ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಕಲ್ಯಾಣಕ್ಕೆ ಹೊರಟ ಶಿವ

ಭಾಗ 272
ಅಕ್ಷರ ಗಾತ್ರ

ಶಿವನಿಗೆ ವರಪೂಜೆ ಮಾಡಿದ ನಂತರ ಗಿರಿರಾಜ ದುರ್ಗೋಪವೀತಕ ಎಂಬ ಕರ್ಮವನ್ನು ವೇದಮಂತ್ರಗಳಿಂದ ಮಾಡಿಸಿದ. ಗಿರಿಜೆಗೆ ಮಂಗಳಕರವಾದ ಅಭ್ಯಂಜನ ಮಾಡಿಸಿ, ಸಖಿಯರು ಮತ್ತು ಪುರದ ಸುಮಂಗಲೆಯರು ಆರತಿಯನ್ನು ಬೆಳಗಿದರು. ನಂತರ ಲಕ್ಷ್ಮಿ, ಸರಸ್ವತಿಯರು ಶಿವನು ಕೊಟ್ಟ ವಸ್ತ್ರಾಭರಣಗಳಿಂದ ಅವಳನ್ನಲಂಕರಿಸಿದರು. ರತ್ನಖಚಿತವಾದ ಕುಪ್ಪಸವನ್ನು ಗಿರಿಜೆಗೆ ತೊಡಿಸಿ, ಹೊಸದಾದ ರೇಶಿಮೆ ಪತ್ತಲಗಳೆರಡನ್ನು ಉಡುಗೊರೆಯಾಗಿ ನೀಡಿದರು. ರತ್ನ ಖಚಿತವಾದ ಮನೋಹರವಾದ ಹಾರವನ್ನು ಗಿರಿಜೆಯ ಕಂಠದಲ್ಲಿ ಹಾಕಿ, ಶುದ್ಧ ಚಿನ್ನದಿಂದ ನಿರ್ಮಿಸಿದ ಅಮೂಲ್ಯವಾದ ಕಡಗಗಳನ್ನು ಕೋಮಲವಾದ ಅವಳ ಕೈಗಳಿಗೆ ತೊಡಿಸಿದರು.

ಗಿರಿಜೆಯನ್ನು ಅಲಂಕರಿಸಿದ ನಂತರ ಲಕ್ಷ್ಮಿ, ಸರಸ್ವತಿ, ಹರಿ, ಬ್ರಹ್ಮ, ಇಂದ್ರ ಮೊದಲಾದ ದೇವತೆಗಳು, ಮುನಿಗಳು ವರನ ಗೃಹದಲ್ಲಿದ್ದ ಶಿವನ ಬಳಿಗೆ ಹೋದರು. ಗರ್ಗಮುನಿ ಹಿಮವಂತನಿಗೆ ‘ಪ್ರಾಣಿಗ್ರಹಣಕ್ಕಾಗಿ ನಿಶ್ಚಿತವಾದ ಕಾಲ ಸಮೀಪಿಸಿತು. ವರನಾದ ಶಿವನನ್ನು ಬೇಗನೆ ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಬಾ’ ಎಂದ.

ಹಿಮವಂತ ತನ್ನ ಬಂಧುಗಳನ್ನು ಶಿವನ ಕರೆತರಲು ಕಳುಹಿಸಿದ. ಅವರೆಲ್ಲ ಮಂಗಳದ್ರವ್ಯಗಳೊಂದಿಗೆ ಉತ್ಸವದೋಪಾದಿಯಲ್ಲಿ ಮಹಾದೇವನ ಬಳಿಗೆ ತೆರಳಿದರು. ಹೀಗೆ ಹಿಮವಂತನ ಬಂಧುಗಳು ಶಿವ ವಾಸಿಸುತ್ತಿದ್ದ ವರನ ಗೃಹಕ್ಕೆ ಹೋಗುವಾಗ ಪಂಡಿತರು ವೇದಘೋಷವನ್ನು ಮಾಡುತ್ತಿದ್ದರು. ಸಂಗೀತ ನರ್ತನಗಳು ಮಹೋತ್ಸಾಹದಿಂದ ನಡೆಯುತ್ತಿದ್ದವು.

ಹಿಮವಂತನ ಬಂಧುಗಳಾದ ಗಿರಿಗಳ ಮಹೋತ್ಸವದ ವಾದ್ಯಶಬ್ದಗಳನ್ನು ಕೇಳಿ ವರನ ಬಿಡಾರದಲ್ಲಿದ್ದ ದೇವತೆಗಳು ಮುನಿಗಳು ಮೊದಲಾದವರು ಶಿವನನ್ನು ಕರೆದುಕೊಂಡು ಹೋಗಲು ವಧುವಿನ ಬಂಧುಗಳು ಬರುತ್ತಿದ್ದಾರೆಂದು ಹರ್ಷದಿಂದ ಬೇಗನೆ ಹೊರಡಲು ಸಿದ್ಧವಾದರು. ‘ಕನ್ಯಾದಾನಕ್ಕೆ ಮುಹೂರ್ತವು ಸಮೀಪಿಸಿತು, ನಮ್ಮೆಲ್ಲರ ಭಾಗ್ಯೋದಯವಾಯಿತು, ನಾವು ಮಹಾಧನ್ಯರು. ಜಗತ್ತಿಗೇ ಮಂಗಳವನ್ನು ಉಂಟುಮಾಡುವಂತಹ ಗಿರಿಜಾಶಿವರ ಮದುವೆಯನ್ನು ನಾವು ನಮ್ಮ ಕಣ್ಣುಗಳಿಂದಲೇ ನೋಡುತ್ತೇವೆ. ನಮಗಿಂತಲೂ ಧನ್ಯರು ಇನ್ನಾರು ಇಲ್ಲ’ ಎಂದು ಅವರೆಲ್ಲಾ ಹರ್ಷದಿಂದ ಸಂಭ್ರಮಿಸಿದರು.

ಹೀಗೆ ದೇವತೆಗಳೆಲ್ಲ ಪರಸ್ಪರ ತಮ್ಮ ಭಾಗ್ಯವನ್ನು ನೆನೆದು ಮಾತನಾಡುತ್ತಿರುವಾಗ ಗಿರಿರಾಜನಾದ ಹಿಮವಂತನ ಬಂಧುಗಳೆಲ್ಲರೂ ಆಗಮಿಸಿದರು. ಶಿವನ ಬಳಿಗೆ ಬಂದ ಅವರೆಲ್ಲ ಕನ್ಯಾದಾನಕ್ಕೆ ಯೋಗ್ಯವಾದ ಕಾಲ ಪ್ರಾಪ್ತವಾಗಿದೆ. ಎಲ್ಲರೂ ದಯವಿಟ್ಟು ಹಿಮವಂತನ ಮನೆಗೆ ಚಿತ್ತೈಸಬೇಕೆಂದು ಪ್ರಾರ್ಥಿಸಿದರು. ಪ್ರಾರ್ಥನೆಯನ್ನು ಕೇಳಿ ಹರಿ ಮೊದಲಾದ ದೇವತೆಗಳೆಲ್ಲರೂ ಸಂತಸದಿಂದ ಸಂಭ್ರಮಿಸುತ್ತಾ, ಶುಭಮಸ್ತು ಎಂದು ಹಿಮವಂತನ ಬಂಧುಗಳಿಗೆ ಹೇಳಿ ಜಯಘೋಷ ಮಾಡಿದರು.

ಗಿರಿಜೆಯಲ್ಲಿ ಅನುರಕ್ತನಾದ ಶಿವನಿಗೂ ತುಂಬಾ ಸಂತೋಷವಾಯಿತು. ಆದರೆ ಲೀಲಾವಿಗ್ರಹನಾದ ಅವನು ತನ್ನ ಸಂತೋಷಮುದ್ರೆಯನ್ನು ಹೊರಗೆ ಪ್ರಕಟಿಸದೆ ಗಂಭೀರವದನನಾಗೇ ಇದ್ದ. ವಿವಾಹ ವಿಧಿವಿಧಾನದ ಪ್ರಕಾರ ಲೋಕಕ್ಕೆ ಸುಖವನ್ನು ಉಂಟುಮಾಡುವ ಆ ಶಂಕರ ಮಂಗಳಸ್ನಾನವನ್ನು ಪ್ರಸನ್ನತೆಯಿಂದ ಮಾಡಿದ. ಮಂಗಳಸ್ನಾನ ಮಾಡಿದ ನಂತರ ಶಿವನಿಗೆ ದೇವತೆಗಳು ಸುಂದರವಾದ ವಸ್ತ್ರಗಳನ್ನು ಉಡಿಸಿ, ಅವನನ್ನು ರತ್ನಾಭರಣಗಳಿಂದ ಅಲಂಕರಿಸಿದರು. ಶಿವ ಮಂಗಳಘೋಷಗಳ ನಡುವೆ ನಂದಿಕೇಶ್ವರನ ಮೇಲೆ ಕುಳಿತು, ಕಲ್ಯಾಣಮಂಟಪದ ಕಡೆ ಹೊರಟ. ಈ ಸಂದರ್ಭದಲ್ಲಿ ದೇವತೆಗಳು ಮಂಗಳವಾದ್ಯಗಳನ್ನು ಬಾರಿಸುತ್ತಾ ಉತ್ಸವದೋಪಾದಿಯಲ್ಲಿ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT