ಬುಧವಾರ, ಜೂನ್ 16, 2021
28 °C

ಸಂಸ್ಕೃತಿ ಸಂಭ್ರಮ | ಗುಹ ಮತ್ತು ಲಕ್ಷ್ಮಣರ ಎಚ್ಚರ !

ರಾಜೇಶ್ ಅಕ್ಕಿಹಾಳ್‌ Updated:

ಅಕ್ಷರ ಗಾತ್ರ : | |

Prajavani

ಇಂದು ನನ್ನನ್ನು ಕಾಡುತ್ತಿರುವ ಅಪಾಯ ನಾಳೆ ನಿನ್ನನ್ನೂ ತನ್ನ ಕಬಂಧಬಾಹುವಿನಲ್ಲಿ ಬಂಧಿಮಾಡಬಲ್ಲದು. ಈ ಅಪಾಯವನ್ನು ಎದುರಿಸುವುದು ಯಾರದೋ ಒಬ್ಬರದಷ್ಟೇ ಜವಾಬ್ದಾರಿಯಲ್ಲ, ನಮ್ಮೆಲ್ಲರ ಸಮಾನ ಜವಾಬ್ದಾರಿ...

ವನವಾಸವನ್ನು ಕೈಗೊಂಡ ರಾಮ, ಸೀತೆ ಹಾಗೂ ಲಕ್ಷ್ಮಣರು ಶೃಂಗಬೇರಪುರ ತಲುಪಿದಾಗ ಅವರನ್ನು ನಿಷಾದರಾಜ ಹಾಗೂ ರಾಮನ ಮಿತ್ರನಾದ ಗುಹನು ಇದಿರುಗೊಂಡು ಅವರನ್ನು ಸತ್ಕರಿಸುತ್ತಾನೆ. ಅದೇ ರಾತ್ರಿ ರಾಮ ಹಾಗೂ ಸೀತೆ ನೆಲದ ಮೇಲೆ ಮಲಗಿರಲು ಲಕ್ಷ್ಮಣ ಅಲ್ಲಿಯೇ ಬಳಿಯಲ್ಲಿದ್ದ ಮರವೊಂದಕ್ಕೆ ಒರಗಿಕೊಂಡು ಮಲಗದೆ ಕಾವಲು ನಿಲ್ಲುತ್ತಾನೆ. ಆಗ, ಗುಹನೂ ಸಹ ಸುಮಂತ್ರ ಮತ್ತು ಲಕ್ಷ್ಮಣರೊಡನೆ ಮಾತನಾಡುತ್ತ ಧನುರ್ಧಾರಿಯಾಗಿ ಎಚ್ಚರದಿಂದ ರಾಮನನ್ನು ಕಾಯುತ್ತ ನಿಲ್ಲುತ್ತಾನೆ.

ಹಾಗೆ ಮುಂದುವರಿದು ಗುಹನು ಲಕ್ಷ್ಮಣನಿಗೂ ಮಲಗಿ ವಿಶ್ರಾಂತಿಸಲು ತಿಳಿಸುತ್ತಾನೆ. ಆದರೆ ಲಕ್ಷ್ಮಣ ಗುಹನ ಕೋರಿಕೆಯನ್ನು ನಯವಾಗಿ ನಿರಾಕರಿಸುತ್ತ, ’ದಶರಥರಾಜನ ಮಗನಾದ ಶ್ರೀರಾಮನು ಸೀತೆಯ ಜೊತೆ ಈ ರೀತಿ ಭೂಮಿಯ ಮೇಲೆ ಮಲಗಿರುವಾಗ ನಾನು ಹೇಗೆ ನಿದ್ರೆ ಮಾಡಲಿ? ಹೇಗೆ ಜೀವಿಸಲಿ? ಅಥವಾ ಹೇಗೆ ಸುಖಪಡಲಿ?‘ ಎಂದು ಹೇಳಿ ತಾನೂ ಸಹ ರಾತ್ರಿಯಿಡೀ ಎಚ್ಚರವಿರುತ್ತಾನೆ.

ವಾಲ್ಮೀಕಿ ರಾಮಾಯಣದ ಈ ಪ್ರಸಂಗವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಗುಹ ಹಾಗೂ ಲಕ್ಷ್ಮಣರಿಬ್ಬರ ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿ ಒಂದು ಸಣ್ಣ ಸಂಶಯದ ಸುಳಿ ಹೊಕ್ಕಿರಬಹುದು ಎಂದೆನಿಸುತ್ತದೆ. ಇವರಿಬ್ಬರ ಉದ್ದೇಶ ಒಂದೇ – ರಾಮನಿಗೆ ಯಾವುದೇ ಆಪಾಯವಾಗದಂತೆ ನೋಡಿಕೊಳ್ಳುವುದು. ಆದರೂ ಪರಸ್ಪರ ನಂಬಿಕೆಯ ಭರವಸೆ ಇಲ್ಲದಂತಹ ಪರಿಸ್ಥಿತಿ. ಹಾಗಾಗಿ ಇವರಿಬ್ಬರ ಮಾತಿನ ನಯವೇನೇ ಇದ್ದರೂ ಲಕ್ಷ್ಮಣ ಮಲಗಲು ಒಪ್ಪದೇ ಗುಹನ ಜೊತೆಯೇ ಎಚ್ಚರವಿದ್ದು ರಾಮನನ್ನು ಕಾಯುತ್ತಾನೆ.

ಈಗಿನ ನಮ್ಮ ಜೀವನವೂ ಸಹ ಇಂತಹದೆ ಸಂಶಯದ ನೆರಳಲ್ಲಿ ನಡೆಯುತ್ತಿದೆ. ಹೆಜ್ಜೆ ಊರುವ ಮುಂದಿನ ಮೆಟ್ಟಿಲು ಯಾವುದು ಎಂದೂ ಸಹ ಗೊತ್ತಿಲ್ಲದಂತಹ ಪರಿಸ್ಥಿತಿ. 'ಲಾಕ್-ಡೌನ್' ಇರಲಿ ಅಥವಾ ಇರದಿರಲಿ, ನಾವೆಲ್ಲರೂ ಒಂದು ಸಮಾನ ಅಪಾಯವನ್ನು ಎದುರಿಸುತ್ತಿದ್ದೇವೆ. ನಮ್ಮಲ್ಲೇ ಕೆಲವರು ’ಇದು ನನ್ನ ಸಮಸ್ಯೆಯಲ್ಲ, ಇದರಿಂದ ನನಗೇನೂ ಆಗುವುದಿಲ್ಲ‘ ಎಂಬ ಉದಾಸೀನ ಭಾವನೆಯಿಂದ ಇರಬಹುದು. ಆದರೆ ಇಂದು ನನ್ನನ್ನು ಕಾಡುತ್ತಿರುವ ಅಪಾಯ ನಾಳೆ ನಿನ್ನನ್ನೂ ತನ್ನ ಕಬಂಧಬಾಹುವಿನಲ್ಲಿ ಬಂಧಿಮಾಡಬಲ್ಲದು. ಈ ಅಪಾಯವನ್ನು ಎದುರಿಸುವುದು ಯಾರದೋ ಒಬ್ಬರದಷ್ಟೇ ಜವಾಬ್ದಾರಿಯಲ್ಲ, ನಮ್ಮೆಲ್ಲರ ಸಮಾನ ಜವಾಬ್ದಾರಿ.

ಹೀಗಾಗಿ ಇಂತಹ ಸ್ಥಿತಿಯಲ್ಲಿ ನಾವೆಲ್ಲ ಗುಹ ಹಾಗೂ ಲಕ್ಷ್ಮಣರ ಪರಸ್ಪರ ಎಚ್ಚರದ ಪ್ರಜ್ಞೆಯನ್ನು ಆಳವಡಿಸಿಕೊಂಡು ಒಬ್ಬರಿಗೊಬ್ಬರು ಪೂರಕವಾಗಿ, ಈ ಅಪಾಯವನ್ನು ಎದುರಿಸಲು ಮಾಡಿರುವ, ಸುರಕ್ಷಾ ನಿಯಮಗಳನ್ನು ಎಚ್ಚರದಿಂದ ಪಾಲಿಸುತ್ತಾ ಸಂಶಯದ ನೆರಳಿನಾಚೆ ಇರುವ ಭರವಸೆಯ ಬೆಳಕಿನತ್ತ ಸಾಗೋಣವೇ!

ಇನ್ನೊಂದು ಗಮ್ಮತ್ತಿನ ವಿಚಾರ: ರಾಮಾಯಣದ ಈ ಪ್ರಸಂಗದಲ್ಲಿ ಗುಹ ಮತ್ತು ಲಕ್ಷ್ಮಣನ ನಡತೆ ಗೊತ್ತಾಗುವುದು ಅಯೋಧ್ಯಾಕಾಂಡದ 50ನೇ ಸರ್ಗ 50ನೇ ಶ್ಲೋಕದಲ್ಲಿ. ಇದೂ ಸಹ ನಮಗೆ 'ಸಮಸಮವಾಗಿ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರೆ ಯಾವ ಆಪಾಯವೂ ನಿಮ್ಮನ್ನು ಜಯಿಸಲು ಸಾಧ್ಯವಿಲ್ಲ' ಎಂದು ಸೂಚಿಸುತ್ತಿರಬಹುದೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.