ಶನಿವಾರ, ಮೇ 21, 2022
28 °C

ವೇದವ್ಯಾಸರ ಶಿವಪುರಾಣಸಾರ: ಶಿವಕಥಾಮೃತದಿಂದ ಸದ್ಗತಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶಿವಪುರಾಣ ಎಷ್ಟು ಪವಿತ್ರವಾದುದು ಎಂದರೆ ಇದನ್ನ ಓದುವುದರಿಂದ ಅಥವಾ ಕೇಳುವುದರಿಂದ ಸಿಗುವಷ್ಟು ಪುಣ್ಯ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಶಿವಪುರಾಣ ಕೇಳುವುದರಿಂದ ಏಳು ತೀರ್ಥಕ್ಷೇತ್ರಗಳಿಗೆ ಹೋಗಿ ಬರುವುದಕ್ಕಿಂತಲೂ ಹೆಚ್ಚಿನ ಪುಣ್ಯ ಸಿಗುವುದು. ಅಮೃತವನ್ನ ಕುಡಿದರೆ, ಕುಡಿದವರೊಬ್ಬರೆ ಪಾವನರಾಗುತ್ತಾರೆ. ಆದರೆ ಶಿವಪುರಾಣವನ್ನ ಕೇಳಿದರೆ, ಅವರೊಬ್ಬರಿಗೆ ಮಾತ್ರವಲ್ಲ, ಅವರ ಇಡೀ ಪರಿವಾರಕ್ಕೆ ಒಳ್ಳೆಯದಾಗುವುದು. ಇಂಥ ಶಿವಪುರಾಣವನ್ನ ವ್ಯಾಸರು ಸಾಮಾನ್ಯ ಜನರಿಗೂ ಅರ್ಥ ಆಗುವ ಹಾಗೆ ಸರಳವಾಗಿ ಹೇಳಿದ್ದಾರೆ.

ಶಿವಮಹಾಪುರಾಣದ ಮೊದಲ ಅಧ್ಯಾಯವಾದ ‘ವಿದ್ಯೇಶ್ವರ ಸಂಹಿತೆ’ ಶಿವನ ಪೂಜಿಸುವ ಕ್ರಮಗಳನ್ನು ಸೂಚಿಸಿದರೆ, ಎರಡನೆಯದಾದ ‘ರುದ್ರಸಂಹಿತೆ’ಯಲ್ಲಿ ಶಿವಕಥಾ ನಿರೂಪಣೆ ಇದೆ. ಮೂರನೇ ಅಧ್ಯಾಯವಾದ ‘ಶತರುದ್ರ ಸಂಹಿತೆ’ಯಲ್ಲಿ ಶಿವನ ಅವತಾರಗಳ ವಿವರಗಳಿವೆ. ನಾಲ್ಕನೆಯದಾದ ‘ಕೋಟಿರುದ್ರ ಸಂಹಿತೆ’ಯು ಶೈವಕ್ಷೇತ್ರಗಳ ಮಹಿಮೆ, ಐದನೆಯದಾದ ‘ಉಮಾ ಸಂಹಿತೆ’ ಪಾಪ-ಪುಣ್ಯಗಳ ಫಲ, ಆರು ಮತ್ತು ಏಳನೆಯದಾದ ‘ಕೈಲಾಸ ಸಂಹಿತೆ’ ಹಾಗೂ ‘ವಾಯವೀಯ ಸಂಹಿತೆ’ಗಳಲ್ಲಿ ಪ್ರಣವ ಸ್ವರೂಪ ಮತ್ತು ಉಪನಿಷದ್ವಾಕ್ಯಗಳ ವಿವರಗಳಿವೆ.

ವ್ಯಾಸರು ಬರೆದ ಎಲ್ಲಾ 18 ಮಹಾಪುರಾಣಗಳಲ್ಲು ಮೂರು ಅಂಶಗಳು ಸಾಮಾನ್ಯವಾಗಿ ಕಾಣುತ್ತವೆ. ಅವು ಶಿವಪುರಾಣದಲ್ಲೂ ಇವೆ. ಇದಕ್ಕೆ ಕಾರಣ, ಸಾಮಾನ್ಯ ಜನರಿಗೂ ಸರಳವಾಗಿ ಅರ್ಥವಾಗಲಿ ಅನ್ನೋ ಉದ್ದೇಶ ವ್ಯಾಸಮಹರ್ಷಿಗಳದ್ದು. ಶಿವಪುರಾಣದಲ್ಲಿ ಕಂಡು ಬರುವ ಮೂರು ಅಂಶಗಳಲ್ಲಿ ಮೊದಲ ಅಂಶ ಕಥಾಂಶವಾದರೆ, ಎರಡನೇ ಅಂಶ ಕರ್ಮ ಅಥವಾ ಉಪಾಸನಾ ಅಂಶ, ಮೂರನೆಯದು ತತ್ವನಿರೂಪಣೆ. ಶಿವಪುರಾಣದ ಎಲ್ಲಾ 7 ಸಂಹಿತೆಗಳಲ್ಲೂ ಈ ಮೂರೂ ಅಂಶ ಕಂಡು ಬರುವುದು. ವ್ಯಾಸರ ಕೌಶಲವೇ ಹಾಗೇ, ಎಂಥ ಸಾಮಾನ್ಯರಿಗೂ ಸರಳವಾಗಿ ಅರ್ಥವಾಗಲಿ ಅಂತ ಪ್ರತಿಯೊಂದನ್ನು ವಿಂಗಡಿಸಿ, ವಿವರಿಸುತ್ತಾರೆ.

ವ್ಯಾಸರು ಬರೆದ 18 ಮಹಾಪುರಾಣಗಳಲ್ಲಿ ಅತ್ಯಂತ ಮಹತ್ವದ್ದು ಮತ್ತು ಪವಿತ್ರವಾದ್ದು ಅಂದರೆ, ಅದು ಶಿವಪುರಾಣ ಮಾತ್ರ. ಇದನ್ನ ಬಹಳ ಶ್ರದ್ಧೆಯಿಂದ ಕೇಳಬೇಕು. ಶಿವಪುರಾಣ ಕೇಳಿದ ಎಂಥ ಪಾಪಿಯೂ ಪುನೀತನಾಗುತ್ತಾನೆ. ಅವನ ಏಳೇಳು ಜನ್ಮಗಳ ಪಾಪ ಸಹ ಪರಿಹಾರ ಆಗುತ್ತೆ ಅಂತ ಸ್ವತಃ ಶಿವನೇ ದೇವಮಹರ್ಷಿ ಸನತ್ಕುಮಾರನಿಗೆ ಹೇಳಿದ್ದಾನೆ. ಇದನ್ನ ಸನತ್ಕುಮಾರನು ವೇದವ್ಯಾಸರಿಗೆ ತಿಳಿಸಿದ್ದ. ಭೂಲೋಕದಲ್ಲಿ ಮಾಡಬಾರದ ಪಾಪಗಳನ್ನು ಮಾಡಿ, ನರಕದಲ್ಲಿ ನರಳುತ್ತಿರುವ ನರಮನುಷ್ಯರು ಶಿವಪುರಾಣ ಕೇಳಿ ಪಾವನರಾಗಬಹುದು. ಆದ್ದರಿಂದ ಪ್ರತಿಯೊಬ್ಬ ಮನುಷ್ಯ ತನ್ನ ಬದುಕಿನಲ್ಲಿ ಒಮ್ಮೆಯಾದರೂ ಶಿವಪುರಾಣ ಕೇಳಲೇಬೇಕು.

ಶಿವಪುರಾಣ ಬಹಳ ದೊಡ್ಡದಾದ, ಅಷ್ಟೇ ತಿರುಳಿರೋ ಗ್ರಂಥ. ಇಲ್ಲಿ ಕತೆ ಜೊತೆಗೆ, ಕರ್ಮಫಲಗಳ ವಿವರ ಇದೆ. ಕರ್ಮಫಲದಂತೆ, ತತ್ವನಿರೂಪಣೆಯೂ ಇದೆ. ಮೊದಲ ಸಂಹಿತೆಯಾದ ವಿದ್ಯೇಶ್ವರ ಸಂಹಿತೆ ತಿಳಿಯುವುದಕ್ಕೂ ಮುನ್ನ ನಾವು, ವ್ಯಾಸರೇ ಬರೆದ ಸ್ಕಂದಪುರಾಣದಲ್ಲಿ ಬರುವ ಶಿವಪುರಾಣ ಮಹಿಮೆಯನ್ನ ತಿಳಿಯಬೇಕು. ಇಲ್ಲಿ ವರ್ಣಿಸಿದ 7 ಅಧ್ಯಾಯಗಳಲ್ಲೂ ಶಿವನ ಮಹಿಮೆಯನ್ನ ಕೊಂಡಾಡಲಾಗಿದೆ. ಇದರ ಮೊದಲ ಅಧ್ಯಾಯದಲ್ಲಿ ಶೌನಕ ಮುನಿಯು ಸೂತಮುನಿಗೆ ಒಂದು ಪ್ರಶ್ನೆ ಕೇಳುತ್ತಾನೆ. ‘ಕಲಿಯುಗದಲ್ಲಿ ಜನರು ಸದ್ಗತಿ ಪಡೆಯಲು ಸಾಧನಗಳಾವುದೂ’ ಅಂತ. ಇದಕ್ಕೆ ಸೂತಮುನಿ ‘ಶಿವಪುರಾಣಕ್ಕಿಂತ ಮತ್ತೊಂದು ಉತ್ತಮ ಮಾರ್ಗವಿಲ್ಲ’ ಅನ್ನುತ್ತಾನೆ. ಶಿವತತ್ವ ಸ್ವರೂಪಜ್ಞಾನವು ಭಕ್ತಿ ಮತ್ತು ಮುಕ್ತಿಯನ್ನು ಕೊಡುತ್ತದೆ. ಪರಾಪರ ತತ್ವವಿಚಾರವಾದ ಈ ಜ್ಞಾನಯಜ್ಞದಿಂದ ಎಂಥ ಕಡುಪಾಪಿಯೂ ಪರಿಶುದ್ಧನಾಗುತ್ತಾನೆ ಎಂದು ವಿವರಿಸುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು