ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪುಣ್ಯಫಲಗಳ ಆಗರ ಶಿವಪುರಾಣ

ಭಾಗ –5
Last Updated 23 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಸೂತಪುರಾಣಿಕ ಹೇಳುವ ಪ್ರಕಾರ, ಶಿವಪುರಾಣ ಶ್ರವಣ ಮತ್ತು ಪಠಣ ಮಾಡುವುದರ ಹೊರತು ಮನುಷ್ಯರು ಮುಕ್ತಿ ಪಡೆಯಲು ಬೇರೊಂದು ಧರ್ಮಮಾರ್ಗವೇ ಕಲಿಯುಗದಲ್ಲಿ ಇಲ್ಲ. ಶಿವಪುರಾಣವನ್ನ ಕೇಳುವ ಮೂಲಕ ಮನುಷ್ಯ ತನ್ನ ಕರ್ಮಬಂಧ ಕಳೆದುಕೊಂಡು ಮುಕ್ತಿ ಪಡೆಯುತ್ತಾನೆ. ಎಲ್ಲ ರೀತಿಯ ದಾನ, ಯಜ್ಞಗಳನ್ನು ಮಾಡಿದರೆ ಯಾವ ಪುಣ್ಯ ಸಿಗುತ್ತೋ, ಅಂತಹ ಪುಣ್ಯ ಶಿವಪುರಾಣ ಕೇಳುವುದರಿಂದ ಖಂಡಿತ ಸಿಗುತ್ತೆ. ಶಿವಪುರಾಣದಲ್ಲಿ ಬರುವ ಶಂಭುವಿನ ಕತೆ ಕೇಳಿದವರು ಮತ್ತು ಕೇಳಿದವರ ಕುಲದವರೆಲ್ಲಾ ಜರಾಮರಣರಹಿತರಾಗಿ ಸದ್ಗತಿ ಪಡೆಯುತ್ತಾರೆ. ಶಿವಪುರಾಣದಲ್ಲಿ ಹೇಳಿರುವ ಕಥೆಗಳು, ಉಪಾಖ್ಯಾನಗಳು, ಇತಿಹಾಸಗಳೆಲ್ಲವೂ ಪರಮಪವಿತ್ರವಾದವು. ಆದ್ದರಿಂದ ಇವುಗಳನ್ನೆಲ್ಲಾ ಯಾವಾಗಲೂ ಕೇಳಬೇಕು. ಇದನ್ನ ಸರ್ವ ಕಾಲಗಳಲ್ಲಿ ಕೇಳಿದರೆ ಪುಣ್ಯ ಹೆಚ್ಚಾಗುತ್ತೆ ಅಂತ ಸೂತಮುನಿ ಬಣ್ಣಿಸಿದ್ದಾನೆ.

ಭೂಲೋಕದಲ್ಲಿ ಅನೇಕ ಶಾಸ್ತ್ರಗಳೂ ಪುರಾಣಗಳೂ ಬೇಕಾದಷ್ಟಿವೆ. ಆದರೆ, ಶಿವಪುರಾಣ ಅವುಗಳಿಗಿಂತ ಸರ್ವಶ್ರೇಷ್ಠವಾದುದು. ಶಿವಪುರಾಣ ಅದೆಷ್ಟು ಪರಮ ಪವಿತ್ರವಾದುದೆಂದರೆ, ಒಂದು ಕ್ಷಣ ಶಿವಪುರಾಣ ಕೇಳಿದರೂ ಮುಕ್ತಿಯೇ ಸಿಕ್ಕಿಬಿಡುತ್ತೆ. ಅಂಥದರಲ್ಲಿ ಶಿವಪುರಾಣವನ್ನ ಸಂಪೂರ್ಣ ಕೇಳುವುದು, ಹೇಳುವುದು ಮಾಡುವುದರಿಂದ ಅದೆಷ್ಟು ಪುಣ್ಯ ಸಿಗುತ್ತೆ ಅನ್ನೋದನ್ನ ಊಹಿಸಬಹುದು. ಇದಕ್ಕಾಗಿ ಸದ್ಗತಿ ಬಯಸುವವರು ಪ್ರತಿನಿತ್ಯ ಶಿವಪುರಾಣದ ಒಂದು ಶ್ಲೋಕವನ್ನಾಗಲೀ, ಅಥವಾ ಅರ್ಧಶ್ಲೋಕವನ್ನಾಗಲೀ, ಭಕ್ತಿಯಿಂದ ಪಠಿಸಬೇಕು. ಶಿವಪುರಾಣವನ್ನು ಯಾರು ಪ್ರತಿನಿತ್ಯ ಭಕ್ತಿಯಿಂದ ಪಠಿಸುವರೋ, ಅಥವಾ ಅರ್ಥಾನುವಾದ ಮಾಡುವರೋ, ಅವರು ಪುಣ್ಯಾತ್ಮರೆಂಬುದರಲ್ಲಿ ಯಾವ ಸಂಶಯವೂ ಇರುವುದಿಲ್ಲ. ಸಾಕ್ಷಾತ್ ಶಿವನ ಸ್ವರೂಪವಾದ ಶಿವಪುರಾಣವನ್ನ ಎಷ್ಟೇ ಕಷ್ಟವಾದರೂ ಬಿಡದೆ ಕೇಳಿ, ಶಿವನನ್ನ ಒಲಿಸಿಕೊಳ್ಳಬೇಕು.

ವೇದ, ಇತಿಹಾಸ, ಶಾಸ್ತ್ರ ಮೊದಲಾದ ಉತ್ತಮ ಗ್ರಂಥಗಳಲ್ಲೆಲ್ಲಾ ಶಿವಪುರಾಣವೇ ಬಹಳ ಶ್ರೇಷ್ಠವಾದದ್ದು. ಮೋಕ್ಷವನ್ನ ಬಯಸುವವರು, ಶಿವಪುರಾಣವನ್ನ ಅಧ್ಯಯನ ಮಾಡಬೇಕು. ಶಿವಪುರಾಣವನ್ನ ಬಹಳ ಭಕ್ತಿಯಿಂದ ಕೇಳಬೇಕು. ಸ್ವಯಂಪಠನ ಮಾಡಿದರಂತೂ ಇನ್ನೂ ವಿಶೇಷ ಫಲ ಸಿಗುವುದು. ಇಂಥ ಸರ್ವ ಶ್ರೇಷ್ಠವಾದ ಶೈವಪುರಾಣವನ್ನ ಕೇಳುವವರಿಗೆ ಧರ್ಮಾದಿ ಚತುರ್ವಿಧ ಪುರುಷಾರ್ಥಗಳು ದೊರೆಯುವುದು. ಶಿವಪುರಾಣ ಗ್ರಂಥವನ್ನ ನಿತ್ಯ ಪಟ್ಟೆವಸ್ತ್ರಗಳಿಂದ ಯಾರು ಅಲಂಕರಿಸಿ ಪೂಜಿಸುವರೋ, ಅವರು ಯಾವಾಗಲೂ ಸುಖವಾಗಿರುತ್ತಾರೆ. ಉತ್ತಮ ಶಾಸ್ತ್ರಗ್ರಂಥವಾದ ಶೈವಪುರಾಣವನ್ನ ಕೇಳುವ ಮನುಷ್ಯರು ಸಾಕ್ಷಾತ್ ರುದ್ರಸ್ವರೂಪರೇ ಆಗುವರು. ಇದರಲ್ಲಿ ಯಾವುದೇ ಸಂಶಯವಿಲ್ಲ ಅಂತ ಸೂತಮುನಿ ಸ್ಪಷ್ಟವಾಗಿ ಹೇಳುತ್ತಾನೆ.

ವೇದವ್ಯಾಸರೇ ತಮ್ಮ ಸ್ಕಂದಪುರಾಣದಲ್ಲಿ ಹೇಳಿರುವ ಶಿವಪುರಾಣ ಮಹಾತ್ಮೆಯ ಮೊದಲ ಅಧ್ಯಾಯದಲ್ಲಿ ಶಿವಮಹಿಮೆ ವರ್ಣನೆ ಇದ್ದರೆ, ಎರಡನೇ ಅಧ್ಯಾಯದಲ್ಲಿ ಕೆಟ್ಟ ಬುದ್ಧಿಯ ಜನ ಹೇಗೆ ಶಿವಪುರಾಣ ಕೇಳಿ ಪುನೀತರಾಗುತ್ತಾರೆಂಬ ವಿವರ ಇದೆ. ಇದನ್ನ ದೇವರಾಜನೆಂಬ ದುಷ್ಟ ಬ್ರಾಹ್ಮಣನ ಕಥೆ ಮೂಲಕ ತಿಳಿಸಲಾಗಿದೆ. ಮೂರು ಮತ್ತು ನಾಲ್ಕನೇ ಅಧ್ಯಾಯದಲ್ಲಿ ಪಾಪಿಯಾದ ಚಂಚುಲೆ ಶಿವಸಾನ್ನಿಧ್ಯ ಪಡೆದ ಕಥೆ ಇದೆ. ಐದನೇ ಅಧ್ಯಾಯದಲ್ಲಿ ಕೈಲಾಸವಾಸಿಯಾದ ಚಂಚುಲೆ ಜಗನ್ಮಾತೆ ಪಾರ್ವತಿ ಮೂಲಕ ಪಿಶಾಚಿಯಾಗಿದ್ದ ತನ್ನ ಪತಿ ಬಿಂದುಗನನ್ನ ಪುನೀತನನ್ನಾಗಿಸಿ, ಕೈಲಾಸಕ್ಕೆ ಕರೆಸಿಕೊಂಡ ದೃಷ್ಟಾಂತವಿದೆ. ಆರನೇ ಅಧ್ಯಾಯದಲ್ಲಿ ಶಿವಪುರಾಣ ಪ್ರವಚನವನ್ನ ಎಲ್ಲಿ, ಹೇಗೆ, ಹೇಳಬೇಕು, ಕೇಳಬೇಕು – ಎಂದು ತಿಳಿಸಲಾಗಿದೆ. ಅಂತಿಮವಾದ ಏಳನೇ ಅಧ್ಯಾಯದಲ್ಲಿ ಶಿವಪುರಾಣ ಕೇಳಿ, ಹೇಗೆ ಅದನ್ನ ಸಾರ್ಥಕ ಪಡಿಸಿಕೊಳ್ಳಬೇಕೆಂಬ ವಿವರ ತಿಳಿಸಲಾಗಿದೆ. ಹೀಗಾಗಿ ನಾವು ವೇದವ್ಯಾಸರ ಶಿವಪುರಾಣದ ಏಳು ಸಂಹಿತೆಗಳನ್ನು ತಿಳಿಯುವ ಮುನ್ನ, ಸ್ಕಂದಪುರಾಣದಲ್ಲಿ ಹೇಳಲಾಗಿರುವ ಶಿವಪುರಾಣದ ಮಹಿಮೆಯನ್ನ ತಿಳಿಯಬೇಕು. ಮುಂದೆ ನಾವು ಸ್ಕಂದಪುರಾಣದ ಏಳು ಅಧ್ಯಾಯಗಳಲ್ಲಿ ತಿಳಿಸಿರುವ ಶಿವಪುರಾಣದ ಮಹಿಮೆಯನ್ನು ತಿಳಿಯೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT