ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸುಖ ಯಾವುದು?

Last Updated 22 ಅಕ್ಟೋಬರ್ 2020, 1:43 IST
ಅಕ್ಷರ ಗಾತ್ರ

ಕೋ ಧರ್ಮೋ ಭೂತದಯಾ ಕಿಂ ಸೌಖ್ಯಮರೋಗಿತಾ ಜಗತಿ ಜಂತೋಃ ।

ಕಃ ಸ್ನೇಹಃ ಸದ್ಭಾವಃ ಕಿಂ ಪಾಂಡಿತ್ಯಂ ಪರಿಚ್ಛೇದಃ ।।

ಇದರ ತಾತ್ಪರ್ಯ ಹೀಗೆ:

’ಲೋಕದ ಜನರಿಗೆ ಧರ್ಮ ಯಾವುದು? ಭೂತದಯೆ. ಸುಖ ಯಾವುದು? ರೋಗ ಇಲ್ಲದಿರುವಿಕೆ. ಸ್ನೇಹ ಯಾವುದು? ಸದ್ಭಾವನೆಯೇ ಸ್ನೇಹ. ಪಾಂಡಿತ್ಯ ಎಂದರೆ ಯಾವುದು? ವಿವೇಕದಿಂದ ವಿಮರ್ಶೆಮಾಡುವುದೇ ಪಾಂಡಿತ್ಯ.’

ಭೂತದಯೆ ಎಂದರೆ ಎಲ್ಲ ಜೀವಿಗಳ ವಿಷಯದಲ್ಲೂ ದಯೆಯಿಂದ ನಡೆದುಕೊಳ್ಳುವುದು. ಯಾರಿಗೂ ತೊಂದರೆ ಕೊಡದಂಥ ಜೀವನವಿಧಾನವನ್ನು ರೂಪಿಸಿಕೊಳ್ಳುವುದು. ಇದೇ ನಾವೆಲ್ಲರೂ‍ಪಾಲಿಸಬೇಕಾದ ಧರ್ಮ ಎನ್ನುತ್ತಿದೆ, ಸುಭಾಷಿತ. ಧರ್ಮದ ಕೆಲಸವಾದರೂ ಏನು? ಎಲ್ಲರನ್ನೂ ಕಾಪಾಡುವುದು, ಉದ್ಧಾರಮಾಡುವುದು. ಒಬ್ಬರು ಇನ್ನೊಬ್ಬರಿಗೆ ತೊಂದರೆ ಕೊಡದಂತೆ ಎಲ್ಲರೂ ನಡೆದುಕೊಂಡರೆ ಆಗ ಎಲ್ಲರೂ ಸುರಕ್ಷಿತರಾಗಿಯೇ ಇರುತ್ತಾರಲ್ಲವೆ?

ನಾವೆಲ್ಲರೂ ಸುಖವನ್ನು ಬಯಸುವವರೇ. ಆದರೆ ಸುಖ ಎಂದರೆ ಏನು? ಸುಭಾಷಿತ ಸ್ಪಷ್ಟವಾಗಿ ಹೇಳುತ್ತಿದೆ: ಆರೋಗ್ಯವಾಗಿರುವುದೇ ಸುಖ. ಆರೋಗ್ಯದ ಬೆಲೆ ನಮಗೆ ಸುಲಭದಲ್ಲಿ ಗೊತ್ತಾಗುವುದಿಲ್ಲ; ಅದು ಕೈಕೊಟ್ಟಾಗ ಮಾತ್ರವೇ ಅದರ ಮಹತ್ವ ನಮ್ಮ ಅರಿವಿಗೆ ಬರುವುದು. ಇಡಿಯ ಜಗತ್ತು ಈಗ ಅನಾರೋಗ್ಯದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಆದರೆ ಜನರಿಗೆ ಇನ್ನೂ ಆರೋಗ್ಯ ಎಂಬ ಸುಖದ ಬಗ್ಗೆಯೂ, ಸಂಪತ್ತಿನ ಬಗ್ಗೆಯೂ ಮನವರಿಕೆಯಾದಂತಿಲ್ಲ.

ಮನುಷ್ಯ ಸಂಘಜೀವಿ; ಅವನು ಸಹಜೀವಿಗಳೊಂದಿಗೆ ಸಹಮಾನವರೊಂದಿಗೆ ಬದುಕುವುದು ಅನಿವಾರ್ಯ. ಎಂದರೆ ಎಲ್ಲರೊಂದಿಗೆ ಸ್ನೇಹದಿಂದ ನಡೆದುಕೊಳ್ಳಬೇಕು. ಹಾಗಾದರೆ ಸ್ನೇಹ ಎಂದರೆ ಏನು? ಸುಭಾಷಿತ ಹೇಳುತ್ತಿದೆ, ಸದ್ಭಾವನೆಯೇ ಸ್ನೇಹ ಎಂದು. ನಾವು ಅಂತರಂಗದಲ್ಲಿ ಎಲ್ಲರ ಬಗ್ಗೆಯೂ ಒಳ್ಳೆಯ ಭಾವನೆಯನ್ನು ತುಂಬಿಕೊಂಡಿದ್ದರೆ ಆಗ ಸ್ನೇಹ ಎನ್ನುವುದು ಸಹಜಸ್ವಭಾವವಾಗುತ್ತದೆ.

ನಾವೆಲ್ಲರೂ ವಿದ್ಯಾವಂತರು; ನಮ್ಮ ಮಕ್ಕಳು ನಮಗಿಂತಲೂ ಹೆಚ್ಚು ವಿದ್ಯಾವಂತರಾಗಬೇಕು – ಎಂದೂ ಆಶಿಸುತ್ತಿರುತ್ತೇವೆ. ವಿದ್ಯೆಯನ್ನು ಚೆನ್ನಾಗಿ ಸಂಪಾದಿಸಿರುವುದೇ ವಿದ್ಯಾವಂತನ ಲಕ್ಷಣ. ಅದನ್ನೇ ಪಾಂಡಿತ್ಯ ಎಂದು ಕರೆಯವುದು. ಕೇವಲ ಪುಸ್ತಕಗಳಲ್ಲಿ ಇರುವುದನ್ನು ಉಂಡುಂಡೆಯಾಗಿ ನುಂಗುವುದೇ ಪಾಂಡಿತ್ಯ ಅಲ್ಲ. ನಾವು ಓದಿರುವುದನ್ನು, ಕೇಳಿರುವುದನ್ನು, ನೋಡಿರುವುದನ್ನು ಚೆನ್ನಾಗಿ ಪರಾಮರ್ಶಿಸಿ, ಅದು ಯುಕ್ತವಾಗಿದೆಯೇ ಅಯುಕ್ತವಾಗಿದೆಯೇ ಎಂದು ಸತರ್ಕದಿಂದ ಕಂಡುಕೊಳ್ಳುವುದೇ ದಿಟವಾದ ಪಾಂಡಿತ್ಯ.

ನಮ್ಮ ಜೀವನವನ್ನು ಸುಂದರವಾಗಿಸಬಲ್ಲ ಧರ್ಮವನ್ನೂ ಸುಖವನ್ನೂ ಸ್ನೇಹವನ್ನೂ ವಿದ್ಯೆಯನ್ನೂ ಸಂಪಾದಿಸುವುದರಲ್ಲಿಯೇ ನಮ್ಮ ಸಾರ್ಥಕತೆಯ ಗುಟ್ಟು ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT