ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವಭಕ್ತಿಯೇ ಮುಕ್ತಿಗೆ ಸಾಧನ

Last Updated 19 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಹಿಂದೂಧರ್ಮದಲ್ಲಿ ಹಲವು ಶಾಸ್ತ್ರಗ್ರಂಥಗಳಿವೆ. ಅವುಗಳಲ್ಲಿ ಬಹುಪಾಲು ಬರೆದಿರುವುದು ವ್ಯಾಸಮಹರ್ಷಿ. ಮಹಾಗುರುವಾದ ವ್ಯಾಸರ ಜನ್ಮದಿನವನ್ನ, ನಾವು ಗುರುಪೂರ್ಣಿಮ ಅಥವಾ ವ್ಯಾಸಹುಣ್ಣಿಮೆ ಎಂದು ಆಚರಿಸುತ್ತೇವೆ. ವ್ಯಾಸರ ಮೂಲ ಹೆಸರು ಕೃಷ್ಣದ್ವೈಪಾಯನ. ಅಳಿಯುತ್ತಿದ್ದ ವೇದಗಳನ್ನ ನಾಲ್ಕು ಭಾಗ ಮಾಡಿದ್ದರಿಂದ ಕೃಷ್ಣ ದ್ವೈಪಾಯನರ ಹೆಸರು ವೇದವ್ಯಾಸರೆಂದು ಕರೆಯಲಾಯಿತು. ವ್ಯಾಸರು ಬರೆದ ಮಹಾಭಾರತ, ಭಗವದ್ಗೀತೆ, 18 ಮಹಾಪುರಾಣಗಳು ನಮ್ಮ ಭಾರತೀಯ ಸಂಸ್ಕೃತಿಯನ್ನ ಶ್ರೀಮಂತವಾಗಿಸಿವೆ. ವ್ಯಾಸರ ದಿವ್ಯಜ್ಞಾನದಿಂದ ಬಂದ 18 ಮಹಾಪುರಾಣಗಳಲ್ಲಿ ‘ಶಿವ ಮಹಾಪುರಾಣ’ ಬಹಳ ಮಹತ್ವದ್ದು. ಅಷ್ಟೇ ಪವಿತ್ರವಾದದ್ದು ಕೂಡ.

ಶಿವಪುರಾಣವನ್ನ ವ್ಯಾಸರಿಗೆ ಹೇಳಿದ್ದು ಬ್ರಹ್ಮನ ಮಾನಸಪುತ್ರ ಸನತ್ಕುಮಾರ. ಸನತ್ಕುಮಾರನಿಗೆ ಹೇಳಿದ್ದು, ಸಾಕ್ಷಾತ್ ಪರಮೇಶ್ವರನೇ. ಶಿವನಿಂದ ಸನತ್ಕುಮಾರನಿಗೆ, ಸನತ್ಕುಮಾರನಿಂದ ವ್ಯಾಸರಿಗೆ, ವ್ಯಾಸರಿಂದ ಅವರ ಶಿಷ್ಯ ಸೂತಮುನಿಗೆ ಶಿವಪುರಾಣದ ಮಹಾತ್ಮೆ ತಿಳಿಯಿತು. ದೇವಮುನಿಯಾದ ಸನತ್ಕುಮಾರ ಮತ್ತು ನರಮುನಿಯಾದ ವ್ಯಾಸರಿಗೆ ಶಿವಪುರಾಣ ತಿಳಿದಿದ್ದದಕ್ಕೂ ಒಂದು ಕಥೆ ಇದೆ. ಈ ಇಬ್ಬರ ಕಥೆಯಲ್ಲೂ ಒಂದು ಸಾಮ್ಯತೆ ಕೂಡ ಇದೆ. ಅದು ಜೀವನವೈರಾಗ್ಯ. ಬ್ರಹ್ಮನ ಮಾನಸಪುತ್ರನಾದ ಸನತ್ಕುಮಾರನಿಗೆ ಒಮ್ಮೆ ಜೀವನ ಬೇಸರ ಅನ್ನಿಸತೊಡಗಿತು. ಮುಕ್ತಿಗಾಗಿ ಮಂದಾರಪರ್ವತದಲ್ಲಿ ತಪಸ್ಸು ಮಾಡುತ್ತಿದ್ದ. ಆಗ ಬಂದ ಶಿವನ ವಾಹನ ನಂದಿಕೇಶ್ವರ, ಮೂರು ಮುಕ್ತಿ ಸಾಧನ ಹೇಳಿಕೊಟ್ಟ. ಮೊದಲನೆಯದು ಶಂಕರನ ನಾಮಸ್ಮರಣೆ, ಎರಡನೆಯದು ಕೀರ್ತನೆ ಮತ್ತು ಮೂರನೆಯದೇ ಮನನ ಮಾಡೋದು. ಇದೇ ಮುಕ್ತಿಗೆ ಮಾರ್ಗವಾಗಿರುವ ಮೂರು ಸಾಧನಗಳು ಎಂದು ತಿಳಿಸಿದ್ದ.

ಅದರಂತೆ, ಸನತ್ಕುಮಾರನು ಪರಶಿವನ ನಾಮಸ್ಮರಣೆ, ಕೀರ್ತನೆ ಮತ್ತು ಮನನ ಮಾಡಿ ಶಿವನನ್ನು ಒಲಿಸಿಕೊಂಡ. ಆಗ ಪ್ರತ್ಯಕ್ಷನಾದ ಶಂಕರ ತನ್ನ ಶಿವಪುರಾಣವನ್ನ ಹೇಳಿದ. ಇದನ್ನ ಹೇಳಿದವರಿಗೂ ಕೇಳಿದವರಿಗೂ ಜೀವನ್ಮುಕ್ತಿ ಸಿಗುತ್ತೆ ಎಂದು ತಿಳಿಸಿದ್ದ. ಕಾಲ ಸರಿದಂತೆ, ಇತ್ತ ವೇದವ್ಯಾಸರಿಗೂ ಒಮ್ಮೆ ಜೀವನ ಬೇಸರವೆನ್ನಿಸಿತು.ವೇದ-ಪುರಾಣಗಳನ್ನೆಲ್ಲಾ ಬರೆದಿದ್ದರೂ, ಅವರಲ್ಲಿ ಸಂಸಾರಕ್ಲೇಷ–ಜುಗುಪ್ಸೆ ಮೂಡಿಸಿತ್ತು. ಜೀವನ್ಮುಕ್ತಿಗಾಗಿ ಅವರು ಒಮ್ಮೆ ಸರಸ್ವತೀನದಿತೀರದಲ್ಲಿ ತಪಸ್ಸಿಗೆ ಕುಳಿತರು. ಆಗ ಆಕಾಶಮಾರ್ಗವಾಗಿ ಹೋಗುತ್ತಿದ್ದ ಸನತ್ಕುಮಾರರಿಗೆ ವ್ಯಾಸರು ತಪಸ್ಸು ಮಾಡುತ್ತಿರುವುದು ಕಾಣಿಸಿತು. ವ್ಯಾಸರ ಬಳಿ ಬಂದು, ತಪಸ್ಸು ಮಾಡಲು ಕಾರಣವೇನೆಂದು ಕೇಳಿದ.

ಅದಕ್ಕೆ ವ್ಯಾಸರು ‘ಯಾವುದೋ ಅತೃಪ್ತಿ ನನ್ನ ಕಾಡ್ತಿದೆ. ಜೀವನ ಬೇಸರವಾಗಿ ಮುಕ್ತಿಗಾಗಿ ತಪಸ್ಸು ಮಾಡ್ತಿದ್ದೇನೆ’ ಎಂದರು. ವ್ಯಾಸರ ಮಾತನ್ನ ಕೇಳಿ ನಸುನಕ್ಕ ಸನತ್ಕುಮಾರ, ತನಗೂ ಒಮ್ಮೆ ಜೀವನವೈರಾಗ್ಯ ಬಂದಾಗ ನಂದಿಕೇಶ್ವರನ ಮೂಲಕ ಮುಕ್ತಿಮಾರ್ಗ ತಿಳಿದದ್ದು, ಅದರಿಂದ ಶಿವನನ್ನ ಒಲಿಸಿಕೊಂಡು, ಶಿವಪುರಾಣವನ್ನ ಸ್ವತಃ ಶಿವನ ಬಾಯಿಂದಲೇ ಕೇಳಿದ್ದನ್ನ ಹೇಳಿದ. ಹೀಗೆ ವ್ಯಾಸಮುನಿಗಳು ಸನತ್ಕುಮಾರನಿಂದ ಶಿವಪುರಾಣವನ್ನ ಕೇಳಿದರು. ಇಂಥ ಪರಮಪವಿತ್ರವಾದ ಶಿವಪುರಾಣವನ್ನ ವ್ಯಾಸರು ತಮ್ಮ ಪರಮಶಿಷ್ಯ ಸೂತಮುನಿಗೆ ಹೇಳಿದರು. ವ್ಯಾಸರಿಂದ ತಿಳಿದ ಶಿವಪುರಾಣವನ್ನ ಸೂತಮುನಿಯು ಶೌನಕಮುನಿ ಸೇರಿದಂತೆ ಹಲವು ಋಷಿಮುನಿಗಳಿಗೆ ಹೇಳಿದರು. ಈ ಋಷಿಮುನಿಗಳಿಂದ ವ್ಯಾಸವಿರಚಿತ ಶಿವಮಹಾಪುರಾಣ ಭೂಲೋಕದ ಜನರಿಗೆಲ್ಲಾ ಪರಿಚಯವಾಯಿತು. ಶಿವಪುರಾಣ ಹೇಳಿದ ಸೂತಮುನಿಗಳು ಮುಂದೆ ಸೂತಪುರಾಣಿಕರೆಂದೇ ಖ್ಯಾತರಾದರು. *

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT