ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಸ್ವಸ್ಥ ಮನಸ್ಸಿಗೆ ಬೇಕು ಸಾತ್ವಿಕ ಚಿಂತನೆ

ಅಕ್ಷರ ಗಾತ್ರ

ಬ್ರಹ್ಮಾಂಡಕ್ಕೆ ಜೀವಗಳೇ ಚೈತನ್ಯ. ಈ ಜೀವಗಳಿಗೆ ಆತ್ಮವೇ ಚೈತನ್ಯ. ಜೀವದೊಳಗಿರುವ ಆತ್ಮಕ್ಕೆ ಮನಸ್ಸೇ ಚೈತನ್ಯ. ಈ ಮನಸ್ಸಿಗೆ ಸಾತ್ವಿಕ ಚಿಂತನೆಗಳೆ ಚೈತನ್ಯ. ಈ ಸಾತ್ವಿಕ ಚಿಂತನೆಗಳಿಗೆ ಸತ್ಸಂಗಗಳೇ ಚೈತನ್ಯ. ಸತ್ಸಂಗಗಳಿಂದ ಹುಟ್ಟುವ ಸದ್ಗುಣಗಳೇ ವಿಶ್ವ ಕಾಯುವ ಶಕ್ತಿಗಣಗಳು. ಸದ್ಗುಣಗಳು ಜೀವ ಚೇತನಗಳಲ್ಲಿ ಇರುವವರೆಗೂ ಜಗತ್ತಿಗೆ ಯಾವುದೇ ಅಪಾಯವಿಲ್ಲ. ಯಾವಾಗ ದುರ್ಗುಣಗಳು ಹೆಚ್ಚಾಗುತ್ತವೋ ಲೋಕಕ್ಕೆ ಕಂಟಕ ತಪ್ಪಿದ್ದಲ್ಲ. ಅದು ಒಂದು ಸಮಾಜವಿರಲಿ, ಊರಿರಲಿ, ನಾಡಿರಲಿ, ದೇಶವಿರಲಿ, ಅಲ್ಲಿನ ಮಾನವ ದೇಹದೊಳಗೆ ಸದ್ವಿಚಾರಗಳು ಸರಾಗವಾಗಿ ಹರಿದಾಡುತ್ತಿರಬೇಕು. ಸದ್ಗುಣಗಳು ನರನಾಡಿಗಳಲ್ಲಿ ಮತ್ತು ರಕ್ತದ ಕಣಕಣದಲ್ಲೂ ಮೂಡಿರಬೇಕು. ಹೀಗಾದಾಗ ನಮ್ಮ ಮನಸ್ಸಿನ ಕೇಂದ್ರಸ್ಥಾನವಾದ ಮೆದುಳು ಕೆಡದೆ ದೀರ್ಘ ಕಾಲ ಬಾಳಿಕೆ ಬರುತ್ತೆ. ಕೆಟ್ಟ ತೈಲದಿಂದ ಯಂತ್ರಗಳು ಕೆಟ್ಟಂತೆ, ಕೆಟ್ಟ ವಿಚಾರಗಳಿಂದ ನಮ್ಮ ಮನಸ್ಸು ಕೆಟ್ಟು ಕೆಡುಕುಗಳ ಸರಕು ಉತ್ಪತ್ತಿಯಾಗತೊಡಗುತ್ತದೆ.

ಇದಕ್ಕಾಗೇ ಸುಜನರು ಧರ್ಮ-ಸಂಸ್ಕೃತಿಗಳನ್ನು ಸಮಾಜದಲ್ಲಿ ಅಳವಡಿಸಿ ನಿಯಮಗಳನ್ನು ಜಾರಿಗೆ ತಂದರು. ಮನುಷ್ಯರನ್ನೇ ಭಕ್ಷಿಸುತ್ತಿದ್ದ ಮನುಷ್ಯರ ರಾಕ್ಷಸೀತನ ಅಳಿಸಿ, ಸದ್ಭಾವನೆ ಬೆಳೆಸಿದ್ದೆ ಧರ್ಮ-ಸಂಸ್ಕೃತಿಗಳು. ಈಗ ಮನುಷ್ಯರ ಜೀವ ತಿನ್ನುವ ಪ್ರವೃತ್ತಿ ಮಾನವರಲ್ಲಿ ಕಾಣೆಯಾಗಿರಬಹುದು. ಆದರೆ ಮಾನವರ ಜೀವನ ಕಬಳಿಸುವ ವಂಚಕಬುದ್ಧಿಯ ಜನ ಹೆಚ್ಚಾಗುತ್ತಿದ್ದಾರೆ. ಇಂಥ ಅನಾಗರಿಕ ಜನರನ್ನು ಸರಿದಾರಿಗೆ ತರಲು ಪ್ರತಿಯೊಬ್ಬರ ಮನದಲ್ಲಿ ಸದ್ವಿಚಾರಗಳ ಔಷಧವನ್ನು ಸಿಂಪಡಿಸಬೇಕಿದೆ. ಇಲ್ಲದಿದ್ದರೆ ಹಣಬಾಕತನದಿಂದ ಮದ-ಮಾತ್ಸರ್ಯ ಬೆಳೆಸಿಕೊಂಡು ರೋಗಪೀಡಿತವಾದ ಮನಸ್ಸುಗಳು ನಾಗರಿಕ ಸಮಾಜವನ್ನು ಹಾಳುಗೆಡವುತ್ತದೆ.

ಸಮುದ್ರಮಂಥನದಿಂದ ಉಕ್ಕುವ ಅಮೃತ ಜೀವವನ್ನು ಅಮರವಾಗಿಸಿದರೆ, ಮನಸ್ಸಿನ ಮಂಥನದಿಂದ ಹುಟ್ಟುವ ಚಿಂತನೆಗಳು ಜೀವನವನ್ನು ಅಮರವಾಗಿಸುತ್ತದೆ. ಇದಕ್ಕಾಗಿ ಸಮುದ್ರ ಕಡೆವಾಗ ಉಕ್ಕಿ ಬಂದ ವಿಷವನ್ನ ಕುಡಿದು ಜೀವ ಕಾಪಾಡಿದ ಶಿವನನ್ನು, ಮನಮಂಥನದಲ್ಲಿ ಹುಟ್ಟುವ ವಿಷವಿಷಯಗಳನ್ನು ನುಂಗಿ, ಜೀವನ ಕಾಪಾಡಲು ಪ್ರತಿಷ್ಟಾಪಿಸಿಕೊಳ್ಳಬೇಕು. ಆ ಹೃದಯೇಶ್ವರ ಆಗಾಗ್ಗೆ ನಮ್ಮೊಳಗೆ ಉಕ್ಕುಕ್ಕಿ ಬರುವ ಮದ-ಮೋಹದ ವಿಷ-ವಿಕಾರಗಳನ್ನು ನುಂಗಿ ಮನಸ್ಸಿನ ಆರೋಗ್ಯ ಕಾಪಾಡುತ್ತಾನೆ. ಇಂಥ ಶಿವಶಕ್ತಿ ನಮ್ಮೊಳಗೆ ಪ್ರತಿಷ್ಠಾಪಿಸಿಕೊಳ್ಳಲು ಮನಸ್ಸಿನಲ್ಲಿರುವ ಕಸವನ್ನೆಲ್ಲ ಗುಡಿಸಿ ಸ್ವಚ್ಛವಾಗಿಸಬೇಕು. ಅಂದರೆ ಮನಸ್ಸಿನೊಳಗಿರುವ ಎಲ್ಲಾ ಕಲ್ಮಶ ವಿಷ-ವಿಷಯಗಳನ್ನು ಹೊರಗೆ ಹಾಕಿ ನಿರ್ಮಲವಾಗಿಸಬೇಕು. ಇಂಥ ಸ್ವಚ್ಛವಾದ ಮನಸ್ಸಿನಲ್ಲಿ ಮಾತ್ರ ಶಿವ ನೆಲೆಸುತ್ತಾನೆ. ಬಗ್ಗಡ ದ್ವೇಷಕಾರಕ ಮನಸ್ಸಿನೊಳಗೆ ಶಿವನಿರುವುದಿಲ್ಲ.

ಮೈ ತೊಳೆಯುವಷ್ಟು ಸುಲಭವಲ್ಲ ಮನಸ್ಸಿನ ಕೊಳೆ ತೊಳೆಯುವುದು. ಅದೊಂದು ತಪಸ್ಸಿನ ಮಾರ್ಗ. ಸಾತ್ವಿಕ ನೆಲೆಯಲ್ಲಿ ಕುಳಿತು, ನೈತಿಕ ಹಂದರದಲ್ಲಿ ಮನಸ್ಸು ಶುಚಿಯಾಗಿರುವಂತೆ ಮಾಡಬೇಕು. ಈ ಕೌಶಲ್ಯ ತಿಳಿಯದೆ ಢಂಬಾಚಾರಕ್ಕೆ ಯತ್ನಿಸಿದರೆ ಆಷಾಢಭೂತಿತನವಾಗುತ್ತದೆ. ಜಗತ್ತಿನ ಬಹುತೇಕ ಕೆಡುಕಿಗೆ ಇಂಥ ಢಾಂಬಿಕ ಜನರ ಆಷಾಢಭೂತಿತನವೇ ಕಾರಣ. ಹೀಗಾಗಿ ಜಗತ್ತಿನ ಬಹುತೇಕ ಮಾನವರ ಮನಸ್ಸು ವಿಷಯ-ವಿಕಾರಗಳಿಂದ ಪ್ರಕ್ಷುಬ್ದವಾಗಿರುತ್ತದೆ. ಧರ್ಮಗಳು ಇರುವುದೇ ಮಾನವರ ಮನಸ್ಸುಗಳನ್ನು ಪ್ರಫುಲ್ಲಗೊಳಿಸಲು, ಪ್ರಕ್ಷುಬ್ಧಗೊಳಿಸಲಲ್ಲ. ಧರ್ಮದ ನಿಜಾರ್ಥ ತಿಳಿಯದ ಢಾಂಬಿಕ ಜನರಿಂದ ಧರ್ಮ-ಧರ್ಮಗಳ ನಡುವೆ ತಾರತಮ್ಯದ ಕಂದಕ ನಿರ್ಮಾಣವಾಗುತ್ತಿದೆ. ಧರ್ಮ-ಧರ್ಮಗಳ ನಡುವೆ ಮಾನವರ ಒಳಿತಿಗೆ ಬೇಕಾದ ಸದ್ವಿಚಾರಗಳ ವಿನಿಮಯ ಆಗುತ್ತಿರಬೇಕು. ಬ್ರಹ್ಮಾಂಡ-ಜೀವ-ಆತ್ಮ-ಮನಸ್ಸು-ಸದ್ಗುಣ ಎಂಬ ಈ ಐದಕ್ಕೂ ಒಂದಕ್ಕೊಂದು ಸಂಪರ್ಕ ಕೊಂಡಿಗಳಿವೆ. ಇವು ಬಲವಾಗಿ ಸರಪಣಿಯಂತೆ ಕೂಡಿಕೊಂಡು ಲೋಕವನ್ನು ಕಾಪಾಡುತ್ತಿವೆ. ಬರೀಗಣ್ಣಿಗೆ ಕಾಣದ ಈ ಸಂಬಂಧದ ಕೊಂಡಿಗಳನ್ನು ಕಾಣಲು ದಿವ್ಯಜ್ಞಾನ ಬೇಕು. ಅಂಥ ದಿವ್ಯಜ್ಞಾನ ಸಿದ್ದಿಸುವುದು ಆರೋಗ್ಯಕರ ಮನಸ್ಸಿನ ಸಾಕಾರದಿಂದ. ಅಂಥ ಸದ್ಗುಣಗಳ ಮನಸ್ಸೇ ‘ಸಚ್ಚಿದಾನಂದ’ರೂಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT