ಸೋಮವಾರ, ಜೂನ್ 27, 2022
28 °C

ದಿನದ ಸೂಕ್ತಿ: ಮಾತು ಎಂಬ ಬೆಳಕು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಇಹ ಶಿಷ್ಟಾನುಶಿಷ್ಟಾನಾಂ ಶಿಷ್ಟಾನಾಮಪಿ ಸರ್ವಥಾ |
ವಾಚಾಮೇವ ಪ್ರಸಾದೇನ ಲೋಕಯಾತ್ರಾ ಪ್ರವರ್ತತೇ ||

ಇದಮಂಧಂ ತಮಃ ಕೃತ್ಸ್ನಂ ಜಾಯೇತ ಭುವನತ್ರಯಂ |
ಯದಿ ಶಬ್ದಾಹ್ವಯಂ ಜ್ಯೋತಿರಾಸಂಸಾರಾನ್ನ ದೀಪ್ಯತೇ ||

ಇದರ ತಾತ್ಪರ್ಯ ಹೀಗೆ:

‘ಭಾಷೆಗಳು ವಿದ್ವಾಂಸರ ಅನುಶಾಸನಕ್ಕೆ ಒಳಪಟ್ಟವಾಗಿರಬಹುದು, ಬಿಟ್ಟವಾಗಿರಬಹುದು; ಎಲ್ಲ ರೀತಿಯಲ್ಲೂ ಅವುಗಳ ಅನುಗ್ರಹ ಮಾತ್ರದಿಂದಲೇ ಲೋಕವ್ಯವಹಾರ ಸಾಗುತ್ತಿದೆ. ಮಾತಿನ ಜ್ಯೋತಿ ಸಂಸಾರದ ಉದ್ದಕ್ಕೂ ಬೆಳಗದೆ ಇದ್ದರೆ ಅಶೇಷ ಭುವನತ್ರಯವೂ ಕಗ್ಗತ್ತಲಾಗಿ ಬಿಟ್ಟೀತು.‘

‘ಕಾವ್ಯಾದರ್ಶ‘ದ ಈ ಶ್ಲೋಕಗಳ ಈ ಅನುವಾದವನ್ನು ಮಾಡಿರುವವರು ತೀನಂಶ್ರೀ ಅವರು.

ಮಾತಿನ ಶಕ್ತಿಯನ್ನು ಈ ಶ್ಲೋಕ ನಿರೂಪಿಸುತ್ತಿದೆ.

ಮಾತಿಲ್ಲದ ನಮ್ಮ ಜೀವನವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗದು. ನಮ್ಮ ಆಚಾರ, ವಿಚಾರ, ನೋವು, ನಲಿವು, ಸೋಲು, ಗೆಲವು, ವಿದ್ಯೆ, ಅವಿದ್ಯೆ – ಎಲ್ಲವೂ ಮಾತನ್ನು ಆಶ್ರಯಿಸಿಯೇ ನಡೆಯುತ್ತಿರುತ್ತದೆ.

ಮಾನವನ ವಿಕಾಸದಲ್ಲಿ ಮಾತಿನ ಪಾತ್ರ ತುಂಬ ದೊಡ್ಡದು. ಅವನು ಇಂದು ಏನೆಲ್ಲ ಸಾಧನೆಯನ್ನು ಮಾಡಿದ್ದಾನೆ, ಅದಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಮಾತು ಕಾರಣವಾಗಿರುತ್ತದೆ. ಹೇಗೆ ನಾವು ಕತ್ತಲೆಯಲ್ಲಿ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲವೋ ಹಾಗೆಯೇ ಮಾತಿಲ್ಲದೆ ನಮ್ಮ ಜೀವನ ಮುಂದೆ ಸಾಗದು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು ಮಾತು ಎಂಬುದು ಜ್ಯೋತಿ ಇದ್ದಂತೆ, ಎಂದರೆ ಮಾತು ಎಂಬುದು ಬೆಳಕು; ನಮ್ಮ ಜೀವನದ ದಾರಿಯನ್ನು ತೋರುವ, ಕತ್ತಲೆಯನ್ನು ಹೋಗಲಾಡಿಸುವ ಬೆಳಕು. ಈ ಬೆಳಕು ಇಲ್ಲದಿದ್ದರೆ ಮೂರು ಲೋಕಗಳೂ ಕತ್ತಲೆಯಲ್ಲಿ ಮುಳುಗಿಬಿಡುತ್ತವೆ.

ಇಂಥ ಮಾತನ್ನು ನಾವು ಬಳಸುವ ಮುನ್ನ ತುಂಬ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮಾತಿನಿಂದ ನಮ್ಮ ಜೀವನವನ್ನು ಕಟ್ಟಿಕೊಳ್ಳಲೂಬಹುದು, ಕೆಡವಿಕೊಳ್ಳಲೂಬಹುದು. ಮಾತನ್ನು ನಮ್ಮ ಸಂಸ್ಕೃತಿಯಲ್ಲಿ ದೇವತೆ ಎಂದೇ ಆದರಿಸಲಾಗಿದೆ; ಮಾತಿನ ಒಡತಿಯಾಗಿ ಸರಸ್ವತಿ ಕಾಣಿಸಿಕೊಂಡಿದ್ದಾಳೆ. ಮಾತು ಶಕ್ತಿ, ಬೆಳಕು, ಧ್ಯಾನ, ಸಂಪತ್ತು, ಸೌಂದರ್ಯ, ಭಾವ, ಬದುಕು, ಸಂತೋಷ, ದುಃಖ, ತಂದೆ, ತಾಯಿ, ಬಂಧು, ಬಳಗ – ಎಲ್ಲವೂ ಆಗಿದೆ ಎಂಬುದನ್ನು ನಾವು ಮರೆಯಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು