ಶನಿವಾರ, ಮೇ 28, 2022
30 °C

ವೇದವ್ಯಾಸರ ಶಿವಪುರಾಣ ಸಾರ: ಶಿವಸ್ವರೂಪವೇ ಸತ್ಯಸ್ವರೂಪ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಉಮೆಯೊಡನೆ ಪ್ರತ್ಯಕ್ಷನಾದ ಮಹೇಶ್ವರ ಶಿವತತ್ವ ಬೋಧಿಸುವಾಗ ‘ಪ್ರಕೃತವಾದ ಈ ಹರನೂ, ಹಿಂದೆ ವೈಕಾಲಿಕವೆಂದು ಹೇಳ ಲ್ಪಟ್ಟ ಅಹಂಕಾರ ಗುಣವಶದಿಂದ ತಾಮಸ ಎನಿಸಿದೆ. ಆದರೆ ಹೆಸರು ಮಾತ್ರ ತಾಮಸವೇ ಹೊರತು, ವಸ್ತುತಃ ತಾಮಸವಲ್ಲ’ ಎನ್ನುತ್ತಾನೆ.

ಶಿವನಾಡಿದ ಮಾತನ್ನು ಕೇಳಿ, ವಿಷ್ಣು ಆ ಮಹೇಶ್ವರನಿಗೆ ನಮಸ್ಕರಿಸಿ, ‘ಓ ದೇವ, ನಿನಗೆ ನಮ್ಮಲ್ಲಿ ಪ್ರೀತಿಯುಂಟಾಗಿ ವರವನ್ನು ಕೊಡಬಯ ಸಿದಲ್ಲಿ ನನಗೆ ಮತ್ತು ಬ್ರಹ್ಮನಿಗೆ ನಿನ್ನೊಬ್ಬನಲ್ಲಿಯೇ ಶಾಶ್ವತವಾಗಿ ಭಕ್ತಿ ನೆಲಸುವಂತೆ ಅನುಗ್ರಹಿಸು. ನೀನು ನಿರ್ಗುಣನಾಗಿದ್ದರೂ ನಿನ್ನ ಲೀಲೆ ಯಿಂದ ಈಗ ಅವತರಿಸಿ ನಮ್ಮಿಬ್ಬರಿಗೂ ಸಹಾಯವನ್ನು ಮಾಡು. ನೀನು ಸಾಕ್ಷಾತ್ ಪರಮೇಶ್ವರನು. ನಾನೀಗ ಬ್ರಹ್ಮನೊಂದಿಗೆ ಜಗಳವಾಡಿದ್ದು ಒಳ್ಳೆಯದೇ ಆಯಿತು. ಅದನ್ನು ನಿವಾರಿಸಲೆಂದೇ ಅಲ್ಲವೇ ನೀನು ಇಲ್ಲಿ ಅವತರಿಸಿದುದು?’ ಎಂದ ವಿಷ್ಣು.

ವಿಷ್ಣು ಮಾತನ್ನು ಕೇಳಿ ಶಿವ ಪ್ರಸನ್ನನಾಗಿ ಹೀಗೆಂದ, ‘ಎಲೈ ವಿಷ್ಣುವೇ, ನಿರ್ಗುಣನೂ ನಿರ್ವಿಕಾರನೂ ಸಚ್ಚಿದಾನಂದಸ್ವರೂಪನೂ ಪರಬ್ರಹ್ಮನೂ ಎನಿಸಿದ ನಾನು ಸಗುಣಸ್ವರೂಪದಿಂದ ಸೃಷ್ಟಿ, ಸ್ಥಿತಿ, ಲಯಗಳನ್ನು ನೆರವೇ
ರಿಸುವೆನು. ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾದ ಸತ್ವ-ರಜಸ್ಸು-ತಮೋಗು ಣಗಳ ವಶದಿಂದ ನಿತ್ಯವೂ ನಿಷ್ಕಲನಾದ ನಾನು, ಬ್ರಹ್ಮ-ವಿಷ್ಣು-ಹರರೆಂಬ ಹೆಸರಿನಿಂದ ಮೂರಾಗಿ ವಿಭಾಗವಾಗಿರುವೆ. ನೀನೂ ಬ್ರಹ್ಮನೂ ನನ್ನನ್ನು ಅವತರಿಸುವಂತೆ ಸ್ತೋತ್ರ ಮಾಡಿರುವಿರಿ. ನಿಮ್ಮ ಪ್ರಾರ್ಥನೆಯನ್ನು ನಡೆಸಿಕೊಡುವೆ‘.

‘ಎಲೈ ಬ್ರಹ್ಮನೇ, ಶ್ರೇಷ್ಠನಾದ ನನ್ನೀರೂಪದಂತೆಯೇ ನಿನ್ನ ಅವಯ
ವದಿಂದ ಮುಂದೆ ನನ್ನ ಸ್ವರೂಪವು ಪ್ರಕಟವಾಗಿ, ಲೋಕದಲ್ಲಿ ರುದ್ರ ನೆಂದು ಹೆಸರಾಗುವುದು. ನನಗಿಂತಲೂ ಯಾವ ಅಂಶದಲ್ಲಿಯೂ ಆ ರುದ್ರನ ಸಾಮರ್ಥ್ಯ ಕಡಿಮೆಯಾಗಿರುವುದಿಲ್ಲ. ಪೂಜೆಯಲ್ಲೂ ವಿಧಿ ಯಲ್ಲೂ ಕ್ರಮದಲ್ಲೂ ನಮ್ಮೀರ್ವರಿಗೂ ಯಾವ ಭೇದವೂ ಇಲ್ಲ. ಯಾವ ರೀತಿ ತಣ್ಣಗಿರುವ ನೀರು, ಬೆಂಕಿಯ ಸಂಬಂಧದಿಂದ ಬಿಸಿ ಏರಿ, ಯಾರೂ ಮುಟ್ಟದಂತಾಗುವುದೋ, ಅದರಂತೆ ನಿರ್ಗುಣನಾದ ನನ್ನ ಸಂಬಂಧದಿಂದ ಆತನಿಗೆ ಬಂಧನವಿಲ್ಲ.

‘ಈಗ ತೋರುತ್ತಿರುವುದೇ ನನ್ನ ಶಿವಸ್ವರೂಪ. ರುದ್ರನ ಸ್ವರೂಪವೂ ಶಿವನಂತೆಯೇ ಇರುತ್ತೆ. ನಮ್ಮೀರ್ವರಿಗೂ ಭೇದವನ್ನೆಂದಿಗೂ ಕಲ್ಪಿಸಬಾ
ರದು. ಏಕರೂಪವಾಗಿರುವುದೇ ಈ ಜಗತ್ತಿನಲ್ಲಿ ಎರಡಾಗಿ ತೋರುತ್ತದೆ. ಚಿನ್ನದಿಂದ ಮಾಡಲ್ಪಟ್ಟ ಒಡವೆಗಳು ನಾನಾ ತೆರನಾಗಿದ್ದರೂ, ಯಾವ ರೀತಿ ಚಿನ್ನವು ಮಾತ್ರ ಬದಲಾಯಿಸದೆ ಒಂದೇ ಮೂಲರೂಪವಾಗಿ ರುವುದೋ, ಅದೇ ರೀತಿ ಹೆಸರಿನಲ್ಲಿ ಮಾತ್ರ ವ್ಯತ್ಯಾಸವೇ ಹೊರತು, ವಸ್ತುತಃ ಭೇದವಿಲ್ಲ.

‘ಮಣ್ಣಿನಿಂದ ಮಾಡಿದ ನಾನಾ ವಿಧವಾದ ಪಾತ್ರೆಗಳು ಬೇರೆ ಬೇರೆ ಹೆಸರು ಆಕಾರಗಳನ್ನು ಪಡೆದರೂ, ಕಾರಣಭೂತವಾದ ಮಣ್ಣೇ ಅಲ್ಲದೆ ಹೇಗೆ ಬೇರೆಯಾಗಲಾರದು. ಹಾಗೆ, ನಮ್ಮೀರ್ವರಿಗೂ ಭೇದವಿಲ್ಲ. ಕಾರ್ಯದಲ್ಲಿ ಕಾರಣವು ಅಡಗಿರುವುದೇ ಇದಕ್ಕೆ ಉದಾಹರಣೆ. ನನಗೂ ರುದ್ರನಿಗೂ ಭೇದವನ್ನು ಹುಡುಕಬೇಡಿ. ಕಣ್ಣಿಗೆ ಕಾಣುವ ಎಲ್ಲ ವಸ್ತುವೂ ನನ್ನ ಶಿವಸ್ವರೂಪವೆಂದೇ ತಿಳಿಯಿರಿ.

‘ನಾನೂ ನೀನೂ ಬ್ರಹ್ಮನೂ ಮುಂದೆ ಅವತರಿಸುವ ರುದ್ರನೂ ಎಲ್ಲರೂ ಒಂದೇ ರೂಪವೆಂದು ತಿಳಿಯಿರಿ; ಮೂವರಲ್ಲಿ ಭೇದವಿಲ್ಲ. ನಮ್ಮಲ್ಲಿ ಭೇದವನ್ನೆಣಿಸಿದರೆ, ಮಾಯಾಬಂಧನಕ್ಕೆ ಸಿಲುಕಿ ತೊಳಲಬೇಕಾ ದೀತು. ಹಾಗಿದ್ದರೂ, ಎಲ್ಲದಕ್ಕೂ ಮೂಲಭೂತವಾದ ಈ ನನ್ನ ಶಿವಸ್ವರೂ ಪವೇ ಸತ್ಯಸ್ವರೂಪ, ಜ್ಞಾನಸ್ವರೂಪ. ಅದು ಅನಂತವಾದುದೂ ಸನಾತನ
ವಾದುದೂ ಎಂದು ಭಾವಿಸಲ್ಪಟ್ಟಿದೆ. ಹೀಗೆ ತಿಳಿದುಕೊಂಡು, ಯಾವಾ ಗಲೂ ಮನಸ್ಸಿನಲ್ಲಿ ತತ್ವಕ್ಕನುಸಾರವಾಗಿ ಧ್ಯಾನಿಸಬೇಕು’ ಎಂದು ಹೇಳಿದ ಪರಶಿವ ಮತ್ತೆ ಮುಂದುವರೆದು ಹೀಗೆ ಹೇಳಿದ:

‘ಓ ಬ್ರಹ್ಮಜ್ಞ, ನಾನು ಹೇಳುವ ಈ ರಹಸ್ಯವನ್ನು ಕೇಳು. ನೀವಿಬ್ಬರೂ ಪ್ರಕೃತಿಯ ದೆಸೆಯಿಂದ ಹುಟ್ಟಿದಿರಿ. ಆದರೆ, ಈ ರುದ್ರನು ಪ್ರಕೃತಿಯಿಂದ ಹುಟ್ಟಿದವನಲ್ಲ. ಅಲ್ಲಿ ನನ್ನಾಜ್ಞೆಯು ಮಾತ್ರ. ಬ್ರಹ್ಮನ ಹುಬ್ಬಿನಿಂದ ನಾನೇ ಅವತರಿಸುವೆನು. ಇದೇ ಕಾರಣದಿಂದ ನೀನು ಸೃಷ್ಟಿಕರ್ತನಾಗು. ನೀನು ಸೃಷ್ಟಿಸಿದುದನ್ನು ಈ ಹರಿಯು ಪಾಲಿಸುತ್ತ ಬರಲಿ. ನನ್ನಂಶಭೂತನಾದ ರುದ್ರನು ಅದರ ಲಯಕರ್ತನಾಗುವನು’ ಎಂದು ಮಹೇಶ್ವರ ಹೇಳುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು