ಶುಕ್ರವಾರ, ಜೂನ್ 25, 2021
22 °C

ಸಚ್ಚಿದಾನಂದ ಸತ್ಯಸಂದೇಶ | ವಿದ್ಯೆಗೆ ಬೇಕು ವಿವೇಕ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ವಿದ್ಯೆಗೂ-ವಿವೇಕಕ್ಕೂ ಬಹಳ ವ್ಯತ್ಯಾಸವಿದೆ. ವಿದ್ಯೆ ಎಂದರೆ ಕಲಿಯುವ ಮಾರ್ಗ. ವಿವೇಕ ಎಂದರೆ, ಕಲಿತ ವಿದ್ಯೆಯ ಮೌಲ್ಯ. ವಿದ್ಯೆಯಿಂದ ಬುದ್ಧಿ ಬೆಳೆಯಬಹುದು, ಆದರೆ ವಿವೇಕ ಬೆಳೆಯಲಾರದು. ಅದಕ್ಕೆ ಸಾತ್ವಿಕ ಗುಣದ ಬಲವಿರಬೇಕು. ವಿವೇಕ ಇಲ್ಲದ ವಿದ್ಯೆಯಿಂದ ವಿನಯತೆ-ವಿಧೇಯತೆ ಮೂಡಲಾರದು. ವಿದ್ಯೆ ಕಲಿಯುವ ನೀತಿಯಾದರೆ, ವಿವೇಕ ಬದುಕುವ ರೀತಿ. ತಪ್ಪು ಮಾಡದಂತೆ ಎಚ್ಚರವಹಿಸುವುದು ವಿವೇಕವಾದರೆ, ತಾನೊಬ್ಬನೇ ಉದ್ಧಾರವಾಗಬೇಕೆನ್ನುವುದು ಅವಿವೇಕ. ಸ್ವಾರ್ಥಿ-ವಂಚಕರಲ್ಲಿ ವಿವೇಕ ಇರುವುದಿಲ್ಲ. ಇಂಥ ವಿವೇಕವಿಲ್ಲದ ವಿದ್ಯಾವಂತರಿಂದ ಸಮಾಜ ಹಾಳಾಗುತ್ತದೆ.

ವಿದ್ಯೆಯಿಂದ ಬುದ್ಧಿ ಬೆಳೆಯುತ್ತದೆ, ಬುದ್ಧಿಯಿಂದ ವಿವೇಕ ವೃದ್ಧಿಸುತ್ತದೆ, ವಿವೇಕದಿಂದ ಮಾನವಾಭಿವೃದ್ಧಿ ಆಗುತ್ತದೆ ಅಂತ; ವಿದ್ಯೆಯ ಅಡಿಪಾಯದ ಮೇಲೆಯೇ ನಮ್ಮ ನಾಗರಿಕ ಸಮಾಜದ ಕೋಟೆ ಕಟ್ಟಲಾಯಿತು. ಆದರೆ, ಅಂಥ ಮಾನವ ಸೌಹಾರ್ದದ ಕೋಟೆ ಇಂದು ವಿದ್ಯಾವಂತರಿಂದಲೇ ಕುಸಿಯುತ್ತಿದೆ. ಇದಕ್ಕೆ ಕಲಿಕೆಯಲ್ಲಿನ ದೋಷವೇ ಕಾರಣ. ನಮ್ಮ ಮಕ್ಕಳಿಗೆ ವಿಜ್ಞಾನಿಯಾಗು, ವೈದ್ಯನಾಗು, ಎಂಜಿನಿಯರ್ ಆಗು ಅಂತ ಸಾವಿರಾರು ರೂಪಾಯಿ ಖರ್ಚು ಮಾಡಿ ಶಾಲೆಗೆ ಕಳುಹಿಸುತ್ತೇವೆ. ಆದರೆ, ಒಳ್ಳೇ ವಿವೇಕ ಕಲಿತು, ಸಂಸ್ಕಾರವಂತನಾಗಿ ಬಾಳು ಅಂತ ಯಾವ ಶಾಲೆಗೂ ಕಳುಹಿಸುವುದಿಲ್ಲ. ಇದರಿಂದಾಗಿ ನಮ್ಮ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾದರೂ, ವಿವೇಕವಂತರ ಸಂಖ್ಯೆ ಕಡಿಮೆಯಾಗುತ್ತಿದೆ. ಗುಣವಿಲ್ಲದವರಿಂದ ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದೆ.

ವಿದ್ಯೆಯಿಂದ ಹಣ ಗಳಿಸುವ ಮಾರ್ಗ ಹೇಳಿಕೊಟ್ಟಂತೆ, ವಿದ್ಯೆಯಿಂದ ಹೇಗೆ ಗುಣ ಸಂಪಾದಿಸಬಹುದೆಂಬುದನ್ನು ನಮ್ಮ ಶಿಕ್ಷಣ ಹೇಳಿಕೊಡುತ್ತಿಲ್ಲ. ಇದರ ಪರಿಣಾಮವಾಗಿ ವಿದ್ಯೆಯಿಂದ ಹಣ ಗಳಿಸುವ ಮಕ್ಕಳು, ಎಲ್ಲವನ್ನೂ ಹಣದಿಂದಲೇ ನೋಡುತ್ತಾರೆ. ಒಡಹುಟ್ಟಿದವರನ್ನು ಹಣದಿಂದಲೇ ಅಳೆಯುತ್ತಾರೆ. ಸಾಕಿಸಲಹಿದ ಹೆತ್ತವರ ಜವಾಬ್ದಾರಿಯನ್ನು ಹಣದಿಂದಲೇ ಕಳೆದುಕೊಳ್ಳುತ್ತಾರೆ. ಸಂಬಂಧಗಳ ಬೆಲೆಗೊತ್ತಿಲ್ಲದ ಅವರು ಹಣದಿಂದಲೇ ತೂಗಲು ಯತ್ನಿಸುತ್ತಾರೆ. ಇದೆಲ್ಲಾ ನಮ್ಮ ಮಕ್ಕಳಿಗೆ ಸಂಸ್ಕಾರ ಗುಣ ಕಲಿಸದ ದುಷ್ಪರಿಣಾಮ. ಇಂಥ ಮಕ್ಕಳ ಹೆತ್ತವರು ತಮ್ಮ ತಪ್ಪಿನ ಫಲವನ್ನು ಇಳಿಗಾಲದ ವೃದ್ಧಾಪ್ಯದ ಇರುಳಲ್ಲಿ ಅನುಭವಿಸುತ್ತಿದ್ದಾರೆ.

ಇಂಥ ಸಂಸ್ಕಾರ ಹೀನ ಮಕ್ಕಳಿಂದ ಹೆತ್ತವರು ಪಡುವ ಬಾಧೆ ಈ ಪರಿಯಾದರೆ, ಸಮಾಜದ ಪಾಡು ಹೇಳತೀರದು. ಹೆತ್ತವರನ್ನೇ ದೇವರಂತೆ ಕಾಣದ ಮಕ್ಕಳು, ಕರ್ತವ್ಯದಲ್ಲಿ ದೇವರನ್ನು ಕಾಣಲು ಸಾಧ್ಯವೆ? ಹಣಗಳಿಸುವ ದ್ರೋಹ ಚಿಂತನೆಯಲ್ಲೇ ಅನ್ಯಾಯ-ಅಕ್ರಮಗಳಲ್ಲಿ ತೊಡಗುತ್ತಾರೆ. ಹೀಗಾಗಿ ಸಮಾಜದಲ್ಲಿ ಕುರುಡು ಕಾಂಚಾಣದ ಕುಣಿತ, ಅನೈತಿಕತೆಯ ಎಲ್ಲೆಮೀರುತ್ತಿದೆ. ಯಾವ ಮಕ್ಕಳಿಂದ ಈ ಸಮಾಜ-ಈ ದೇಶ ನಾಗರಿಕತೆಯಿಂದ ನಳನಳಿಸಬೇಕಿತ್ತೋ, ಅಲ್ಲಿ ಮನುಷ್ಯತನ ನರಳಿ ನರಳಿ ನಿಡುಸುಯ್ಯುತ್ತಿದೆ. ಆದರ್ಶವಿಲ್ಲದ ಮಾನವ ಸಮಾಜ ಉದ್ಧಾರವಾದ ನಿದರ್ಶನವೇ ಜಗತ್ತಿನಲ್ಲಿಲ್ಲ. ಈ ಕಟುಸತ್ಯ ನಮ್ಮ ಜನರಿಗೆ ಅರ್ಥವಾಗದಿದ್ದರೆ, ಇನ್ನೊಂದು ಶತಮಾನವಾದರೂ ಭಾರತ, ಅಭಿವೃದ್ದಿಯ ಸೆಲೆಗೆ ಹೊರಳಲಾರದು. ಗತಕಾಲದ ಮೌಢ್ಯದ ಬಲೆಗೆ ಸಿಲುಕಿ ನರಳಾಡುತ್ತದೆಯಷ್ಟೆ.

ಪ್ರಸ್ತುತ ಸಮಾಜದಲ್ಲಿ ತಲೆದೋರಿರುವ ಸಮಸ್ಯೆಗಳಿಂದ ಜನ ಪಾಠ ಕಲಿಯುತ್ತಿಲ್ಲ. ವರ್ತಮಾನದ ವರ್ತನೆಯಲ್ಲೂ ಒಳ್ಳೆತನ ಬೆಳೆಸಿಕೊಳ್ಳುತ್ತಿಲ್ಲ. ಭವಿಷ್ಯದ ಬದುಕಿಗೆ ಬೇಕಾದ ಮೌಲ್ಯಗಳನ್ನು ಆದರಿಸುತ್ತಿಲ್ಲ. ತಮಗೇ ಅರಿವಿಲ್ಲದೆ ಸ್ವಾರ್ಥ ಪರರೊಂದಿಗೆ ಕೆಟ್ಟ ದಾರಿ ತುಳಿಯುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಮೌಲ್ಯಭರಿತ ಬದುಕು ಕಾಣೆಯಾಗಿ, ಅನೀತಿ ಆದರಣೀಯವಾಗುತ್ತಿದೆ. ಸುಸಂಸ್ಕೃತ ಬದುಕಿಗೆ ತಾವೇ ಕೊಳ್ಳಿ ಇಟ್ಟು ಬಾಧೆಪಡುತ್ತಿರುವ ಜನ, ಇನ್ನಾದರೂ ತಮ್ಮ ತಪ್ಪು ತಿದ್ದಿಕೊಳ್ಳದಿದ್ದರೆ ಮತ್ತಷ್ಟು ಸಂಕಟಪಡುವುದು ನಿಶ್ಚಿತ. ಗುಣಮೌಲ್ಯ ಬೆಳೆಯಲು ಯಾವ ಉನ್ನತ ವಿದ್ಯೆಯೂ ಬೇಕಿಲ್ಲ, ನಮ್ಮ ಬುದ್ಧಿಯೊಳಗೆ ‘ಎಲ್ಲಾ ನನ್ನವರು, ನನ್ನಂತೆ ಎಲ್ಲರು’ ಎಂಬ ವಿವೇಕ ಇದ್ದರಷ್ಟೇ ಸಾಕು, ‘ಸಚ್ಚಿದಾನಂದ’ದ ಬದುಕು ಸಮಾಜದೆಲ್ಲೆಡೆ ನಳನಳಿಸುತ್ತದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.