ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಈ ವಿಪತ್ತು ವಿಪತ್ತೇ ಅಲ್ಲ!

Last Updated 11 ಜುಲೈ 2020, 19:31 IST
ಅಕ್ಷರ ಗಾತ್ರ

ವಿಪದೋ ನೈವ ವಿಪದಃ ಸಂಪದೋ ನೈವ ಸಂಪದಃ ।
ವಿಪದ್ವಿಸ್ಮರಣಂ ವಿಷ್ಣೋಃ ಸಂಪನ್ನಾರಾಯಣಸ್ಮೃತಿಃ ।।

ಇದರ ತಾತ್ಪರ್ಯ ಹೀಗೆ:

‘ವಿಪತ್ತುಗಳು ವಿಪತ್ತುಗಳಲ್ಲ; ಐಶ್ವರ್ಯಗಳು ಐಶ್ವರ್ಯಗಳಲ್ಲ; ವಿಷ್ಣುವನ್ನು ಮರೆಯುವುದೇ ವಿಪತ್ತು; ಸ್ಮರಿಸಿಕೊಳ್ಳುವುದೇ ಸಂಪತ್ತು.’

ಈ ಶ್ಲೋಕ ಭಕ್ತಿಯ ಪಾರಮ್ಯವನ್ನು ಸೂಚಿಸುತ್ತಿದೆ ಎಂದು ಅನಿಸುವುದು ಸಹಜ. ಆದರೆ ನಮ್ಮ ತಿಳಿವಳಿಕೆಯ ಬಗ್ಗೆಯೂ ಇದು ಗಮನವನ್ನು ಸೆಳೆಯುತ್ತಿದೆ.

ನಮಗೆ ಎದುರಾಗಿರುವ ವಿಪತ್ತುಗಳನ್ನೇ ನಾವು ದಿಟವಾದ ವಿಪತ್ತುಗಳು ಎಂದುಕೊಳ್ಳುತ್ತೇವೆ; ಹೀಗೆಯೇ ನಮ್ಮಲ್ಲಿರುವುದನ್ನೇ ನಾವು ಸಂಪತ್ತು ಎಂದು ಸಂತೋಷದಲ್ಲಿರುತ್ತೇವೆ. ಆದರೆ ಸುಭಾಷಿತ ನಮ್ಮ ಈ ಎರಡು ನಿಲುವುಗಳನ್ನೂ ಸರಿಯಿಲ್ಲ ಎಂದು ಹೇಳಿದೆ. ಅಷ್ಟು ಮಾತ್ರವಲ್ಲ, ದಿಟವಾದ ವಿಪತ್ತು ಮತ್ತು ಸಂಪತ್ತು ಯಾವುವು ಎಂಬುದನ್ನೂ ಕಾಣಿಸಿದೆ.

ನಮಗೆ ಈಗ ಎದುರಾಗಿರುವ ವಿಪತ್ತು ಅದು ದಿಟವಾದ ವಿಪತ್ತೇ ಅಲ್ಲವಂತೆ. ಹಾಗಾದರೆ ವಿಪತ್ತು ಯಾವುದು? ವಿಷ್ಣುವನ್ನು ಮರೆಯುವುದೇ ವಿಪತ್ತು.

ವಿಷ್ಣು ಎಂದರೆ ಯಾರು? ನಮಗೆ ಚತುರ್ಭುಜನಾದ, ಶಂಖ ಚಕ್ರ ಗದಾ ಪದ್ಮಗಳನ್ನು ಹಿಡಿದಿರುವ ವಿಷ್ಣುವಿನ ಕಲ್ಪನೆ ಗೊತ್ತಿದೆ. ವಿಷ್ಣು ಎಂದರೆ ಇಷ್ಟುಮಾತ್ರವೇ ಅಲ್ಲ; ’ವಿಷ್ಣು‘ ಎಂಬ ಶಬ್ದಕ್ಕೆ ವಿಶೇಷವಾದ ಅರ್ಥವಿದೆ: ಎಲ್ಲೆಲ್ಲೂ ವ್ಯಾಪಿಸಿರುವ ತತ್ತ್ವವೇ ವಿಷ್ಣುತತ್ತ್ವ.

ನಮ್ಮ ಗ್ರಹಿಕೆ–ಯೋಚನೆಗಳೆಲ್ಲವೂ ಸಂಕುಚಿತವಾಗಿರುತ್ತವೆ. ನಮ್ಮ ಕಣ್ಣಿಗೆ ಏನು ಕಾಣುತ್ತದೆಯೋ ಎಷ್ಟು ಕಾಣುತ್ತದೆಯೋ ಅಷ್ಟೇ ಜಗತ್ತು ಎಂದು ಭಾವಿಸಿಕೊಂಡು ಅದನ್ನೇ ಸತ್ಯವೆಂದು ನಂಬಿ, ಬದುಕುತ್ತಿರುತ್ತೇವೆ. ಈ ಸಣ್ಣ ಪ್ರಪಂಚದಲ್ಲಿ ಬರುವ ಕಷ್ಟಗಳನ್ನೇ ಕಷ್ಟಗಳು ಎಂದೂ, ಸುಖಗಳನ್ನೇ ಸುಖಗಳು ಎಂದು ಸ್ವೀಕರಿಸಿಕೊಂಡು ಕೂಪಮಂಡೂಕಗಳಾಗಿ ಬದುಕುತ್ತಿರುತ್ತೇವೆ. ಸುಭಾಷಿತ ನಮ್ಮನ್ನು ಈ ಕೂಪದಿಂದ ಹೊರಗೆ ತರುವಂಥ ಪ್ರಯತ್ನವನ್ನು ಮಾಡುತ್ತಿದೆ.

ಇಷ್ಟೇ ಅಲ್ಲ, ನಮಗೆ ಎದುರಾಗಿರುವ ಕಷ್ಟವನ್ನೇ ನಮ್ಮ ಪ್ರಪಂಚವನ್ನಾಗಿಯೂ ಮಾಡಿಕೊಂಡು ನರಳುತ್ತಿರುತ್ತೇವೆ. ನಮ್ಮ ಕಷ್ಟ, ನಮ್ಮ ಸುಖ – ಎರಡೂ ನಮ್ಮ ಕೈಯಲ್ಲೇ ಇದೆ ಎಂದೂ ನಂಬಿಕೊಂಡು ಇನ್ನಷ್ಟು ನರಳಾಟಕ್ಕೆ ತುತ್ತಾಗಿರುತ್ತೇವೆ. ಸುಭಾಷಿತ ಈ ಸ್ಥಿತಿಯಿಂದಲೂ ನಮ್ಮನ್ನು ಕಾಪಾಡುತ್ತಿದೆ. ‘ನಮಗೆ ಕಾಣದ ಚೈತನ್ಯವೊಂದು ಇಡಿಯ ಸೃಷ್ಟಿಯನ್ನು ಆವರಿಸಿದೆ. ಅದನ್ನು ತಿಳಿ. ನೀನು ಯಾವುದನ್ನು ದುಃಖ ಎಂದುಕೊಂಡಿದ್ದೀಯೋ ಅದು ನೈಜವಾದ ದುಃಖ ಆಗಿರಲಾರದು; ಅಂತೆಯೇ ನೀನು ಸುಖ ಎಂದು ಭಾವಿಸಿಕೊಂಡಿರುವುದೂ ದಿಟವಾದ ಸುಖವಾಗಿರಲಾರದು. ನಿನ್ನ ಅಳತೆಗೆ ಮೀರಿದ ವಿವರಗಳು ಜಗತ್ತಿನಲ್ಲಿ ಇವೆ. ಅವನ್ನು ಮರೆಯಬೇಡ. ನಿನ್ನ ಸ್ವಾರ್ಥಕೇಂದ್ರಿತ ಆಲೋಚನೆಗಳಿಂದ ಹೊರಗೆ ಬಾ. ನಿನ್ನನ್ನು ಕಾಪಾಡಬಲ್ಲ ಚೈತನ್ಯವೊಂದು ನಿನ್ನ ಆಹ್ವಾನಕ್ಕೆ ಕಾಯುತ್ತಿದೆ‘ ಎಂಬ ಭರವಸೆಯನ್ನು ಈ ಸುಭಾಷಿತ ನೀಡುತ್ತಿದೆ. ಹೀಗಾಗಿಯೇ ನಾವು ವಿಪತ್ತು ಎಂದು ಎಣಿಸಿರುವುದು ದಿಟವಾದ ವಿಪತ್ತು ಅಲ್ಲ, ನಮ್ಮ ಎಣಿಕೆಯ ಸಂಪತ್ತು ಅದು ದಿಟವಾದ ಸಂಪತ್ತು ಅಲ್ಲ – ಎಂದು ಸುಭಾಷಿತ ನಿರಾಕರಿಸುತ್ತಿರುವುದು.

ವಿಶ್ವತತ್ತ್ವದ ಮಹಾಸಂಪರ್ಕ ಜಾಲದಲ್ಲಿ ನಾವು–ನೀವು ಒಂದೊಂದು ಎಳೆಗಳು ಮಾತ್ರ ಎಂಬ ಅರಿವನ್ನೂ ಇದು ನೀಡುವಂತಿದೆ. ಹೀಗಾಗಿಯೇ ಅದು ವಿಷ್ಣುವನ್ನು ಸ್ಮರಿಸದಿರುವುದೇ ವಿಪತ್ತು ಎಂದು ಘೋಷಿಸುತ್ತಿರುವುದು. ಎಲ್ಲೆಲ್ಲೂ ಇರುವ ನಿನ್ನತನನವನ್ನು ನೋಡು – ಎಂದು ಇದು ಸಾರುತ್ತಿದೆ. ನಮ್ಮ ವಿಪತ್ತಿನ ಕಲ್ಪನೆಗೆ ಕಾರಣವಾಗಿರುವುದು ನಮ್ಮ ಸಂಪತ್ತಿನ ಕಲ್ಪನೆಯೇ ಆಗಿರುತ್ತದೆ. ನಮ್ಮ ಸುಖದ ಕಲ್ಪನೆಯೇ ನಮ್ಮ ದುಃಖದ ಕಲ್ಪನೆಯನ್ನು ನಿರ್ಧರಿಸುತ್ತದೆ, ಅಲ್ಲವೆ? ಹೀಗಾಗಿಯೇ ಸುಭಾಷಿತ ನಮ್ಮ ಕಲ್ಪನೆಯ ಸಂಪತ್ತನ್ನೂ ನಿರಾಕರಿಸಿದೆ. ವೈಶ್ವಿಕತತ್ತ್ವದ ಅನುಸಂಧಾನವೇ ಸಂಪತ್ತು. ಎಂದರೆ ಇಡಿಯ ಜಗತ್ತು ನನ್ನ ಮನೆ – ಎಂಬ ಕಲ್ಪನೆ. ಆಗ ನನ್ನ ವಿಪತ್ತಿನ ಕಾಲದಲ್ಲಿ ಇಡಿಯ ಪ್ರಪಂಚವೇ ನನ್ನ ಜೊತೆಗಿದೆ – ಎಂಬ ದೊಡ್ಡ ಭರವಸೆ ಸಹಜವಾಗಿಯೇ ನಮಗೆ ಒದಗುತ್ತದೆ, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT