ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪಸ್ಸಿಗೆ ತೊಡಗಿದ ಪಾರ್ವತಿ

Last Updated 19 ಅಕ್ಟೋಬರ್ 2018, 19:43 IST
ಅಕ್ಷರ ಗಾತ್ರ

ಮನ್ಮಥನನ್ನು ಕಳೆದುಕೊಂಡ ರತಿಯ ದುಃಖ ಈಗ ಮುಗಿಲನ್ನು ಮುಟ್ಟಿದೆ. ಇದು ‘ಕುಮಾರಸಂಭವ’ದ ನಾಲ್ಕನೆಯ ಸರ್ಗದ ವಿಷಯ.

ರತಿಯ ವಿಲಾಪವನ್ನು ನೋಡುವ ಮೊದಲು ಮನ್ಮಥನ ಬಗ್ಗೆ ಒಂದು ವಿವರವನ್ನು ತಿಳಿಯೋಣ. ಮನುಷ್ಯನ ಮೊದಲ ‘ಸ್ವ–ಭಾವ’ವಾದ ಕಾಮವೇ ಪುರುಷಾರ್ಥವಾದದ್ದು; ಅದೇ ಮನ್ಮಥನಾಗಿ ‘ರೂಪ’ವನ್ನು ಪಡೆದದ್ದು; ಮನುಷ್ಯನ ತಲೆಯನ್ನು ಕೆಡಿಸುವ ಶತ್ರುವೂ ಆದದ್ದು – ಈ ವಿವರಗಳನ್ನು ನೋಡಿದೆವು. ಮನ್ಮಥ ಶಿವನ ವ್ರತಭಂಗಕ್ಕೆ ಮಾತ್ರವೇ ಸಿದ್ಧನಾದವನಲ್ಲ; ಅವನು ‘ಮಾರ’ನಾಗಿ ಸಿದ್ಧಾರ್ಥನನ್ನೂ ಕಾಡಿದವನು; ಸಿದ್ಧಾರ್ಥನು ಬುದ್ಧನಾಗುವುದನ್ನು ತಡೆಯಲು ಪ್ರಯತ್ನಪಟ್ಟವನು.

ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಲು ಅರಮನೆಯಿಂದ ಹೊರಟವನು ಸಿದ್ಧಾರ್ಥ. ಅವನು ಏಕಾಂತದಲ್ಲಿ ಸತ್ಯಸಾಕ್ಷಾತ್ಕಾರಕ್ಕಾಗಿ ತಪಸ್ಸಿನಲ್ಲಿದ್ದಾಗ ಮಾರನು ಅವನ ಏಕಾಗ್ರತೆಗೆ ಅಡ್ಡಿಯನ್ನುಂಟುಮಾಡಲು ಸತತವಾಗಿ ಏಳು ವರ್ಷಗಳು ದಾಳಿ ಮಾಡುತ್ತಾನೆ; ಆದರೆ ಸಿದ್ಧಾರ್ಥ ಅವನ ಆಕ್ರಮಣಕ್ಕೆ ವಶನಾಗುವುದಿಲ್ಲ. ಈ ಸಂದರ್ಭವನ್ನು ‘ಲಲಿತವಿಸ್ತರ’ವು ಚೆನ್ನಾಗಿ ವರ್ಣಿಸಿದೆ. ಮಾರನ ಪುತ್ರಿಯರು ಸಿದ್ಧಾರ್ಥನಿಗೆ ಒಡ್ಡುವ ಆಮಿಷಗಳ ವಿವರಗಳನ್ನು ನೋಡಿ ಹೇಗಿವೆ:

‘ಪ್ರಿಯನೇ! ಋತಶ್ರೇಷ್ಠ ವಸಂತಋತು ಬಂದಿದೆ. ಮರಗಿಡಗಳೆಲ್ಲಾ ಹೂ ಬಿಟ್ಟಿವೆ. ನಿನ್ನ ರೂಪ ಶ್ರೇಷ್ಠವಾದುದು. ಸುಲಕ್ಷಣ ಶೋಭಿತವಾದುದು. ಬಾ ರಮಿಸೋಣ. ನಾವು ಒಳ್ಳೆಯ ವಂಶದಲ್ಲಿ ಹುಟ್ಟಿ ಒಳ್ಳೆಯ ಅಂದಚಂದಗಳನ್ನು ಹೊಂದಿದವರು. ದೇವಮಾನವರಿಗೆ, ಅವರ ಸಂತತಿಯವರಿಗೆ ಸುಖ ನೀಡುವಂಥವರು. ಏಳು ಎದ್ದೇಳು! ಬೇಗನೆ ಯೌವನವನ್ನು ಅನುಭವಿಸು. ಬೋಧಿಯು ದುರ್ಲಭವಾದುದು. ನಿನ್ನ ಮನಸ್ಸನ್ನು ಇತ್ತ ಹೊರಳಿಸು. ಈ ದೇವಕನ್ಯೆಯರೆಲ್ಲರೂ ನಿನಗಾಗಿ ಅಲಂಕರಿಸಿಕೊಂಡು ಬಂದಿದ್ದಾರೆ. ಅವರ ರೂಪವನ್ನು ನೋಡಿ ರಾಗರತನಾಗಿ ಯಾವನು ತಾನೇ ಆನಂದಿಸುವುದಿಲ್ಲ ಹೇಳು? ದೇಹವು ಜರ್ಜರವಾಗಿ ಜೀವನದಲ್ಲಿ ನೀರಸಗೊಂಡವನೂ ಕೂಡ ಆನಂದಿಸುತ್ತಾನೆ. ನಮ್ಮತ್ತ ನೋಡು. ನಮ್ಮ ಕೇಶರಾಶಿ ಅದೆಷ್ಟು ಮೃದುವಾಗಿದೆ. ನೋಡು ಅವು ಸುರಭಿ ಗಂಧವನ್ನು ಹೊರಸೂಸುತ್ತಿವೆ. ಕಿರೀಟ ಕುಂಡಲಗಳನ್ನು ಧರಿಸಿದ್ದೇವೆ. ಮುಖಗಳ ಮೇಲೆ ಮಕರಿಕಾಪತ್ರಗಳನ್ನು ತಿದ್ದಿಕೊಂಡಿದ್ದೇವೆ. ಹಣೆಯ ಮೇಲೆ ಸುಗಂಧ ಲೇಪಗಳನ್ನು ಬಳಿದುಕೊಂಡಿದ್ದೇವೆ.

‘ನಮ್ಮ ಕಣ್ಣುಗಳು ಪದ್ಮಪತ್ರಗಳಂತೆ ಶುದ್ಧವಾಗಿಯೂ ವಿಶಾಲವಾಗಿಯೂ ಇವೆ. ನಮ್ಮ ಮುಖಗಳು ಪರಿಪೂರ್ಣಚಂದ್ರಸದೃಶವಾಗಿವೆ. ನಮ್ಮ ತುಟಿಗಳು ಹಣ್ಣಾದ ತೊಂಡೆಯ ಹಣ್ಣಿನಂತಿವೆ. ನಮ್ಮ ಹಲ್ಲುಗಳು ಶಂಖಕುಂದ ಹಿಮಗಳಂತೆ ಬೆಳ್ಳಗೆ ಇವೆ. ರತಿಲಾಲಸರಾದ ನಮ್ಮನ್ನು, ಎಲೈ ಕಾಂತನೇ ನೋಡು... ಈ ದಾಸಿಯರನ್ನು ಕಣ್ಣೆತ್ತಿ ನೋಡು. ಹಂಸಗಳಂತೆ ನೆಮ್ಮದಿಯಾಗಿರುವ ಆ ನಡಿಗೆ, ಮಂಜುಳಮನೋಜ್ಞವಾಗಿ ಮನ್ಮಥನ ಮಾತುಕಥೆಯಂತೆ ಕೇಳಿಸುವ ಆ ನುಡಿಗಳು. ಇಂಥಾ ರೂಪಭೂಷಣಗಳೂ ಇಂಥಾ ದಿವ್ಯರತಿ ಪಾಂಡಿತ್ಯ ಗೀತವಾದ್ಯ ನೃತ್ಯಗಳಲ್ಲಿ ಸಂಪೂರ್ಣ ಶಿಕ್ಷಣ, ರತಿಗಾಗಿಯೇ ಏರ್ಪಟ್ಟ ರೂಪ, ಇಂಥ ಕಾಮಲಾಲಸೆಯನ್ನು ಇಷ್ಟಪಡದೆ ಹೋದೆಯಾ!...’

[object Object]

(ಅನುವಾದ: ಆರ್. ಶೇಷಶಾಸ್ತ್ರಿ)

ಹೀಗೆ ಮಾರನ ಪುತ್ರಿಯರು ತಮ್ಮ ಶರೀರಸೌಂದರ್ಯವನ್ನೂ ಮನಸ್ಸಿನ ಬಯಕೆಯನ್ನೂ ಸಿದ್ಧಾರ್ಥನ ಮುಂದೆ ನಿವೇದಿಸಿಕೊಂಡರು. ಆದರೆ ಬೋಧಿಸತ್ತ್ವನಾದ ಸಿದ್ಧಾರ್ಥನು ಅವರಿಗೆ ವಶನಾಗಲಿಲ್ಲ. ಕಥೆ ಮುಂದುವರಿಯುತ್ತದೆ.

‘ಲಲಿತವಿಸ್ತರ’ದ ಮಾರನ ಆಕ್ರಮಣಕ್ಕೂ ‘ಕುಮಾರಸಂಭವ’ದಲ್ಲಿರುವ ಕಾಮನ ಆಗಮನಕ್ಕೂ ಇರುವ ಸಾದೃಶ್ಯಗಳು ಗಮನೀಯವಾದವು.

ಪರಂಪರೆಯಲ್ಲಿ ಒಂದೇ ಪ್ರತೀಕ ಹೇಗೆಲ್ಲ ಅವಸ್ಥಾಂತರಗಳನ್ನು ಪಡೆಯುತ್ತವೆ ಎನ್ನುವುದಕ್ಕೂ ಮೇಲಣ ಮಾತುಗಳು ನಿದರ್ಶನ. ಇಲ್ಲಿ ಇನ್ನೊಂದು ಉದಾಹರಣೆಯನ್ನು ಕೂಡ ನೋಡಬಹುದು. ಕಾಮ ಎಂದರೆ ಕೇವಲ ತಪಸ್ಸಿಗೆ ಭಂಗವನ್ನು ಉಂಟುಮಾಡುವವನು, ತೊಂದರೆಗೆ ಒಡ್ಡುವವನು, ಪ್ರಣಯಕ್ಕೆ ಆಸ್ಪದಕೊಡುವವನು – ಎಂದಷ್ಟೆ ಅಲ್ಲ; ಅವನು ನಮ್ಮ ಜೀವನದ ಏಳಿಗೆಗೂ ಒದಗುವವನು; ನಮ್ಮ ವ್ಯಕ್ತಿತ್ವಕ್ಕೂ ಬಲ ತುಂಬುವವನು. ಕಾಮನು ಸಾಕ್ಷಾತ್‌ ಶಿವನ ಮೇಲೆ ಬಾಣವನ್ನು ಹೂಡಲು ಸಿದ್ಧವಾದವನು. ಹಾಗಾದರೆ ಅವನಲ್ಲಿದ್ದ ಅಸ್ತ್ರ–ಶಸ್ತ್ರಗಳಾದರೂ ಯಾವುವು?

‘ಭೋಜಪ್ರಬಂಧ’ದ ಈ ಪದ್ಯವನ್ನು ನೋಡಿ:

ಧನುಃ ಪೌಷ್ಪಂ ಮೌರ್ವೀ ಮಧುಕರಮಯೀ ಚಂಚಲದೃಶಾಂ

ದೃಶಾಂ ಕೋಣೋ ಬಾಣಃ ಸುಹೃದಪಿ ಜಡಾತ್ಮಾ ಹಿಮಕರಃ |

ಸ್ವಯಂ ಚೈವೋsನಂಗಃ ಸಕಲಭುವನಂ ವ್ಯಾಕುಲಯತಿ

ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

ಈ ಪದ್ಯದ ತಾತ್ಪರ್ಯ ಹೀಗೆ:

‘ಮನ್ಮಥನ ಶಸ್ತ್ರ ಯಾವುದು? ಬಿಲ್ಲು. ಅದು ಎಂಥ ಬಿಲ್ಲು? ಹೂವಿನ ಬಿಲ್ಲು! ಈ ಬಿಲ್ಲಿನ ಹೆದೆ ಯಾವುದು ಗೊತ್ತೆ? ದುಂಬಿಗಳು! ಇನ್ನು ಇವನು ಹೂಡುವ ಬಾಣಗಳು? ಚಂಚಲೆಯರಾದ ಸುಂದರಿಯ ಕಣ್ಣೊಟವೇ ಬಾಣ. ಇವನು ಎಸಗುವ ಸರಸಸಂಗ್ರಾಮಕ್ಕೆ ನೆರವಾಗುವ ಸ್ನೇಹಿತನಾದರೂ ಎಂಥವನು? ಜಡನಾಗಿರುವ ಚಂದ್ರನೇ ಇವನ ಮಿತ್ರ. ಹೋಗಲಿ, ಈ ಮನ್ಮಥನಾದರೂ ಹೇಗಿದ್ದಾನೆ? ಇವನಿಗೆ ಶರೀರವೇ ಇಲ್ಲ! ಹೀಗಿದ್ದರೂ ಕೂಡ ಇಡಿಯ ಜಗತ್ತನ್ನೇ ಇವನು ವ್ಯಾಕುಲತೆಗೆ ಒಳಪಡಿಸುತ್ತಿದ್ದಾನೆ. ಮಹಾತ್ಮರು ತಮ್ಮ ಕಾರ್ಯಗಳಲ್ಲಿ ಸಾಧಿಸುವ ಯಶಸ್ಸು ಅವನ ಸತ್ತ್ವದಲ್ಲಿರುತ್ತದೆಯೇ ಹೊರತು ಅವರು ಹಿಡಿದಿರುವ ಶಸ್ತ್ರಗಳಲ್ಲಿ ಅಲ್ಲವಷ್ಟೆ!’

ಜೀವಂತವಾಗಿರುವ ಕಾವ್ಯಪರಂಪರೆಯೊಂದು ಒಂದೇ ಪ್ರತಿಮೆಯನ್ನು ಎಷ್ಟೆಲ್ಲ ವಿಧದಲ್ಲಿ ಬಳಸಿಕೊಂಡು ರಸಾರಾಧನೆಯನ್ನು ಮಾಡಬಲ್ಲದು ಎನ್ನುವುದಕ್ಕೆ ಮೇಲಣ ಪದ್ಯ ಒಳ್ಳೆಯ ನಿದರ್ಶನದಂತಿದೆ.

* * *

ರತಿಯ ವಿಲಾಪ ನಮ್ಮ ಮನಸ್ಸನ್ನು ಕರಗಿಸುವಷ್ಟು ಸಶಕ್ತವಾಗಿ ಕಾಳಿದಾಸ ವಿವರಿಸಿದ್ದಾನೆ. ಇಡಿಯ ಕಾಡೇ ಅವಳೊಂದಿಗೆ ದುಃಖಿಸುತ್ತಿದೆಯೋ ಎನ್ನುವಂತೆ ವರ್ಣಿಸಿದ್ದಾನೆ. ಕರುಣರಸದ ಸೊಗಸಾದ ಭಾಗಗಳನ್ನು ಈ ಸರ್ಗದಲ್ಲಿ ಕಾಣಬಹುದು. ಇಲ್ಲಿ ಆ ಎಲ್ಲ ವರ್ಣನೆಗಳನ್ನೂ ನೋಡಲು ಆಗದು; ಒಂದೇ ಒಂದು ವರ್ಣನೆಯನ್ನು ನೋಡೋಣ. ದೇಹಾಕೃತಿಯಲ್ಲಿರುವ ಮನ್ಮಥನ ಬೂದಿಯ ಮುಂದೆ ರತಿಯು ದುಃಖಿಸುತ್ತಿದ್ದಾಳೆ. ಹಿಂದಿನ ನೆನಪುಗಳನ್ನೆಲ್ಲ ನಿವೇದಿಸಿಕೊಳ್ಳುತ್ತಿದ್ದಾಳೆ; ‘ಭಸ್ಮರೂಪದಿಂದ ಎದ್ದು ಬಾ’ ಎಂದು ಗೋಳಾಡುತ್ತಿದ್ದಾಳೆ. ಸತ್ತು ಭಸ್ಮವಾದವನು ಹೇಗಾದರೂ ಹುಟ್ಟಿ ಬಂದಾನು? ಅವಳು ಹೇಳುವ ಮಾತೊಂದು ಹೀಗಿದೆ:

ಅಯಿ ಸಂಪ್ರತಿ ದೇಹಿ ದರ್ಶನಂ ಸ್ಮರ ಪರ್ಯುತ್ಸಕ ಏಷ ಮಾಧವಃ |

ದಯಿತಾಸ್ವನವಸ್ಥಿತಂ ನೃಣಾಂ ನ ಖಲು ಪ್ರೇಮ ಚಲಂ ಸುಹೃಜ್ಜನೇ ||

‘ಸ್ಮರ! ಈಗಲಾದರೂ ದರ್ಶನವನ್ನು ನೀಡು; ಈ ವಸಂತನು ನಿನ್ನ ದರ್ಶನಕ್ಕಾಗಿ ಉತ್ಸುಕನಾಗಿ ನಿಂತಿದ್ದಾನೆ. ಗಂಡಸರಿಗೆ ಅವರ ಪತ್ನಿಯರ ಮೇಲಣ ಪ್ರೀತಿಯು ತಗ್ಗಬಹುದೇನೋ! ಆದರೆ ಅವರ ಮಿತ್ರರ ಮೇಲಣ ಪ್ರೀತಿಯು ಅಚಲವಲ್ಲವೆ?’

ಮನ್ಮಥನು ಸ್ಥಾಣ್ವಾಶ್ರಮಕ್ಕೆ ಬಂದಿದ್ದೇ ಮಾಧವ, ಎಂದರೆ ವಸಂತನ ಜೊತೆಯಲ್ಲಿ. ವಸಂತನ ಜೊತೆಗಾರಿಕೆಯೇ ತನ್ನ ಕಾರ್ಯಸಾಧನೆಗೆ ದೊಡ್ಡ ಶಕ್ತಿ ಎಂದು ಅವನಿಗೆ ವಿಶ್ವಾಸವಿದ್ದುದರಿಂದಲೇ ಅವನನನ್ನು ಕರೆ ತಂದಿದ್ದ. ಅಂಥ ಪ್ರೀತಿಪಾತ್ರನೂ ವಿಶ್ವಾಸಾರ್ಹನೂ ಆದ ಸ್ನೇಹಿತನಿಗಾಗಿಯಾದರೂ ಮನ್ಮಥನು ಭಸ್ಮದಿಂದ ಎದ್ದುಬಂದಾನು ಎನ್ನುವುದು ರತಿಯ ಆಕ್ರಂದನದ ಆಶಯ. ಕಾವ್ಯಸಂದರ್ಭದ ಹೊರಗೂ ಈ ಶ್ಲೋಕ ಮನೋಜ್ಞವಾಗಿದೆ; ಸ್ನೇಹದ ಔನ್ನತ್ಯವನ್ನು ಇದು ಎತ್ತಿಹಿಡಿಯುತ್ತಿದೆ. ಸ್ನೇಹದ ಹಲವು ಆಯಾಮಗಳು ರಾಮಾಯಣದಲ್ಲೂ ಸೊಗಸಾಗಿ ಕಾಣಿಸಿಕೊಂಡಿವೆಯೆನ್ನಿ.

* * *

‘ಕುಮಾರಸಂಭವ’ದ ಐದನೆಯ ಸರ್ಗದಲ್ಲಿ ಪಾರ್ವತಿಯ ಪಾತ್ರ ಅದ್ಭುತವಾಗಿ ನಿರೂಪಿತವಾಗಿದೆ. ದೇಹಸೌಂದರ್ಯದಿಂದ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅರಿತ ಅವಳು ತಪಸ್ಸಿಗೆ ತೊಡಗುವುದು ಈ ಸರ್ಗದ ವಸ್ತು. ಇಲ್ಲಿಯ ಮೊದಲನೆಯ ಶ್ಲೋಕ ಇಡಿಯ ಭಾರತೀಯ ಸೌಂದರ್ಯಮೀಮಾಂಸೆಯ ಮಹಾಸೂತ್ರದಂತಿದೆ ಎಂದರೆ ಅದೇನೂ ತಪ್ಪಾಗದು:

ತಥಾ ಸಮಕ್ಷಂ ದಹತಾ ಮನೋಭವಂ ಮಿನಕಿನಾ ಭಗ್ನಮನೋರಥಾ ಸತೀ |

ನಿನಿಂದ ರೂಪಂ ಹೃದಯೇನ ಪಾರ್ವತೀ ಪ್ರಯೇಷು ಸೌಭಾಗ್ಯಫಲಾ ಹಿ ಚಾರುತಾ ||

‘ತನ್ನ ಎದುರಿಗೇ ಶಿವನು ಮನ್ಮಥನನ್ನು ದಹಿಸಿರುವುದನ್ನು ನೋಡಿದ ಪಾರ್ವತಿಯ ಮನಸ್ಸು ನಿರಾಶೆಗೊಂಡಿದೆ; ಅವಳು ತನ್ನ ರೂಪವನ್ನೇ ನಿಂದಿಸಿಕೊಂಡಿದ್ದಾಳೆ; ಪ್ರಿಯರಾದವರಲ್ಲಿ ಪರಸ್ಪರ ಪ್ರೇಮವನ್ನು ಉಂಟುಮಾಡುವುದೇ ಸೌಂದರ್ಯದ ದಿಟವಾದ ಫಲ ಎಂದುಕೊಂಡಳು ಅವಳು’. ಇದು ಈ ಮಾತಿನ ಸಾರಾಂಶ.

ಸೌಂದರ್ಯ ಎನ್ನುವುದು ಹೊರಗಿನ ವಿವರಗಳಿಂದ ಸಿದ್ಧವಾಗುವಂಥದ್ದು ಅಲ್ಲ; ಅದೊಂದು ಅಂತರಂಗದ ವಿವರ ಎನ್ನುವುದನ್ನು ಇದು ಧ್ವನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT