ಶುಕ್ರವಾರ, ಆಗಸ್ಟ್ 12, 2022
28 °C

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥ ವಿವರಣೆ ಮತ್ತು ವಚನ ಗಾಯನ ಸರಣಿ–8

ಡಾ. ಬಸವರಾಜ ಸಾದರ Updated:

ಅಕ್ಷರ ಗಾತ್ರ : | |

Basavanna

ಇಂದುವಿನ ಬೆಳಗಿಂದ ಇಂದುವ
ಭಾನುವಿನ ಬೆಳಗಿಂದ ಭಾನುವ
ದೀಪದ ಬೆಳಗಿಂದ ದೀಪವ ಕಾಂಬಂತೆ
ತನ್ನ ಬೆಳಗಿಂದ ತನ್ನನೆ ಕಂಡಡೆ
ನಿನ್ನ ನಿಲವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.

ಚಂದಿಮರಸ

ಧರ್ಮ-ದೇವರು, ಭಕ್ತಿ-ಅನುಭಾವ, ಅಧ್ಯಾತ್ಮ-ಸಾಧನೆ ಇವೆಲ್ಲ ಸಾಮಾನ್ಯರಿಗೆ ಅಲ್ಲವೆಂಬಂತೆ, ಅವುಗಳನ್ನು ಕವಡಕಂಟಕ ಭಾಷೆಯಲ್ಲಿ ಹೇಳುವ ಪರಿಪಾಠ ನಮ್ಮಲ್ಲಿ ಹಿಂದಿನಿಂದಲೂ ಪ್ರಚಲಿತವಿದೆ. ಇವುಗಳ ಸಾಧನೆಗೆ ಕೆಲವರು ಮಾತ್ರ ಅರ್ಹರೆಂದೂ, ಆ ಸಾಧನೆಗೂ ನಮ್ಮ ಪುರೋಮಧ್ಯಸ್ತಿಕೆ ಅಗತ್ಯವೆಂದೂ ಬಿಂಬಿಸುವ ಕೆಲಸ ನಡೆಯುತ್ತಲೇ ಬಂತು. ಮನುಷ್ಯ-ಮನುಷ್ಯರಲ್ಲೇ  ತರ-ತಮಗಳನ್ನು ನಿರ್ಮಿಸಿ, ಕೆಳವರ್ಗ-ವರ್ಣದ ಜನರನ್ನು ಅಧ್ಯಾತ್ಮ-ಅನುಭಾವದಂಥ ಆಂತರಿಕ ಸಾಧನೆಗಳಿಂದ ದೂರವೇ  ಇಟ್ಟದ್ದು ಬಹುದೊಡ್ಡ ಮಾನವದ್ರೋಹ. ಇಂಥ ಮಾನವ ವಿರೋಧಿ ಸ್ಥಾವರ ಸಿದ್ಧಾಂತಗಳನ್ನು ಹೊಡೆದೋಡಿಸಿ, ಆ ತಾತ್ವಿಕತೆ ಸಾಮಾನ್ಯರಿಗೂ ಸಲ್ಲುವಂಥದ್ದು, ಅವರೂ ಸಾಧನೆ ಮಾಡಬಲ್ಲರು, ಅದು ಸಾಧ್ಯವೂ ಇದೆ ಎಂದು ತೋರಿಸಿಕೊಟ್ಟವರು ಕರ್ನಾಟಕದ ಶರಣರು. ಈ ಕೆಲಸವನ್ನು ಅವರು ಮಾಡಿದ್ದು ಸರಳ ಭಾಷೆಯ ಮೂಲಕ ಮತ್ತು ಅಷ್ಟೇ ಸುಲಭವಾದ ದೈನಂದಿನ ವಿದ್ಯಮಾನಗಳ ಮೂಲಕ. ಚಂದಿಮರಸನ ಪ್ರಸ್ತುತ ವಚನವೇ ಅದಕ್ಕೆ ಸಮರ್ಥ ಉದಾಹರಣೆ.

ಪಾಡ್‌ಕಾಸ್ಟ್ ಇಲ್ಲಿ ಕೇಳಿ: 

ಸ್ವಸ್ವರೂದ ಅರಿವು ಸಾಧಿಸಿಕೊಂಡು, ಆ ಅರಿವಿನ ಪಥದಲ್ಲಿ ಸಾಗುವುದೇ ನಿಜವಾದ ಧರ್ಮ, ದೇವರು, ಅಧ್ಯಾತ್ಮ, ಅನುಭಾವ. ಇಂಥ ಅರಿವು ಹೊರಗೆ ಬೇರೆಲ್ಲೂ ಇಲ್ಲ; ಅದು ಇರುವುದು ನಮ್ಮ ಅಂತರಂಗದಲ್ಲೇ. ಅಂತರಂಗದ ಈ ಅರಿವನ್ನು ಜಾಗೃತ ಮಾಡಿಕೊಳ್ಳುವುದೊಂದೇ ಇಲ್ಲಿ ಮಹತ್ವದ ಕೆಲಸ. ಈ ಜಾಗೃತಿಗೆ ಪೂರಕ ಮಾದರಿಗಳನ್ನಾಗಿ ಶರಣರು ಸೂಚಿಸಿದ್ದು ನಿಸರ್ಗದ ದಿನನಿತ್ಯದ ಸಾಹಚರ್ಯಗಳನ್ನು. ಚಂದಿಮರಸ ಈ ವಚನದಲ್ಲಿ ಕೊಡುವ ದೃಷ್ಟಾಂತಗಳೆಲ್ಲವೂ ಆ ಬಗೆಯವು.

ಚಂದ್ರನನ್ನು ನಾವು ನೋಡುವುದು ಆತನೇ ಕೊಡುವ ಬೆಳಕಿನಿಂದ. ಸೂರ್ಯನನ್ನು ನೋಡುವುದು ಸೂರ್ಯನಿಂದಲೇ ಹೊರಡುವ ಬೆಳಗಿನ ಸಹಾಯದಿಂದ. ಹಾಗೆಯೇ ದೀಪವನ್ನು ನೋಡುವುದು ಆ ದೀಪವೇ ಹೊರಡಿಸುವ ಪ್ರಭೆಯಿಂದ. ಇವು ಕಣ್ಣಿಗೇ ಕಾಣುವ ಭೌತಸತ್ಯಗಳು. ಈ ಸತ್ಯಗಳ ಬೆಳಕನ್ನೇ ಮಾದರಿಯಾಗಿಟ್ಟುಕೊಂಡು, ನಮ್ಮ ಒಳಗೇ ಇರುವ ಅರಿವು ಎಂಬ ಬೆಳಗನ್ನು ನಾವೇ ಶೋಧಿಸಿಕೊಂಡರೆ, ಅದು ಬೀರುವ ಪ್ರಭೆಯ ನೆರವಿನಿಂದ ನಮ್ಮೊಳಗೆ ತುಂಬಿರುವ ಕತ್ತಲನ್ನು ಓಡಿಸುವುದು ಸಾಧ್ಯ ಎನ್ನುತ್ತಾನೆ ಚಂದಿಮರಸ. ಅಂತರಂಗದ ದರ್ಶನಕ್ಕೆ ಇದು ಅತ್ಯಂತ ಸರಳ ಮಾರ್ಗ. ಇದನ್ನು ಸಾಧಿಸಿಕೊಂಡರೆ. ನಮ್ಮ ಅರಿವಿನ ಆಳ, ವಿಸ್ತಾರ, ಅದರ ಪ್ರಭೆ ಎಲ್ಲವೂ ನಮಗೆ ಹೊಳೆದುಬಿಡುತ್ತವೆ. ನಮ್ಮೊಳಗಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳನ್ನು ಗುರುತಿಸಿ, ನಕಾರಾತ್ಮಕ ಶಕ್ತಿಗಳನ್ನು ಹೊರದೂಡಲು ನೆರವಾಗುವ ಈ ಅರಿವೇ ಸ್ವಸ್ವರೂಪದ ದರ್ಶನ ಮಾಡಿಸುವ ಮಹಾಬೆಳಗು. ಇಂಥ ಅರಿವು ಜಾಗೃತ ಮಾಡಿಕೊಂಡು, ಅದರ ಬೆಳಗಿನಲ್ಲಿ ಸಾಗುವುದೇ ನಿಜವಾದ ಸಾಧನೆ. ಚಂದಿಮರಸ ಈ ಸಾಧನಾಮಾರ್ಗವನ್ನೇ ಪ್ರಸ್ತುತ ವಚನದಲ್ಲಿ ಸಾಕ್ಷಿಸಮೇತ ತೋರಿಸುತ್ತಾನೆ. ಶರಣರು ತೋರಿದ ಅನುಭಾವಾಧ್ಯಾತ್ಮಧರ್ಮದ ಮಾರ್ಗ ಇದೆ. ಅರಿವೇ ಧರ್ಮ, ಅನುಭಾವ, ಅಧ್ಯಾತ್ಮ, ಸಾಧನೆ-ಎಲ್ಲವೂ ಹೌದು. ‘ಅರಿವೇ ಗುರು’ ಎಂಬುದು ಈ ಅರ್ಥದ್ದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು