ಭಾನುವಾರ, ಸೆಪ್ಟೆಂಬರ್ 26, 2021
21 °C

ಭಕ್ತಿ ಎಂದರೆ ಕರಗುವುದು

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

Prajavani

‘ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ, ನಿನ್ನ ಪಾದಾರ್ಚನೆಗೆ ಸವೆಯುತ್ತಿದ್ದೆ, ಗಿಡದಲ್ಲಿ ಹೂವಾಗಿ ಹುಟ್ಟುತ್ತಿದ್ದರೆ ಆಗ, ಪಾದಪೂಜೆಯ ಸಮಯ ಬಳಿ ಸೇರುತ್ತಿದ್ದೆ’ - ಇದೊಂದು ಭಕ್ತಿಪೂರ್ಣ ಭಾವಗೀತೆ ಅಥವಾ ಭಾವಪೂರ್ಣ ಭಕ್ತಿಗೀತೆ. ಎಚ್. ಶಂಕರನಾರಾಯಣ ಭಟ್ ಎನ್ನುವವರ ಈ ಕವಿತೆಯ ಸಾರ ‘ಸಮರ್ಪಣೆ’.

ಸಮರ್ಪಣೆಯನ್ನು ನಮ್ಮಲ್ಲಿ ಭಕ್ತಿ ಎನ್ನುವ ಹೆಸರಿನಿಂದಲೂ ಕರೆಯುವುದುಂಟು! ಭಕ್ತಿ ಇದ್ದರಷ್ಟೇ ಸಮರ್ಪಣೆಯಾಗಲು ಸಾಧ್ಯ. ಸಮರ್ಪಣೆ ಅನ್ನುವುದು ಅಪ್ಪಟ ಶರಣಭಾವ. ಹಾಗಾಗಿ ಭಕ್ತಿ ಎನ್ನುವುದೂ ಭಾವವೆಂದಾಯ್ತು.

ಭಕ್ತಿ ಎನ್ನುವುದನ್ನು ದೇವರ ಕಡೆಗಿನ ಆರಾಧನೆ ಎನ್ನುವುದು ಸಾಮಾನ್ಯ ಪ್ರಜ್ಞೆ. ಆದರೆ ಭಕ್ತಿಯ ಹರಹು ದೊಡ್ಡದು. ಅದು ಎಲ್ಲ ಮಾನವ ಸಂಬಂಧಗಳ ಮೂಲದ್ರವ್ಯ. ‘ತನ್ನಿಷ್ಟ ದೇವತೆಗೆ ಪೂಜೆಗೈಯುತ ದಿನವೂ ತನ್ನ ತಾನೇ ಮರೆವ ಭಕ್ತನಂತೆ, ಅದರ ಸಿಂಗಾರದಲಿ ನಿನ್ನ ನೀನೇ ಮರೆತೆ ಬೊಂಬೆಯಾಟದೊಳಿರುವ ಮಗುವಿನಂತೇ’ ತಾಯಿಯೊಬ್ಬಳು ಮಗುವಿನೆಡೆಗೆ ತೋರುವ ಮಮತೆ, ವ್ಯಾತ್ಸಲ್ಯವೂ ಭಕ್ತಿಯಂತೇ ಎನ್ನುವ ಕವಿವಾಣಿಯಿದು. ಭಕ್ತಿಯೆಂದರೆ ಆರ್ದ್ರವಾಗುವುದು. ನೀರಾಗುವುದು. ನೀರಾಗುವ ಶಕ್ತಿ ಇರುವುದಕ್ಕಷ್ಟೇ ಇನ್ನೊಂದರ ಜೊತೆಗೆ ಸಂಯೋಗವಾಗುವ ಭಾಗ್ಯ. ಅದ್ವೈತವಾಗುವ ಭಾಗ್ಯ. ಭಕ್ತಿಯಿಂದಷ್ಟೇ ಇದು ಫಲಿತಗೊಳ್ಳುವುದು.

ಮನಸ್ಸಿನ ಪ್ರಪಂಚದ ಅಷ್ಟೂ ವ್ಯಾಪಾರಗಳು ನಡೆಯುತ್ತಿರುವುದು ಭಕ್ತಿ ಎನ್ನುವ ಮಂತ್ರದ ಭಿನ್ನ ಭಿನ್ನ ಸ್ವರೂಪಗಳಿಂದಲೇ. ಇದಕ್ಕೆ ಯಾವ ಮನುಷ್ಯನೂ ಹೊರತಾಗಿಲ್ಲ. ಕನಕದಾಸರ ‘ದಾಸದಾಸರ ಮನೆಯ ದಾಸಾನುದಾಸ’ ಭಕ್ತಿಯ ಪರಾಕಾಷ್ಠೆಯ ನಿವೇದನೆ. ದೈವಕ್ಕಾಗಲಿ, ಸಂಬಂಧಕ್ಕಾಗಲಿ ಮನುಷ್ಯ ಇಷ್ಟು ತೀವ್ರತೆಯಲ್ಲಿ ಸಮರ್ಪಿತನಾಗುವ ಭಾವ ಮೂಡಿಸಿಕೊಂಡಾಗ ಮಾತ್ರ ಭಕ್ತಿಯ ಔನ್ನತ್ಯದ, ಆನಂದದ ಅರಿವಾಗುತ್ತದೆ. ಭಕ್ತಿಯಿಂದಷ್ಟೇ ಮಾನವ ಮಾಧವನಾಗಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು