ಮಸ್ಯಾಷ್ಟವಿಧಃ ।।

ಇದರ ತಾತ್ಪರ್ಯ ಹೀಗೆ:

‘ಯಜ್ಞ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮೆ, ಲೋಭವಿಲ್ಲದಿರುವಿಕೆ – ಈ ರೀತಿಯಲ್ಲಿ ಧರ್ಮದ ಮಾರ್ಗ ಎಂಟು ವಿಧ.’

ನಮ್ಮ ಜೀವನವನ್ನು ಧರ್ಮಮಾರ್ಗದಲ್ಲಿ ಮುನ್ನಡೆಸಬೇಕು ಎಂಬುದನ್ನು ಆಗಾಗ ಕೇಳುತ್ತಿರುತ್ತೇವೆ; ನಮ್ಮ ದೇಶದ ಆದರ್ಶ ಕೂಡ ಇದೆ ಆಗಿದೆ ಎಂಬುದು ನಮ್ಮ ನಂಬಿಕೆ ಕೂಡ. ಹೀಗಿದ್ದರೂ ಧರ್ಮ ಎಂದರೆ ಏನು ಎಂದು ವಿವರಿಸುವುದು ಸುಲಭವಲ್ಲ. ಆದರೆ ಸುಭಾಷಿತ ಇಲ್ಲಿ ಧರ್ಮ ಎಲ್ಲೆಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದೆ.

ಯಜ್ಞ ಎಂದರೆ ಹಂಚಿಕೊಂಡು ತಿನ್ನುವುದು, ಸಾಮೂಹಿಕ ವಿತರಣೆ, ಕೃತಜ್ಞತೆ; ಅಧ್ಯಯನ ಎಂದರೆ ತಿಳಿವಳಿಕೆಯನ್ನು ಸಂಪಾದಿಸುವುದು; ಯಾರು ಅಬಲರೋ ಅವರ ಸಹಾಯಕ್ಕೆ ಒದಗವುದೇ ದಾನ; ನಮ್ಮ ಮನಸ್ಸು, ಬುದ್ಧಿ, ಶರೀರಗಳನ್ನು ನಮ್ಮ ವಶದಲ್ಲಿಟ್ಟುಕೊಳ್ಳಲು ನಡೆಸುವ ಸಾಧನೆಯೇ ತಪಸ್ಸು; ಸತ್ಯವನ್ನು ಹೇಳುವುದು, ಸತ್ಯವನ್ನು ಕೇಳುವುದು, ಸತ್ಯದ ನೆರವಿನಿಂದ ಜೀವನವನ್ನು ರೂಪಿಸಿಕೊಳ್ಳುವುದು; ಧರ್ಮಮಾರ್ಗದಲ್ಲಿ ನಡೆಯುವಾಗ ಎದುರಾಗುವ ಎಲ್ಲ ವಿಧದ ಆತಂಕಗಳನ್ನು ಎದುರಿಸಬಲ್ಲ ನಿಲುವೇ ಧೈರ್ಯ; ನಮಗಿಂತಲೂ ಬಲಹೀನರು ತಪ್ಪು ಮಾಡಿದಾಗ ಅದನ್ನು ಕ್ಷಮಿಸಬಲ್ಲ ಔದಾರ್ಯವೇ ಕ್ಷಮೆ; ಹಿತವಾದ ಮತ್ತು ಮಿತವಾದ ಜೀವನಕ್ರಮವನ್ನು ರೂಪಿಸಿಕೊಳ್ಳುವುದು, ಅತಿಯಾದ ಆಸೆಗೆ ವಶನಾಗದಿರುವುದೇ ಲೋಭ ಇಲ್ಲದಿರುವಿಕೆ – ಇವೇ ಧರ್ಮದ ಹೆಜ್ಜೆಗಳು ಎಂದು ಸುಭಾಷಿತ ನಿರೂಪಿಸಿದೆ.

ಈ ಧರ್ಮಮಾರ್ಗದಲ್ಲಿ ಏಕೆ ನಡೆಯಬೇಕು ಎಂದರೆ, ಈ ಮಾರ್ಗದಲ್ಲಿ ನಡೆಯುವವನು, 

ಧರ್ಮೇಣ  ಹಿ ಸಹಾಯೇನ ತಮಸ್ತರತಿ ದುಸ್ತರಮ್‌ ।

’ದಾಟಲು ಅಸಾಧ್ಯವಾದ ಕತ್ತಲೆಯನ್ನು ಕೂಡ ಧರ್ಮದ ಸಹಾಯದಿಂದ ದಾಟಿಬಿಡುತ್ತಾನೆ’ ಎಂದಿದೆ ಇನ್ನೊಂದು ಸುಭಾಷಿತ.

ಧರ್ಮಮಾರ್ಗದ ಈ ವಿವರಗಳನ್ನು ಹಲವು ಶಾಸ್ತ್ರಗಳಲ್ಲಿ ಕಾಣಬಹುದು; ಉದಾಹರಣೆಗೆ ಈ ಶ್ಲೋಕವನ್ನು ನೋಡಿ:

ಧೃತಿ ಕ್ಞಮಾ ದಮೋsಸ್ತೇಯಂ ಶೌಚಮಿಂದ್ರಿಯನಿಗ್ರಹಃ ।

ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಮ್‌ ।।

‘ಧೈರ್ಯ, ಕ್ಷಮೆ, ಬಹಿರಿಂದ್ರಿಯ ನಿಗ್ರಹ, ಕದಿಯದಿರುವುದು, ಶುಚಿತ್ವ, ಇಂದ್ರಿಯಜಯ, ಬುದ್ಧಿ, ವಿದ್ಯೆ, ಸತ್ಯ, ಕೋಪ ಇಲ್ಲದಿರುವುದು – ಇವು ಹತ್ತು ಧರ್ಮದ ಲಕ್ಷಣ.’

ಧರ್ಮವೊಂದೇ ನಮ್ಮನ್ನು ಎಂದಿಗೂ ಎಲ್ಲೆಲ್ಲಿಯೂ ಕಾಪಾಡಬಲ್ಲ ಶಕ್ತಿ ಎಂಬುದು ನಮ್ಮ ಸಂಸ್ಕೃತಿಯ ನಿಲವು:

ನಾಮುತ್ರ ಹಿ ಸಹಾಯಾರ್ಥಂ ಪಿತಾ ಮಾತಾ ಚ ತಿಷ್ಠತಿ ।

ನ ಪುತ್ರದಾರಾ ನ ಜ್ಞಾತಿರ್ಧರ್ಮಸ್ತಿಷ್ಠತಿ ಕೇವಲಃ ।।

‘ಪರಲೋಕದಲ್ಲಿ ಸಹಾಯಕ್ಕಾಗಿ ತಂದೆಯಾಗಲೀ ತಾಯಿಯಾಗಲೀ ನಿಲ್ಲುವುದಿಲ್ಲ. ಮಕ್ಕಳು ಮಡದಿ ಅಥವಾ ಜ್ಞಾತಿಗಳು ಕೂಡ ನಿಲ್ಲುವುದಿಲ್ಲ. ಅಲ್ಲಿ ಸಹಾಯಕ್ಕೆ ಒದಗುವುದು ಕೇವಲ ಧರ್ಮ ಒಂದೇ’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು