ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವಕಲ್ಯಾಣಕ್ಕೆ ಬ್ರಹ್ಮೋಪಾಯ

ಭಾಗ –214
Last Updated 1 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ತಾರಕಾಸುರನ ಕಾಟದಿಂದ ನೊಂದು ತನ್ನ ಬಳಿ ಬಂದ ದೇವತೆಗಳಿಗೆ ಬ್ರಹ್ಮ ತಾನು ಕೊಟ್ಟ ವರ ಮತ್ತೆ ಹಿಂಪಡೆಯಲಾಗುವುದಿಲ್ಲ ಎನ್ನುತ್ತಾನೆ. ಆದರೆ ತಾರಕಾಸುರನನ್ನು ಸಂಹರಿಸುವ ಮಾರ್ಗವನ್ನು ದೇವತೆಗಳಿಗೆ ತಿಳಿಸುತ್ತಾನೆ.

‘ಎಲೈ ದೇವತೆಗಳಿರಾ, ತಾರಕಾಸುರನನ್ನು ನಾನಾಗಲೀ ವಿಷ್ಣುವಾಗಲೀ ರುದ್ರನಾಗಲೀ ಕೊಲ್ಲಲು ಸಾಧ್ಯವಿಲ್ಲ. ಈಗಿರುವ ಯಾವ ದೇವತೆಗಳಿಂದಲೂ ಆತನನ್ನು ಕೊಲ್ಲಲಾಗದು. ನಾನು ಆತನಿಗೆ ಆ ರೀತಿಯ ವರವನ್ನು ಕೊಟ್ಟಿರುವೆ. ಆದರೆ, ತಾರಕನನ್ನು ಕೊಲ್ಲುವ ಮಾರ್ಗ ಒಂದಿದೆ. ಶಿವನ ವೀರ್ಯದಿಂದ ಓರ್ವ ಕುಮಾರ ಜನಿಸಿದರೆ, ಆ ಶಿವಕುಮಾರನಿಂದ ತಾರಕಾಸುರನನ್ನು ಕೊಲ್ಲಬಹುದು. ಶಿವಕುಮಾರನ ಹೊರತು ಇನ್ನಾರಿಂದಲೂ ತಾರಕನನ್ನು ಕೊಲ್ಲಲು ಸಾಧ್ಯವಿಲ್ಲ.

‘ಇದಕ್ಕಾಗಿ ನಾನೊಂದು ನಿಮಗೆ ಉಪಾಯವನ್ನು ಹೇಳುವೆನು ಕೇಳಿರಿ. ಮಹಾದೇವನ ಅನುಗ್ರಹದಿಂದ ನಿಮ್ಮ ಇಷ್ಟಾರ್ಥವು ಸಿದ್ಧಿಸುವುದು. ದಕ್ಷಪುತ್ರಿಯಾದ ಸತೀದೇವಿಯು ಹಿಂದೆ ದಕ್ಷಯಜ್ಞದಲ್ಲಿ ಶರೀರವನ್ನು ತ್ಯಜಿಸಿದ್ದಳು. ಅವಳೇ ಈಗ ಹಿಮವಂತನ ಮಡದಿಯಾದ ಮೇನಾದೇವಿಯ ಮಗಳಾಗಿ ಜನಿಸಿದ್ದಾಳೆ. ಮೇನಾದೇವಿ ಪುತ್ರಿಯಾದ ಪಾರ್ವತಿಯನ್ನು ಶಂಕರ ಮದುವೆ ಮಾಡಿಕೊಂಡರೆ ನಿಮ್ಮ ಅರ್ಧ ಸಮಸ್ಯೆ ಬಗೆಹರಿದಂತಾಗುತ್ತೆ. ಆದ್ದರಿಂದ ಇವರಿಬ್ಬರ ಕಲ್ಯಾಣಕ್ಕೆ ನೀವೆಲ್ಲಾ ವಿಶೇಷ ಪ್ರಯತ್ನ ಮಾಡಬೇಕು. ಪಾರ್ವತಿ-ಶಂಕರರ ದಾಂಪತ್ಯದಿಂದ ಜನಿಸುವ ಪುತ್ರ ಮಾತ್ರ ತಾರಕನನ್ನು ಸಂಹರಿಸಲು ಸಾಧ್ಯ. ಆದ್ದರಿಂದ ನೀವೆಲ್ಲಾ ಶಿವ-ಪಾರ್ವತಿಯರ ವಿವಾಹವಾಗುವಂಥ ಸನ್ನಿವೇಶ ಸೃಷ್ಟಿಸಬೇಕು. ಪಾರ್ವತಿಯು ಈಗ ಬೆಳೆದು ಯೌವನಾವಸ್ಥೆಗೆ ಬಂದಿದ್ದಾಳೆ. ಆದರೆ ಸತಿ ಸಾವಿನಿಂದ ವಿರಾಗಿಯಾಗಿರುವ ಶಿವ ಸಾಂಸಾರಿಕ ಜೀವನದಿಂದ ವಿಮುಖನಾಗಿ ಹಿಮಾಲಯದ ತಪ್ಪಲಿನಲ್ಲಿ ತಪಸ್ಸು ಮಾಡುತ್ತಿದ್ದಾನೆ.

‘ಪಾರ್ವತಿದೇವಿಯು ತಂದೆಯ ಅನುಮತಿಯನ್ನು ಪಡೆದು ಹಿಮಾಲಯದ ತಪ್ಪಲಲ್ಲಿ ತಪಸ್ಸು ಮಾಡುತ್ತಿರುವ ಶಂಕರನನ್ನು ಭಕ್ತಿಯಿಂದ ಸೇವೆ ಮಾಡುತ್ತಿ- ದ್ದಾಳೆ. ಮೂರು ಲೋಕಗಳಲ್ಲೇ ಅತಿಸುಂದರಿಯು ಉತ್ತಮ ಗುಣವುಳ್ಳವಳೂ ಆದ ಆ ಪಾರ್ವತಿಯು ನಿತ್ಯವೂ ಸೇವೆ ಮಾಡುತ್ತಿದ್ದರೂ, ಮಹೇಶ್ವರನ ಮನಸ್ಸಿನಲ್ಲಿ ಮಧುರ ಭಾವನೆಗಳು ಉಂಟಾಗುತ್ತಿಲ್ಲ. ಪಾರ್ವತೀದೇವಿ ಪರಮೇಶ್ವರನನ್ನು ಭಕ್ತಿಯಿಂದ ಸೇವೆ ಮಾಡುತ್ತಿದ್ದಾಳೆ. ನೀವೆಲ್ಲಾ ಶಂಕರನು ಪಾರ್ವತಿಯನ್ನು ಮದುವೆಯಾಗುವಂತೆ ಪ್ರಯತ್ನ ಮಾಡಬೇಕು. ನಾನು ಈಗ ತಾರಕಾಸುರ ನಿಮ್ಮನ್ನು ಹಿಂಸಿಸದಂತೆ ತಡೆಯುತ್ತೇನೆ’ ಎಂದ ಬ್ರಹ್ಮ.

ಹೀಗೆ ದೇವತೆಗಳಿಗೆ ಭರವಸೆ ನೀಡಿ ತಾರಕಾಸುರನ ಬಳಿಗೆ ಬಂದ ಬ್ರಹ್ಮ ‘ಎಲೈ ದೈತ್ಯನೇ! ಸ್ವರ್ಗರಾಜ್ಯವು ಸಂಪತ್ತುಗಳಿಗೆ ಖನಿಯಂತಿರುವುದು. ನೀನು ತಪಸ್ಸು ಮಾಡಿ ಕೇಳಿರುವ ವರಕ್ಕಿಂತಲೂ ಹೆಚ್ಚಾಗಿ ಅಪೇಕ್ಷಿಸುತ್ತಲಿರುವೆ. ಸ್ವರ್ಗವನ್ನ ಆಳುವಂತೆ ನಿನಗೆ ವರವನ್ನು ಕೊಟ್ಟಿಲ್ಲ. ಆದಕಾರಣ ಸ್ವರ್ಗವನ್ನು ಬಿಡು. ಭೂಲೋಕದಲ್ಲಿಯೇ ನಿನಗೆ ದೇವಭೋಗಗಳೆಲ್ಲವೂ ಲಭಿಸುವುವು’ ಎಂದು ತಿಳಿಸಿದ.

ಬ್ರಹ್ಮನ ಮಾತಿಗೆ ಬೆಲೆಕೊಟ್ಟ ತಾರಕಾಸುರ ಸ್ವರ್ಗವನ್ನು ಬಿಟ್ಟು, ಭೂಲೋಕದಲ್ಲಿರುವ ತನ್ನ ಶೋಣಿತಪುರಕ್ಕೆ ತೆರಳಿ ರಾಜ್ಯವಾಳತೊಡಗಿದ. ದೇವತೆಗಳೆಲ್ಲ ಸಂತೋಷಪಟ್ಟರು. ಅವರೆಲ್ಲಾ ಇಂದ್ರನೊಡನೆ ಮತ್ತೆ ಸ್ವರ್ಗಕ್ಕೆ ಹೋಗಿ ಮತ್ತೆ ಆಳ್ವಿಕೆ ನಡೆಸತೊಡಗಿದರು. ವಿರಾಗಿಯಾಗಿರುವ ಶಿವ ಅನುರಾಗಿಯಾಗಿ ಪಾರ್ವತಿಯ ಮೇಲೆ ಪ್ರೀತಿ ಹುಟ್ಟುವಂತಾಗಬೇಕು. ಶಿವ ಸಂಸಾರಿಯಾಗಲು ಪಾರ್ವತಿಯನ್ನು ವಿರಾಗಿಯಾಗಿರುವ ಮದುವೆ ಮಾಡಿಕೊಳ್ಳುವಂತೆ ಆಗಬೇಕು. ಇದಕ್ಕಾಗಿ ಮಾಡಬೇಕಾದ ಪ್ರಯತ್ನವನ್ನೆಲ್ಲ ಇಂದ್ರನಿಗೆ ಹೇಳಿ ದೇವತೆಗಳು ಸಂತೋಷದಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದರು ಎಂಬಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ಹದಿನಾರನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT