ಗುರುವಾರ , ಮಾರ್ಚ್ 4, 2021
18 °C

ದಿನದ ಸೂಕ್ತಿ: ವ್ಯಕ್ತಿತ್ವದ ಗುಟ್ಟು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಆರಭಂತೇಲ್ಪಮೇವಾಜ್ಞಾಃ ಕಾಮಂ ವ್ಯಗ್ರಾ ಭವಂತಿ ಚ ।

ಮಹಾರಂಭಾಃ ಕೃತಧಿಯಃ ತಿಷ್ಠಂತಿ ಚ ನಿರಾಕುಲಾಃ ।।

ಇದರ ತಾತ್ಪರ್ಯ ಹೀಗೆ:

‘ಸಾಮಾನ್ಯಬುದ್ಧಿಯುಳ್ಳವರು ಚಿಕ್ಕ ಕೆಲಸವನ್ನು ಆರಂಭಿಸಿದರೂ ತುಂಬ ಗೊಂದಲಕ್ಕೆ ಒಳಗಾಗುತ್ತಾರೆ, ಚಿಂತೆಗೆ ತುತ್ತಾಗುತ್ತಾರೆ. ಆದರೆ ವಿವೇಕಿಗಳು ದೊಡ್ಡ ದೊಡ್ಡ ಕೆಲಸಗಳಲ್ಲಿ ತೊಡಗಿದರೂ ಗಾಬರಿ ಇಲ್ಲದೆ ಶಾಂತವಾಗಿರುತ್ತಾರೆ.’

ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತೊಂದಿದೆ. ಇಲ್ಲಿ ಸುಭಾಷಿತ ಹೇಳುತ್ತಿರುವುದು ಅಂಥದ್ದೇ ಸಂಗತಿಯನ್ನು. 

ಕೆಲವರು ಇರುತ್ತಾರೆ; ಅವರು ಮಾಡುವ ಸಣ್ಣ ಸಣ್ಣ ಕೆಲಸಗಳನ್ನೇ ದೊಡ್ಡ ದೊಡ್ಡ ಕೆಲಸಗಳೋ ಎಂಬಂತೆ ಅರಚುತ್ತಿರುತ್ತಾರೆ. ನಾಲ್ಕಾಣೆ ದಾನವನ್ನು ಮಾಡಿ ಇಡೀ ಊರಿಗೆ ಕಾಣುವಷ್ಟು ಫಲಕದಲ್ಲಿ ತಮ್ಮ ಹೆಸರನ್ನು ಪ್ರದರ್ಶಿಸಿಕೊಳ್ಳುತ್ತಾರೆ. ಮಾತ್ರವಲ್ಲ, ಹತ್ತು ಹೆಜ್ಜೆಯನ್ನು ನಡೆದು ಹತ್ತು ಮೈಲಿಗಳಷ್ಟು ಓಡಿಬಂದೆವು ಎಂಬಂತೆ ಆಯಾಸಗೊಳ್ಳುತ್ತಾರೆ. ಸುಭಾಷಿತ ಇಂಥವರನ್ನು ಕುರಿತು ಇನ್ನೂ ಒಂದು ಮಾತನ್ನು ಹೇಳುತ್ತಿದೆ, ಚಿಕ್ಕ ಕೆಲಸವನ್ನು ಆರಂಭಿಸಿದರೂ ತುಂಬ ಗಾಬರಿಗೊಳ್ಳುತ್ತಾರೆ; ಅದನ್ನು ಹೇಗೆ ಮಾಡುವುದು, ಹೇಗೆ ಮುಗಿಸುವುದು ಎಂದು ಯೋಚನೆಗೆ ಬೀಳುತ್ತಾರೆ; ಸಣ್ಣ ಸಣ್ಣ ಸಮಸ್ಯೆಗಳಿಗೂ ಕಂಗಾಲಾಗುತ್ತಾರೆ. ಇದಕ್ಕೆ ಕಾರಣವೇನು? ಅವರ ಸಣ್ಣತನವೇ ಕಾರಣ. ಅವರ ಕ್ಷುದ್ರತನವೇ ಅವರ ವ್ಯಕ್ತಿತ್ವದ ಕಣ ಕಣದಲ್ಲೂ ಪುಟಿಯುತ್ತಿರುತ್ತದೆಯಷ್ಟೆ!ಕೆಲವರು ರಾಜಕಾರಣಿಗಳು ತಾವು ಮಾಡುವ ಸಣ್ಣ ಸಣ್ಣ ಕೆಲಸಗಳಿಗೆ ಪಡೆಯುವ ಪ್ರಚಾರವನ್ನೂ ಈ ಗುಂಪಿಗೆ ಸೇರಿಸಬಹುದು.

ಇನ್ನು ಕೆಲವರು ಇರುತ್ತಾರೆ, ಅವರು ಎಷ್ಟೇ ದೊಡ್ಡ ಕೆಲಸಗಳನ್ನು ಮಾಡಿದರೂ ಪ್ರಚಾರದಿಂದ ದೂರವೇ ಉಳಿದಿರುತ್ತಾರೆ. ಮಾತ್ರವಲ್ಲ, ಆ ಕೆಲಸಗಳನ್ನು ಅನಾಯಾಸವಾಗಿಯೂ ಮಾಡುತ್ತಾರೆ. ಅಲ್ಪರು ತಾವು ಮಾಡುವ ಸಣ್ಣ ಕೆಲಸದಲ್ಲೂ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದರೆ, ಪ್ರಾಜ್ಞರು ಎಷ್ಟೇ ದೊಡ್ಡ ಕೆಲಸಗಳನ್ನು ಮಾಡಿದರೂ ಶಾಂತರಾಗಿರುತ್ತಾರೆ. ಸಮಾಜದಲ್ಲಿ ಇಂಥವರೂ ಸಾಕಷ್ಟು ಸಂಖ್ಯೆಯಲ್ಲಿಯೇ ಇರುತ್ತಾರೆ. ಇಲ್ಲವಾದಲ್ಲಿ ನಮಗೆ ನೆಮ್ಮದಿ ಎನ್ನುವುದೇ ಇರುತ್ತಿರಲಿಲ್ಲ.

ಸುಭಾಷಿತ ಇಲ್ಲಿ ಹೇಳುತ್ತಿರುವುದು ಏನೆಂದರೆ, ನಮ್ಮ ವ್ಯಕ್ತಿತ್ವದ ಸಣ್ಣತನಗಳೂ ದೊಡ್ಡತನಗಳೂ ಶಕ್ತಿಗಳೂ ಮಿತಿಗಳೂ ನಾವು ಮಾಡುವ ಎಲ್ಲ ಕೆಲಸಗಳಲ್ಲೂ ಪ್ರಕಟವಾಗಿರುತ್ತವೆ. ನಾವು ನಮ್ಮಲ್ಲಿ ಒಳ್ಳೆಯತನವನ್ನು ತುಂಬಿಸಿಕೊಂಡರೆ ಆ ಒಳ್ಳೆಯತನವೇ ಎಲ್ಲ ಕೆಲಸಗಳಲ್ಲೂ ಕಾಣಿಸಿಕೊಳ್ಳುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.