ಎಸ್. ಸೂರ್ಯಪ್ರಕಾಶ ಪಂಡಿತ್

‘ಅಧ್ಯಾತ್ಮ’ ಎಂದರೆ ನಮ್ಮನ್ನು ನಾವು ಅರಿಯುವುದು. ನಮ್ಮನ್ನು ನಾವು ಸರಿಯಾಗಿ ತಿಳಿದುಕೊಳ್ಳಲು ನೆರವಾಗುವವನೇ ಗುರು.

ಗುರುಪರಂಪರೆಯನ್ನು ಆರಾಧಿಸುವ ಪರ್ವದಿನವೇ ಗುರುಪೂರ್ಣಿಮಾ. ಎಲ್ಲ ಗುರುಗಳನ್ನೂ ವ್ಯಾಸರಲ್ಲಿ ಕಂಡರಿಸಿ, ಪೂಜಿಸುವ ಪರ್ವದಿನವೇ ‘ವ್ಯಾಸಪೂರ್ಣಿಮಾ’. ಅಖಂಡವೂ ಅನಂತವೂ ಆದ ವೇದರಾಶಿಯನ್ನು ಮಾನವಕುಲದ ಒಳಿತಿಗಾಗಿ ವಿಭಾಗ ಮಾಡಿ, ನಮಗೆ ಅರಿವು ಸುಲಭವಾಗಿ ದಕ್ಕುವಂತೆ ಮಾಡಿದವರು ವ್ಯಾಸಮಹರ್ಷಿಗಳು. ಇದು ಮತ್ತೂ ಸುಲಭವಾಗಿ ಎಲ್ಲರಿಗೂ ಸಿಗಬೇಕೆಂದು ಮಹಾಭಾರತವನ್ನೂ ಪುರಾಣಗಳನ್ನೂ ರಚಿಸಿದವರೂ ಅವರೇ. ಹೀಗಾಗಿ ವ್ಯಾಸಮಹರ್ಷಿಗಳನ್ನು ಗುರುವಾಗಿ ಸ್ವೀಕರಿಸುವುದು ಯುಕ್ತವಾಗಿದೆ.

ನೆಮ್ಮದಿಯನ್ನು ಅರಸುವ ಪ್ರವೃತ್ತಿ ಮನುಷ್ಯನಿಗೆ ಎಂದಿನಿಂದಲೂ ಇದೆ. ಸಮಸ್ಯೆಗಳ ಸುಳಿ, ಜೀವನದ ನಶ್ವರತೆ, ಶಾಶ್ವತಸುಖದ ಹಂಬಲ – ಹೀಗೆ ಏನೇನೋ ಕಾರಣಗಳು ಅವನನ್ನು ನೆಮ್ಮದಿಯ ಕಡೆಗೆ, ಆನಂದದ ಕಡೆಗೆ ತಳ್ಳುತ್ತಿರುತ್ತವೆ. ಈ ಹುಡುಕಾಟದಲ್ಲಿ ಅವನು ಎದುರಿಸಬೇಕಾದ ಮೊದಲ ಪ್ರಶ್ನೆ: ‘ನಾನು ಯಾರು?’ ಈ ಪ್ರಶ್ನೆಗೆ ಉತ್ತರವನ್ನು ಕಾಣಿಸಬಲ್ಲವನೇ ಗುರು.

ಈ ತತ್ತ್ವಾನ್ವೇಷಣೆ ಎಂಬುದು ಯಾವುದೋ ಪ್ರಾಚೀನ ಕಾಲದಲ್ಲಿ ನಡೆಯುತ್ತಿದ್ದ ವಿದ್ಯಮಾನ ಏನಲ್ಲ; ಇಂದಿಗೂ ನಡೆದಿದೆ; ಈಗ ಪರಿಭಾಷೆ ಬೇರೆಯಾಗಿರಬಹುದು ಅಷ್ಟೆ. ಅಧ್ಯಾತ್ಮದ ಹಸಿವು ಹಿಂದಿಗಿಂತಲೂ ಇಂದು ತುಸು ಹೆಚ್ಚೇ ಇದ್ದೀತು. ಸ್ವಘೋಷಿತ ಆಧುನಿಕ ಗುರುಗಳ ಸಂಖ್ಯೆಯನ್ನೂ, ಅವರನ್ನು ಸುತ್ತುವರಿದಿರುವ ’ಭಕ್ತ’ರ ಸಂಖ್ಯೆಯನ್ನೂ ಗಮನಿಸಿದರೆ ಈ ಮಾತಿಗೆ ಪುಷ್ಟಿ ಒದಗುತ್ತಿದೆ. ಆದರೆ ಈ ಗುಂಪಿನಲ್ಲಿ ದಿಟವಾದ ಗುರುವನ್ನು ಕಂಡುಕೊಳ್ಳುವುದು ಹೇಗೆ?

ಸನ್ಯಾಸಿಗಳು ಗುರುಪರಂಪರೆಯಲ್ಲಿ ಮುಖ್ಯರಾದವರು. ಇವರು ಲೌಕಿಕ ವಿವರಗಳಿಂದ ವಿಮುಖರಾಗಿ, ವಿಶ್ವದ ಒಳಿತಿಗಾಗಿ ಮಾತ್ರವೇ ಕ್ರಿಯಾಶೀಲರಾಗಿರುವವರು. ಇವರು ಸದಾ ಲೋಕವನ್ನು ಸುತ್ತುತ್ತ, ಜನರಿಗೆ ನೆಮ್ಮದಿಯ ದಾರಿಯನ್ನು ಕಾಣಿಸಲು ನೆರವಾಗಬೇಕು. ಆದರೆ ಎಲ್ಲ ಕಾಲದಲ್ಲೂ ಇವರು ಸಂಚಾರದಲ್ಲಿಯೇ ಇರಲಾಗದು. ಅದರಲ್ಲೂ ಮಳೆಗಾಲದಲ್ಲಿ ಇವರು ಒಂದೆಡೆ ಇರಲೇಬೇಕಾಗುತ್ತದೆ. ಹೀಗೆ ಸನ್ಯಾಸಿಗಳು ಒಂದೆಡೆ ನೆಲೆನಿಲ್ಲುವ ವಿಧಿಯೇ ‘ಚಾತುರ್ಮಾಸ್ಯವ್ರತ’. ಇದು ಸಾಮಾನ್ಯವಾಗಿ ಗುರುಪೂರ್ಣಿಮೆಯಂದೇ ಆರಂಭವಾಗುತ್ತದೆ.

ಸತ್ಯವನ್ನು ಅರಿತವರು ಮಾತ್ರವೇ ಸತ್ಯದ ಬಗ್ಗೆ ಉಪದೇಶ ಮಾಡಬಲ್ಲರು; ಲೌಕಿಕದ ಸೆಳೆತಗಳಿಂದ ಮುಕ್ತರಾದವರು ಮಾತ್ರವೇ ದಿಟವಾದ ಸುಖದ ಬಗ್ಗೆ ಮಾತನಾಡಬಲ್ಲರು. ಇಂಥ ಸಿದ್ಧಿಯನ್ನು ಪಡೆದವರಷ್ಟೆ ನಮ್ಮ ಜೀವನಕ್ಕೆ ಗುರುಗಳಾಗಿ ಒದಗಲು ಸಾಧ್ಯ. ‘ಗುರು’ಗಳ ಗುಂಪಿನಲ್ಲಿ ಇಂಥ ದಿಟದ ಗುರುಗಳನ್ನು ಹುಡುಕುವುದು ಕಷ್ಟವೇನಿಲ್ಲ; ಆದರೆ ನಮ್ಮ ಹುಡುಕಾಟವೂ ದಿಟವಾಗಿರಬೇಕಷ್ಟೆ!

ಗುರು ಎನ್ನುವುದು ತತ್ತ್ವವೇ ಹೊರತು ಮಾನುಷರೂಪ ಮಾತ್ರವೇ ಅಲ್ಲ – ಎಂದಿದೆ, ಭಾಗವತ. ನಿಸರ್ಗದಲ್ಲಿ ಕಾಣಿಸುವ ಹಲವರು ಸಹಜಗುರುಗಳನ್ನು ವ್ಯಾಸರು ಕಾಣಿಸಿದ್ದಾರೆ. ಪ್ರಾಣಿ, ಪಕ್ಷಿ, ಮರ, ಗಿಡ, ಬಾಣ – ಯಾವುದೂ ನಮಗೆ ಗುರುವಾಗಿ ನೆರವಾಗಬಹುದಂತೆ. ಎಂದರೆ, ನಮ್ಮ ಜೀವನವನ್ನು ಎಚ್ಚರದಿಂದ ಗಮನಿಸಬಲ್ಲ ಸೂಕ್ಷ್ಮತೆಯನ್ನು ನಾವು ದಕ್ಕಿಸಿಕೊಂಡರೆ, ಆಗ ನಮ್ಮ ಎಲ್ಲ ನೋಟವೂ ‘ದರ್ಶನ’ವಾಗಬಲ್ಲದು. ನಮ್ಮ ಅಂತರಂಗದಲ್ಲಿರುವ ಗುರುತತ್ತ್ವ ಆ ಸಾಕ್ಷಾತ್ಕಾರದ ಸಮಯದಲ್ಲಿ, ನಮಗೆ ಹಿತವೆನಿಸುವ ರೂಪದಲ್ಲಿ ಬಹಿರಂಗದಲ್ಲಿ ಕಾಣಿಸಿಕೊಂಡು, ನಮ್ಮ ಜೀವನವನ್ನೆಲ್ಲ ವ್ಯಾಪಿಸಿ, ನಮ್ಮನ್ನು ನೆಮ್ಮದಿಯಲ್ಲಿ ಒಂದಾಗಿಸುತ್ತದೆ. ಅಂಥ ಗುರುತತ್ತ್ವಕ್ಕಾಗಿ ತವಕಿಸುವ ದಿನವೇ ಗುರುಪೂರ್ಣಿಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.