ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಮಾತಿನ ಹರಿತ

Last Updated 20 ಮಾರ್ಚ್ 2021, 5:36 IST
ಅಕ್ಷರ ಗಾತ್ರ

ರೋಹತೇ ಸಾಯಕೈರ್ವಿದ್ಧಂ ವನಂ ಪರಶುನಾ ಹತಮ್‌ ।

ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್ಕ್ಷತಮ್‌ ।।

ಇದರ ತಾತ್ಪರ್ಯ ಹೀಗೆ:

‘ಬಾಣಗಳ ಹೊಡೆತಕ್ಕೆ ಗುರಿಯಾದುದೂ ಬೆಳೆಯಬಹುದು; ಕೊಡಲಿಯಿಂದ ಭೇದಿಸಲ್ಟಟ್ಟ ಕಾಡು ಕೂಡ ಬೆಳೆಯಬಹುದು. ಆದರೆ ಕೆಟ್ಟ ಮಾತುಗಳಿಂದ ವಿಕಾರಗೊಂಡ, ಮಾತಿನಿಂದಾದ ಗಾಯ ಮತ್ತೆ ಎಂದಿಗೂ ವಾಸಿಯಾಗುವುದೇ ಇಲ್ಲ.’

ಹಿಂಸೆ ಎಂದರೆ ಹೊಡೆಯುವುದು, ಕೊಲ್ಲುವುದು, ಕತ್ತರಿಸುವುದು ಎಂದೇ ನಾವು ಯೋಚಿಸುತ್ತೇವೆ. ಆದರೆ ನಿಜವಾದ ಹಿಂಸೆ ಎಂದರೆ ಕೆಟ್ಟ ಮಾತುಗಳ ಪ್ರಯೋಗ ಎಂದು ಸುಭಾಷಿತ ಹೇಳುತ್ತಿದೆ.

ಇನ್ನೊಂದು ಸುಭಾಷಿತವನ್ನು ನೋಡಿ:

ವಾಕ್ಸಾಯಕಾ ವದನಾನ್ನಿಷ್ಪತಂತಿ

ಯೈರಾಹತಃ ಶೋಚತಿ ರಾತ್ರ್ಯಾಹಾನಿ ।

ಪರಸ್ಪರಂ ಮರ್ಮಸು ತೇ ಪತಂತಿ

ತಾನ್‌ ಪಂಡಿತೋ ನಾಪಸೃಜೇತ್ಪರೇಷು ।।

‘ಮಾತಿನ ಬಾಣಗಳು ಬಾಯಿಂದ ಹೊರಬೀಳುತ್ತವೆ. ಅವುಗಳ ಹೊಡೆತಕ್ಕೆ ಸಿಕ್ಕವನು ಹಗಲೂ ರಾತ್ರಿಯೂ ದುಃಖಿಸುತ್ತಾನೆ. ಅವು ಒಬ್ಬರಿಂದೊಬ್ಬರ ಮರ್ಮಸ್ಥಾನಕ್ಕೆ ಬೀಳುತ್ತವೆ. ಹೀಗಾಗಿ ತಿಳಿದವನು ಅವನ್ನು ಇತರರ ಮೇಲೆ ಪ್ರಯೋಗಿಸಬಾರದು.’

ಈ ಸುಭಾಷಿತವಂತೂ ಮಾತನ್ನೇ ಬಾಣಕ್ಕೆ ಹೋಲಿಸಿದೆ.

ಈ ಎರಡು ಸುಭಾಷಿತಗಳನ್ನು ಕೇಳಿದಮೇಲೆ ’ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಮಾತು ನೆನಪಾಗದೆ ಇರದು.

ನಮಗೆ ಮಾತಿನ ಬೆಲೆ ಗೊತ್ತಾಗದು. ಏಕೆಂದರೆ ನಾವು ಅದನ್ನು ದುಡ್ಡು ಕೊಟ್ಟು ಕೊಳ್ಳುತ್ತಿಲ್ಲ. ನಮ್ಮ ಮಾತಿಗೂ ಬೆಲೆ ಇದೆ ಎಂದು ಗೊತ್ತಾಗುವುದು ಮೊಬೈಲ್‌ ಬಿಲ್‌ ಬಂದಾಗ ಮಾತ್ರವೇ ಎನಿಸುತ್ತದೆ!

ಆದರೆ ಗಂಭೀರವಾಗಿ ಯೋಚಿಸಿ ನೋಡಿದರೆ ಮಾತಿಗಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮಾತಿನಿಂದ ಸ್ನೇಹವನ್ನು ಸಂಪಾದಿಸಬಹುದು; ಸ್ನೇಹವೂ ಮುರಿದುಬೀಳಬಹುದು. ಮಾತಿನಿಂದ ಮೈತ್ರಿ ಸಿದ್ಧಿಸಬಹುದು; ಯುದ್ಧವೂ ನಡೆಯಬಹುದು. ಮನೆಯೊಂದು ಮಾತಿನಿಂದ ನೆಲೆಗೊಳ್ಳಲೂಬಹುದು; ನಾಶವೂ ಆಗಬಹುದು. ಮಾತಿನಿಂದ ಸಂಬಂಧವನ್ನು ಗಟ್ಟಿಗೊಳಿಸಬಹುದು; ಸಂಬಂಧಗಳನ್ನು ಮುರಿಯಲೂಬಹುದು. ಹೀಗೆ ಮಾತಿನಿಂದ ನಾವು ಒಳಿತನ್ನೂ ಸಾಧಿಸಬಹುದು; ಕೆಡುಕನ್ನೂ ಉಂಟುಮಾಡಬಹುದು.

ಬಾಣದ ಹೊಡೆತಕ್ಕೆ ಸಿಕ್ಕಿದ ದೇಹದ ಭಾಗ ಕತ್ತರಿಸಲ್ಪಡುತ್ತದೆ; ಕೊಡಲಿಯಿಂದ ಮರವನ್ನು ಕಡಿದರೆ ಮರ ಉರುಳುತ್ತಿದೆ. ಬಾಣದ ಹೊಡೆತಕ್ಕೆ ಸಿಕ್ಕಿದ ಶರೀರದ ಅಂಗ ಬೆಳೆದೀತು; ಕೊಡಲಿಯ ಪೆಟ್ಟಿಗೆ ಸಿಕ್ಕಿ ಉರುಳಿದ ಮರವೂ ಚಿಗುರೀತು. ಆದರೆ ಕೆಟ್ಟ ಮಾತಿನ ಹೊಡೆತಕ್ಕೆ ಸಿಕ್ಕು ಮುದುಡಿದ, ಕದಡಿದ ಮನಸ್ಸಿನ ಗಾಯ ಮಾತ್ರ ಎಂದಿಗೂ ವಾಸಿಯಾಗದು ಎನ್ನುತ್ತಿದೆ ಸುಭಾಷಿತ. ಎಂದರೆ ಕೆಟ್ಟ ಮಾತಿನ ತೀವ್ರತೆ ಬಾಣದ ಹೊಡೆತಕ್ಕಿಂತಲೂ ಕತ್ತಿಯ ಹರಿತಕ್ಕಿಂತಲೂ ತೀವ್ರವಾದುದು ಎಂದಾಯಿತು. ಆದುದರಿಂದ ಇಂಥ ಮಾತನ್ನು ಹೇಗೆ ಬಳಸಬೇಕು? ಈ ವಚನವನ್ನು ನೋಡಿ:

ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT