ಶನಿವಾರ, ಸೆಪ್ಟೆಂಬರ್ 18, 2021
27 °C

ದಿನದ ಸೂಕ್ತಿ: ಅತಿಥಿಸತ್ಕಾರ

ಎಸ್‌. ಸೂರ್ಯಪ್ರಕಾಶ ಪಂಡಿತ್ Updated:

ಅಕ್ಷರ ಗಾತ್ರ : | |

ಅತಿಥಿಸತ್ಕಾರ

ಬಾಲೋ ವಾ ಯದಿ ವಾ ವೃದ್ಧೋ ಯುವಾ ವಾ ಗೃಹಮಾಗತಃ ।

ತಸ್ಯ ಪೂಜಾ ವಿಧಾತವ್ಯಾ ಸರ್ವತ್ರಾಭ್ಯಾಗತೋ ಗುರುಃ ।।

ಇದರ ತಾತ್ಪರ್ಯ ಹೀಗೆ:

‘ಮನೆಗೆ ಬಂದವನು ಬಾಲನಾಗಿರಲಿ, ವೃದ್ಧನಾಗಿರಲಿ, ಯುವಕನಾಗಿರಲಿ – ಅವನಿಗೆ ಸತ್ಕಾರವನ್ನು ಮಾಡಬೇಕು. ಯಾವಾಗಲೂ ಅಭ್ಯಾಗತನಾದವನು ಗುರುಸಮಾನ’.

ಆತಿಥ್ಯದ ವಿಧಾನವನ್ನು ಈ ಸುಭಾಷಿತ ನಿರೂಪಿಸುತ್ತಿದೆ.

ನಮ್ಮ ಸಂಸ್ಕೃತಿಯಲ್ಲಿ ಅತಿಥಿಸತ್ಕಾರದ ಬಗ್ಗೆ ತುಂಬ ಗೌರವ ಇದೆ. ಅದು ನಾವು ನಿತ್ಯವೂ ನಡೆಸಬೇಕಾದ ಕರ್ತವ್ಯ ಎಂದೂ ಹೇಳಲಾಗಿದೆ. ಯಾರ ಮನೆಗೆ ಅತಿಥಿಗಳು ಬರುವುದಿಲ್ಲವೋ ಅಂಥ ಮನೆ ಮನೆಯೇ ಅಲ್ಲ ಎಂಬ ನಿಲವನ್ನೂ ಕಾಣುತ್ತೇವೆ. ಅತಿಥಿಗಳನ್ನು ದೇವರು ಎಂದೇ ಭಾವಿಸಬೇಕು ಎಂದು ಉಪನಿಷತ್ತು ಹೇಳುತ್ತದೆ.

ಅತಿಥಿಯಾದವನು ದೇವರೇ ಆದಮೇಲೆ ಅವನು ಯಾವ ರೂಪದಲ್ಲಿ ಬಂದರೇನು? ಅದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು. ಮನೆಗೆ ಬಂದ ಅತಿಥಿ ಅಥವಾ ಅಭ್ಯಾಗತ, ಅವರು ವಯಸ್ಸಿನಲ್ಲಿ ಚಿಕ್ಕವರಿಲಿ, ದೊಡ್ಡವರಿರಲಿ ಅವರನ್ನು ಸರಿಯಾಗಿ ಸತ್ಕರಿಸಬೇಕು ಎಂಬುದು ಇಲ್ಲಿಯ ನಿಲವು. ‘ಮನೆಗೆ ಬಂದವನು ಬಾಲನಾಗಿರಲಿ, ವೃದ್ಧನಾಗಿರಲಿ, ಯುವಕನಾಗಿರಲಿ – ಅವನಿಗೆ ಸತ್ಕಾರವನ್ನು ಮಾಡಬೇಕು. ಯಾವಾಗಲೂ ಅಭ್ಯಾಗತನಾದವನು ಗುರುಸಮಾನ’ ಎಂದಿದೆ, ಸುಭಾಷಿತ.

ನಮ್ಮ ಮನೆಗೆ ಯಾರಾದರೂ ಪ್ರೀತಿಯಿಂದ ಬರುತ್ತಿದ್ದಾರೆ ಎಂಬುದು ನಮ್ಮ ಜೀವನದ ಭಾಗ್ಯಗಳಲ್ಲಿ ಒಂದು. ಇಂದಿನ ಗಡಿಬಿಡಿಯ ಜೀವನದಲ್ಲಿ ಸ್ನೇಹ–ಪ್ರೀತಿ–ಆತಿಥ್ಯ ಇವೆಲ್ಲವೂ ತುಂಬ ದುಬಾರಿಯಾದ ಸಂಗತಿಗಳು. ನಾವು ಸಂತೋಷವಾಗಿ ಬದುಕಬೇಕಾದರೆ ಇವೆಲ್ಲವೂ ತುಂಬ ಆವಶ್ಯಕ ಎಂಬುದನ್ನು ಮರೆಯಬಾರದು. ನಮ್ಮ ಸುಖವನ್ನು, ದುಃಖವನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳಬಲ್ಲಂಥ ವ್ಯಕ್ತಿತ್ವವನ್ನು ನಾವು ರೂಢಿಸಿಕೊಳ್ಳಬೇಕು. ಇದಕ್ಕೆ ಮುಖ್ಯ ಅಡಿಪಾಯ ಎಂದರೆ ನಮ್ಮ ಮನೆ ಮತ್ತು ಮನಸ್ಸು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು