ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಉತ್ಥಾನ ದ್ವಾದಶಿ | ವಿಷ್ಣುವಿನ ಎಚ್ಚರವೂ ತುಳಸಿಯ ಮದುವೆಯೂ

Published 24 ನವೆಂಬರ್ 2023, 0:08 IST
Last Updated 24 ನವೆಂಬರ್ 2023, 0:08 IST
ಅಕ್ಷರ ಗಾತ್ರ

‘ಉತ್ಥಾನ ದ್ವಾದಶಿ’ ಎನ್ನುವುದು ವಿಷ್ಣುಜಾಗೃತಿಯ ಪುಣ್ಯಕಾಲ. ದೇವದೇವತೆಗಳನ್ನು ಮಾನವೀಯ ಅಂಶಗಳುಳ್ಳವರನ್ನಾಗಿ ಗ್ರಹಿಸುವ ನಮ್ಮ ಪರಂಪರೆಯಲ್ಲಿ ಮಹಾವಿಷ್ಣುವಿಗೆ ಪೂಜೆಯ ಅಂಗವಾಗಿ ಜೀವಲೋಕದ ಎಲ್ಲ ಬಗೆಯ ಸೇವಗಳು ಸಲ್ಲುವಂತೆಯೇ ಜೀವಲೋಕದ ವ್ಯಾಪಾರವೂ ಆರೋಪಿತವಾಗಿದೆ. ಸಗುಣೋಪಾಸನೆಯಲ್ಲಿ ದೇವನು ನಮ್ಮಂತೆ ಉಣ್ಣುವ, ಮೀಯುವ, ಮಲಗುವ, ನಲಿವ ಸಂಗತಿಯೆಂದು ಭಾರತೀಯ ಮನಸ್ಸು ಗ್ರಹಿಸುತ್ತದೆ. ಅದರಂತೆ ವಿಷ್ಣುವು ಯೋಗನಿದ್ರೆಗೆ ಸರಿಯುವ ಕಾಲ ಶಯನ ಏಕಾದಶೀ ತಿಥಿಯಾದರೆ (ಆಷಾಢ ಶುದ್ಧ ಏಕಾದಶೀ. ಇದನ್ನೇ ಪ್ರಥಮೈಕಾದಶೀ ಎಂದೂ ಕರೆಯುತ್ತಾರೆ), ಬಳಿಕ ನಿದ್ರಾಸುಖವನ್ನು ತ್ಯಜಿಸಿ ಮಹಾವಿಷ್ಣು ಎಚ್ಚರಾಗುವ ದಿನವೇ ‘ಉತ್ಥಾನ ದ್ವಾದಶೀ’ (ಕಾರ್ತಿಕ ಶುದ್ಧ ದ್ವಾದಶೀ ತಿಥಿ).

‘ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ’ ಎಂಬ ಪ್ರಸಿದ್ಧ ಸುಪ್ರಭಾತದ ಮೂಲಕ ಪ್ರತಿದಿನವೂ ವಿಷ್ಣುವಿಗೆ ಸುಪ್ರಭಾತವನ್ನು ಬಯಸುವ ಭಾರತೀಯ ಭಾವುಕ ಮನಸ್ಸಿಗೆ ಉತ್ಥಾನ ದ್ವಾದಶೀ ತಿಥಿಯು ವಿಷ್ಣುವಿನ ಉತ್ಥಾನಕ್ಕೆ (ಎದ್ದೇಳುವಿಕೆಗೆ) ಸಂಬಂಧಿಸಿದ್ದಾದ್ದರಿಂದ ಇನ್ನೂ ಹೆಚ್ಚು ಮಹತ್ತ್ವದ್ದು ಎಂಬ ಭಾವ. ವಾಲ್ಮೀಕಿ ರಾಮಾಯಣದ ವಿಶ್ವಾಮಿತ್ರ ಮಹರ್ಷಿಯಾದರೂ ರಾಮನೆಂಬೋ ಅವತಾರಪುರುಷನನ್ನು ‘ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ…’ ಎಂದು ಮುಂತಾಗಿ ಹೇಳಿ ಎಬ್ಬಿಸಿದ್ದನ್ನು ನಮ್ಮ ಪರಂಪರೆ ಇವತ್ತಿಗೂ ಪ್ರತಿದಿನ ನೆನಪಿಸಿಕೊಳ್ಳುತ್ತದೆಯಷ್ಟೆ. ಜಗತ್ಪಾಲಕನಾದ ಗೋವಿಂದನು ನಿದ್ದೆ ತೊರೆದೇಳುವುದೆಂದರೆ ಅದು ಲೋಕಕ್ಕೆಲ್ಲ ಎಚ್ಚರಿನ ಚೈತನ್ಯವನ್ನು ತರುವ ಕಾಲ. ಇದನ್ನೇ ‘ಪ್ರಬೋಧೋತ್ಸವ’ ಎಂದು ಗುರುತಿಸುವುದೂ ಇದೆ.
ಹೀಗೆ ಎಚ್ಚರಾದ ನಾರಾಯಣನಿಗೆ ತುಳಸಿಯೊಂದಿಗೆ ವಿವಾಹ ಮಾಡುವುದು ಸಂಪ್ರದಾಯ. ಇಂದಿಗೂ ದಕ್ಷಿಣ ಭಾರತದ ಬಹುತೇಕ ಊರು ಕೇರಿಗಳಲ್ಲಿ ನಾರಾಯಣನ ಪ್ರತೀಕವಾಗಿ ಫಲಭರಿತವಾದ ಬೆಟ್ಟದ ನೆಲ್ಲಿಯ ಟೊಂಗೆಯನ್ನು ತಂದು ಮನೆಯ ತುಲಸೀ ಪೀಠದಲ್ಲಿ ತುಲಸಿಯ ಜೊತೆಗೆ ನಿಲ್ಲಿಸಿ ದ್ವಾದಶಿಯ ಸಂಜೆಯಂದು ತುಲಸೀವಿವಾಹವನ್ನು ನೆರವೇರಿಸುತ್ತಾರೆ. ವಿವಿಧ ಸಮುದಾಯಗಳಲ್ಲಿ ಮತ್ತು ಭಾಷೆಗಳಲ್ಲಿ ತುಲಸೀವಿವಾಹಕ್ಕೆಂದೇ ರಚಿತವಾದ ಸಾಂಪ್ರದಾಯಿಕ ಹಾಡುಗಳು ಸ್ಥಳೀಯ ಸಂಸ್ಕೃತಿಗಳ ಶ್ರೀಮಂತಿಕೆಯ ಪ್ರತೀಕವೂ ಹೌದು.

ಇಲ್ಲಿನ ಎಲ್ಲ ಆಚರಣೆಗಳಿಗೂ ಸಂಪ್ರದಾಯವು ನೆಚ್ಚಿಕೊಂಡ ವಿವಿಧ ಕಥೆಗಳಿವೆ. ಇವು ಸಂವಾದದ ರೂಪದಲ್ಲಿ ನಿರೂಪಿತವಾದ ಕಥೆಗಳು. ವಿಷ್ಣುವಿಗೆ ಸಂಬಂಧಿಸಿದ ಹಲವಾರು ಕಥೆಗಳು ಪಾರ್ವತೀಪರಮೇಶ್ವರರ ನಡುವಿನ ಸಂವಾದದಲ್ಲಿ ತೋರಿಕೊಂಡಿದ್ದು ಶೈವ–ವೈಷ್ಣವ ಭೇದರಾಹಿತ್ಯಕ್ಕೆ ಪುರಾವೆಯೂ ಹೌದು.

ರಾಕ್ಷಸ ಜಲಂಧರನ ಮಡದಿಯಾಗಿದ್ದ ಮಹಾಪತಿವ್ರತೆ ವೃಂದಾ (‘ತುಲಸೀ’) ವಿಷ್ಣುವಿನ ಕಾರಣದಿಂದ ಪಾತಿವ್ರತ್ಯಭಂಗಕ್ಕೆ ಒಳಗಾಗಬೇಕಾದ ಸಂದರ್ಭ ಒದಗುತ್ತದೆ. ಆಕೆಯ ಪಾತಿವ್ರತ್ಯದ ಬಲದಿಂದ ಲೋಕಕಂಟಕನಾಗಿ ಮೆರೆಯುತ್ತಿದ್ದ ಜಲಂಧರನನ್ನು ನಿಗ್ರಹಿಸಲು ವಿಷ್ಣುವಿಗಾದರೂ ಇದು ಅನಿವಾರ್ಯವಾಗಿತ್ತು. ಬಳಿಕ ಪತಿವಿಯೋಗದಿಂದ ದುಃಖಿತಳಾದ ವೃಂದಾ ‘ನಿನಗೂ ಪತ್ನೀವಿಯೋಗದ ದುಃಖ ಒದಗಲಿ’ ಎಂದು ವಿಷ್ಣುವನ್ನು ಶಪಿಸಿ ಸಹಗಮನಗೈಯುತ್ತಾಳೆ. ಮುಂದೆ ಪಾರ್ವತಿಯಿಂದ ರಚಿತವಾದ ಸುಂದರವಾದ ವೃಂದಾವನದಲ್ಲಿ (ತುಲಸೀವನ) ನೆಲ್ಲಿಯಾಗಿ ಬೆಳೆದ ವಿಷ್ಣು ಆಕೆಯನ್ನು ವರಿಸುತ್ತಾನೆ. ಇದಕ್ಕೆ ಸಂವಾದಿಯಾಗಿ ತುಲಸೀ (ವೃಂದಾ) ಮುಂದೆ ರುಕ್ಮಿಣಿಯಾಗಿ ಜನಿಸಿ ಕಾರ್ತಿಕದ್ವಾದಶಿಯಂದೇ ಶ್ರೀಕೃಷ್ಣನನ್ನು ವರಿಸುತ್ತಾಳೆ.

ಉತ್ಥಾನದ್ವಾದಶಿಯ ಹಿನ್ನೆಲೆಯಲ್ಲಿ ಪ್ರಸಿದ್ಧವಾದ ಇನ್ನೊಂದು ಕಥೆ ರಾಜಾ ಅಂಬರೀಷ ಮತ್ತು ದುರ್ವಾಸರದ್ದು. ಕಥೆಗಳು ಮತ್ತು ಮರಗಿಡಗಳನ್ನು ಒಳಗೊಳ್ಳುವ ಆಚರಣೆಗಳು ನಮ್ಮ ಹಬ್ಬಗಳನ್ನು ಹೇಗೆ ಅನನ್ಯವಾಗಿಸುತ್ತವೆ ಎನ್ನುವುದಕ್ಕೆ ಇದು ಒಂದು ಉದಾಹರಣೆ. ತುಲಸೀಕಲ್ಯಾಣದ ಈ ಪರ್ವ ಕಾರ್ತಿಕದ ಪ್ರಭೆಯನ್ನು ಎಲ್ಲ ಕಣ್ಣುಗಳಲ್ಲಿ ತುಂಬಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT