ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಮೂರು ಶತ್ರುಗಳು

Last Updated 4 ಜನವರಿ 2021, 18:23 IST
ಅಕ್ಷರ ಗಾತ್ರ

ಲೋಭಮೂಲಾನಿ ಪಾಪಾನಿ ವ್ಯಾಧಯೋ ರಸಮೂಲಕಾಃ ।

ಸ್ನೇಹಮೂಲಾನಿ ದುಃಖಾನಿ ತ್ರೀಣಿ ತ್ಯಕ್ತ್ವಾ ಸುಖೀ ಭವೇತ್‌ ।।

ಇದರ ತಾತ್ಪರ್ಯ ಹೀಗೆ:

‘ಪಾಪಗಳಿಗೆ ಆಸೆ ಮೂಲ; ರೋಗಗಳಿಗೆ ರಸವೇ ಮೂಲ; ದುಃಖಕ್ಕೆ ಸ್ನೇಹವೇ ಮೂಲ. ಆದುದರಿಂದ ಈ ಮೂರನ್ನು ತ್ಯಜಿಸಿ, ಸುಖಿಯಾಗಬೇಕು.’

ಕಾರಣವಿಲ್ಲದೆ ಕಾರ್ಯವಿಲ್ಲ. ಅದು ರೋಗ ಇರಲಿ, ಭೋಗ ಇರಲಿ; ಕಾರಣ ಇದ್ಧೇ ಇರುತ್ತದೆ. ಪಾಪಕ್ಕೂ ಕಾರಣ ಇರುತ್ತದೆ, ಪುಣ್ಯಕ್ಕೂ ಕಾರಣ ಇರುತ್ತದೆ. ಕೊರೊನಾ ಬಂದಿರುವುದಕ್ಕೂ ಕಾರಣ ಇರುತ್ತದೆ; ಅದು ಹೋಗುವುದಕ್ಕೂ ಕಾರಣ ಇರುತ್ತದೆ. ನಮಗೆ ಕಾರಣ ತಿಳಿಯುತ್ತಿಲ್ಲ ಎಂದ ಮಾತ್ರಕ್ಕೆ ಯಾವ ವಿದ್ಯಮಾನಕ್ಕೂ ಕಾರಣವೇ ಇರುವುದಿಲ್ಲ ಎಂದು ತೀರ್ಮಾನಿಸಲಾಗದು. ನಮ್ಮ ದುಃಖದ ಮೂಲಗಳನ್ನೂ ಅದರ ಕಾರಣಗಳನ್ನೂ ಸುಭಾಷಿತ ಇಲ್ಲಿ ಹೇಳುತ್ತಿದೆ.

ಆಸೆಯೇ ಪಾಪಗಳಿಗೆ ಮೂಲ ಎನ್ನುತ್ತಿದೆ ಸುಭಾಷಿತ. ಆಸೆ ಎಂಬುದು ಮನಸ್ಸಿನ ಆಕರ್ಷಣೆ. ಈ ಆಕರ್ಷಣೆಯ ಸೆಳೆತಕ್ಕೆ ಕೊನೆ ಎಂಬುದೇ ಇರದು. ಒಂದಾದ ಮೇಲೆ ಇನ್ನೊಂದು ಆಸೆ ಹುಟ್ಟುತ್ತಲೇ ಇರುತ್ತದೆ. ಹೀಗೆ ಹುಟ್ಟುವ ಆಸೆಗಳನ್ನು ಪೂರೈಸಿಕೊಳ್ಳಲು ಅಡ್ಡದಾರಿಗಳನ್ನೂ ಹಿಡಿಯುತ್ತೇವೆ. ಇದೇ ಪಾಪಗಳಿಗೆ ಕಾರಣವಾಗುತ್ತದೆ.

ರಸ ಎಂದರೆ ರುಚಿಗೆ ಕಾರಣವಾಗುವ ವಿವರ. ಉಪ್ಪು, ಹುಳಿ, ಖಾರ – ಇವೆಲ್ಲ ರಸಗಳೇ. ಎಂದರೆ ನಾಲಗೆಯ ರುಚಿಗೆ ಸಂಬಂಧಿಸಿದ ಸಂಗತಿಗಳು ಇವು. ನಾಲಗೆಯನ್ನು ಹತೋಟಿಯಲ್ಲಿಡುವುದು ಸುಲಭವಲ್ಲ. ರುಚಿಗೆ ಬಲಿಯಾದರೆ ‘ಅದು ತಿನ್ನೋಣ, ಇದು ತಿನ್ನೋಣ’ – ಎಂಬ ಬಯಕೆ ಸದಾ ಒಸರುತ್ತಲೇ ಇರುತ್ತದೆ. ನಾವು ತಿನ್ನುವುದೆಲ್ಲವೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಲಾಗದಷ್ಟೆ! ಅದು, ಇದು ಎಂದು ಏನೇನೋ ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೇವೆ. ಸುಭಾಷಿತ ಇದನ್ನೇ ಹೇಳುತ್ತಿರುವುದು ರಸವೇ ರೋಗಗಳಿಗೆ ಮೂಲ ಎಂದು.

ಮನುಷ್ಯ ಒಂಟಿಜೀವಿ ಅಲ್ಲ, ಸಂಘಜೀವಿ. ಇದು ಅವನ ಸಂತೋಷಕ್ಕೆ ಕಾರಣವಾಗುವಂತೆ ದುಃಖಕ್ಕೂ ಕಾರಣವಾಗುತ್ತದೆ. ಸಹಮಾನವರ ಸ್ನೇಹವನ್ನು ಬಯಸುವುದು ನಮ್ಮ ಸಹಜಸ್ವಭಾವ. ಆದರೆ ಕೆಲವೊಮ್ಮೆ ಸ್ನೇಹ ಅತಿಯಾಗುತ್ತದೆ; ಅದೇ ರಾಗವಾಗುತ್ತದೆ; ತುಂಬ ಹಚ್ಚಿಕೊಳ್ಳುತ್ತೇವೆ. ಸ್ನೇಹ ಚೆನ್ನಾಗಿ ಮುಂದುವರಿಯುತ್ತಿರುವಾಗ ಸಂತೋಷವಾಗಿಯೇ ಇರುತ್ತೇವೆ. ಆದರೆ ಯಾವುದೋ ಕಾರಣದಿಂದ ಆ ಸ್ನೇಹ ಮುರಿದು ಬಿದ್ದರೆ ಆಗ ದುಃಖದಲ್ಲಿ ಬೀಳುತ್ತೇವೆ.

ಹೀಗಾಗಿಯೇ ಸುಭಾಷಿತ ಹೇಳುತ್ತಿದೆ: ಆಸೆ, ರಸ ಮತ್ತು ಸ್ನೇಹ – ಈ ಮೂರನ್ನೂ ತ್ಯಜಿಸಿ ಸುಖವಾಗಿರಿ. ಪ್ರಯತ್ನ ಪಡಬಹುದು, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT